ತ್ರಿವೇಣಿ ನೆನಪಿಗಾಗಿ ʻಬೆಳ್ಳಿಮೋಡʼ ವಸ್ತು ಸಂಗ್ರಹಾಲಯ

ತ್ರಿವೇಣಿ ನೆನಪಿಗಾಗಿ ʻಬೆಳ್ಳಿಮೋಡʼ ವಸ್ತು ಸಂಗ್ರಹಾಲಯ

ಸಾಹಿತ್ಯ ಲೋಕದಲ್ಲಿ ʻತ್ರಿವೇಣಿʼ ಎಂಬ ಹೆಸರಿನಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದ ಕಾದಂಬರಿಗಾರ್ತಿ ಅನಸೂಯ ಶಂಕರ್‌ ಅವರ ನೆನಪಿಗಾಗಿ ನಿರ್ಮಿಸುವ ʻಬೆಳ್ಳಿಮೋಡʼ ವಸ್ತು ಸಂಗ್ರಹಾಲಯದ ಕುರಿತ ಒಂದು ಮಾಹಿತಿ.

ʻತ್ರಿವೇಣಿʼ ಎಂದೇ ಖ್ಯಾತನಾಮರಾಗಿ ಸಾಹಿತ್ಯ ಲೋಕದಲ್ಲಿ ಪರಿಚಿತರಾದವರು ಕಾದಂಬರಿಗಾರ್ತಿ ಅನಸೂಯ ಶಂಕರ್‌. ಇದೀಗ ಅವರ ಸಾಹಿತ್ಯ ಕೃಷಿಯ ಕಾರ್ಯಗಳನ್ನು ಮೆಲುಕು ಹಾಕುವ ವಿಭಿನ್ನವಾದ ಸಂಗ್ರಹಾಲಯವೊಂದು ರೂಪುತಳೆಯಲಿದ್ದು, ಸ್ವತಃ ಅನಸೂಯ ಅವರ ಪುತ್ರಿ ಮೀರಾ ಶಂಕರ್‌ ಈ ಯೋಜನೆಯ ನಿರ್ಮಾತೃ. ಮೀರಾ ಅವರ ತಾಯಿ ಹುಟ್ಟಿ ಬೆಳೆದದ್ದು ಮೈಸೂರಿನ ಚಾಮರಾಜಪುರಂನಲ್ಲಿ. ಅಲ್ಲಿನ ರೈಲ್ವೇ ನಿಲ್ದಾಣದ ರಸ್ತೆಯಲ್ಲಿರುವ 1152ನೇ ನಂಬರಿನ 120 ವರ್ಷ ಹಳೆಯ ಮನೆ ಮ್ಯೂಸಿಯಂ ಆಗಿ ಪರಿವರ್ತನೆಯಾಗಲಿದೆ.

ಕೇವಲ 34 ವರ್ಷದ ಅಲ್ಪಾಯುಶಿ ಲೇಖಕಿ ತ್ರಿವೇಣಿ ಅವರು ತಮ್ಮನ್ನು ಸಾಹಿತ್ಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಕೇವಲ 13 ವರ್ಷಗಳು ಮಾತ್ರ. ಈ ಕೂದಲೆಳೆಯಷ್ಟರ ಕಡಿಮೆ ಸಮಯದಲ್ಲೇ ಅವರು ಬರೆದು ಮುಗಿಸಿದ್ದು ಬರೋಬ್ಬರಿ 20ಕ್ಕೂ ಅಧಿಕ ಕಾದಂಬರಿಗಳು ಹಾಗೂ 40ಕ್ಕೂ ಅಧಿಕ ಸಣ್ಣ ಕಥೆಗಳು. ಬೆಳ್ಳಿಮೋಡ, ಹಣ್ಣೆಲೆ ಚಿಗುರಿದಾಗ, ಶರಪಂಜರ, ಬೆಕ್ಕಿನ ಕಣ್ಣು, ತಾವರೆಯ ಕೊಳ, ಮುಚ್ಚಿದ ಬಾಗಿಲು, ಹೃದಯ ಗೀತೆ, ಕೀಲುಗೊಂಬೆ ಇವು ಕಾದಂಬರಿಗಳಾದರೆ, ಹೆಂಡತಿಯ ಹೆಸರು,ಎರಡು ಮನಸ್ಸು, ಸಮಸ್ಯೆಯ ಮಗು ಇವರ ಕಥಾಸಂಕಲನಗಳಾಗಿವೆ. ಬೆಳ್ಳಿಮೋಡ, ಶರಪಂಜರ ಸೇರಿ 5 ಕಾದಂಬರಿಗಳು ಸಿನೆಮಾಗಳಾಗಿ ರೂಪುಗೊಂಡು ಜನಮನ್ನಣೆ ಪಡೆದುಕೊಂಡವುಗಳು.

ಅದರಲ್ಲೂ ಪುಟ್ಟಣ್ಣ ಕಣಗಾಲ್‌ ನಿರ್ದೇಶಿಸಿರುವ ಬೆಳ್ಳಿಮೋಡ ಸಿನೆಮಾ ತ್ರಿವೇಣಿಯವರ ಹೆಸರನ್ನು ಕಲಾರಸಿಕರ ಸ್ಮೃತಿಯಲ್ಲಿ ಸ್ಥಿರವಾಗಿರುವಂತೆ ಮಾಡಿತು. ಹಾಗಾಗಿಯೇ ಮಗಳ ಕನಸಿನ ಯೋಜನೆಯಾಗಿ ʻಬೆಳ್ಳಿ ಮೋಡʼ ವಸ್ತು ಸಂಗ್ರಹಾಲಯ ಹೆಸರಿನಲ್ಲಿ ಮೂಡಿಬರಲಿದೆ. ''ಬೆಳ್ಳಿಮೋಡ' ಈ ಮೂಲಕ ಕನ್ನಡದ ಮಹಿಳಾ ಸಾಹಿತಿಯೊಬ್ಬರ ನೆನಪಿನಲ್ಲಿ ನೆಲೆಗೊಳ್ಳುವ ಮೊದಲ ಮ್ಯೂಸಿಯಂ ಆಗಿಯೂ ಗುರುತಿಸಿಕೊಳ್ಳಲಿದೆ.

ತಾಯಿಯ ಸಾಹಿತ್ಯ ಪರಂಪರೆಯನ್ನು ಜೀವಂತವಾಗಿಸಿಡುವ ಉದ್ದೇಶದಿಂದ ಕಟ್ಟುವ ಈ ಮ್ಯೂಸಿಯಂನಲ್ಲಿ ಅನಸೂಯ ಅವರಿಗೆ ಸಿಕ್ಕ ಎಲ್ಲಾ ಸ್ಮರಣಿಕೆಗಳು, ಕಾದಂಬರಿಗಳ ಹಸ್ತಪ್ರತಿಗಳು, ಉಡುಪುಗಳು, ಬಳಸಿದ ಗಡಿಯಾರಗಳು, ಪೀಠೋಕರಣಗಳಲ್ಲದೆ ಅವರು ಅಗಲಿದಾಗ ಸ್ವೀಕರಿಸಿದ ಸುಮಾರು 500 ರಿಂದ 600ರಷ್ಟು ಸಂತಾಪ ಪತ್ರಗಳು ಸೇರಿಕೊಳ್ಳಲಿವೆ. ಜೊತೆಗೆ ಇಲ್ಲಿ ಹಿರಿಯ ಸಾಹಿತಿಗಳಿಂದ ಸಾಹಿತ್ಯಾಸಕ್ತರಿಗೆ ಕಾರ್ಯಾಗಾರಗಳು ಸೇರಿದಂತೆ ಕೆಲವು ಸಾಹಿತ್ಯಿಕ ಚಟುವಟಿಕೆಗಳೂ ಸಹ 'ಬೆಳ್ಳಿಮೋಡ’ದ ಭಾಗವಾಗಿರಲಿವೆ.

ಇನ್ನು, ತ್ರಿವೇಣಿ ಅವರು ಮನಃಶಾಸ್ತ್ರ ವಿಷಯದಲ್ಲಿ ಪದವೀಧರರಾಗಿದ್ದು ಅಲ್ಲದೆ ಇವರ ಅನೇಕ ಕೃತಿಗಳು ಅದೇ ನೆಲೆಗಟ್ಟಿನಲ್ಲೇ ರಚಿತವಾದವುಗಳಾಗಿವೆ. ಹಾಗಾಗಿ ಮ್ಯೂಸಿಯಂನಲ್ಲಿ ಕೌನ್ಸಲಿಂಗ್‌ ಕೇಂದ್ರವೊಂದನ್ನು ತೆರೆಯುವ ಇರಾದೆ ತ್ರಿವೇಣಿ ಅವರ ಮೊಮ್ಮಕ್ಕಳಾದ ಅನುಷಾ ಕುಮಾರ್‌ ಹಾಗೂ ಪಾರ್ವತಿ ವಟ್ಟಂ ಅವರದ್ದು.

ಲಂಡನ್‌ನ‌ ಶೇಕ್ಸ್‌ಪಿಯರ್‌ ಮ್ಯೂಸಿಯಂ ಮಾದರಿ: ಶ್ರೇಷ್ಠ ನಾಟಕಕಾರ ಶೇಕ್ಸ್‌ಪಿಯರ್ ಅವರ‌ ಮರಣಾನಂತರ ನೆನಪಿಗಾಗಿ ಅವರ ನಿವಾಸವನ್ನೇ ಮ್ಯೂಸಿಯಂ ಮಾಡಲಾಗಿತ್ತು. 15 ವರ್ಷಗಳ ಹಿಂದೆ ಮೀರಾ ಅವರು ಅಲ್ಲಿಗೆ ಭೇಟಿ ನೀಡಿದಾಗ ಅದರ ರಚನೆಯನ್ನು ನೋಡಿ ಸ್ಪೂರ್ತಿ ಪಡೆದಿದ್ದೇ ʻಬೆಳ್ಳಿ ಮೋಡʼದ ನಿರ್ಮಾಣಕ್ಕೆ ಸ್ಫೂರ್ತಿಯಾಯಿತು. ಮೀರಾರವರ ಈ ಕಾರ್ಯಕ್ಕೆ ತ್ರಿವೇಣಿ ಬರಹಗಳ ಅಭಿಮಾನಿಯೊಬ್ಬರು ಧನಸಹಾಯ ನೀಡಲೂ ಮುಂದಾಗಿದ್ದಾರೆ ಎನ್ನಲಾಗಿದೆ.

ಒಂದು ವರ್ಷದ ಅವಧಿಯೊಳಗೆ ʻಬೆಳ್ಳಿ ಮೋಡʼ: ಪುನರ್ಸ್ಥಾಪನಾ ಯೋಜನೆಯ ಜವಾಬ್ದಾರಿಯನ್ನು ಸಂರಕ್ಷಣಾ ವಾಸ್ತು ಶಿಲ್ಪಿ ಪಂಕಜ್‌ ಮೋದಿ ಅವರು ವಹಿಸಿಕೊಂಡಿದ್ದಾರೆ. ಮ್ಯೂಸಿಯಂ ರಚನೆ, ಸ್ಥಳದ ಕುರಿತು ವಿವರವಾದ ಅಧ್ಯಯನ ನಡೆಸಲಿದ್ದಾರೆ. ಹಾಗೆಯೇ ಯೋಜನೆಯ ಅವಧಿ ಒಂದು ವರ್ಷ. ಈಗಿರುವ ಮನೆಯ ರಚನೆ, ಕಟ್ಟುವಾಗ ಬಳಸಿದ ಸಾಮಾಗ್ರಿಗಳನ್ನು ಬದಲಾಯಿಸದೆ ಮೊದಲಿದ್ದ ಹಾಗೆಯೇ ಉಳಿಸಿಕೊಂಡು ಹೊಸ ರೂಪ ನೀಡುವ ಜವಾಬ್ದಾರಿಯು ವಾಸ್ತು ಶಿಲ್ಪಿ ಪಂಕಜ್‌ ಮೋದಿಯವರ ಮೇಲಿದೆ. ಹೀಗೆ ಈ ಎಲ್ಲಾ ಕಾರಣಗಳಿಂದ ʻಬೆಳ್ಳಿ ಮೋಡʼ ವಸ್ತು ಸಂಗ್ರಹಾಲಯವು ಮುಂದೆ ನಾಡಿನ ವಿಶೇಷ ತಾಣವಾಗಿ ರೂಪುಗೊಳ್ಳುವುದರಲ್ಲಿ ಅನುಮಾನವಿಲ್ಲ.

-ಶೋಭಿತಾ ಮಿಂಚಿಪದವು

ಇಂಟರ್ನೆಟ್ ಚಿತ್ರಗಳು