ತ್ಯಾಗ, ಬಲಿದಾನವನ್ನು ನೆನಪಿಸುವ ಸೇನಾ ದಿನ

ತ್ಯಾಗ, ಬಲಿದಾನವನ್ನು ನೆನಪಿಸುವ ಸೇನಾ ದಿನ

ಭಾರತೀಯ ಸಶಸ್ತ್ರ ಸೇನೆ ಎಂದೊಡನೆಯೇ ನಮ್ಮ ಮನಸ್ಸಿನಲ್ಲಿ ಭೂಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಗಳ ಚಿತ್ರ ಹಾದು ಹೋಗುತ್ತದೆ. ಮೂರೂ ಸೇನೆಗಳಿಗೆ ಪ್ರತ್ಯೇಕ ದಿನಗಳಿವೆ. ಜನವರಿ ೧೫ ಅನ್ನು ಸೇನಾ ದಿನ (Army Day) ವಾಗಿ ಆಚರಿಸುತ್ತೇವೆ. ಜನವರಿ ೧೫ ರಾಷ್ಟ್ರೀಯ ಸೇನಾ ದಿನಾಚರಣೆಯನ್ನಾಗಿ ಆಚರಣೆ ಮಾಡುವುದಕ್ಕೆ ಏನು ಕಾರಣ ಗೊತ್ತಾ? ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷ್ ಮೂಲದವರೇ ಸೈನ್ಯಾಧಿಕಾರಿಗಳಾಗಿರುತ್ತಿದ್ದರು. ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ, ಹೈದರಾಬಾದ್ ಮುಂತಾದ ಕೆಲವು ಸಂಸ್ಥಾನಗಳು ಭಾರತದಲ್ಲಿ ತಮ್ಮ ಸೇರ್ಪಡೆಯನ್ನು ವಿರೋಧಿಸಿದ ಸಂದರ್ಭದಲ್ಲಿ ಸೇನೆಯು ಅವರ ಮೇಲೆ ದಾಳಿ ಮಾಡಿ ಅಖಂಡ ಭಾರತ ನಿರ್ಮಾಣಕ್ಕೆ ಸಹಯೋಗ ನೀಡಿತ್ತು. ಆಗೆಲ್ಲಾ ಭಾರತದ ಸೈನ್ಯಾಧಿಕಾರಿಗಳಾಗಿದ್ದವರು ಬ್ರಿಟೀಷರೇ. ೧೯೪೯ರ ಜನವರಿ ೧೫ರಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪನವರು ಭಾರತೀಯ ಸೇನೆಯ ಪ್ರಮುಖರಾದರು. ಭಾರತಕ್ಕೆ ಸ್ವಾತಂತ್ರ್ಯ ದೊರೆತು ಸುಮಾರು ಎರಡು ವರ್ಷಗಳ ನಂತರ ಭಾರತಕ್ಕೆ ತನ್ನವರೇ ಆದ ಸೇನಾ ಪ್ರಮುಖರು ದೊರೆತರು. ಆ ದಿನದ ನೆನಪಿಗಾಗಿ ಜನವರಿ ೧೫ ಅನ್ನು ಪ್ರತೀ ವರ್ಷ ಭಾರತೀಯ ಸೇನಾ ದಿನವೆಂದು ಆಚರಿಸಲಾಗುತ್ತದೆ.

ಆ ಸಮಯ ಸುಮಾರು ೨ ಲಕ್ಷದಷ್ಟಿದ್ದ ನಮ್ಮ ಸೇನಾ ಬಲವು ಈಗ ೧೨.೩೭ ಲಕ್ಷಕ್ಕೇರಿದೆ. ೯.೬ ಲಕ್ಷ ಮಂದಿ ಮೀಸಲು ಸೇನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಶ್ವದಲ್ಲಿ ಚೀನಾ ಬಳಿಕ ಭಾರತವೇ ಅತ್ಯಧಿಕ ಮಂದಿ ಸೈನಿಕರನ್ನು ಹೊಂದಿರುವ ದೇಶ. ಸ್ವಾತಂತ್ರ್ಯಾ ನಂತರ ಭಾರತಕ್ಕೆ ಮುಳ್ಳಾದದ್ದು ಒಂದು ಸಮಯದಲ್ಲಿ ನಮ್ಮದೇ ಭಾಗವಾಗಿದ್ದ ಪಾಕಿಸ್ತಾನವೆಂಬ ಹೊಸ ದೇಶ. ನಿರಂತರವಾಗಿ ಕಿರುಕುಳ ನೀಡುತ್ತಾ ಬಂದಿರುವ ಈ ದೇಶ ನೇರವಾಗಿ ಯುದ್ಧ ಮಾಡಿದಾಗ ನಮ್ಮ ಸೇನೆಯ ಎದುರು ಸೋತು ಮಣ್ಣು ಮುಕ್ಕಿತ್ತು. ಅದಕ್ಕಾಗಿ ಈಗ ಪರೋಕ್ಷ ಯುದ್ಧ ಮಾಡುತ್ತಿದೆ. ನುಸುಳುಕೋರರನ್ನು ಭಾರತದ ಗಡಿಯ ಒಳಗೆ ಕಳುಹಿಸಿ ಇಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ಸೃಷ್ಟಿಸುವುದೇ ಅದರ ಕಾರ್ಯವಾಗಿದೆ. ಆದರೆ ಭಾರತೀಯ ಸೇನೆ ಎಲ್ಲಾ ರೀತಿಯ ಆಕ್ರಮಣಗಳಿಗೆ ಸರ್ವ ಸಿದ್ಧವಾಗಿದೆ. ಪಾಕಿಸ್ತಾನ ಮಾತ್ರವಲ್ಲ ಚೀನಾ ಗಡಿಯಲ್ಲೂ ತಕರಾರು ಪ್ರಾರಂಭವಾಗಿದೆ. ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭದ್ರತೆಯನ್ನು ಭಾರತೀಯ ಸೇನೆ ಮಾಡುತ್ತಿದೆ.

೧೯೬೨ರ ಚೀನಾ ಯುದ್ಧ, ೧೯೬೫ರ ಪಾಕಿಸ್ತಾನ ಯುದ್ಧ, ೧೯೭೧ರ ಬಾಂಗ್ಲಾ ದೇಶದ ವಿಮೋಚನಾ ಯುದ್ಧ, ೧೯೯೮ರ ಕಾರ್ಗಿಲ್ ಯುದ್ಧಗಳನ್ನೆಲ್ಲಾ ಭಾರತದ ಸೇನೆಯು ಸಮರ್ಥವಾಗಿ ಎದುರಿಸಿದೆ. ಭಾರತೀಯ ಸೇನೆಯ ಯೋಧರನ್ನು ನಾವು ಸದಾ ಕಾಲ ಸ್ಮರಣೆ ಮಾಡಲೇ ಬೇಕು. ಸಿಯಾಚಿನ್ ನಂತಹ ಮೂಳೆಯನ್ನು ಕೊರೆಯುವಂತಹ ಚಳಿ ಇರುವ ಪ್ರದೇಶದಲ್ಲೂ ದೇಶ ರಕ್ಷಣೆಯ ಪ್ರತಿಜ್ಞೆ ಮಾಡಿ, ಗಡಿಯನ್ನು ಕಾಯುತ್ತಾರೆ. ಅಲ್ಲಿಯ ಯೋಧರು -೪೦ ಡಿಗ್ರಿ ಚಳಿಯಲ್ಲಿ ಗಡಿಯನ್ನು ಕಾಯುತ್ತಾರೆಂದರೆ ಅವರಲ್ಲಿ ಅದೆಷ್ಟು ಆತ್ಮಸ್ಥೈರ್ಯ ಮತ್ತು ದೇಶ ಭಕ್ತಿ ಇರಬೇಕು. ನಾವಿಲ್ಲಿ ಸ್ವಲ್ಪ ಚಳಿ ಅಥವಾ ಸೆಕೆ ಆದರೆ ಬೊಬ್ಬೆ ಹಾಕುತ್ತೇವೆ. ಆದರೆ ದೇಶ ಕಾಯುವ ಸೈನಿಕರು ಯಾವುದೇ ತಕರಾರು ಮಾಡದೇ ದೇಶ ಕಾಯುವುದೇ ಈಶನ ಸೇವೆ ಎಂದು ಭಾವಿಸುತ್ತಾರೆ. ಸಿಯಾಚಿನ್ ಪ್ರದೇಶ ಭೂಮಿಯ ಮೇಲಿನ ಅತೀ ಎತ್ತರದ ಯುದ್ಧ ಭೂಮಿಗಳಲ್ಲಿ ಒಂದು. ಆ ಪ್ರದೇಶವು ಸಮುದ್ರ ಮಟ್ಟದಿಂದ ಸುಮಾರು ೨೦,೦೦೦ ಅಡಿಗಳಷ್ಟು ಎತ್ತರದಲ್ಲಿದೆ.

ಇತ್ತೀಚೆಗೆ ಚೀನಾ ವಿರುದ್ಧ ನಡೆದ ಗಲ್ವಾನ್ ಕಣಿವೆ ಹಾಗೂ ಡೋಕ್ಲಾಂ ಚಕಮಕಿ, ಪಾಕಿಸ್ತಾನದ ಪುಲ್ವಾಮ್ ದಾಳಿಯ ಪ್ರತಿಕಾರಕ್ಕೆ ಬಾಲಾಕೋಟ್ ನಲ್ಲಿಯ ಸರ್ಜಿಕಲ್ ಸ್ಟ್ರೈಕ್ ಇತ್ಯಾದಿಗಳೆಲ್ಲಾ ನಮ್ಮ ಸೇನೆಯ ಮಹತ್ತರ ಸಾಧನೆಗಳು. ವಿಶ್ವ ಸಂಸ್ಥೆಯ ಶಾಂತಿ ಕಾರ್ಯಾಚರಣೆಗಳಲ್ಲೂ ಭಾರತ ಸರಕಾರ ಸೇನೆಯನ್ನು ಕಳುಹಿಸಿಕೊಟ್ಟಿದೆ. ವಿಯಟ್ನಾಂ, ನಮೀಬಿಯಾ, ಅಂಗೋಲಾ, ಲೆಬನಾನ್, ಕಾಂಗೋ ಮುಂತಾದ ದೇಶದಲ್ಲಿ ಶಾಂತಿ ಕಾಪಾಡಲು ನಮ್ಮ ಸೇನೆ ಕಾರ್ಯಾಚರಣೆ ನಡೆಸಿದೆ. 

ಭಾರತೀಯ ಸೇನೆಯ ಬಲ ಹೆಚ್ಚಿಸಲು ಈಗ ಹಲವಾರು ಆಧುನಿಕ ಶಸ್ತ್ರಾಸ್ತ್ರಗಳು, ಯುದ್ಧ ನೌಕೆಗಳು, ಟ್ಯಾಂಕರ್ ಗಳು, ಕ್ಷಿಪಣಿಗಳು, ರಫೇಲ್ ನಂತಹ ಆಧುನಿಕ ಯುದ್ಧ ವಿಮಾನಗಳು ಬಂದಿದೆ. ಆದರೆ ೧೯೬೨ರ ಚೀನಾ ಯುದ್ಧದ ಸಮಯದಲ್ಲಿ ನಮ್ಮ ಬಳಿ ಯಾವುದೇ ಆಧುನಿಕ ಶಸ್ತ್ರಾಸ್ತ್ರಗಳಿರಲಿಲ್ಲ. ಆಗ ಸೈನಿಕರ ಬಳಿ ಇದ್ದುದು ಕೇವಲ ಆತ್ಮಸ್ಥೈರ್ಯ ಮತ್ತು ದೇಶ ಭಕ್ತಿ ಮಾತ್ರ. ಆದರೆ ನಂತರದ ದಿನಗಳಲ್ಲಿ ಸೇನೆಯ ಪರಿಸ್ಥಿತಿಗಳು ಬದಲಾಗಿವೆ. ಉತ್ತಮ ವ್ಯವಸ್ಥೆಗಳು ಸೇನೆಯಲ್ಲಿ ಬಂದಿವೆ. ಸೇನೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದವರಿಗೂ ಬಹಳಷ್ಟು ಅನುಕೂಲಗಳು ದೊರೆಯುತ್ತಿವೆ. ಯುವಕರಷ್ಟೇ ಅಲ್ಲ ಯುವತಿಯರೂ ಸೇನೆಯಲ್ಲಿ ಸೇವೆ ಸಲ್ಲಿಸಲು ಮುಂದೆ ಬರುತ್ತಿದ್ದಾರೆ. ನಮ್ಮ ಭಾರತೀಯ ಸೇನೆ ಇನ್ನಷ್ಟು ಬಲಿಷ್ಟವಾಗುತ್ತಿದೆ. 

ಸೇನೆಗೆ ಬಲ ತುಂಬಲು ಬೇಕಾದ ಶಸ್ತ್ರಾಸ್ತ್ರಗಳು ಬಹಳಷ್ಟು ನಮ್ಮ ದೇಶದಲ್ಲೇ ಸ್ವದೇಶೀ ಮಂತ್ರದ ಅಡಿಯಲ್ಲಿ ತಯಾರಾಗುತ್ತಿದೆ. ರಕ್ಷಣಾ ಬಜೆಟ್ ಸಹಾ ಸುಮಾರು ೨೦ ಸಾವಿರ ಕೋಟಿಗಳಷ್ಟಾಗಿದೆ. ಇದು ಮುಂದಿನ ದಿನಗಳಲ್ಲಿ ೩೦ ಸಾವಿರ ಕೋಟಗಳಿಗೆ ಏರಿಸುವ ನಿರೀಕ್ಷೆ ಇದೆ. ದೇಶದ ಜನರು ನೆಮ್ಮದಿಯಿಂದ ನಿದ್ರಿಸಬೇಕಾದರೆ ದೇಶವು ಬಲಿಷ್ಟವಾಗಿ, ಸುಭದ್ರವಾಗಿರಲೇಬೇಕು. ಇದಕ್ಕಾಗಿ ತಮ್ಮ ಹಸಿವು, ನಿದ್ರೆ ಮತ್ತು ಕುಟುಂಬವನ್ನು ಬಿಟ್ಟು ದೇಶದ ಗಡಿಯನ್ನು ಕಾಯುತ್ತಿರುವ ಭಾರತೀಯ ಸೇನೆಯ ಯೋಧರನ್ನು ನಾವು ಸದಾ ಕಾಲ ಸ್ಮರಿಸಲೇ ಬೇಕು. ರಾಷ್ಟ್ರೀಯ ಸೇನಾ ದಿನದ ನೆನಪಿನಲ್ಲಿ ನಮ್ಮ ದೊಡ್ಡ ಸೆಲ್ಯೂಟ್ ಭಾರತೀಯ ಸೇನೆಗೆ ಇರಲಿ. ಭಾರತ ಮಾತೆಗೆ ಜಯವಾಗಲಿ..

ಚಿತ್ರ: ಅಂತರ್ಜಾಲ ಕೃಪೆ