ತ್ಯಾಗರಾಜ್ ಕಾಲೋನಿ

ತ್ಯಾಗರಾಜ್ ಕಾಲೋನಿ

ಪುಸ್ತಕದ ಲೇಖಕ/ಕವಿಯ ಹೆಸರು
ಕೌಶಿಕ್ ಕೂಡುರಸ್ತೆ
ಪ್ರಕಾಶಕರು
ಸ್ನೇಹ ಬುಕ್ ಹೌಸ್, ಶ್ರೀನಗರ, ಬೆಂಗಳೂರು-೫೬೦೦೫೦
ಪುಸ್ತಕದ ಬೆಲೆ
ರೂ. ೧೪೦.೦೦, ಮುದ್ರಣ: ೨೦೨೧

ಒಂದು ಸಮಯದಲ್ಲಿ ಪತ್ತೇದಾರಿ ಕಾದಂಬರಿಯನ್ನು ಬರೆಯುವವರ ಸಂಖ್ಯೆ ಬಹಳವಿತ್ತು. ಅವುಗಳನ್ನು ಪ್ರಕಾಶಿಸಲು ಹಾಗೂ ಪ್ರಕಟವಾದ ಬಳಿಕ ಖರೀದಿಸಿ ಓದಲು, ಓದುಗರ ಸಂಖ್ಯೆಯೂ ಸಾಕಷ್ಟಿತ್ತು. ಪತ್ತೇದಾರಿ ಕಾದಂಬರಿಗಳನ್ನು ಪ್ರಕಟ ಮಾಡಲೆಂದೇ ಹಲವಾರು ಮಾಸ ಪತ್ರಿಕೆಗಳಿದ್ದವು, ಕ್ರೈಂ ಕಾದಂಬರಿ, ಸ್ಪೈ, ಡಿಟೆಕ್ಟಿವ್ ಥ್ರಿಲ್ಲರ್ ಮೊದಲಾದ ಪುಸ್ತಕಗಳಿಗೆ ಬಹಳ ಬೇಡಿಕೆ ಇತ್ತು. ಕಾಲಕ್ರಮೇಣ ಮೊಬೈಲ್ ಪ್ರತಿಯೊಬ್ಬರ ಕೈಗೆ ಬಂದಾಗ ಈ ಓದುವ ಹವ್ಯಾಸ ಕಡಿಮೆಯಾಗತೊಡಗಿತು. ಈಗಂತೂ ಮಾರುಕಟ್ಟೆಯಲ್ಲಿ ಒಂದೇ ಒಂದು ಪತ್ತೇದಾರಿ ಕಥೆಗಳಿಗೆ ಮೀಸಲಾದ ಪತ್ರಿಕೆಗಳಿಲ್ಲ. ಆದರೆ ಪತ್ತೇದಾರಿ ಕಾದಂಬರಿ, ಕಥೆಗಳು ಆಗೊಮ್ಮೆ ಈಗೊಮ್ಮೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇವೆ. 

ಈ ನಿಟ್ಟಿನಲ್ಲಿ ಪತ್ತೇದಾರಿ ಕಾದಂಬರಿಯನ್ನು ಬರೆದು ಸೈ ಎನಿಸಿಕೊಂಡವರು ಉದಯೋನ್ಮುಖ ಲೇಖಕರಾದ ಕೌಶಿಕ್ ಕೂಡುರಸ್ತೆ ಇವರು. ಕಲಿತದ್ದು ಏರೋನಾಟಿಕಲ್ ಇಂಜಿನಿಯರಿಂಗ್, ವೃತ್ತಿ ಸಹಾಯಕ ನಿರ್ದೇಶಕರು. ಆದರೆ ಆಸಕ್ತಿ ಬರವಣಿಗೆ. 'ಹೃದಯದ ಮಾತು' ಇವರ ಮೊದಲ ಕವನ ಸಂಕಲನ. 'ಗ್ರಿಫಿನ್ಸ್ ಗುರುಕುಲ' ಎಂಬ ಸಂಸ್ಥೆಗೆ ಬಿಸಿನೆಸ್ ಕುರಿತಾದ 'ಬಿಸಿನೆಸ್ ಮತ್ತು ನಾನು' ಹಾಗೂ 'ಬಿಸಿನೆಸ್ ಚಾಣಕ್ಯ' ಎಂಬ ಪುಸ್ತಕಗಳನ್ನು ನಿರೂಪಣೆ ಮಾಡಿಕೊಟ್ಟಿದ್ದಾರೆ. ಇವರು 'ದಾನವ' ಸೇರಿದಂತೆ ಹಲವಾರು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು 'ಆಟೋಶಂಕ್ರ' ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ.

ಈಗಾಗಲೇ ಇವರು ಮೂರು ಕಾದಂಬರಿ (ಇಂತಿ ನಿಮ್ಮ ಆತ್ಮೀಯ, ಕಾಲಾಯ ತಸ್ಮೈ ನಮಃ ಹಾಗೂ ಸ್ವಪ್ನದ ಬೆನ್ನೇರಿ) ಗಳನ್ನು ಬರೆದಿದ್ದಾರೆ. ತ್ಯಾಗರಾಜ್ ಕಾಲೋನಿ ಇವರ ನಾಲ್ಕನೇ ಕಾದಂಬರಿ. ಲಾಕ್ ಡೌನ್ ಸಮಯದಲ್ಲಿ ಹೊಳೆದ ಎಳೆಯೊಂದಕ್ಕೆ ಥ್ರಿಲ್ಲಿಂಗ್ ಅಂಶಗಳನ್ನು ಸೇರಿಸಿ ಕಾದಂಬರಿಯಾಗಿಸಿದ್ದಾರೆ. ಹಾಗೆಯೇ ದಿನಪತ್ರಿಕೆಗಳಲ್ಲಿ ಓದಿದ ಕೆಲವು ನೈಜ ಘಟನೆಗಳನ್ನು ಇಲ್ಲಿ ಬಳಸಿಕೊಂಡಿದ್ದಾರೆ. 

ಕಾದಂಬರಿಯ ಬಗ್ಗೆ ಹೇಳುವುದಾದರೆ "ಗೋವಾದ ತ್ಯಾಗರಾಜ್ ಕಾಲೋನಿಯಲ್ಲಿ ಸೂಳೆಗಾರಿಕೆ ದಂಧೆ ನಡೆಸುತ್ತಿದ್ದ ಕಲಾವಿದ ರಾಮದಾಸ್ ರಾತ್ರೋ ರಾತ್ರಿ ಕಾಣೆಯಾಗುತ್ತಾನೆ, ಇದರ ಹಿಂದಿನ ಕಥೆಯೇನು? ಮಾದರ ಕಾಲೋನಿಯ ಗಂಗವ್ವ ತನ್ನ ಮನೆಯ ಹಿತ್ತಲಿನಲ್ಲಿ ಹೂತಿಟ್ಟ ಗಾಜಿನ ಚೂರುಗಳು ಮತ್ತು ಚಾಕುವಿಗೆ ಅಂಟಿದ್ದ ರಕ್ತ ಯಾರದ್ದು? ಒಂದೇ ತಿಂಗಳ ಅಂತರದಲ್ಲಿ  ತ್ಯಾಗರಾಜ್ ಕಾಲೋನಿಯಲ್ಲಿ ದಾಖಲಾದ ಮೂರು ಮಿಸ್ಸಿಂಗ್ ಕೇಸುಗಳ ಹಿಂದಿನ ರಹಸ್ಯವೇನು? ಗಿಡ್ಡ ಸ್ಮಶಾನದಲ್ಲಿ ರಹಸ್ಯವಾಗಿ ಹೂತು ಹಾಕಿದ ಹೆಣ ಯಾರದ್ದು? ಈ ಬಗ್ಗೆ ಡಿಟೆಕ್ಟಿವ್ ಹಿಮವಂತನಿಗೆ ಸಿಕ್ಕ ಸುಳಿವುಗಳಾದರೂ ಏನು? ಕೆಂಪು ಗುಲಾಬಿಯ ರಹಸ್ಯವೇನು?" ತಿಳಿಯಬೇಕಾದರೆ ನೀವು ಈ ಪುಟ್ಟ ಕಾದಂಬರಿಯನ್ನು ಓದಲೇ ಬೇಕು.

ಕಾದಂಬರಿಯ ತುಂಬೆಲ್ಲಾ ಪುಟ್ಟ ಪುಟ್ಟ ಅಧ್ಯಾಯಗಳಿವೆ. ಓದಲೂ ಸರಾಗ. ಸುಮಾರು ೧೪೫ ಪುಟಗಳ ಈ ಕಾದಂಬರಿಯು ಪುಟದಿಂದ ಪುಟಕ್ಕೆ ಕುತೂಹಲ ಕೆರಳಿಸುತ್ತಾ ಹೋಗುತ್ತದೆ. ಲೇಖಕರಾದ ಕೌಶಿಕ್ ಕೂಡುರಸ್ತೆ ಇವರು ಈ ಕಾದಂಬರಿಯನ್ನು ತಮ್ಮನ್ನು ಪತ್ತೇದಾರಿ ಕಾದಂಬರಿಗಳ ಲೋಕದತ್ತ ಸೆಳೆದ ಖ್ಯಾತ ಪತ್ತೇದಾರಿ ಕಾದಂಬರಿಕಾರ 'ಜೇಮ್ಸ್ ಹ್ಯಾಡ್ಲೀ ಚೇಸ್' ಗೆ ಅರ್ಪಣೆ ಮಾಡಿದ್ದಾರೆ.