ತೆರೆದ ಕಿಟಕಿಯ ಹೂವುಗಳು

ತೆರೆದ ಕಿಟಕಿಯ ಹೂವುಗಳು

ಏಕೆ ಕಾಡುವೆ ನನ್ನನೆ
ಓಹೊ!
ಕಿಟಕಿಯನೇರಿ
ಅಡ್ಡಡ್ಡ ಉದ್ದುದ್ದ ಕುಳಿತು
ಹಣಕಿ ಹಾಕಿ ಕ್ಯಾಮರಾಕ್ಕೆ
ವಯ್ಯಾರದಿ ಪೋಸು ಕೊಟ್ಟ
ಭಂಗಿ ನೋಡು.
ಆಹಾ!
ಕರವೀರದ ಹೂವೆ
ಎದ್ದು ನಿಂತರೆ ಗಂಟೆ
ಅಡ್ಡ ಮಲಗಿದರೆ ಕಾಣುವೆ
ಕಹಳೆಯಂತೆ.
ನಿನ್ನ ಬಣ್ಣವೊ
ಅದೆ ಎಲ್ಲಿ ಬಿಟ್ಟು ಬಂದೆ
ಆ ಬಿಳಿ, ಕಾವಿ?
ಬರಿ ಹಳದಿಯೊಂದೆ ಕಾಣುತಿದೆಯಲ್ಲ!
ಹಮ್ೲೲೲ
ಪೂಸಿದರೆ
ಸೌಮ್ಯ ಸುಗಂಧ ಘಮ
ಪತ್ರೆ, ಗರಿಕೆ, ಪುಷ್ಪಗಳ
ಜೊತೆ ಸೇರಿ ಹೂ ಬುಟ್ಟಿಯಲಿ
ಅಡಗಿ ಕುಳಿತು
ಆಡುವೆ ಕಣ್ಣಾ ಮುಚ್ಚಾಲೆ
ತಡಕಾಡಿ ಹುಡುಕಿ
ಹಿಡಿದು ಕೈಯಲ್ಲಿ
ಉಲಿಯುವರು ಮಂತ್ರದಲ್ಲಿ
“ಕರವೀರ ಪುಷ್ಪಂ ಸಮಪ೯ಯಾಮಿ”
ಬಿಡು ನೀ ಪುಣ್ಯವಂತೆ
ದೇವರ ಪಾದ ಸೇರುವೆ.
ನಿನ್ನ ಬೀಜವೊ
ಆಕಾರದಲಿ ಕಪ್ಪಾದ
ಗಟ್ಟಿ ದೋಣಿ.
ಹೋಗ್
ಯಾರಾರೈಕೆ ಬೇಕಿಲ್ಲ ನನಗೆ
ಎಂದುಸುರುವ
ಗಟ್ಟಿ ಮನಸಿನ ದಿಟ್ಟೆ ನೀನು.
ತಂಪಾದ ಭುವಿಗೆ
ಬೀಜ ಬಿದ್ದರೆ ಸಾಕು
ಹಾದಿ, ಬೀದಿ ಪಕ್ಕದಲ್ಲಾದರೂ
ಎಲ್ಲೆಂದರಲ್ಲಿ
ಮೊಳಕೆಯೊಡೆದು ಪುಟಿದೇಳುವೆ
ನಿತ್ಯ ಹರಿದ್ವರಣದ
ಪೊದರು ಗಿಡವಾಗಿ
ಇಲ್ಲ ಆಳೆತ್ತರದ ಮರವಾಗಿ
ದನ,ಕರು,ದಾರಿ ಹೋಕರಿಗೆ
ತಂಪು ನೆರಳಾಗಿ.
ನಿನ್ನಂಗಾಂಗ
ಸ್ವಲ್ಪಮುಟ್ಟಿ
ಚಿವುಟಿದರೆ ಸಾಕು
ಅಯ್ಯೋ ಎನ್ನದೆ
ಕೊಡುವೆ
ಅಂಟು ಅಂಟಾದ ಹಾಲ್ರಸ
ಔಷಧೀಯ ಸಸ್ಯ
ಸಂಕುಲ ನೀನು
ಆದರೂ
ಮನೆ ಮುಂದೆ
ಬೆಳೆಸಬಾರದೆನ್ನುವ
ವಾಸ್ತುವಿನ
ಸಂಕೋಲೆ ನಿನಗೆ!
ಕಾಲನ ಹಂಗಿಲ್ಲ
ಸದಾ ಕಾಲ
ತಿಳಿ ಹಸಿರು
ಗೊಂಚಲು ಮೊಗ್ಗಾಗಿ
ಭಚಿ೯ಯಾಕಾರ ತಳೆದು
ನಿದಾನವಾಗಿ
ಐದೆಸಳಿನಲ್ಲಿ ಬಿರಿದು
ನಗುವೆ
ಟೊಂಗೆಯ ತುದಿಯಲ್ಲಿ.
ಅರಳಿದ
ಎರಡು ದಿನದಲ್ಲಿ
ಭೂರಮೆಯಲ್ಲಿ
ನಿನ್ನಂದದ
ಚಿತ್ತಾರ ಬಿಡಿಸಿ
ಪೃಕೃತಿಯ ಮಡಿಲು
ಶೃಂಗಾರ ಗೊಳಿಸುವ
ನೀ ದೇವ ಕುಸುಮ.

Comments

Submitted by keshavmysore Thu, 04/21/2016 - 00:27

ನಿಮ್ಮ ಕವಿತೆಯಿಂದ ಕರವೀರ ಪುಷ್ಪ ಅರಳಿದ್ದು ಸಾರ್ಥಕವಾಯಿತು ಅನ್ನಲೇ? ಕರವೀರದ ಹೂವಿನ ಬಗ್ಗೆ ಮಾಹಿತಿ ಈ ಕೆಳಗಿನ ಕೊಂಡಿಗಳಲ್ಲಿದೆ ನೋಡಿ.
https://en.wikipedia.org/wiki/Cascabela_thevetia
http://bhavyashreehegde.blogspot.com/2016/03/blog-post.html
http://www.nzenzeflowerspauwels.be/ThevPeru3.jpg
http://www.prota4u.org/protav8.asp?en=1&p=Thevetia+peruviana
- ಕೇಶವ ಮೈಸೂರು

Submitted by Sangeeta kalmane Thu, 04/21/2016 - 11:56

In reply to by keshavmysore

ಧನ್ಯವಾದಗಳು ಕೇಶವ್. ಈ ಪುಷ್ಪ ಕಂಡರೆ ಅದೇನೊ ಮಮತೆ. ಇದಕ್ಕೆ ಸರಿಯಾಗಿ "ಅವಧಿ"ಯಲ್ಲಿ "ತೆರೆದ ಕಿಟಕಿಯ ಹೂವುಗಳು" ಅನ್ನುವ ಶೀರ್ಷಿಕೆಯಲ್ಲಿ ಒಂದು ಫೋಟೊ ಈ ಹೂಗಳನ್ನಿಟ್ಟು ಹಾಗೆ ನಿಮ್ಮ ಅನಿಸಿಕೆ ಬರಿರಿ ಅಂತಿತ್ತು. ಅಲ್ಲಿ ಕಮೆಂಟಲ್ಲೆ ಕವನ ಬರೆದೆ. ಸಮಾಧಾನ ಆಗಿಲ್ಲ. ಮತ್ತೆ ನನ್ನದೆ ಕಲ್ಪನೆಯಲ್ಲಿ ಫೋಟೋ ತೆಗೆದು ಗೊತ್ತಿರುವ ಮಾಹಿತಿ ಸೇರಿಸಿ ಕವನ ಬರೆದೆ. ಈ ಹೂವಿನ ಬಗ್ಗೆ ಜನರಲ್ಲಿ ಕೀಳರಿಮೆ ಇದೆ. ಬೇಜಾರಾಗುತ್ತದೆ. ಆದರೆ ಒಂದು ಮಾತು ನಿಜ "ಸುಲಭವಾಗಿ ಯಾವುದು ಸಿಗುತ್ತೊ ಅದರ ಬಗ್ಗೆ ಆಸಕ್ತಿ,. ಗೌರವ ಕಡಿಮೆ." ಮಾಹಿತಿ ಒದಗಿಸಿದ್ದಕ್ಕೆ ಧನ್ಯವಾದಗಳು.

Submitted by keshavmysore Thu, 04/21/2016 - 13:36

In reply to by Sangeeta kalmane

ಸಂಗೀತಾರವರೆ, ಹೂವಿನ ಸಾರ್ಥಕತೆ ಅದು ದೇವರಿಗೆ ಅರ್ಪಿತವಾದಾಗ ಅಥವಾ ಹೆಣ್ಣಿನ ಮುಡಿಯೇರಿದಾಗ ಮಾತ್ರ ಎಂದಾದರೆ ನೀವು ಬೇಜಾರು ಮಾಡಿಕೊಳ್ಳುವುದು ಸರಿ ಎನ್ನಬಹುದೇನೋ! ಆದರೆ ಪ್ರಕೃತಿಯ ಕಣಕಣದಲ್ಲಿ ಹುದುಗಿರುವ ಸೌಂದರ್ಯವನ್ನು ನೋಡುವ ಕಣ್ಣಿದ್ದರೆ, ಆನಂದಿಸುವ, ಆರಾಧಿಸುವ ಮನಸ್ಸಿದ್ದರೆ ಸೃಷ್ಟಿಸೌಂದರ್ಯ ಎಂದಿಗೂ ವ್ಯರ್ಥವಾಗುವುದಿಲ್ಲ. ಕರವೀರ ಪುಷ್ಪದ ಬಗೆಯೇ ಹೇಳುವುದಾದರೆ, ಅದನ್ನು ಒಂದು ಅಲಂಕಾರಿಕ ಗಿಡವಾಗಿ, ಬೇಲಿಯ ಸಾಲುಗಿಡವಾಗಿ ಎಲ್ಲ ಕಡೆ ನೋಡಬಹುದು. ಯಾರೋ ಅದನ್ನು ಮುಡಿಯಲಿಲ್ಲ ಎಂದು ವ್ಯಥೆ ಪಡುವುದರಲ್ಲಿ ಅರ್ಥವಿಲ್ಲ ಅಲ್ಲವೆ? ಅಂದಹಾಗೆ ನೀವು ಸವಿಯುವ ಜೇನುತುಪ್ಪದಲ್ಲಿ ಕರವೀರದ ಮಕರಂದ ಇರುವುದಿಲ್ಲ ಎನ್ನಲು ಸಾಧ್ಯವೇ?
ಸೃಷ್ಟಿಯ ಅಗಾಧತೆಯಲ್ಲಿ ಮನುಷ್ಯ ಒಂದು ಕಣ ಮಾತ್ರ! ಆ ಕಣದ ದೃಷ್ಟಿಕೋನವೊಂದನ್ನೇ ಸೃಷ್ಟಿಸೌಂದರ್ಯದ ಮಾಪಕವಾಗಿ ಬಳಸುವುದಾದರೆ ಅದು ಆನೆಯ ಮೈತಡವುತ್ತಾ ಅದರ ಆಕಾರವನ್ನು ಕಲ್ಪಿಸಿಕೊಂಡ ಕುರುಡರ ಕಥೆಯಂತೆ ಅಲ್ಲವೆ?
- ಕೇಶವಮೈಸೂರು

Submitted by harishsaniha Sun, 04/24/2016 - 07:43

In reply to by keshavmysore

ಸಂಗೀತ‌ ಹಾಗೂ ಕೇಶವ್ ರವರೆ ನಮ್ಮದೊಂದು ಬೆಸುಗೆಯೆಂಬ‌ ವಾಟ್ಸಪ್ಫ್ ಗುಂಪಿದೆ. ಕನ್ನಡದಲ್ಲಿಯೇ ವ್ಯವಹರಿಸುವುದು ಮತ್ತು ಸಂವಹಿಸುವುದು ಕಡ್ಡಾಯ‌. ಚುಟುಕ‌, ಹನಿ, ಕವಿತೆ ಇತ್ಯಾದಿ ಹಂಚಿಕೊಳ್ಳಬಹುದು. ನೀವೂ ಸೇರಿದರೆ ಬೆಸುಗೆ ಶ್ರೀಮಂತಗೊಳ್ಳುವುದೆಂಬ‌ ಭರವಸೆ ನನ್ನದು. ಅಭ್ಯಂತರವಿಲ್ಲದಿದ್ದರೆ ನಿಮ್ಮ‌ ವಾಟ್ಸಪ್ ನಂಬರ್ ಹಂಚಿಕೊಳ್ಳಿ. ಇಷ್ಟವಾಗದಿದ್ದರೆ ಗುಂಪನ್ನು ತೊರೆಯಲು ಮುಕ್ತ‌ ಅವಕಾಶವಿದೆ.

ಧನ್ಯವಾದಗಳು

ಹರೀಶ್ ಮೈಸೂರು
940557634