ತೇಲಿಬಿಟ್ಟ ಆತ್ಮ ಬುಟ್ಟಿ

ಡಾ. ಅಜಿತ್ ಹರೀಶಿ ಅವರ ನೂತನ ಕವನ ಸಂಕಲನ ‘ತೇಲಿಬಿಟ್ಟ ಆತ್ಮ ಬುಟ್ಟಿ’ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಗೀತಾ ವಸಂತ. ತಮ್ಮ ಬೆನ್ನುಡಿಯಲ್ಲಿ
“ಅವರು ಹೇಗೆ ಹುಟ್ಟೀತು ಪದ್ಯ
ಅಲೆಗಳೇಳದ ಕೊಳದ ಮಧ್ಯ
ಎಂದು ಕವಿತೆಯಲ್ಲಿ ಕನವರಿಸುವ ಅಜಿತ್ ಹರೀಶಿಯವರು ಕಾವ್ಯವನ್ನು ಕಾದು ಧೇನಿಸಿ ಕಟ್ಟುವ ಕಸುಬುಗಾರರು. ಹಾಗೆ ಕಟ್ಟಲು ಬೇಕಾದ ದ್ರವ್ಯವಿರುವುದು ನಮ್ಮೊಳಗೇ ಎಂಬ ದಟ್ಟ ಅರಿವು ಅವರ ಬರಹದಲ್ಲಿದೆ. ಒಡಲ ನೂಲಿನಿಂದಲೇ ಜೇಡ ಜಾಲ ನೇಯುವಂತೆ ಒಡಲಲ್ಲಿ ಗುಪ್ತನಿಧಿಯಂತೆ ಅವಿತಿರುವ ನೆನಪುಗಳನ್ನು ಅವರ ಕವಿತೆಗಳು ತಮ್ಮ ಕಸುವಾಗಿ ಮಾರ್ಪಡಿಸಿ ಕೊಂಡಿವೆ. ಬದುಕಿನ ಅಸಂಗತತೆ, ಅನೂಹ್ಯ ತಿರುವುಗಳು, ರಹಸ್ಯಮಯತೆ, ಅರ್ಥದ ಹಂಗಿನಲ್ಲಿ ಅಡಗದೇ ಸದಾ ಹೊರಚಿಮ್ಮಲು ಬಯಸುವ ಭಾವೋತ್ಕಟತೆ ಎಲ್ಲವನ್ನೂ ತಮ್ಮ ದೃಷ್ಟಿಕೋನದಲ್ಲಿ ಮಥಿಸುವ ಕವಿತೆಗಳು ನಮ್ಮ ದೃಷ್ಟಿಯನ್ನೂ ಅಲ್ಲಲ್ಲಿ ಉನ್ಮೀಲನಗೊಳಿಸುತ್ತವೆ.
ದೇಹ ಹಗುರ ನೆನಪು ಭಾರ
ಆ ಗಳಿಗೆ ಮತ್ತೆಮತ್ತೆ ತಿರುಗಿ ಬಾರ
ನೆನಪಿನ ಮಣ್ಣುದಾರಿಗೆ ಮರಳಿ ಅಭಿವೃದ್ಧಿಯ ಹಳವಂಡಗಳಿಂದ ಕಳಚಿಕೊಳ್ಳುವ ಒಳದಾರಿಯನ್ನು ಇಲ್ಲಿನ ಕವಿತೆಗಳು ಕಾಣಿಸುತ್ತವೆ. ಲೋಕದ ಸಂತೆಯಲ್ಲಿ ತಿರುಗಾಡುತ್ತಲೇ ಒಳಗಿನ ಮೌನಕ್ಕೆ ಧ್ವನಿಯಾಗುತ್ತವೆ.
ಅಜಿತರ ಕವಿತೆಗಳಲ್ಲಿ ನೋವಿನ ಝರಿಯೊಂದು ತಣ್ಣಗೆ ಹರಿಯುತ್ತದೆ. ಸಾವಿನ ನೆರಳು ಅಲ್ಲಲ್ಲಿ ಸುಳಿಯುತ್ತದೆ. ವರ್ತಮಾನದ ಸುಡುವಗ್ನಿಯ ಮಧ್ಯೆ ನಿಂತೇ ಕಾಣದ ಕತ್ತಲಿಗೆ ವಿಹ್ವಲಗೊಳ್ಳುವ ಸಂವೇದನಾಶೀಲತೆ ಅವರ ಕವಿತೆಗಳನ್ನು ತಿರುಗಿ ನೋಡುವಂತೆ ಮಾಡುತ್ತದೆ. ನೆರಳುಗಳು ಒಂದರಮೇಲೊಂದು ಬಿದ್ದು ಗಾಢವಾಗುವ ರೂಪಕವೊಂದು ಅವರ ಕವಿತೆಯಲ್ಲಿದೆ. ಅದನ್ನು ಆವರ ಒಟ್ಟೂ ಕವಿತೆಗಳನ್ನು ಭಾವಿಸುವಲ್ಲಿಯೂ ಬಳಸಿಕೊಳ್ಳಬಹುದು. ಬದುಕಿನ ಬಹುಮುಖಗಳ ನಿರೀಕ್ಷಣೆಯಲ್ಲಿ ತಾದಾತ್ಮ್ಯ ಸಾಧಿಸಿದ ಅವರ ಕವಿಪ್ರಜ್ಞೆಯು ಅನುಭವಗಳ ದಟ್ಟ ನೆನಪುಗಳನ್ನು ಸಾಂದ್ರವಾಗಿ ಕಟ್ಟುವ ಕಾಯಕದಲ್ಲಿ ತೊಡಗಿದೆ. ಆದರಲ್ಲಿ ಬಹುಮಟ್ಟಿಗೆ ಯಶಸ್ವಿಯೂ ಆಗಿದೆ. ಬದುಕಿನ ವಿಕಾಸಗತಿಯಲ್ಲಿ ಕಣ್ಣುನೆಟ್ಟ ಈ ಆತ್ಮಬುಟ್ಟಿ ನಮ್ಮ ಎದೆಯ ತೀರಗಳನ್ನೂ ಸೋಕಿ ಮುಂದೆ ಚಲಿಸುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.