ತೇಜೋ-ತುಂಗಭದ್ರ

ತೇಜೋ-ತುಂಗಭದ್ರ

ಪುಸ್ತಕದ ಲೇಖಕ/ಕವಿಯ ಹೆಸರು
ವಸುಧೇಂದ್ರ
ಪ್ರಕಾಶಕರು
ಛಂದ ಪುಸ್ತಕ, ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
Rs.380.00 ಮುದ್ರಣ ೨೦೧೯

ತೇಜೋ-ತುಂಗಭದ್ರ ಎನ್ನುವ ಈ ಬೃಹತ್ ಕಾದಂಬರಿಯು ಹೆಸರೇ ಹೇಳುವಂತೆ ೨ ನದಿ ದಂಡೆಯಲ್ಲಿ ಬರುವ ಲಿಸ್ಬನ್, ವಿಜಯನಗರ, ಗೋವಾ ನಗರಗಳಲ್ಲಿ ಕತೆ ಮುಂದುವರೆಯುತ್ತದೆ. ೧೫-೧೬ನೇ ಶತಮಾನದ ಹಳೆಯ ಕತೆಯಾದರೂ ಸಾರಾಂಶವು ಈಗಿನ ವರ್ತಮಾನಕ್ಕೆ ಹತ್ತಿರವಾಗುತ್ತೆ. ಆ ಶತಮಾನದ ಸಮಯದಲ್ಲಿದ್ದ ಸತಿ ಪದ್ಧತಿ, ಯಹೂದಿಗಳ ಹತ್ಯೆ, ಗುಲಾಮರ ಚಟುವಟಿಕೆಗಳು ಮತ್ತು ಅವರ ಯಾತನಾಮಯ ದಿನಗಳು ಓದುಗರ ನಿದ್ದೆಯನ್ನು ಕೆಡಿಸುತ್ತವೆ. ಲಿಸ್ಟನ್ ನಗರದಲ್ಲಿ ಶುರುವಾದ ಒಂದು ಪ್ರೇಮ ಪ್ರಸಂಗ ಭಾರತದ ತುಂಗಭದ್ರಾ ದಂಡೆಯ ವಿಜಯನಗರದಲ್ಲಿ ಹೇಗೆ ಅಂತ್ಯ ಕಾಣುತ್ತದೆ ಎಂಬುದೇ ರೋಚಕ ಸಂಗತಿ. ಲೇಖಕರಾದ ವಸುಧೇಂದ್ರ ಇವರು ಈ ಕಾದಂಬರಿ ವಿಷಯ ಸಂಗ್ರಹಣೆಗೆ ತುಂಬಾ ಕಾಲ ಸಂಶೋಧನೆ ನಡೆಸಿದ್ದಾರೆ. ಊರಿನ, ರಾಜನ ಘಟನೆಗಳ (ಉದಾ; ವಾಸ್ಕೋಡಿಗಾಮ, ಕೃಷ್ಣ ದೇವರಾಯ ಇತ್ಯಾದಿ) ನ್ನು ಎದುರಿಟ್ಟು ಒಂದು ಕಥಾ ಸಂಗಮ ಹೆಣೆದಿದ್ದಾರೆ. 

ವಾಸ್ಕೋ ಡ ಗಾಮಾನಂಥಹ ಓರ್ವ ನಾವಿಕ ಭಾರತ ದೇಶಕ್ಕೆ ಬಂದು ಇಲ್ಲಿಯ ಕರಿ ಮೆಣಸನ್ನು ತೆಗೆದುಕೊಂಡು ಹೋಗಿ ಪೋರ್ಚ್ ಗಲ್ ನಲ್ಲಿ ಬಂಗಾರದ ಬೆಲೆಗೆ ಮಾರುವುದು, ಅಲ್ಲಿ ಕರಿ ಮೆಣಸನ್ನು ಕದ್ದವರಿಗೆ ಕಠಿಣ ಶಿಕ್ಷೆ ನೀಡುತ್ತಿದ್ದುದು ಇತಿಹಾಸದ ಭಾಗವೇ ಆಗಿದೆ. ಲಿಸ್ಬನ್ ನಗರದ ಗೇಬ್ರಿಯಲ್ ಎಂಬ ಹುಡುಗನಿಗೂ ಬೆಲ್ಲಾ ಎಂಬ ಹುಡುಗಿಗೂ ಪ್ರೇಮವಾಗಿ ಅದು ಹೇಗೆ ಭಾರತದ ತುಂಗಭದ್ರಾ ನದಿಯ ತಟದಲ್ಲಿ ಅಂತ್ಯಗೊಳ್ಳುತ್ತೆ ಎಂಬುವುದನ್ನು ಓದುವುದರಿಂದಲೇ ತಿಳಿಯಬೇಕು.

ಕ್ರೈಸ್ತ ಕುಟುಂಬದವರಿಗೂ ಯಹೂದಿಗಳಿಗೂ ಇರುವ ಧ್ವೇಷ, ಯಹೂದಿಗಳ ಹತ್ಯೆ, ಮತಾಂತರ ಇವೆಲ್ಲವೂ ಪುಸ್ತಕದಲ್ಲಿ ಅಡಕವಾಗಿದೆ. ಭಾರತದಲ್ಲಿ ಕೃಷ್ಣ ದೇವರಾಯನ ಸಮಯದ ವಿವರವೂ ಇದರಲ್ಲಿದೆ. ಕಾದಂಬರಿಯ ತುಂಬೆಲ್ಲಾ ಕಂಡು ಬರುವ ಧರ್ಮ, ವಾಣಿಜ್ಯ-ವ್ಯಾಪಾರ, ಪ್ರೀತಿ, ಸಮುದ್ರಯಾನ, ರಾಜ್ಯಪಾಲನೆ, ಹಬ್ಬ ಹರಿದಿನಗಳು, ಆಚಾರ-ವಿಚಾರ, ದಿನ ಬಳಕೆಯ ಸಂಗತಿಗಳು ಎಲ್ಲವೂ ವಸುಧೇಂದ್ರ ಇವರ ಸಂಶೋಧನೆಯ ಫಲ. ಹಡಗಿನಲ್ಲಿ ಆಹಾರದ ಕೊರತೆಯಾದ ಸಂದರ್ಭದಲ್ಲಿ ಇಲಿಗಳನ್ನು ಹಿಡಿದು ಬೇಯಿಸಿ ತಿನ್ನಿಸುವುದು, ರಾಜನ ಅವಕೃಪೆಗೆ ಪಾತ್ರರಾದವರಿಗೆ ಕಿವಿ-ಮೂಗು ಕತ್ತರಿಸುವ ಶಿಕ್ಷೆ ನೀಡುವುದು, ಭಾರತದಲ್ಲಿ ಆ ಸಮಯದಲ್ಲಿ ಬಲವಾಗಿ ಬೇರೂರಿದ್ದ ಸತಿ ಪದ್ಧತಿಯ ವಿವರಗಳನ್ನು ಓದುವಾಗ ಮನಸ್ಸು ಅಯ್ಯೋ ಅನಿಸುವುದು. 

ಕಾದಂಬರಿಯಲ್ಲಿ ಕಂಡು ಬರುವ ವಿಕ್ಷಿಪ್ತ ಪಾತ್ರವೆಂದರೆ ಅಡವಿಸಾಮಿದ್ದು. ಕಾಡಿನಲ್ಲಿರುವ ಇವನು ಅಪರೂಪಕ್ಕೆ ಊರಿಗೆ ಬರುತ್ತಾನೆ. ಮದ್ದು ಕೊಡುತ್ತಾನೆ. ಈ ಪಾತ್ರವು ಗೋಪಾಲಕೃಷ್ಣ ಪೈ ಯವರ ಕಾದಂಬರಿ ‘ಸ್ವಪ್ನ ಸಾರಸ್ವತ' ಇದರ ನಗ್ನ ಭೇತಾಳನನ್ನು ನೆನಪಿಸುತ್ತದೆ. ಹೀಗೆ ಹತ್ತು ಹಲವಾರು ಪಾತ್ರಗಳು ಕಾದಂಬರಿಯನ್ನು ಓದುತ್ತಾ ಓದುತ್ತಾ ನಮ್ಮ ಸುತ್ತವೇ ತಿರುಗುತ್ತಾ ಹೊಸ ಪ್ರಪಂಚಕ್ಕೇ ಕೊಂಡೊಯ್ಯುತ್ತವೆ. ವಸುಧೇಂದ್ರ ಇವರ ಕಾದಂಬರಿ ಹೆಣೆಯುವ ಕ್ರಿಯಾಶೀಲತೆಯನ್ನು ಅಭಿನಂದಿಸಲೇ ಬೇಕಾಗುತ್ತದೆ. ಸುಮಾರು ೪೫೦ ಪುಟಗಳ ಸಮೃದ್ಧ ಓದು ಈ ಕಾದಂಬರಿಯಿಂದ ಸಾಧ್ಯ.