ತೊಂಡೆ-ಕಡಲೆ ಗ್ರೀನ್ ಮಸಾಲಾ

ತೊಂಡೆ-ಕಡಲೆ ಗ್ರೀನ್ ಮಸಾಲಾ

ಬೇಕಿರುವ ಸಾಮಗ್ರಿ

ತೊಂಡೆಕಾಯಿ -೨೫೦ ಗ್ರಾಂ, ಕಂದು (ಕಪ್ಪು) ಕಡಲೆ (ರಾತ್ರಿ ನೀರಿನಲ್ಲಿ ನೆನೆಸಿದ) -೧೫೦ ಗ್ರಾಂ, ಅರಸಿನ ೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ತೆಂಗಿನ ಎಣ್ಣೆ, ಕೊತ್ತಂಬರಿ ಬೀಜ -೬ ಚಮಚ, ಜೀರಿಗೆ ೩ ಚಮಚ, ಕಾಳುಮೆಣಸು ೧ ಚಮಚ, ಸ್ವಲ್ಪ ಪಲಾವ್ ಎಲೆ, ಚಕ್ಕೆ, ಸ್ಟಾರ್ ಚಕ್ಕೆ, ಮೊಗ್ಗು, ಜಾಯಿಕಾಯಿ, ಜಾಯಿಪತ್ರೆ, ಏಲಕ್ಕಿ -೩, ಬಿಳಿ ಎಳ್ಳು ೬ ಚಮಚ, ಗಸಗಸೆ, ಸೋಂಪು ಕಾಲು ಚಮಚ, ರುಚಿಗೆ ತಕ್ಕಷ್ಟು ಹುಣಸೆ ಹುಳಿ ಅಥವಾ ನಿಂಬೆ ರಸ, ಹಸಿಮೆಣಸು ೧೦, ಸಣ್ಣ ತುಂಡು ಶುಂಠಿ, ಬೆಳ್ಳುಳ್ಳಿ ೧ ಗೆಡ್ಡೆ, ಕೊತ್ತಂಬರಿ ಸೊಪ್ಪು ೧ ಕಟ್ಟು, ಪುದೀನಾ ಸೊಪ್ಪು ಅರ್ಧ ಕಟ್ಟು, ನೀರುಳ್ಳಿ ೧ ಸಣ್ಣ ಗಾತ್ರ.

ತಯಾರಿಸುವ ವಿಧಾನ

ಒಂದು ಕುಕ್ಕರ್ ನಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಕಂದು ಕಡಲೆಯನ್ನು ಹಾಕಬೇಕು. ಕುಕ್ಕರ್ ಅನ್ನು ಉರಿಯ ಮೇಲಿರಿಸಿ ಎರಡು ವಿಷಲ್ ಕೂಗಿದ ಮೇಲೆ ಕೆಳಗಿಳಿಸಿ. ತೊಂಡೆಕಾಯಿಯನ್ನು ಉದ್ದಕ್ಕೆ ತುಂಡರಿಸಿ. ಕುಕ್ಕರ್ ತೆರೆದು ಬೆಂದ ಕಡಲೆಗೆ ಕತ್ತರಿಸಿಟ್ಟ ತೊಂಡೆಕಾಯಿಯನ್ನು ಹಾಗೂ ಅದಕ್ಕೆ ಅರಸಿನ, ಸ್ವಲ್ಪ ಉಪ್ಪು ಸೇರಿಸಿ ಮತ್ತೊಂದು ವಿಷಲ್ ಕೂಗಿಸಬೇಕು. 

ಗ್ರೀನ್ ಮಸಾಲೆ ತಯಾರಿಸಲು ಮೊದಲು ಒಂದು ಬಾಣಲೆಗೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ಬಳಿಕ ಅದಕ್ಕೆ ಕೊತ್ತಂಬರಿ ಬೀಜವನ್ನು ಹಾಕಿ. ನಂತರ ಅದಕ್ಕೆ ಜೀರಿಗೆ, ಕಾಳುಮೆಣಸು, ಪಲಾವ್ ಎಲೆ, ಚಕ್ಕೆ, ಸ್ಟಾರ್ ಚಕ್ಕೆ, ಮೊಗ್ಗು, ಜಾಯಿಕಾಯಿ, ಜಾಯಿಪತ್ರೆ, ಏಲಕ್ಕಿ ಇವುಗಳನ್ನು ಸೇರಿಸಿ ಸಣ್ಣ ಉರಿಯಲ್ಲಿ ಹುರಿಯಿರಿ. ಅದಕ್ಕೆ ಬಿಳಿ ಎಳ್ಳನ್ನು ಸೇರಿಸಿ. ಗಸಗಸೆ ಮತ್ತು ಸೋಂಪನ್ನೂ ಸೇರಿಸಿ ನಿಧಾನವಾಗಿ ಹುರಿಯುತ್ತಿರಿ. ಚೆನ್ನಾಗಿ ಹುರಿದ ಬಳಿಕ ಉರಿಯನ್ನು ಆರಿಸಿ, ಕೆಳಗಿಳಿಸಿ. ಒಂದು ಮಿಕ್ಸಿ ಜಾರಿಗೆ ಈ ಹುರಿದ ಮಿಶ್ರಣವನ್ನು ಹಾಕಿ, ಅದಕ್ಕೆ ಹುಣಸೆ ಹುಳಿ (ಅಥವಾ ನಿಂಬೆ ರಸ), ಹಸಿಮೆಣಸು, ಶುಂಠಿ, ೫-೬ ಎಸಳು ಬೆಳ್ಳುಳ್ಳಿ, ಕೊತ್ತಂಬರಿ ಹಾಗೂ ಪುದೀನಾ ಸೊಪ್ಪುಗಳನ್ನು ಸೇರಿಸಿ,  ಸ್ವಲ್ಪ ನೀರು ಹಾಕಿ ಚೆನ್ನಾಗಿ ನಯವಾಗುವಂತೆ ರುಬ್ಬಿಕೊಳ್ಳಿ. ತೊಂಡೆಕಾಯಿ ಮತ್ತು ಕಡಲೆಯನ್ನು ಕುಕ್ಕರ್ ನಿಂದ ಹೊರತೆಗೆಯಿರಿ. ಬೆಂದ ನೀರನ್ನು ಬಸಿದು ಹೋಗಲು ಬಿಡಿ.  

ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ನೀರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಹಾಕಿ ಹುರಿಯಿರಿ. ಮೊದಲು ಉಪಯೋಗಿಸಿ ಉಳಿದ ಬೆಳ್ಳುಳ್ಳಿಯನ್ನು ಸ್ವಲ್ಪ ಗುದ್ದಿ ಅದಕ್ಕೆ ಸೇರಿಸಿ. ಸ್ವಲ್ಪ ಉಪ್ಪು ಮತ್ತು ಅರಸಿನವನ್ನು ಸೇರಿಸಿ. ನೀರುಳ್ಳಿಯ ಬಣ್ಣ ಬದಲಾಗುವಾಗ ಅದಕ್ಕೆ ಮೊದಲೇ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಬೇಕು. ಅಗತ್ಯವಿದ್ದರೆ ಮಾತ್ರ ಸ್ವಲ್ಪ ನೀರು ಸೇರಿಸಿ. ಚೆನ್ನಾಗಿ ಕುದಿಯಲು ಬಿಡಿ. ರುಚಿಗೆ ಬೇಕಾದಷ್ಟು ಉಪ್ಪನ್ನು ಸೇರಿಸಿ. ಈ ಮಿಶ್ರಣ ಚೆನ್ನಾಗಿ ಕುದಿಯುತ್ತಿರುವಾಗ ಅದಕ್ಕೆ ಮೊದಲು ಬೇಯಿಸಿಟ್ಟ ಕಡಲೆ ಮತ್ತು ತೊಂಡೆಕಾಯಿಯನ್ನು ಸೇರಿಸಿ. ಬಾಣಲೆಯನ್ನು ಮುಚ್ಚಿ ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಬೇಯಲು ಬಿಡಿ. ಚೆನ್ನಾಗಿ ಬೆಂದ ಬಳಿಕ ಉರಿಯನ್ನು ಆರಿಸಿ, ಬಾಣಲೆಯನ್ನು ಕೆಳಗಿಳಿಸಿ. ಬಿಸಿ ಬಿಸಿಯಾಗಿರುವಾಗಲೇ ತಿನ್ನಲು ಬಹಳ ರುಚಿಕರ.

-ವಾಣಿಶ್ರೀ ವಿನೋದ್, 

ಪೇರ್ಲಗುರಿ, ಮಂಗಳೂರು