ತೊಟ್ಟಿಲ ಕಂದ ಬಾಯ್ಬಿಟ್ಟಾಗ !
ಜಗತ್ತಿನ ಎಲ್ಲ ಕಡೆ ಟೆನ್ಶನ್ನೋ, ಟೆನ್ಶನ್ನು. ಬೆಳಗಿನಿಂದ ರಾತ್ರಿಯವರೆಗೂ ಟೆನ್ಶನ್ ! ರಾತ್ರಿ ಮಲಗ್ತೀವೋ ಇಲ್ವೋ ಟೆನ್ಶನ್ ! ಮಲಗಿದ ಮೇಲೆ ಬೆಳಿಗ್ಗೆ ಏಳುತ್ತೀವೋ ಇಲ್ವೋ ಅನ್ನೋ ಟೆನ್ಶನ್ ! ಟೆನ್ಶನ್ ಬಗ್ಗೆ ಬರೀತಾ ಹೋದರೆ ಕೊನೆಯೇ ಇಲ್ಲ. ಯಾಕೆ ಮುಗೀತಿಲ್ಲ ಅನ್ನೋ ಟೆನ್ಶನ್ !! ಮನೆಯಲ್ಲೋ ಅಥವಾ ಇನ್ಯಾರ ಮನೆಗೋ ಹೋದಾಗ, ಮಲಗಿರುವ ಪುಟ್ಟ ಕಂದನ ಕಂಡ ಕೂಡಲೆ ಯಾರಿಗಾದರೂ ಸರಿ, ಮನಸ್ಸಿಗೆ ಬರುವ ಮೊದಲ ಯೋಚನೆ ಏನು ಗೊತ್ತೆ "ಟೆನ್ಶನ್ ಇಲ್ಲದ ಮಗುವಿನ ಜೀವನ ನಮಗೇಕೆ ಇಲ್ಲ" ಅಂತ ..... ತಪ್ಪು ಕಣ್ರೀ !! ... ಮಹಾ ತಪ್ಪು.... ಮಗು ಇನ್ನೂ ಮಾತನಾಡಲ್ಲ ಅಂತ ನಿಮಗೆ ಹಾಗೆ ಅನ್ನಿಸುತ್ತೆ, ಅಷ್ಟೇ ! ಹಲವಾರು ಪುಟ್ಟ ಕಂದಮ್ಮಗಳನ್ನು ನಾನು ಇಂಟರ್ವ್ಯೂ ಮಾಡಿದಾಗ ಅವರುಗಳು ಏನು ಹೇಳಿದರು ಎಂಬುದೇ ಈ ಕವನ ........ ಓದಿ... ಜಾಸ್ತಿ ಟೆನ್ಶನ್ ಮಾಡಿಕೊಳ್ಳಬೇಡಿ !!! ಇದು ನನ್ನ ಕಲ್ಪನೆ ಮಾತ್ರ....
ನವ ಮಾಸವು, ಹಚ್ಚಗೆ ಬೆಚ್ಚಗೆ
ಮಲಗಿದ್ದ ನಾನು
ಹೊರ ಜಗದ ನಿಟ್ಟುಸಿರ ಕಿಚ್ಚಿಗೆ
ಕಿರುಚಿ ಅತ್ತಿಹೆನು
ಬಂದ ಮೇಲೆ ಅಳುವುದೇನೆಂದು
ಸುಮ್ಮನಿರೆ ಎನ್ನ ಗೆಳೆಯರು
ಕಾಲ ಪಿಡಿದು ಬೆನ್ನ ಬಡಿದು
ಅಳಿಸದೆ ಬಿಡಲಿಲ್ಲ ದಾದಿಯರು
ಹಳೆ ಜಗಕೆ ಹೊಸ ಜೀವಿ ಬಂತೆಂದು
ನಿಮಗೆ ಸಂತಸದ ಹಿರಿ ಹಿರಿ
ಹೊಸ ಜಗಕೆ ಹಳೆ ಸಮಸ್ಯೆಗಳ
ನಡುವೆ ಇರಬೇಕಲ್ಲಾ ಎಂದೆನಗೆ ಕಿರಿ ಕಿರಿ
ಕ್ರೂರ ಜಗವ ನೋಡಲಾರೆನೆಂದು
ಮುಚ್ಚಿದರೂ ನಾ ಕಣ್ಣು
ತಾಯ ದೇವರ ಕಾಣಲೆಂದು
ತೆರೆದೆ, ತೃಪ್ತಳಾದಳು ಆ ಹೆಣ್ಣು
ನೋಡಲು ಬಂದರು ಹಲವಾರು ಜನ
ಕೆಲವರ ಕಂಡು ನಾ ನಕ್ಕೆ, ಅತ್ತೆ
ಅಂದರೆನ್ನ ಭಾವನೆ ಅರಿಯದ ಆ ಜನ
’ದೇವನು ಆಡಿಸುತ್ತಿರುವನೆಂದು ಕಾಣುತ್ತೆ’
ಜನ ಬಂದಾಗ ನಾ ನಗಲು
ಹಾಳುಗೆಡುವರು ಪೊರಕೆ, ಉಪ್ಪು
ಜನ ಬಂದಾಗ ನಾ ಅಳಲು
ಕಟ್ಟುವರು ತಾಯಿತ ಕಪ್ಪು
ಕಪ್ಪೆಂದು ಜರೆದರು ಕಪ್ಪು ಮನದ ಜನ
ಬಿಳುಪಿರಲು ಇದಕೆ ರಕ್ತ ಕಡಿಮೆ ಎಂದರು
ಕೆಂಪಿರಲು ಮುಂದೆ ಕಪ್ಪು ಖರೆ ಎಂದಿತಾ ಮನ
ಸುಟ್ಟಾಗ ಎಲ್ಲರೂ ಕಪ್ಪು ಎಂದೇಕೆ ಅರಿಯರು
ತಪ್ಪಿಲ್ಲ ಒಪ್ಪಿಲ್ಲ ಇಟ್ಟರು
ಹಣೆಗೆ ಕೆನ್ನೆಗೆ ಕಪ್ಪು ಚುಕ್ಕಿ
ನೀತಿ ನಿಯಮಗಳ ಹೇರಿಟ್ಟರು
ನಾನಲ್ಲ ಇಂದು ಹಾರಾಡುವ ಹಕ್ಕಿ
ಲೋಕದ ಉದ್ದಾರಕೆ ನಾನಿಲ್ಲಿ ಬರಲಿಲ್ಲ
ನಿಮ್ಮ ಪೈಪೋಟಿಗೆ ಅಸ್ತ್ರ ನಾನಲ್ಲ
ಕೆಡುಕಿಗೂ ಒಳಿತಿಗೂ ನಾ ಕಾರಣನಲ್ಲ
ನಾನೇಕೆ ಬಂದೆನೋ ನನಗರಿವಿಲ್ಲ
ಪಾಲಕರೇ, ಪೋಷಕರೇ... ನಮಗೂ ಮನಸ್ಸಿದೆ... ದಯವಿಟ್ಟು ಅರ್ಥಮಾಡಿಕೊಳ್ಳಿ ... ನಿಮ್ಮನ್ನು ಮೆಚ್ಚಿಸೋದು ಹೇಗೇ ಅನ್ನೋದೇ ನಮಗೆ ದೊಡ್ಡ ಟೆನ್ಶನ್