ತ್ರಿವೇಣಿ ಸಂಗಮ ನೋಡಲು ಭಾಗಮಂಡಲ ಬನ್ನಿ…




ಕೊಡಗಿನ ಭಾಗಮಂಡಲದಲ್ಲಿ ಪುಣ್ಯಸ್ಥಳವಾದ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ನೋಡಬಹುದು. ಕಾವೇರಿ, ಕನ್ನಿಕೆ ಮತ್ತು ಸುಜ್ಯೋತಿ ನದಿಗಳ ಸಂಗಮವನ್ನು ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ.
ಮಳೆಗಾಲದಲ್ಲಿ ಭೇಟಿ ಕೊಟ್ಟರೆ ಮೈದುಂಬಿ ಹರಿಯುವ ಜಲಪಾತಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಮಡಿಕೇರಿಯಿಂದ ನಾಲ್ಕು ಕಿ.ಮೀ. ದೂರದಲ್ಲಿ ಅಬ್ಬೆ ಜಲಪಾತವಿದೆ, 35 ಕಿ.ಮೀ. ದೂರ ಬಂದರೆ ಇರ್ಪು ಜಲಪಾತ, ಸೋಮವಾರ ಪೇಟೆ ತಾಲೂಕಿಗೆ ಬಂದರೆ ಮಳಲ್ಲಿ ಜಲಪಾತದ ವೈಭವ ಕಣ್ತುಂಬಿಕೊಳ್ಳಬಹುದು. ಅಲ್ಲಿಂದ ಬೈಲುಕುಪ್ಪೆಗೆ ಬಂದರೆ ಟಿಬೆಟಿಯನ್ನರ ಸುವರ್ಣ ಮಂದಿರ ಕಾಣಬಹುದು. ಇದು ದೇಶದ ಎರಡನೇ ಅತಿ ದೊಡ್ಡ ಟಿಬೆಟಿಯನ್ ಮಂದಿರ ಎನಿಸಿಕೊಂಡಿದೆ.
ಭಾರತದ ಸ್ಕಾಟ್ಲ್ಯಾಂಡ್ ಎಂದೂ ಕರೆಯಲಾಗುವ ಕೊಡಗಿನಲ್ಲಿ ಕಾಫಿ ತೋಟ, ಚಹಾ ಎಸ್ಟೇಟ್ಗಳು, ಕಾಳು ಮೆಣಸು, ಕಿತ್ತಳೆ, ಶುಂಠಿ ಹಾಗೂ ವಿಧ ವಿಧದ ಹೂಗಳು ಪ್ರಸಿದ್ಧಿ. ಹುತ್ತರಿ ಹಬ್ಬ ಆಚರಣೆಗಳು ವಿಶೇಷವಾಗಿದ್ದು, ಇಲ್ಲಿ ಕೊಡವ, ಒಕ್ಕಲಿಗ ಗೌಡ ಸಮುದಾಯದ ಜನರು ಹೆಚ್ಚಾಗಿ ವಾಸಿಸುತ್ತಾರೆ. ಕಾವೇರಿ ನದಿಯೊಂದಿಗೆ ಕನ್ನಿಕೆ, ಸುಜ್ಯೋತಿ ನದಿಗಳು ಸೇರುವ ತ್ರಿವೇಣಿ ಸಂಗಮ ಸ್ಥಳವೇ ಭಾಗಮಂಡಲ. ತಲಕಾವೇರಿಗೆ ಹೋಗುವ ಹಾದಿಯಲ್ಲಿರುವ ಭಾಗಮಂಡಲದಲ್ಲಿ ಭಗಂಡೇಶ್ವರ ದೇವಾಲಯವಿದೆ. ಗಿರಿ ಕಂದರ, ಜುಳು ಜುಳು ಹರಿವ ನೀರು, ಹಸಿರು ತುಂಬಿದ ಭಾಗಮಂಡಲದ ಭಗಂಡೇಶ್ವರ (ಶಿವ) ಆಲಯದ ಆವರಣದಲ್ಲಿ ವಿಷ್ಣು, ಸುಬ್ರಹ್ಮಣ್ಯ ಮತ್ತು ವಿನಾಯಕ ದೇವಾಲಯಗಳಿವೆ.
ಮಡಿಕೇರಿಯಿಂದ 40 ಕಿಲೋಮೀಟರ್ ದೂರದಲ್ಲಿದೆ... ಈ ಭಾಗಮಂಡಲವನ್ನು ಅನೇಕ ಟೂರಿಸಂ ವಾಹನಗಳು ಮತ್ತು ಬಸ್ಸುಗಳ ಮೂಲಕ ಪ್ರಯಾಣಿಸಬಹುದು. "ಪುಣ್ಯ ಧಾರ್ಮಿಕ ಸ್ಥಳವಾಗಿ ತಲಕಾವೇರಿ, ತ್ರಿವೇಣಿ ಸಂಗಮವಾಗಿ ಭಾಗಮಂಡಲ, ಜುಳು ಜುಳು ಜಲಧಾರಿಯಾದ ಜಲಪಾತಗಳು, ಎಲ್ಲೆಲ್ಲೂ ನೋಡಿದರೂ ನೀರೇ ನೀರು, ಕಾವೇರಿ ನದಿಗೆ ಜೀವ ತುಂಬುವ ಈ ಸ್ಥಳವು ನೋಡಲು ಅತ್ಯದ್ಭುತ "ಬನ್ನಿ ಒಮ್ಮೆ ಪ್ರವಾಸಕ್ಕೆ.....
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು