ತೆಂಗು: ಅಧಿಕ ಸಾಂದ್ರ ನಾಟಿ ವಿಧಾನ

ತೆಂಗು: ಅಧಿಕ ಸಾಂದ್ರ ನಾಟಿ ವಿಧಾನ

ತೆಂಗು ನಮ್ಮ ಪಾಲಿನ ಕಲ್ಪವೃಕ್ಷ. ನಾವೆಲ್ಲಾ ನೂರಾರು ವರ್ಷಗಳಿಂದ ತೆಂಗು ಬೆಳೆದ ಅನುಭವಿಗಳು. ಆದರೆ ಎಲ್ಲಿ ಎಷ್ಟು ಅಂತರ ಎಂಬುದನ್ನು ಇನ್ನೂ ಸರಿಯಾಗಿ ಅರಿತಿಲ್ಲ. ತೆಂಗನ್ನು ೩೦ ಅಡಿ ಅಂತರದಲ್ಲೂ ಬೆಳೆಯಬಹುದು. ಹಾಗೆಯೇ ೧೫ ಅಂತರದಲ್ಲೂ ಬೆಳೆಯಬಹುದು. ಅದು ಸ್ಥಳ ಮತ್ತು ಪರಿಸ್ಥಿತಿಗೆ ಅನುಗುಣವಾಗಿ.

ತೆಂಗನ್ನು ಪ್ಲಾಂಟೇಶನ್ ಆಗಿ ಬೆಳೆಯಲಾಗುತ್ತದೆ. ಅದೇ ರೀತಿಯಲ್ಲಿ ಮನೆ ಹಿತ್ತಲ ಗಿಡವಾಗಿಯೂ, ರಸ್ತೆ ದಾರಿ ಮಗ್ಗುಲಿನ ಬೆಳೆಯಾಗಿಯೂ  ಬೆಳೆಯಲಾಗುತ್ತದೆ. ಇದು ಮುಖ್ಯ ಬೆಳೆಯೂ ಹೌದು. ಮಿಶ್ರ ಬೆಳೆಯೂ ಹೌದು.  ತೆಂಗನ್ನು  ಬೆಳೆಸುವಾಗ ಎಲ್ಲಿ ಬೆಳೆಯುತ್ತೀರಿ ಅದರ ಮೇಲೆ ಅಂತರವನ್ನು ನಿರ್ಧರಿಸಿಕೊಳ್ಳಬೇಕು.

ಪ್ಲಾಂಟೇಶನ್ ಬೆಳೆಯಾಗಿ: ತೆಂಗಿನ ತೋಟ ಮಾಡುತ್ತೀರೆಂದಾದರೆ ಅಲ್ಲಿ ಪಾಲಿಸಬೇಕಾದ ಅಂತರ ಭಿನ್ನ. ಮರದಿಂದ ಮರಕ್ಕೆ ಕನಿಷ್ಟ ೨೫- ಅಥವಾ ಗರಿಷ್ಟ ೩೦ ಅಡಿ (೭.೫ ಮೀಟರ್) ಅಂತರವನ್ನು ಇಡಬೇಕು ೩೦ ಅಡಿ ಅಂತರದಲ್ಲಿ ಮಿಶ್ರ ಬೆಳೆ ಬೆಳೆಯುವುದಕ್ಕೆ ಅನುಕೂಲ. ಇದನ್ನು ತ್ರಿಕೋನಾಕಾರದಲ್ಲಿ ನಾಟಿ ಮಾಡಿದರೆ ೧೦ ರಿಂದ ೧೨ ಸಸಿ ಹೆಚ್ಚು ಹಿಡಿಸಬಹುದು. ಇಲ್ಲಿ ಪ್ರಾಮುಖ್ಯವಾಗಿ ಎಲ್ಲಾ ಮರಗಳಿಗೂ ಸರಿಯಾಗಿ ಬಿಸಿಲು ಬೀಳಬೇಕು. ಒಂದು ಮರದ ಗರಿ ಮತ್ತೊಂದು ಮರಕ್ಕೆ ತಗಲಬಾರದು. ಮಧ್ಯಂತರದಲ್ಲಿ ನೆಲಕ್ಕೆ ಸ್ವಲ್ಪವಾದರೂ ಬಿಸಿಲು ಬೀಳಬೇಕು.

ಹೈಬ್ರೀಡ್ ತಳಿಗಳಿಗೆ: ಹೈಬ್ರೀಡ್ ತಳಿಗಳಾದರೆ, ಅಂದರೆ ಅದು ಮಧ್ಯಮ ಎತ್ತರದ ತಳಿಗಳಾಗಿದ್ದರೆ ಅಂತರವನ್ನು ೨೫ ಅಡಿ ಗರಿಷ್ಟ ಇಟ್ಟುಕೊಳ್ಳಬಹುದು. ಎತ್ತರದ ಸ್ಥಳೀಯ ತಳಿಯಾಗಿದ್ದಲ್ಲಿ ೩೦ ಅಡಿ ಅಂತರ ಸೂಕ್ತ. ಅಂತರದ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು.ಇದು ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ.

ಗಿಡ್ಡ ತಳಿಯ ಎಳನೀರಿಗೆ ಸೂಕ್ತವಾದ ತಳಿಗಳನ್ನು ೨೨ ಅಡಿಯಿಂದ ೨೫ ಅಡಿ ಅಂತರದಲ್ಲಿ ನಾಟಿ ಮಾಡಿದರೆ ಇಳುವರಿಗೆ ತೊಂದರೆ ಇರುವುದಿಲ್ಲ. ಮುಖ್ಯವಾಗಿ ಅಂತರ ಕಾಯ್ದುಕೊಳ್ಳುವಾಗ ಗರಿಗಳ ಉದ್ದವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಗರಿ ಗಿಡ್ಡವಾಗಿದ್ದರೆ ಅಂತರ ಸ್ವಲ್ಪ ಕಡಿಮೆ ಸಾಕು. ೨೫ ಅಡಿ ಅಂತರದಲ್ಲಿ ಎಕ್ರೆಗೆ ೭೦ ಗಿಡಗಳನ್ನೂ ೩೦ ಅಡಿ ಅಂತರದಲ್ಲಿ ನಾಟಿ ಮಾಡಿದರೆ ೬೫ ಸಸಿಗಳನ್ನು ಹಿಡಿಸಬಹುದು. ತೋಟ ಮಾಡುವ ಸ್ಥಳದ ಅಕ್ಕ ಪಕ್ಕದಲ್ಲಿ ನಿಮ್ಮದೇ ಸ್ಥಳ ಇದ್ದರೆ, ಆ ಭಾಗದಲ್ಲಿ ಸಸಿಗಳನ್ನು ೧೫-೨೦ ಅಡಿ ಅಂತರದಲ್ಲಿ ನಾಟಿ ಮಾಡಬಹುದು. ಅದು ಬೆಳಕಿನತ್ತ ವಾಲುವ ಮೂಲಕ ಇಳುವರಿಗೆ ತೊಂದರೆ ಉಂಟಾಗುವುದಿಲ್ಲ.

೧೫ ಅಡಿ ಅಂತರದ ನಾಟಿ: ಬೇಲಿ ಪದ್ದತಿಯ ನಾಟಿಗೆ, ಗದ್ದೆಯ ಹುಣಿಯಲ್ಲಿ ತೆಂಗಿನ ಸಸಿ ನಾಟಿ ಮಾಡುವಾಗ ಈ ಕ್ರಮ ಅನುಸರಿಸಬಹುದು. ಅದೇ ರೀತಿಯಲ್ಲಿ ಅಡಿಕೆ ತೋಟಕ್ಕೆ ಗಾಳಿ ಮತ್ತು ಬಿಸಿಲು ತಡೆಯಾಗಿ ತೆಂಗು ನಾಟಿ ಮಾಡುವುದು ಇರುತ್ತದೆ. ಇಂತಹ ಕಡೆ ಸಸಿಯಿಂದ ಸಸಿಗೆ ೧೫ ಅಡಿ ಅಂತರ ಸಾಕು. ಈ ಸಸಿಗಳು ಅತ್ತ ಇತ್ತ ವಾಲುವ ಮೂಲಕ  ತಮಗೆ ಬೇಕಾದ ಬೆಳಕನ್ನು ಪಡೆಯುತ್ತವೆ. ಈ ರೀತಿ ನಾಟಿ ಮಾಡಿದಲ್ಲಿ ಇಳುವರಿಯೂ ಚೆನ್ನಾಗಿರುತ್ತದೆ. ಮರದ ಆರೋಗ್ಯವೂ ಸಹ ಉತ್ತಮವಾಗಿರುತ್ತದೆ.

ರಸ್ತೆ ಬದಿಯ ಮರಗಳಾಗಿ ತೆಂಗನ್ನು ಬೆಳೆಸುವುದಾದರೆ, ಏಕ ಸಾಲಿನಲ್ಲಿ ಬಾರ್ಡರ್ ಸಸ್ಯಗಳಾದರೆ ಈ ಅಂತರವನ್ನು ಪಾಲಿಸಿ ಉತ್ತಮ ಇಳುವರಿ ಪಡೆಯಬಹುದು. ಇದನ್ನು ಮಾಹಾರಾಷ್ಟ್ರದ ಬಾರಾಮತಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾಣಬಹುದು. ನಮ್ಮಲ್ಲಿ ಅಡಿಕೆ ತೋಟದ ಬದುಗಳಲ್ಲಿ ಹಲವಾರು ರೈತರು ಬೆಳೆಸಿದ್ದುಂಟು. ಹತ್ತಿರದ ಅಂತರ (೧೫ ಅಡಿ) ನಾಟಿ ಮಾಡಿದಾಗ ಕೆಲವು ಅನುತ್ಪಾದಕ ಸಸಿಗಳಿದ್ದರೆ ಅದನ್ನು ತೆಗೆದು ಅಂತರ ಹೆಚ್ಚು ಮಾಡಬಹುದು.  ಮರಕ್ಕೆ ವಯಸ್ಸಾಗುತ್ತಿದ್ದಂತೆ ಬೇರೆ ಎಡೆ ಸಸಿಯನ್ನೂ ನಾಟಿ ಮಾಡಬಹುದು. ತೆಂಗನ್ನು ಮುಖ್ಯ ಬೆಳೆಯಾಗಿ ಬೆಳೆಯುವುದಿದ್ದರೆ ಮಾತ್ರ ಅಧಿಕ ಅಂತರ ಇಡಿ. ಮದ್ಯಂತರ ಬೆಳೆಗಳನ್ನು ಬೆಳೆಸಲು ಹೆಚ್ಚು ಅಂತರ ಉತ್ತಮ. ಬದುಗಳು ಅಥವಾ ದಾರಿ ಪಕ್ಕ ಬೆಳೆಯುವುದಿದ್ದರೆ ೧೫ ಇದ್ದರೆ ಅದರ ಸೊಬಗೇ ಬೇರೆ. 

ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ