ತೊಂದರೆ

ತೊಂದರೆ

ಕವನ

ಬುದ್ಧಿವಂತಿಕೆಯೆ ನಮ್ಮೀ ಜಗಕೆ

ಎಂದಿಗು ದೊಡ್ಡ ತೊಂದರೆ

ದಡ್ಡರೆ ಉಳಿದರು ಲೋಕದಿ ನೆಮ್ಮದಿ

ಬುದ್ಧಿಯೆ ಮನುಜಗೆ ಬೆನ್ನ ಬರೆ

 

ಯಾಕೆ ಬೇಕಿತ್ತು ಐನ್ ಸ್ಟೈನನಿಗೆ 

ಕಾಣದ ಅಣುಗಳ ಸಹವಾಸ?

ಕಲಾಶ್ನಿಕೋವ್ ರೈಫಲು ಮಾಡಿದ

ಕೊಡಬೇಕಿತ್ತವನಿಗೆ ಸೆರೆವಾಸ

 

ಕರೆಂಟು ಇಲ್ಲದ ಲೋಕದ ನೆಮ್ಮದಿ 

ಫೆರಡೇ ಬಂದು ಕೆಡಿಸಿದನು

ಹಗಲು ದುಡಿದು ಕತ್ತಲೆಗೊಂದಾಗುವ

ದಂಪತಿಗಳನು ಬಿಡಿಸಿದನು

 

ರೈಲುಗಾಡಿ ಅಂದು ಓಡದೆ ಇದ್ದರು

ಬದುಕಿನ ಬಂಡಿ ಓಡಿತ್ತು

ಅದಕೂ ಮಿಗಿಲಾದುದೆ ಬೇಕೆಂದರೆ

ಎತ್ತಿನ ಗಾಡಿಯೆ ಸಾಕಿತ್ತು

 

ಬಸ್ಸು ಕಾರು ಎರೋಪ್ಲೇನುಗಳ

ಹೇಳಿದನೇ ಹಿಂದಿದ್ದ ಮನು

ನೆಲದೊಳಗಿನ ವಿಷ ಹೊರಗೆ ಬಂದಿದೆ

ಮುಂದಿನ ಮನುಜರ ಗತಿ ಏನು?

 

ಮಕ್ಕಳ ಮುಖದಲಿ ನಗುವೇ ಕಾಣದು

ಜೇನು ಕಡಿದು ಊದಿದ ಹಾಗೆ

ಮೇಷ್ಟರ ಮುಖದಲಿ ಬೂತವೆ ಕುಣಿವುದು

ಮಕ್ಕಳ ಪ್ರಶ್ನೆಯೆ ಅವರ ಹಗೆ

 

ಧಾರಾವಾಹಿಯಲಿ ನಿತ್ಯವು ಜಗಳವೆ

ಮನಸೋ ಸಂದೇಹದ ಹುತ್ತ

ಮುಚ್ಚುವುದೆಲ್ಲವ ಬಿಚ್ಚಿ ಟೀವಿಯಲಿ

ಎಲ್ಲ ಮುಕ್ತ ಮುಕ್ತ

 

ಯಾರ ಮಾತ ಕೇಳರು ಯಾರಿಲ್ಲಿ

ಸರ್ವಜ್ಞರೆ ಜನ ಸುತ್ತೆಲ್ಲ

ಒಳಗೆ ತುಂಬಿಹುದು ಕಾರ್ಕೋಟಕ ವಿಷ

ರೂಪವೊ ಉಳ್ಳಾದ ಬೆಲ್ಲ

 

ನೀರಿಗೆ ನೆಲಕೆ ಗಾಳಿ ಬೆಂಕಿಗೇ

ವಿಷ ಕುಡಿಸಿದರು ಈ ನಾವು

ಆಕಾಶಕೆ ಹಾಕಿರುವೆವು ಲಗ್ಗೆಯ

ಹುಡುಕುತ ಮುಂದಿನ ಹೊಸ ಠಾವು

 

ಹೊಳಪಿನ ಜನಗಳೊ! ಒಳಗಿನ ಮುಖಗಳೊ!

ಶುಭ್ರ ಅವರ ಮೇಲಿನ ಬಟ್ಟೆ

ಮಿಂಚುವ ಚಪ್ಪಲಿಯಡಿ ಉಗುಳಿನ  ನೆಲ

ಉಂಡು ಎಸೆದ ಎಂಜಲು ತಟ್ಟೆ

 

ಹೋದಲ್ಲೆಲ್ಲ ಹೊಲಸು ಮಾಡುವ

ಈ ಮನಸಿದ್ದ ನಮ್ಮಿಂದ

ಹೊಮ್ಮುವುದೆಂದಿಗೆ ಎಲ್ಲೆಡೆ ಸಲ್ಲುವ

ಅಂಥ ಆ ವಿವೇಕಾನಂದ?

                                                       ಡಾ. ಕರುಣಾಕರ ನಿಡಿಂಜಿ.