ತ್ಯಾಗ... ತ್ಯಾಗ... ತ್ಯಾಗ..

ತ್ಯಾಗ... ತ್ಯಾಗ... ತ್ಯಾಗ..

ಮಹೇಶ್ ಗೆ ಆ ಮಾವಿನ ಮರವೆಂದರೆ ಬಹಳ ಇಷ್ಟ. ಚಿಕ್ಕಂದಿನಿಂದ ಅದರ ಸುತ್ತಲೂ ದಿನವೂ ಆಡುತ್ತಿದ್ದ. ಮೇಲೆ ಹತ್ತಿ ಹಣ್ಣುಗಳನ್ನು ತಿನ್ನುತ್ತಿದ್ದ. ಅದರ ನೆರಳಲ್ಲಿ ಮಲಗುತ್ತಿದ್ದ. ಮರಕ್ಕೂ ಅವನೊಂದಿಗೆ ಆಡಲು ಇಷ್ಟವಾಗುತ್ತಿತ್ತು. ಸಮಯ ಕಳೆಯಿತು. ಮಹೇಶ್ ಸ್ವಲ್ಪ ದೊಡ್ಡವನಾದ. ಈಗ ದಿನವೂ ಬರುತ್ತಿರಲಿಲ್ಲ. ಒಂದು ದಿನ ಬಂದಾಗ ಅವನ ಮುಖ ಮ್ಲಾನವಾಗಿತ್ತು. ‘ನನ್ನೊಂದಿಗೆ ಆಡು ಬಾ’ ಎಂದಿತು ಮರ.

‘ನಾನೇನೂ ಮಗು ಅಲ್ಲ. ಮರದ ಸುತ್ತ ಆಡೋದಕ್ಕೆ’ ಎಂದ ಮಹೇಶ್, ‘ನನಗೆ ಗೊಂಬೆ ಕೊಳ್ಳಲು ಹಣ ಬೇಕು’ ಎಂದ. ‘ಓಹ್, ನನ್ನ ಬಳಿ ಹಣ ಇಲ್ಲ. ಒಂದು ಕೆಲಸ ಮಾಡು, ನನ್ನಲ್ಲಿ ಬಿಡುವ ಹಣ್ಣುಗಳನ್ನು ಮಾರಿ ಹಣ ಸಂಪಾದಿಸು’ ಎಂದಿತು ಮರ.

ಮಹೇಶ್ ಹಾಗೇ ಮಾಡಿದ. ಆದರೆ ಮರಳಿ ಬರಲಿಲ್ಲ. ಮರಕ್ಕೆ ಬಹಳವೇ ದುಃಖವಾಗಿತ್ತು. ಮಹೇಶ್ ಈಗ ಯುವಕನಾಗಿದ್ದ. ಮರವು ಅವನನ್ನು ಆಟವಾಡಲು ಕರೆದಾಗ, ‘ನನಗೆ ಸಮಯವಿಲ್ಲ. ನಾನು ನನ್ನ ಕುಟುಂಬಕ್ಕಾಗಿ ದುಡಿಯಬೇಕು. ನಾನು ಮನೆ ಕಟ್ಟಬೇಕು. ಸಹಾಯ ಮಾಡಬಲ್ಲೆಯಾ?’ ಎಂದ.

‘ನನ್ನ ಕೊಂಬೆಗಳನ್ನು ಕತ್ತರಿಸಿ ಮನೆ ಕಟ್ಟಿಕೋ’ ಎಂದಿತು ಮರ. ಮಹೇಶ್ ಹಾಗೇ ಮಾಡಿದ. ಬಹಳ ಕಾಲದ ವರೆಗೆ ಮಹೇಶ್ ಬರಲಿಲ್ಲ. ಮರವು ತನ್ನ ಒಂಟಿತನಕ್ಕೆ ದುಃಖಿಸಿತು. ಮತ್ತೆ ಮಹೇಶ್ ಬಂದ. ಮರವು ಆಟವಾಡಲು ಕರೆಯಿತು.

‘ನನಗೆ ವಯಸ್ಸಾಗಿದೆ. ನಾನು ಒಂದು ದೋಣಿ ಮಾಡಿಕೊಂಡು ಅದರಲ್ಲಿ ಹೋಗಬೇಕು. ನನಗೆ ದೋಣಿ ಕೊಡು’ ಎಂದ ಮಹೇಶ್. ‘ನನ್ನ ಕಾಂಡವನ್ನು ತಗೋ. ದೋಣಿ ಮಾಡಿಕೊಂಡು ಹಾಯಾಗಿ ಹೋಗಿ ಬಾ’ ಎಂದಿತು ಮರ.

ಅವನು ಮರದ ಕಾಂಡವನ್ನು ಕತ್ತರಿಸಿ ದೋಣಿ ಮಾಡಿಕೊಂಡು ಹೊರಟುಹೋದ. ಬಹಳ ಕಾಲದ ವರೆಗೂ ಬರಲಿಲ್ಲ.

ಆಮೇಲೆ ಬಂದಾಗ ಮರವು, ‘ನನ್ನ ಬಳಿ ಏನೂ ಇಲ್ಲ ಕೊಡುವುದಕ್ಕೆ’ ಎಂದಿತು. ‘ನನಗೆ ಹಲ್ಲಿಲ್ಲ. ಹಣ್ಣನ್ನು ಕೂಡ ಕಚ್ಚಲಾರೆ’ ಎಂದ ಮಹೇಶ್.

‘ನನ್ನ ಬಳಿ ಇರುವುದೆಲ್ಲಾ ನನ್ನ ತುಂಡಾದ ಕಾಂಡ ಹಾಗೂ ಬೇರುಗಳು, ಅವು ಕೂಡ ಸಾಯುವಂತಿವೆ’ ಎಂದಿತು ಮರ.‘ನನಗೆ ಏನೂ ಬೇಡ. ವಿಶ್ರಾಂತಿಗೆ ಒಂದು ಜಾಗ ಬೇಕು’ ಎಂದ ಮಹೇಶ್. ‘ಒಳ್ಳೆಯದು. ಹಳೆಯ ಮರದ ಕಾಂಡ ಮತ್ತು ಬೇರುಗಳಿಗೆ ಒರಗಿ ಮಲಗಿದರೆ ಒಳ್ಳೆಯ ವಿಶ್ರಾಂತಿ ಸಿಗುತ್ತದೆ. ಬಾ ಕೂತ್ಕೋ’ ಎಂದಿತು ಮರ. ಮಹೇಶ್ ಮರದ ಕಾಂಡಕ್ಕೆ ಒರಗಿ ಕುಳಿತ. ತುಂಬಾ ಸಮಯದ ನಂತರ ನೆಮ್ಮದಿಯ ನಿದ್ರೆಗೆ ಜಾರಿದ. ಮರವು ಬಹಳ ಸಂತಸದಿಂದ ನಕ್ಕಿತು.

ಮರವನ್ನು ನಾವು ನಮ್ಮ ತಾಯ್ತಂದೆಯರಿಗೆ ಹೋಲಿಸಬಹುದಲ್ಲವೇ? ನಾವು ಚಿಕ್ಕವರಿದ್ದಾಗ ಅವರೊಂದಿಗೆ ಆಡುವುದು ನಮಗೆ ಬಹಳ ಇಷ್ಟವಾಗುತ್ತಿತ್ತು. ಬೆಳೆದು ನಿಂತಾಗ ನಾವು ಅವರನ್ನು ಬಿಟ್ಟು ಹೊರಟುಹೋಗುತ್ತೇವೆ. ನಮಗೆ ಮತ್ತೆ ಏನಾದರೂ ಸಹಾಯ ಬೇಕಾದರೆ ಮಾತ್ರ ನಮಗೆ ಮೊದಲು ನೆನಪಾಗುವುದು ಅವರೇ. ತಾಯ್ತಂದೆಯರೇ ಹಾಗೆ. ಅವರ ಜೀವನವನ್ನೇ ನಮಗಾಗಿ ತ್ಯಾಗ ಮಾಡುತ್ತಾರೆ. ತಂದೆ ತಾಯಿಯರನ್ನು ಬೇಷರತ್ತಾಗಿ ಸದಾ ಪ್ರೀತಿಸೋಣ.

(ಆಧಾರ)