ತೊಂಡೆ ಚಪ್ಪರ

ಕನ್ನಡ ಚಿತ್ರರಂಗದ ಸಾಹಿತಿ ಪ್ರಮೋದ್ ಮರವಂತೆ ಅವರ ಚೊಚ್ಚಲ ಕಾದಂಬರಿ ‘ತೊಂಡೆ ಚಪ್ಪರ’. ಈ ಕಾದಂಬರಿಯ ಬಗ್ಗೆ ಪ್ರಮೋದ್ ಮರವಂತೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ…
ಬಾಲ್ಯದಲ್ಲಿ "ಬಾಲಮಂಗಳ", "ತುಂತುರು", "ಚಂಪಕ"ದಂತ ಬಣ್ಣಬಣ್ಣದ ಪುಸ್ತಕಗಳನ್ನು ಅಂಗೈ ಮೇಲಿರಿಸಿಕೊಂಡಾಗ ಮನದಾಳದಲ್ಲಿ ಹುಟ್ಟಿದ ರೋಮಾಂಚನ ಮುಂದೆ ಬಿಡದೆ ಓದಿನತ್ತ ಸೆಳೆಯುತ್ತಲೆ ಸಾಗಿತು. ಕೆಲವು ವರ್ಷಗಳ ಕಾಲ ಪಠ್ಯಪುಸ್ತಕಗಳ ಒಳಗೆ ಬಂಧಿಯಾದ ನಾನು ಮತ್ತೆ ಕಣ್ಣರಳಿಸಿ ಅರಸಿದ್ದೆ ಕಥೆ, ಕಾದಂಬರಿ ಪುಸ್ತಕಗಳನ್ನು.
ಓದು ನನ್ನ ಅಂತರಂಗಕ್ಕೆ ಅಂಟಿಕೊಂಡಿರುವ ಒಂದು ದಿವ್ಯ ವ್ಯಸನವಾಗಿ ಸದಾ ನನ್ನನ್ನು ಕೈಹಿಡಿದು ಬರವಣಿಗೆಯ ಕ್ಷೇತ್ರಕ್ಕೆ "ದುಬಕ್" ಎಂದು ಧುಮುಕುವಂತೆ ಮಾಡಿತು. ಓದುತ್ತ ಓದುತ್ತ ಬರೆಯಬೇಕು ಅಂದುಕೊಂಡವನ ಮುಂದೆ ಮೊದಲು ಕಂಡಿದ್ದು ಸಿನಿಮಾ. ಬರೆಯುತ್ತ ಬರೆಯುತ್ತ ಒಂದಿಷ್ಟು ವಿಚಾರಗಳು ಒಂದಿಷ್ಟು ಕಥೆಗಳು ನನ್ನೊಳಗೆ ಅವಿತಿರುವ ಸೂಚನೆ ಬಂದಾಗ ಪುಸ್ತಕ ಬರೆಯುವ ಆಸೆ ಬೆರಳಂಚಿನಲ್ಲಿ ಬಂದು ನಿಂತಿತ್ತು. ಆಗಾಗ ಕಥೆಗಳನ್ನು ಬರೆಯಲು ಪೆನ್ನು ಹಿಡಿದಿದ್ದರು ಅದೇನೊ ಗೊತ್ತಿಲ್ಲ ಯಾವುದು ಮುಂದುವರಿಯುವಷ್ಟು ಮಜ ಕೊಟ್ಟಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ಕೈಹಿಡಿದು ತಾನಾಗೆ ಬರೆಸಿಕೊಂಡ ಕಾದಂಬರಿ "ತೊಂಡೆ ಚಪ್ಪರ".
ನನ್ನ ಬದುಕಿನ ಅನುಭವಗಳು ನನ್ನ ಕಲ್ಪನಾ ಲಹರಿಯ ಜೊತೆಯಾಗಿ ಬಂದು ಬಿಳಿ ಹಾಳೆಯನ್ನು ಅಲಂಕರಿಸಿವೆ. ಈ ಹಾದಿಯಲ್ಲಿ ನನಗೆ ಬೆನ್ನೆಲುಬಾಗಿ ನಿಂತಿದ್ದು "ಸಸಿ" ಪ್ರಕಾಶನ. ಇದರ ರೂವಾರಿಗಳಾದ ಜಯರಾಮಚಾರಿ ಮತ್ತು ಸಾತ್ವಿಕ್ ಸಿದ್ದಯ್ಯನವರಿಗೆ ಆಭಾರಿ. ಪುಸ್ತಕವನ್ನು ತಿದ್ದಿದ ಹಾಗು ಪ್ರತಿ ಹಂತದಲ್ಲು ಸಲಹೆಗಳನ್ನು ನೀಡುತ್ತ ಬಂದ ಗೆಳೆಯ ಪ್ರಶಾಂತ್ ಸಾಗರ್ ಅವರಿಗೆ ಹಾಗು ಬಿ.ಉಲ್ಲಾಸ್ ನಾವಡ ಇವರಿಗೆ ಧನ್ಯವಾದ. ಸಲಹೆಗಳನ್ನು ನೀಡಿದ ಪೂರ್ಣಿಮಾ ಮಾಳಗಿಮನಿ, ಮಧು ವೈ.ಎನ್, ನಿತೇಶ್ ಕುಂಟಾಡಿಯವರಿಗೆ ಧನ್ಯವಾದ. ಗಮನಸೆಳೆಯುವ ಮುಖಪುಟ ರಚಿಸಿದ ಮದನ್ ಸಿ.ಪಿ ಅವರಿಗೆ ಹಾಗು ಪುಸ್ತಕದ ಪುಟವಿನ್ಯಾಸ ಮಾಡಿದ ಅರುಣ್ ಅಂಚೆ ಅವರಿಗೆ ವಿಶೇಷ ಧನ್ಯವಾದ”. ೧೨೮ ಪುಟಗಳ ಈ ಪುಟ್ಟ ಕಾದಂಬರಿಯ ರೋಚಕತೆ ಓದುಗರನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ.