ತೆಂಗಿನ ಸಸಿಗಳ ಅಯ್ಕೆ ಮತ್ತು ನಾಟಿ
ನಮ್ಮಲ್ಲಿ ಗದ್ದೆ ಹುಣಿಯಲ್ಲಿ, ಮನೆ ಬಾಗಿಲಿನಲ್ಲಿ ನೆಟ್ಟ ತೆಂಗಿನ ಸಸಿಗಳು ಚೆನ್ನಾಗಿ ಬೆಳೆಯುವುದು ಮತ್ತು ಉತ್ತಮ ಫಸಲನ್ನು ನೀಡುವುದನ್ನು ನಾವೆಲ್ಲಾ ಗಮನಿಸಿದ್ದೇವೆ. ಆದರೆ ತೋಟ ಮಾಡಿ ಬೆಳೆಸಿದಾಗ ಸಸಿಗಳ ಬೆಳವಣಿಗೆಯೂ ನಿಧಾನ. ಫಸಲೂ ಅಷ್ಟಕ್ಕಷ್ಟೇ. ಕಾರಣ ಬೇರೆ ಬೇರೆ ಇದೆಯಾದರೂ ಅವುಗಳಲ್ಲಿ ನಮ್ಮ ಬೇಸಾಯ ಕ್ರಮವೂ ಒಂದು. ಯಾವುದೇ ಬೆಳೆ ಆದರೂ ಅದಕ್ಕೆ ಸೂಕ್ತ ಸಸಿ ಆಯ್ಕೆ ಬಹುಮುಖ್ಯ.
ಸಸಿ ಆಯ್ಕೆ: ನಾಟಿ ಮಾಡಲು ನಾವು ಆಯ್ಕೆ ಮಾಡುವ ಸಸಿಯೇ ಮುಂದಿನ ಫಸಲಿನ ತಳಪಾಯ. ಉತ್ತಮ ಆರೋಗ್ಯವಂತ ಸಸಿಯ ಬುಡ ಭಾಗ (ಮೂರು ಎಲೆ ಬಿಟ್ಟ ಸಸ್ಯ) ಕನಿಷ್ಟ ತೋರು ಬೆರಳು ಮತ್ತು ಹೆಬ್ಬೆರಳು ಸೇರಿಸಿದಾಗ ಮಧ್ಯೆ ದೊರೆಯುವ ಅವಕಾಶದಷ್ಟಾದರೂ ದಪ್ಪ ಇರಬೇಕು. ಒಂದು ವರ್ಷ ಪ್ರಾಯ ಕಳೆದ ಸಸಿಯಾದರೆ ಅದನ್ನು ಮೀರಿ ಇರಬೇಕು. ಎಳೆಯ ಸಸಿಯಲ್ಲೇ ಅದರ ಮುಂದಿನ ಫಸಲು ಕೊಡುವ ಲಕ್ಷಣವನ್ನು ಗುರುತಿಸಬಹುದು. ಮೊಳಕೆ ಗಿಡದಲ್ಲಿ ಅದು ಸ್ವಲ್ಪ ಕಷ್ಟವಾದರೂ ೮-೧೦ ತಿಂಗಳು ಕಳೆದ ಸಸಿಯಾದರೆ ಗುರುತಿಸುವುದು ಸುಲಭ. ಸಸಿಯ ಎಲೆಗಳಲ್ಲಿ ಕಡ್ಡಿ ಬಿಟ್ಟು ಗರಿ ಬಿಡಿಸಿಕೊಂಡಿದ್ದರೆ ಅಂತಹ ಸಸಿಗಳು ಬೇಗ ಬೆಳೆದು ಉತ್ತಮ ಫಸಲನ್ನು ನೀಡಬಲ್ಲವು. ಎಳೆಯ ಸಸಿಯಲ್ಲಿಯೂ ಇದನ್ನು ಸೂಕ್ಷ್ಮವಾಗಿ ಗಮನಿಸಿ ತಿಳಿಯಲು ಸಾಧ್ಯ ಎಲೆಯ ಕೆಳ ಭಾಗದ ಗರಿ ಸ್ವಲ್ಪ ಬಿಚ್ಚಿಕೊಂಡಿರುತ್ತದೆ.
ಯಾವಾಗಲೂ ಅಡ್ದ ಹಾಕಿ ಮೊಳಕೆ ಬರಿಸಿದ ಸಸಿ ನೆಡಲು ಉತ್ತಮ. ಇಂಥಃ ಸಸಿಗೆ ಮೊಳಕೆ ಸಮಯಲ್ಲಿ ತೆಂಗಿನ ಕಾಯಿಯೊಳಗಿನ ಭ್ರ್ರೂಣ ದ್ರವ (ತೆಂಗಿನ ಕಾಯಿಯೊಳಗಿನ ನೀರು)ದೊರೆತು ಅದು ಹೆಚ್ಚು ಶಕ್ತಿ ಶಾಲಿಯಾಗಿರುತ್ತದೆ. ತೆಂಗಿನ ಸಸಿಯಲ್ಲಿ ಮೊಳಕೆಗಿಂತ ಮೊದಲು ಬೇರು ಬರುವುದು ಕ್ರಮ. ಅಡ್ಡ ಹಾಕಿ ಮೊಳೆಯಿಸಿದ ಸಸಿಯಾದಲ್ಲಿ ಆ ಬೇರು ಮೃದು ಜುಟ್ಟು ಭಾಗದಿಂದ ಬೇಗನೆ ಕೆಳಕ್ಕಿಳಿದು ಮಾಧ್ಯಮದಿಂದ ಸತ್ವವನ್ನು ಹೀರಿ ಸಸ್ಯಕ್ಕೆ ಒದಗಿಸುತ್ತದೆ. ನೇರವಾಗಿ ಮೊಳಕೆಗಿಟ್ಟ ಕಾಯಿಯಲ್ಲಿ ಬೇರು ಮಾಧ್ಯಮ ತಲುಪಲು ಹೆಚ್ಚು ಸಮಯ ಹಿಡಿಸಿ ಆಹಾರ ಪೂರೈಕೆ ತಡವಾಗುತ್ತದೆ. ಆದ ಕಾರಣ ನೆಡುವ ಸಸಿ ಇಲ್ಲವೇ ಬಿತ್ತನೆಗೆ ಇಡುವ ಕಾಯಿಯನ್ನು ಅಡ್ಡಕ್ಕೆ ಇಟ್ಟು ಮೊಳಕೆ ಬರಿಸಿರಿ.
ನೆಡುವ ವಿಧಾನ: ತೆಂಗಿನ ಸಸಿ ನೆಡಲು ಆಳ ಅಗಲದ ಹೊಂಡ ಮಾಡಿದರೆ ಒಳ್ಳೆಯದು. ಆದರೆ ಹೊಂಡದ ತಳಭಾಗದಲ್ಲಿ ಗಡ್ಡೆ ಗುಳಿಯನ್ನು ಮಾಡಿ ನೆಡುವುದು ಬೇಡ. ತೆಂಗಿನ ಸಸಿಯನ್ನು ಅನುಕೂಲವಿದ್ದಷ್ಟು ಹೊಂಡ ಮಾಡಿ, ತೇಲಿಸಿ ನೆಡಿ. ಅಂದರೆ ಹೊಂಡದ ಮೇಲ್ಭಾಗದಲ್ಲಿ ನೆಡಬೇಕು. ಕೆಲವೆಡೆ ಹೊಂಡಕ್ಕೆ ಸೊಪ್ಪು ಸದೆ ಹಾಕಿ ತುಂಬಿ, ಮೇಲ್ಭಾಗದಲ್ಲಿ ಸ್ವಲ್ಪ ಮಣ್ಣು ಹಾಕಿ ನೆಡುವ ಕ್ರಮವನ್ನು ಅನುಸರಿಸಲಾಗುತ್ತದೆ. ಆಗ ಸಸಿಗೆ ಬೇರು ಬಿಡಲು ಮಧ್ಯಮ ಸಾಕಾಗುವುದಿಲ್ಲ. ಸಸಿಯು ಗಟ್ಟಿಯಾಗಿರಬೇಕಾದರೆ ಹೊಂಡದಿಂದ ಬೆಳೆದು ಬರಬೇಕು. ನಂತರ ಗೊಬ್ಬರ ಇತ್ಯಾದಿ ಸುರಿಯಲು ಈ ಕ್ರಮ ಒಳ್ಳೆಯದಾಗುತ್ತದೆ, ಬೇಸಿಗೆಯಲ್ಲಿ ನೀರೊತ್ತಾಯವನ್ನೂ ತಡೆಯುತ್ತದೆ ಎಂಬ ನಂಬಿಕೆಯ ಮೇಲೆ ಈ ಕ್ರಮವನ್ನು ಅನುಸರಿಸಲಾಗುತ್ತದೆ. ಇದು ತಪ್ಪು. ಸಸಿ ನೆಡುವಾಗ ಹೊಂಡ ತೆಗೆದ ಮಣ್ಣನ್ನು ಮುಕ್ಕಾಲು ಭಾಗ ತುಂಬಿಸಿ, ಲಭ್ಯವಿದ್ದರೆ ಕಾಂಪೋಸ್ಟು ಗೊಬ್ಬರ ಮಣ್ಣಿಗೆ ಸೇರಿಸಿ ನೆಡಿ. ಸಸಿ ಹೊಂಡದ ತಳದಲ್ಲಿದ್ದರೆ, ಅದು ಯಾವಾಗಲೂ ಏಳಿಗೆಯಾಗದು. ಮೇಲ್ಭಾಗದಲ್ಲಿ ನೆಟ್ಟರೆ ಬೇರುಗಳು ಸಲೀಸಾಗಿ ಇಳಿಯುತ್ತವೆ. ಬೇರಿಗೆ ಸಾಕಷ್ಟು ಆಮ್ಲಜನಕವೂ ದೊರೆಯುತ್ತದೆ. ಸಡಿಲ ಮಣ್ಣಿನಲ್ಲಿ ಬೇರು ಹೆಚ್ಚು ಆಳಕ್ಕೆ ಹೋಗಿ ಗಾಳಿ ಮಳೆಗೆ ಸಸಿ ವಾಲದೆ ಸಧೃಢವಾಗಿ ಬೆಳೆಯುತ್ತದೆ.
ನಮ್ಮಲ್ಲಿ ಹೆಚ್ಚಿನ ತೆಂಗಿನ ಸಸಿಗಳು ನಮ್ಮ ನಿರೀಕ್ಷೆಯ ಫಸಲನ್ನು ನೀಡಲಾರದೆ, ಇಂದು ತೆಂಗಿನ ಬೇಸಾಯ ನಷ್ಟದ್ದಾಗುತ್ತಿದೆ. ಇದಕ್ಕೆ ಕಾರಣ ಈ ರೀತಿಯ ಹೊಂಡ ಪದ್ದತಿಯ ನಾಟಿ ವಿಧಾ. ಈ ಸಸಿಗಳು ಎಳವೆಯಲ್ಲಿ ಸರಿಯಾದ ಬೆಳವಣಿಗೆ ಹೊಂದದೆ, ಜೀವಿತಾವಧಿಯ ಉದ್ದಕ್ಕೂ ಅನುತ್ಪಾದಕವಾಗಿರುತ್ತವೆ. ತೆಂಗಿನ ಸಸಿಯ ಉತ್ಪಾದಕತೆ ನಿಂತಿರುವುದು ಪ್ರಾರಂಭದ ೩-೪ ವರ್ಷಗಳ ಆರೈಕೆಯ ಮೇಲೆ.
ತೆಂಗಿನ ಸಸಿ ನಾಟಿ ಮಾಡುವ ಮೂರು ನಾಲ್ಕು ತಿಂಗಳ ಮುಂಚೆಯೇ ಹೊಂಡವನ್ನು ಸಿದ್ದಪಡಿಸಿಕೊಳಬೇಕು. ಹೊಂಡಕ್ಕೆ ಕೃಷಿ ತ್ಯಾಜ್ಯಗಳನ್ನು ಹಾಕಿ ಸುಟ್ಟು ಮತ್ತೆ ಮಣ್ಣು ತುಂಬುವುದರಿಂದ ಮಣ್ಣುಜನ್ಯ ಹುಳು ಹುಪ್ಪಟೆ (ಗೆದ್ದಲು ಇತ್ಯಾದಿ) ನಾಶವಾಗುತ್ತದೆ. ಮಣ್ಣು ಸಡಿಲವಾಗಿದ್ದರೆ ಬೇರು ಹಬ್ಬಲು ಅನುಕೂಲ. ಒಂದು ವೇಳೆ ಗಟ್ಟಿಜಂಬಿಟ್ಟಿಗೆ ಮಣ್ಣಾಗಿದ್ದಲ್ಲಿ ಒಂದು ಹೊಂಡಕ್ಕೆ ೧ ಕಿಲೋ ಕಲ್ಲು ಉಪ್ಪನ್ನು ಹಾಕಿದರೆ ಮಣ್ಣು ಸಡಿಲವಾಗಲು ಅನುಕೂಲವಾಗುತ್ತದೆ.
ಆರೋಗ್ಯವಂತ ತೆಂಗಿನ ಸಸಿಗಳು ನೆಟ್ಟು ಎರಡನೇ ವರ್ಷಕ್ಕೇ ಬೊಡ್ಡೆ ಬಿಡುತ್ತವೆ. ನಂತರ ಐದನೇ ವರ್ಷಕ್ಕೇ ಹೂ ಗೊಂಚಲು ಬಿಡಲಾರಂಭಿಸುತ್ತದೆ. ಸೂಕ್ತ ಸಸಿ ಮತ್ತು ನಾಟಿಕ್ರಮದಿಂದ ಇದು ಸಾಧ್ಯ. ಆಳದಲ್ಲಿ ನಾಟಿ ಮಾಡಿದ ಸಸಿಗೆ ಫಲವತ್ತಾದ ಸಡಿಲ ಮಣ್ಣು ದೊರೆಯದೆ ಬೇರು ಬೆಳವಣಿಗೆ ಕುಂಠಿತವಾಗುತ್ತದೆ. ಬೇರು ಬೆಳವಣಿಗೆ ಸಮರ್ಪಕವಾಗಿ ಆಗದ್ದಿದ್ದಲ್ಲಿ ಎಲೆಗಳು ಹೆಚ್ಚು ಬರಲಾರದು. ಪ್ರಾರಂಭದ ಉತ್ತಮ ಬೆಳವಣಿಗೆಯ ಲಕ್ಷಣ, ಸಸ್ಯದ ಬುಡದಲ್ಲಿ ಉಂಟಾಗುವ ಬೊಡ್ಡೆಯಂತ ರಚನೆ. ಬೊಡ್ಡೆ ರಹಿತ ಸಸ್ಯ ಮುಂದೆ ಫಸಲು ನೀಡುವುದು ಆಷ್ಟಕ್ಕಷ್ಟೇ. ಅದರ ಗರಿಗಳು ಛತ್ರಿಯೋಪಾದಿಯಲ್ಲಿ (ಕೊಡೆಯಾಕಾರ) ಬೆಳೆಯಲಾರದು.
ಅಧಿಕ ಮಳೆಯಾಗುವ ಕರಾವಳಿಯಲ್ಲಿ ನೀರು ನಿಂತು ಬೇರಿಗೆ ಉಸಿರಾಟ ತೊಂದರೆ ಉಂಟಾಗದಿರಲು ಮೇಲ್ಭಾಗದಲ್ಲಿ ನಾಟಿ ಮಾಡುವುದು ಉತ್ತಮ. ಮಳೆಗಾಲದಲ್ಲೇ ಹೆಚ್ಚಿನ ಬೇರು ಬೆಳವಣಿಗೆ ಕ್ರಿಯೆ ನಡೆಯುವ ಕಾರಣ ಅಲ್ಲಿ ಬೆಳವಣಿಗೆಗೆ ಯಾವುದೇ ತೊಂದರೆ ಉಂಟಾಗಬಾರದು. ತೆಂಗಿನ ಸಸಿಗಳಿಗೆ ಪ್ರಾರಂಭದಿಂದಲೂ ಯತೇಚ್ಚ ಗೊಬ್ಬರಗಳನ್ನು ನೀಡುತ್ತಾ ಬರಬೇಕು. ಫಸಲು ಬರುವುದಕ್ಕೆ ಮುಂಚೆ ಕೊಟ್ಟ ಸಾರಾಂಶಗಳ ಮೇಲೆ ಅದರ ಜೀವಮಾನದ ಬೆಳವಣಿಗೆ ನಿರ್ಧಾರವಾಗುತ್ತದೆ ಎಂಬುದು ತಿಳಿದಿರಲಿ. ಸಾರಜನಕ, ರಂಜಕ ಮತ್ತು ಪೊಟ್ಯಾಶಿಯಂ ಸತ್ವದ ಗೊಬ್ಬರವನ್ನು ನೀಡಬೇಕು. ನೆಡುವಾಗ ಬೇರು ಹಚ್ಚಿನ ಪ್ರಮಾಣದಲ್ಲಿ ಮೂಡಲು ರಂಜಕ ಗೊಬರವನ್ನು ಬಳಕೆ ಮಾಡಬೇಕು.
ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ