ತೆರಿಗೆ ಸಮರ ಅತಿರೇಕಕ್ಕೆ ಹೋಗದಿರಲಿ

ತೆರಿಗೆ ಸಮರ ಅತಿರೇಕಕ್ಕೆ ಹೋಗದಿರಲಿ

ಎರಡನೇ ಬಾರಿಗೆ ಅಮೇರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಂಗಳವಾರ ರಾತ್ರಿ (ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ) ಭಾಷಣ ಮಾಡಿದ ಡೊನಾಲ್ಡ್ ಟ್ರಂಪ್, ಭಾರತದ ಮೇಲೆ ‘ಪಾರಸ್ಪರಿಕ ತೆರಿಗೆ’ (ರೆಸಿಪ್ರೋಕಲ್ ಟ್ಯಾರಿಫ್) ಹೇರುವ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಭಾರತ ಮತ್ತು ಇತರ ಹಲವು ದೇಶಗಳು ಹೇರುತ್ತಿರುವ ತೆರಿಗೆ ‘ತೀವ್ರ ಅನ್ಯಾಯದ್ದು’ ಎಂಬ ಟೀಕೆಯನ್ನು ಪುನರುಚ್ಚರಿಸಿರುವ ಟ್ರಂಪ್, ಇದಕ್ಕೆ ಪ್ರತಿಯಾಗಿ ಹೇರಲು ನಿರ್ಧರಿಸಿರುವ ಪಾರಸ್ಪರಿಕ ತೆರಿಗೆ ಎಪ್ರಿಲ್ ೨ ರಿಂದ ಜಾರಿಗೆ ಬರಲಿದೆಯೆಂದು ಘೋಷಿಸಿದ್ದಾರೆ. ಬೇರೆ ದೇಶಗಳು ಅಮೇರಿಕದ ವಸ್ತುಗಳ ಆಮದಿನ ಮೇಲೆ ವಿಧಿಸುವಷ್ಟೇ ತೆರಿಗೆಯನ್ನು ಅಮೇರಿಕ ಇತರ ದೇಶಗಳ ವಸ್ತುಗಳಿಗೆ ವಿಧಿಸುವುದಕ್ಕೆ ಪಾರಸ್ಪರಿಕ ತೆರಿಗೆ ಅನುವು ಮಾಡಿಕೊಡುತ್ತದೆ.

‘ಅಮೇರಿಕ ಮೊದಲು’ ಎಂಬ ನೀತಿಯ ನೆಪವೊಡ್ಡಿ ಟ್ರಂಪ್ ಆತುರದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು, ಇದರಿಂದ ಅಮೇರಿಕ ಮಾತ್ರವಲ್ಲದೆ ಜಗತ್ತಿನ ಇತರ ದೇಶಗಳ ಮೇಲೂ ಪ್ರತಿಕೂಲ ಪರಿಣಾಮವಾಗುತ್ತಿದೆ. ಯೂಕ್ರೇನ್ ಗೆ ಸೇನಾ ಹಾಗೂ ಆರ್ಥಿಕ ನೆರವು ನಿಲ್ಲಿಸಿದ ಬೆನ್ನಲ್ಲೇ ಭಾರತ ಮತ್ತು ಚೀನಾ ವಿರುದ್ಧ ಎಪ್ರಿಲ್ ೨ರಿಂದ ಪಾರಸ್ಪರಿಕ ಸುಂಕ ವಿಧಿಸುವುದಾಗಿ ಹೇಳಿದ್ದಾರೆ. ಮೆಕ್ಸಿಕೋ ಮತ್ತು ಕೆನಡಾ ಮೇಲಿನ ಸುಂಕ ನೀತಿಯು ಮಂಗಳವಾರದಿಂದಲೇ ಜಾರಿಗೆ ಬಂದಿದೆ. ಈ ಸುಂಕ ನೀತಿ ಕರ ಸಮರಕ್ಕೆ ಮುನ್ನುಡಿ ಬರೆದಿದ್ದು, ಟ್ರಂಪ್ ವಾಸ್ತವವನ್ನು ಅವಲೋಕಿಸಿ ನಿರ್ಧಾರಗಳನ್ನು ತಳೆಯುವುದು ಅಗತ್ಯ.

ದಿಢೀರ್ ಸುಂಕ ಹೆಚ್ಚಳದ ನಿರ್ಧಾರವನ್ನು ವಿರೋಧಿಸಿ ಕೆನಡಾ ವಿಶ್ವ ವ್ಯಾಪಾರ ಸಂಸ್ಥೆಗೆ (ಡಬ್ಲ್ಯೂಟಿಒ) ದೂರು ದಾಖಲಿಸಿದೆ. ಕೆನಡಾ ಮೇಲಿನ ನ್ಯಾಯಸಮ್ಮತವಲ್ಲದ ಸುಂಕಗಳಿಗೆ ಸಂಬಂಧಿಸಿದಂತೆ ಅಮೇರಿಕಾ ಸರ್ಕಾರದೊಂದಿಗೆ ಡಬ್ಲ್ಯೂಟಿಒ ಸಮಾಲೋಚನೆ ನಡೆಸಬೇಕು ಎಂದು ಅದು ಕೋರಿದೆ. ಚೀನಾ ಕೂಡಾ ಈ ಮೊದಲೇ ದೂರು ಸಲ್ಲಿಸಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದೆ. ವಾಸ್ತವದಲ್ಲಿ ಟ್ರಂಪ್ ಅವರ ನಡೆ ಅಮೇರಿಕಕ್ಕೆ ಮುಳುವಾಗಿ ಪರಿಣಮಿಸಲಿದೆ ಎಂದು ಅಲ್ಲಿನ ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದರೂ, ಟ್ರಂಪ್ ತಾವು ನಡೆದದ್ದೇ ದಾರಿ ಎಂಬಂತೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಅಮೇರಿಕದಲ್ಲಿ ಉಪಯೋಗಿಸುವ ೬೩ % ತರಕಾರಿ ಹಾಗೂ ೪೭ % ಹಣ್ಣುಗಳು ಮೆಕ್ಸಿಕೋದಿಂದ ಬರುತ್ತವೆ. ೭೫ % ಅಮೇರಿಕನ್ನರ ಬಳಿ ಚೀನಾ ತಯಾರಿಸಿದ ಫೋನ್ ಗಳಿವೆ. ಅಂದರೆ ತನ್ನ ಅವಶ್ಯಕತೆಗಳಿಗಾಗಿ ಅಮೇರಿಕ ಇತರ ದೇಶಗಳ ಮೇಲೆ ಅವಲಂಬಿತವಾಗಿರುವುದು ಸ್ಪಷ್ಟ.

ಕೆಲ ರಾಷ್ಟ್ರಗಳು ಅಮೇರಿಕಕ್ಕೆ ಅವೈಜ್ಞಾನಿಕ ಸುಂಕ ವಿಧಿಸುತ್ತಿದ್ದರೆ, ಆ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಸುಲಭ ದಾರಿಯನ್ನು ಟ್ರಂಪ್ ತ್ಯಜಿಸಿದ್ದಾರೆ. ಅಮೇರಿಕದ ಉದ್ಯಮಗಳು ಆದಾಯ ಕುಸಿತದ ಆತಂಕ ಎದುರಿಸುತ್ತಿದ್ದು, ಉದ್ಯೋಗ ನಷ್ಟದ ಭೀತಿಯೂ ಆವರಿಸಿದೆ. ಹಣದುಬ್ಬರ ಹೆಚ್ಚಲಿದ್ದು, ಜನರಿಗೆ ಬೆಲೆಯೇರಿಕೆ ಸಮಸ್ಯೆ ಕಾಡಲಿದೆ. ಅಮೇರಿಕದ ಹಿತವನ್ನು ಕಾಪಾಡುವುದಾಗಿ ಹೇಳಿ ತನ್ನ ರಾಷ್ಟ್ರಕ್ಕೂ, ಇತರ ದೇಶಗಳಿಗೂ ಸಂಕಷ್ಟ ತಂದೊಡ್ಡುತ್ತಿರುವ ಟ್ರಂಪ್ ನಡೆಯಿಂದ ಹಾನಿಯೇ ಹೆಚ್ಚು. ಚೀನಾ ಮತ್ತು ಕೆನಡಾದಂತೆ ಭಾರತ ಕೂಡ ಈ ಬಗ್ಗೆ ದನಿ ಎತ್ತಬೇಕು. ವಿಶ್ವ ವ್ಯಾಪಾರ ಸಂಸ್ಥೆ ಸಮ್ಮುಖದಲ್ಲಿ ವಿಷಯವನ್ನು ಪ್ರಸ್ತಾಪಿಸಿ, ವಿವಾದಕ್ಕೆ ಸುಖಾಂತ್ಯ ಕಂಡುಕೊಳ್ಳುವುದು ಸೂಕ್ತ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೬-೦೨-೨೦೨೫ 

ಚಿತ್ರ ಕೃಪೆ: ಅಂತರ್ಜಾಲ ತಾಣ