ತೆರಿಗೆ ಬಾಕಿ ವಸೂಲಿಗೆ ಸ್ತ್ರೀಶಕ್ತಿ ಅಸ್ತ್ರ ಸೂಕ್ತ
ಹಣ ಸೋರಿಕೆಯಾಗದಂತೆ, ಸಂಸಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕಲೆಗಾರಿಕೆ ಸ್ತ್ರೀಗೆ ಸ್ವಭಾವತ ಒಲಿದು ಬಂದಿದೆ. ಮಹಿಳೆಯರ ಈ ಗುಣವೇ ವರದಾನವಾಗಿ ಸಮಾಜದಲ್ಲಿ ಎಷ್ಟೋ ಸಂಸಾರಗಳು ಆರ್ಥಿಕವಾಗಿ ಸುಧಾರಣಾ ಹಳಿಗೆ ಬಂದಿವೆ. ಈ ಸೂಕ್ಷ್ಮತೆಯನ್ನು ಗಮನಿಸಿಯೇ ರಾಜ್ಯ ಸರಕಾರವು ೨೦೨೪-೨೫ರ ಬಜೆಟ್ ನಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ವಸೂಲಿ ಜವಾಬ್ದಾರಿಯನ್ನು ಮಹಿಳಾ ಸ್ವಸಹಾಯ ಗುಂಪುಗಳ ಹೆಗಲಿಗೆ ವಹಿಸಿತ್ತು. ಈ ನೀತಿಯನ್ನು ಮೈಸೂರು ಮಹಾನಗರ ಪಾಲಿಕೆ ಅಧಿಕೃತವಾಗಿ ಮೊದಲು ಅಳವಡಿಸಿಕೊಳ್ಳಲು ಮುಂದಾಗಿರುವುದು ನಿಜಕ್ಕೂ ಮಾದರಿ.
ಹಾಗೆ ನೋಡಿದರೆ, ಈ ಹಿಂದೆ ರಾಜ್ಯದ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಕಂದಾಯ ಬಾಕಿ ವಸೂಲಿಯನ್ನು ಮಹಿಳಾ ಸಂಘಗಳಿಗೆ ಒಪ್ಪಿಸಿದ ನಿದರ್ಶನಗಳು ನಡೆದಿದ್ದವು. ಈಗ ಇದು ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕೃತವಾಗಿ ಅಳವಡಿಕೆಯಾಗುತ್ತಿರುವುದು ಶ್ಲಾಘನೀಯ. ಆಸ್ತಿ ತೆರಿಗೆ, ನೀರಿನ ಶುಲ್ಕ ಬಾಕಿ ವಸೂಲಿ ಇಂದಿಗೂ ಅಧಿಕಾರಿಗಳಿಗೆ ಬಹುದೊಡ್ಡ ತಲೆನೋವಿನ ವಿಚಾರ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊರತು ಪಡಿಸಿ ರಾಜ್ಯದಲ್ಲಿ ೩೧೫ ಸ್ಥಳೀಯ ಸಂಸ್ಥೆಗಳಿದ್ದು, ನೀರಿನ ಶುಲ್ಕ ೧೧೪೧.೩೧ ಕೋಟಿ ರೂ ಹಾಗೂ ಆಸ್ತಿ ತೆರಿಗೆ ಶುಲ್ಕ ೧೮೬೦.೧೭ ಕೋಟಿ ರೂ. ಬಾಕಿ ಇದೆ. ಇವೆಲ್ಲವೂ ಸೇರಿ ಒಟ್ಟು ೩,೧೬೮.೫೨ ಕೋಟಿ ರೂ. ಬಾಕಿ ಉಳಿದಿದೆ. ಇಷ್ಟು ಬೃಹತ್ ಮೊತ್ತವನ್ನು ಸಕಾಲದಲ್ಲಿ ವಸೂಲಿ ಮಾಡಲು ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸಾಧ್ಯವಾಗಿಲ. ಹಾಗಂತ ಇದನ್ನು ಬಿಟ್ಟು ಬಿಡಲಾಗದು.
ಕೇವಲ ಬಿಬಿಎಂಪಿ ವ್ಯಾಪ್ತಿಯೊಂದರಲ್ಲೇ ೫೨೧೦ ಕೋಟಿ ರೂ. ತೆರಿಗೆ ವಸೂಲಿ ಮಾಡಲು ೨೦೨೪-೨೫ರಲ್ಲಿ ಟಾರ್ಗೆಟ್ ನೀಡಲಾಗಿತ್ತು. ಇದರ ಗಡುವಿಗೆ ಇನ್ನು ೩ ತಿಂಗಳು ಉಳಿದಿದ್ದು, ಇದುವರೆಗೆ ೪,೩೭೦ ಕೋಟಿ ರೂ. ವಸೂಲಿ ಮಾತ್ರವೇ ಅಧಿಕಾರಿಗಳಿಂದ ಸಾಧ್ಯವಾಗಿದೆ. ೮೪೦ ಕೋಟಿ ರೂ. ಬಾಕಿ ಉಳಿದಿದ್ದು ಸಹಜವಾಗಿ ಇದೊಂದು ಚಿಂತೆಗೀಡು ಮಾಡಿದೆ. ಇದಲ್ಲದೆ, ೨.೬ ಲಕ್ಷ ಸುಸ್ತಿದಾರ ಆಸ್ತಿ ಮಾಲಿಕರಿಂದ ೩೨೯ ಕೋಟಿ ರೂ. ತೆರಿಗೆ ಬಾಕಿ ಬರಬೇಕಿದೆ. ತೆರಿಗೆ ಪರಿಷ್ಕರಣೆಯ ೯,೬೯೧ ಪ್ರಕರಣಗಳಿಂದ ಒಟ್ಟು ೧೯೧ ಕೋಟಿ ರೂ. ಬರಬೇಕಿದೆ. ಆರ್ಥಿಕ ವರ್ಷ ಮುಕ್ತಾಯಕ್ಕೆ ೩ ತಿಂಗಳಿದ್ದು, ಇಷ್ಟು ಬೃಹತ್ ಪ್ರಮಾಣದ ಹಣ ವಸೂಲಿ ಸಾಧ್ಯವೇ?
ಎಂಥದ್ದೇ ಸವಾಲುಗಳಿರಲಿ, ಅಂದುಕೊಂಡಿದ್ದನ್ನು ಸಾಧಿಸುವುದರಲ್ಲಿ ಮಹಿಳೆಯರು ನಿಸ್ಸೀಮರು. ತೆರಿಗೆ ಕಟ್ಟದೆ ಓಡಾಡುತ್ತಿರುವವರ ಮನೆ ಮುಂದೆ ಮಹಿಳೆಯರ ಗುಂಪು ನಿಂತರೆ ಗೌರವಕ್ಕೆ ಅಂಜಿಯಾದರೂ ಆ ವ್ಯಕ್ತಿ ತೆರಿಗೆ ಕಟ್ಟಲು ಮುಂದಾಗಬಹುದು ಎನ್ನುವುದು ಈ ತಂತ್ರದ ಹಿಂದಿನ ಸರಳ ಮನೋವಿಜ್ಞಾನ. ಬಾಕಿ ಕಟ್ಟದೆ, ತಲೆಮರೆಸಿಕೊಂಡು ಓಡಾಡುತ್ತಿರುವವರ ಮನೆಗೆ ಪದೇಪದೆ ಭೇಟಿ ಕೊಟ್ಟರೆ, ಆ ತೆರಿಗೆ ವಂಚಕನಿಗೆ ತೆರಿಗೆ ಪಾವತಿಸದೇ ವಿಧಿಯೇ ಇರುವುದಿಲ್ಲ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವಂತೆ, ತೆರಿಗೆ ಸಂಗ್ರಹದ ಗುರಿ ಈಡೇರಿಕೆಗೆ ಇದು ಅತ್ಯುತ್ತಮ ಮಾರ್ಗ.
ಬಿಬಿಎಂಪಿಯೂ ಸೇರಿದಂತೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳೂ ಮೈಸೂರಿನ ಪಾಲಿಕೆ ನೀತಿಯನ್ನು ಅನುಸರಿಸಲಿ. ಈ ಕಾರ್ಯಕ್ಕೆ ಪಡೆಯುವ ಶೇ.೫ ಪ್ರೋತ್ಸಾಹ ಧನ ಮಹಿಳಾ ಗುಂಪುಗಳನ್ನು ಮತ್ತಷ್ಟು ಸ್ವಾವಲಂಬಿಯಾಗಿಸುತ್ತದೆ. ಸ್ತ್ರೀಶಕ್ತಿ ಗುಂಪು ರಚನೆಯ ಮೂಲ ಉದ್ದೇಶ ಮಹಿಳಾ ಸಬಲೀಕರಣವೇ ಅಲ್ಲವೇ? ಸರಕಾರಕ್ಕೂ ಸ್ವಾಮಿ ಕಾರ್ಯ ಸ್ವಕಾರ್ಯ ಆದಂತಾಯಿತಲ್ಲವೇ?
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೭-೦೧-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ