ತೊದಲು ನುಡಿ....

ತೊದಲು ನುಡಿ....

 

 

 

 

ಅವಳದೋ ಸಾರ್ಥಕ ಬದುಕು. ನಿಸ್ವಾರ್ಥತೆಯ ಕೋಟೆಯೊಳಗಿನ ಮಮತೆಯ ಕೊಳದೊಳಗೆ ಮುಗ್ದತೆಯ ಸೌಗಂಧ ತುಂಬಿ ಬೆಳೆದ ಪ್ರೀತಿ ಪುಷ್ಪ ಅವಳು. ಸೋತು ಕುಗ್ಗಿದ, ನಗುವನ್ನೇ ಮರೆತಿಹ, ಬಾಳೋ ಆಸೆ ತೊರೆದಂತವನೂ ಕೂಡ ಎದ್ದು ನಿಂತು, ನಕ್ಕು, ಬಾಳೋ ದಾರಿಯೆಡೆಗೆ ಸರಿಯುವಂತೆ ಮಾಡೋ ಸ್ಫೂರ್ತಿ ಅವಳು. ಇಡೀ ಜೀವ ಸಂಕುಲದ ನಗುವನ್ನ ಚಿತ್ರಿಸಬಹುದಾದಂತಹ ಎರಡಕ್ಷರದ ಮಹಾಕಾವ್ಯ ಅವಳು. ಹೌದು. ಆಕೆ ಇನ್ನಾರು ಆಗಿರಲು ಸಾದ್ಯವೇ ಇಲ್ಲ... ನೋವ ಬಟ್ಟಲಿಂದಲೂ ನಗುವ ಉಣಬಡಿಸಬಲ್ಲ ಏಕೈಕ ಸೃಷ್ಠಿ 'ಅಮ್ಮಾ'.


 

 

 

          ಬರೆಯೋದಕ್ಕೆ ಅಂತ ಲೇಖನಿ ಹಿಡಿದರೆ ಮೊದಲು ಅ, ಆ.. ತಿದ್ದಿಸಿದ ಅಮ್ಮನ ನೆನಪಾಗೊತ್ತೆ. ಮೊದಲ ಬಾರಿಗೆ 'ಅ' ಅನ್ನೋ ಅಕ್ಷರವನ್ನ ತಪ್ಪಿಲ್ಲದೆ ಬರೆದಾಗ ಆ ನನ್ನಮ್ಮನಿಗಾದ ಸಂತೋಷದ ನೆನಪು ನನಗಿಲ್ಲದೇ ಇದ್ದರೂ, ಮಗ ಇಡೀ ಲೋಕ ಗೆದ್ದ ಸಂತೋಷ ಅವಳಲ್ಲಿ ತುಂಬಿರೊತ್ತೆ ಅಂತ ನನಗೆ ತಿಳಿದಿದೆ. ಆ ಮನಸೇ ಹಾಗೆ...! ತನಗೆ ಅಂತ ಯಾವತ್ತೂ ನಕ್ಕಿಲ್ಲ, ಏನನ್ನೂ ಬಯಸಿಲ್ಲ ಕೂಡಾ. ಅವಳ ಮಟ್ಟಿಗೆ ತನ್ನ ಕಂದಮ್ಮನೇ ಎಲ್ಲಾ. ಆಗ ತಾನೇ ನಾನು ಕಲಿತ 'ಅಮ್ಮಾ' ಎಂಬ ಪದವನ್ನು ಅ..ಮ್ಮ್....ಆ..... ಎಂದು ಚೂರು ಚೂರು ಮಾಡಿ ತೊದಲು ನುಡಿದಾಗ ಆಕೆಯ ಎದೆಯಾಳದಲ್ಲಿ ಉಕ್ಕಿದ ಸಂತಸದ ಕಡಲು ನನ್ನ ಮೇಲೆ ಮುತ್ತಾಗಿ ಎರಗಿದ್ದು ನಿಜ. ಕಣ್ಣಲ್ಲಿ ನಾನು ಎಂ.ಬಿ.ಬಿ.ಎಸ್. ಓದಿ ಡಾಕ್ಟರ್ ಆಗ್ತೀನಿ ಅನ್ನೋ ಕನಸು ಕಟ್ಟಿಕೊಂಡೆ ಬೆಳಸಿದ್ದಳು ನನ್ನ. ನಾನೋ, ಒಣ ತುಂಟ! ಕಂಡಿದ್ದೆಲ್ಲ ಬೇಕು ಅನ್ನೋ ಹಠ ಬೇರೆ.. ಕೊಟ್ಟ ಕಷ್ಟ ಒಂದಾ..ಎರಡಾ..? ಇತ್ತ ಪ್ರತಿ ನೋವಿಗೆ ಅತ್ತ ಕಡೆಯಿಂದ ಪುಟ್ಟ ನಗುವೇ ಉತ್ತರವಾಗಿರ್ತಾ ಇತ್ತು. ತೀರ್ಥಹಳ್ಳಿಯ ಬೇಗುವಳ್ಳಿಯಲಿ ಇದ್ದಾಗ ಸ್ನಾನ ಮಾಡಿಸಲು ಮೈಗೆ ಎಣ್ಣೆ ಹಚ್ಚಿ ಬಿಟ್ಟಂತಹ ಒಂದುವರೆ ವರ್ಷದ ನಾನು, ಯಾರ ಅರಿವಿಗೂ ಬಾರದೆ, ಮನೆ ಎದುರಿನ ರಸ್ತೆಯ ನಡುವೆ ಬಂದು ನಿಂತುಕೊಂಡು ಹೋಗೋ-ಬರೋ ಬಸ್ಸುಗಳಿಗೆ ಟಾ-ಟಾ ಮಾಡ್ತಿದ್ದನ್ನು ನೆನೆಸಿ ಈಗಲೂ ದಿಗಿಲಾಗುತ್ತಾಳೆ ನನ್ನಮ್ಮ.

 

 ತನ್ನ ಜೀವದೊಳಗೆ ನನ್ನ ಜೀವ ಹಿಡಿದು,

ನಾನಿತ್ತ ನೋವ ನವಮಾಸ ತಡೆದು,

ನೀ ಕೊಟ್ಟೆ ನನಗೆ ಈ ಜನುಮವಾ..

ಅಮ್ಮಾ.. ಈ ಜೀವ ನಿನದಲ್ಲವಾ..??

          

            ಇನ್ನೂ ನೆನಪಿದೆ, ಬ್ಯಾಟು-ಬಾಲು ಹಿಡ್ಕೊಂಡು ಕ್ರಿಕೆಟ್ ಆಡೋಕೆ ಹೋಗಿ ನನಗಿಂತ ೨-೩ ವರ್ಷ ದೊಡ್ಡೋನ ಜೊತೆ ಜಗಳ ಆಡಿ, ಮುಂಗಾರು ಮಳೆ ಸ್ಟೈಲ್ ನಲ್ಲಿ ಅವನಿಗೆ ಹೊಡೆದು!, ಏನೂ ನಡೆದಿಲ್ಲ ಅನ್ನೋ ತರ ತಣ್ಣಗೆ ಮನೆಗೆ ಬಂದು ಸೇರ್ಕೊಂಡ್ ಮೇಲೆ, ಆ ಮಹಾಶಯ ಬಂದು ಅಪ್ಪನ ಹತ್ರ ಕಂಪ್ಲೈಂಟ್ ರೆಜಿಸ್ಟರ್ ಮಾಡಿದಾಗ, ಕೈಗೆ ಸಿಕ್ಕ ತಮ್ಮ ಲಾಟಿ ನ ಅಪ್ಪ ಎತ್ಕೊಂಡಿದ್ದೆ ತಡ ಅಡುಗೆ ಮನೆಯಲ್ಲಿದ್ದವಳು ಓಡಿ ಬಂದು ನನ್ನ ತನ್ನ ಹಿಂದಕ್ಕೆ ಎಳ್ಕೊಂಡು, ಬೆಟ್ಟದಂತಹ ಪ್ರೀತಿನಾ ನನಗೆ ಶ್ರೀರಕ್ಷೆಯಾಗಿ ಹಿಡಿದಿದ್ದಳು. ಆ ಪ್ರೀತಿ ಕಂಡು ಲಾಟಿ ಗತಿ ಇಲ್ಲದೆ ತನ್ನ ಮೂಲೆ ಸೇರ್ಕೊಂಡಿತ್ತು. ಹಾಗೆ ನನ್ನ ಅಪ್ಪನ ಸಿಟ್ಟು ಕೂಡಾ!

 

            ಅಮ್ಮ ಇಲ್ಲದೆ ಇದ್ರೆ ಒಂದು ಕ್ಷಣನೂ ಕೈ-ಕಾಲು ಆಡ್ತಿರ್ಲಿಲ್ಲ ನನಗೆ (ಈಗಲೂ ಕೂಡಾ). ಅವಳು ಕುಳಿತುಕೊಂಡರೆ ಸಾಕು ನಾನು ಸುಮ್ಮನೆ ಅವಳ ಪಕ್ಕಕೆ ಹೋಗಿ, ಹಾಗೇ ಅವಳ ಅಮೃತದ ಮಡಿಲಲ್ಲಿ ಮಲಗಿ, "ಅಮ್ಮಾ, ತಲೆ ಸವರಮ್ಮಾ" ಅಂತ ಹೇಳ್ತಾ ಇದ್ದೆ. ಹಾಗೇ ನಿದ್ದೆ ಹತ್ತಿದ ನನ್ನ ನಿಧಾನವಾಗಿ ಕಾಲಿನಿಂದ ದಿಂಬಿಗೆ ವರ್ಗಾಯಿಸಿ ಅಡುಗೆ ಮನೆಯೆಡೆಗೆ ಹೋಗ್ತಾ ಇರುವಾಗ ತುಟಿಯಂಚಲಿ ಸಣ್ಣಗೆ ನಕ್ಕು ತಿರುಗಿ ಮಲಗ್ತಾ ಇದ್ದೆ. ಅಂತೆಯೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತಿದ್ದ ಅಮ್ಮ ಮೂರು ದಿನಗಳ ಟ್ರೈನಿಂಗ್ ಗಾಗಿ ಶಿವಮೊಗ್ಗಕೆ ಹೋದಾಗ ದುಃಖ ತಾಳಲಾರದೆ ಅವಳ ಸೀರೆಯನ್ನ ಅಪ್ಪಿಕೊಂಡು ಅತ್ತಿದ್ದು ನೆನಪ ಪರಧಿಯಿಂದಾಚೆ ಹೋಗಲಾರದ ಕ್ಷಣಗಳಲ್ಲೊಂದು.

 

 ತಾರ ಸಾಗರದ ನಡುವೆ,

ಕಳೆದು ಹೋದೆನೆಂಬ ಭಯದಿ..

ಬೆಳದಿಂಗಳ ಕೈ ಚಾಚಿ ಹಿಡಿದಪ್ಪಿದನು ತಾಯ ಒಡಲ...

ಕತ್ತಲಿದೆ ಕಂದಾ,

ಒಡನೆ ಬರುವೆನು ನಾನು,

ಎನ್ನುತಾ ಉಕ್ಕಿತು ಮಗನೆಡೆಗೆ

ಮಮತೆಯ ಕಡಲ ಅಂತರಾಳ..


          ಪ್ರತಿ ಗುರುವಾರ Immunization ಅಂತ ನೂರಾರು ಮಕ್ಕಳಿಗೆ ಚುಚ್ಚುಮದ್ದು (ಇಂಜೆಕ್ಷನ್) ಕೊಡ್ತಿದ್ರೂ, ನನಗೆ ಕೊಡೋದಕ್ಕೆ ಪಕ್ಕದ ಮನೆ ಆಂಟಿ ನೇ ಆಗಬೇಕಿತ್ತು. ನಾನೋ, ಸ್ಕೂಲ್ ನಲ್ಲಿ  ಆಂಟಿ ಹತ್ರ 'ಅಮ್ಮ ಇಂಜೆಕ್ಷನ್ ಕೊಟ್ಟಿದಾರೆ' ಅಂತಲೂ, ಮನೆಯಲ್ಲಿ ಅಮ್ಮನ ಹತ್ರ 'ಸ್ಕೂಲ್ ನಲ್ಲಿ ಆಂಟಿ ಇಂಜೆಕ್ಷನ್ ಕೊಟ್ಟಿದಾರೆ' ಅಂತಲೂ ಹೇಳಿ ತಪ್ಪಿಸಿಕೊಂಡು ಕೊನೆಗೆ ಸಿಕ್ಕಿ ಬೀಳ್ತಾ ಇದ್ದೆ. ಆಗಲೂ ಸಹ ನನ್ನ ಮುದ್ದು ಅಮ್ಮ "ಪುಟ್ಟೂ..." ಎಂದು ಉದ್ಗರಿಸಿ ನಗುವಿನ ರಂಗೊಲೆಯನು ಎರೆದು, ನನ್ನ ಕೂರಿಸಿ "ಬನ್ನಿ ಸಿಸ್ಟ್ರೆ ಇಂಜೆಕ್ಷನ್ ಕೊಡಿ" ಅಂತ ಆಂಟಿ ನ ಕರೆದು ತಾನು ನೋಡೋಕಾಗದೆ ಒಳಗೆ ಸರಿಯುತಿದ್ದಳು.

 

 ಆ ಭೂಮಿ ತಾಯಿಯೇ ನೀನಾದೆ ನನಗೆ..

ನಿನ್ನ ಬಿಂಬ ಆ ಚಂದ್ರ ಇಂದು ನಾನಾದೇ ,

ನಿನ್ನ ಸುತ್ತು ತಿರುಗುತಾ ನಿನ್ನ ಜೊತೆಗೆ ಇರುವಾಸೆ....

ಅಮವಾಸೆಯದೇ ಭಯ ಅಮ್ಮಾ ಕೇಳೆ ಎನಗೆ..!


            ನಾನು ಅಪ್ಪನ ಎದುರು ಇಡೋ ಪ್ರತಿ ಬೇಡಿಕೆಗೆ ಸ್ವರವಾಗ್ತಿದ್ದೊಳು ಅಮ್ಮಾ. ಹಾಗಿದ್ದೋಳು ನಾನು PU ಸೈನ್ಸ್ ಗೋಸ್ಕರ ಹೊಸನಗರದಿಂದ ತೀರ್ಥಹಳ್ಳಿಗೆ ಬಂದು ಸೇರ್ಕೊಂಡಾಗ ತನ್ನ ಕೆಲಸಕ್ಕೆ ಸ್ವಯಂ ನಿವೃತ್ತಿ (Volunteer Retirement) ಕೊಟ್ಟು ನನ್ನ ಸಲಹೋಕೆ ನಿಂತಳು.  ಪರೀಕ್ಷೆಯ ದಿನಗಳಲ್ಲಿ ತಾನು ಅಲರಾಂ ಇಟ್ಕೊಂಡು, ಈ ಸೋಮಾರಿ ನ ಎಬ್ಬಿಸಿ, ಕಾಫಿ ಮಾಡ್ಕೊಟ್ಟು, ಪಕ್ಕದಲ್ಲೇ ಕುಳಿತ್ಕೊಂಡು ನಾನು "ಓದ್ಕೊಳ್ತಿನಿ ನೀನು ಮಲಗಮ್ಮಾ" ಎಂದಾಗಲೇ ಅಮ್ಮ ಮಲಗ್ತಿದ್ದಿದ್ದು. ಹುಟ್ಟಿದಲ್ಲಿಂದ ಇಲ್ಲಿಯವರೆಗೆ ಒಂದೇಟು ಹಾಕಿಲ್ಲ. ಮಗುವಾಗಿದ್ದಾಗ ಏನಾದರು ಕಲಿಸಲು ಅಥವಾ ಯಾವುದಾದರು ತಪ್ಪಿಗೆ ಅಪ್ಪ ಏಟು ಕೊಟ್ಟಾಗ ಮರೆಗೆ ಹೋಗಿ ಕಣ್ಣೀರಾಗುತ್ತಿದ್ದ ಅಮ್ಮಾ ಈಗಲೂ ಸಹ ನಾನೇನಾದ್ರು ಊಟ ಮಾಡದೆ/ಹುಷಾರಿಲ್ಲದೆ ಮಲಗಿದಾಗ ಕಂಬನಿ ಮಿಡಿಯುತ್ತಾಳೆ. ಬದಲಾಗದ ಅಖಂಡ ಪ್ರೀತಿಯ ಸ್ವರೂಪ ಅವಳು.

 

   

ಎಂ.ಬಿ.ಬಿ.ಎಸ್. ಓದಿ ಡಾಕ್ಟರ್ ಆಗದೆ ಇದ್ರೂ ಪಿ.ಹೆಚ್.ಡಿ(Ph D) ಮಾಡಿ ನಿನ್ನ ಕನಸಿಗೆ ನನಸಿನ ಹಾದಿ ತೋರಿಸ್ತೀನಮ್ಮ ಅಂದಾಗ ಆ ನಿನ್ನ ಕಣ್ಣುಗಳ ಅಂಚಲ್ಲಿ ಕುಳಿತು ಇಣುಕುತ್ತಿದ್ದ ಹನಿಗಳನ್ನು ಹಾಗೇ ಮುತ್ತಾಗಿಸೋ ಆಸೆ ನನದು. ನಿನ್ನ ಬಿಸಿ ಅಪ್ಪುಗೆಯಲಿ ನನ್ನ ಕ್ಷಣಗಳನ್ನ ಕಳೆಯಬೇಕು ಎನ್ನುವ ಕನಸು ನನದು. ನಾನು ಸಾಯೋತನಕ ನಿನ್ನ ನಗುವನ್ನೇ ನೋಡಬೇಕು ಎನ್ನುವಂತಹ ಸ್ವಾರ್ಥ ನನದು. ಹಾಗೇ ನನ್ನ ಕೊನೆ ಉಸಿರನ್ನು ನಿನ್ನ ಮಡಿಲೊಳಗೆ ನಿನ್ನ ಕೈಗಳಿಂದ ನನ್ನ ತಲೆ ನೇವರಿಸಿಕೊಳ್ಳುತ್ತಾ, ನಾ ಮೊದಲ ಬಾರಿಗೆ ಚೂರು ಚೂರು ಮಾಡಿ ನುಡಿದ ಅ...ಮ್ಮಾ.... ಎಂಬ ತೊದಲು ನುಡಿಯೊಡನೆ ತೊರೆವ ಆಸೆ ನನದು...

 


ಜನ್ಮದಾ ಪೂರ್ವದಿಂದ ಪ್ರೀತಿಸಿದಳು..

ನಿನ್ನಾ ಪ್ರೀತಿಸಿದಳು..

ನೀ ಇತ್ತ ನೋವ ಮರೆತು,

ನವಮಾಸ ನರಕವನ್ನು ಕಳೆದಿದ್ದಳು...

ನಗುತಾ ಕಳೆದಿದ್ದಳು..

ನೀ ನಕ್ಕರೆನಗುತಾ

ನೀ ಅತ್ತರೆ ಅಳುತಾ

ಹಗಲಿರುಳು ನಿನಗೆಂದೇ ಸವೆದಿದ್ದಳು..

ನೋವ ನುಂಗಿದ್ದಳು..

ಪುಟ್ಟ ಕೈಯ ಕೈಲಿ ಹಿಡಿದು

ಅಕ್ಷರವ ತಿದ್ದಿ ಕಲಿಸಿ,

ಕೊನೆವರೆಗೂ ಕೈ ಬಿಡದೆ ನೆಡೆಸುವಳು,

ನಿನ್ನ ಏಳಿಗೆಯ ಕನಸ ಕಂಡಾ ಅವಳು...

ಜನ್ಮದಾತಲಿವಳು... ಬಾಳ ಸ್ಪೂರ್ತಿ ಅವಳು...

ನನಗವಳೇ ದೇವರು, ಹೆತ್ತವಳು...

ನನ್ನಾ ಹೆತ್ತವಳು....      

 

             ನಿನ್ನ ಪ್ರೀತಿಯ ಕಂದ... 

                   ಪುಟ್ಟು  

 

ಚಿತ್ರ ಕೃಪೆ: http://travels4life.sulekha.com/blog/post/2009/05/daughter-to-mother.htm

Comments