ಥಟ್ ಅಂತ ಹೇಳ್ಬೇಡಿ! ಸರಿಯಾಗಿ ಓದಿ, ನಿಧಾನವಾಗಿ ಯೋಚಿಸಿ, ಅಮೇಲೆ ಹೇಳಿ!
ಸ್ಥಳ: ಬೆಂಗಳೂರಿನ ದಕ್ಷಿಣ ಪಶ್ಚಿಮದಲ್ಲಿನ ಒಂದು ಹೊಸ ಅಪಾರ್ಟ್ಮೆಂಟ್ ಸಮೂಹ.
ಸಮಯ: ಆರಉ ತಿಂಗಳ ಹಿಂದೆ ಒಂದು ಭಾನುವಾರ ಬೆಳಿಗ್ಗೆ ೧೦-೩೦ರ ಸಮಯ.
ಸನ್ನಿವೇಶ: ಬಿಲ್ಡರ್ನ ಅನುಪಸ್ಥಿತಿಯಲ್ಲಿ ಹಲವು ಹೊಸ ಫ್ಲ್ಯಾಟ್ ಮಾಲೀಕರ ಮೀಟಿಂಗ್.
ಚರ್ಚಾ ವಿಷಯ: ಸಮೂಹದ ಅಸಮರ್ಪಕ ಸುರಕ್ಷತೆಯ ಬಗ್ಗೆ ಬಿಲ್ಡರ್ ನೇಮಿಸಿದ ಸೆಕ್ಯೂರಿಟಿ ಏಜೆನ್ಸಿಯ ಮುಖ್ಯಸ್ಥನೊಂದಿಗೆ ವಿಚಾರ ವಿನಿಮಯ.
ಪಾತ್ರಪರಿಚಯ:
ಸೆಕ್ಯೂರಿಟಿ ಏಜೆನ್ಸಿಯ ಮುಖ್ಯಸ್ಥ - ಉತ್ತರಭಾರತೀಯ. ( ಸೆಮು)
ಮುಖ್ಯಸ್ಥನ ಸಹಾಯಕ ಅಧಿಕಾರಿ - ನಮ್ಮವನೇ ಆದ ಕನ್ನಡಿಗನೊಬ್ಬ. ( ಸೆಮುಸ)
ಸುಮಾರು ಇಪ್ಪತ್ತು ಫ್ಲ್ಯಾಟ್ ಮಾಲೀಕರು. ( ಶೇಕಡಾ ಅರವತ್ತರಷ್ಟು ಮಾಲೀಕರು ಕನ್ನಡಿಗರಾಗಿದ್ದಾಗ್ಯೂ ಈ ಮೀಟಿಂಗಿಗೆ ಬಂದವರಲ್ಲಿ ಕೇವಲ ಮೂರು ಜನ ಕನ್ನಡಿಗರು ಮಾತ್ರ. ಎಂಟು ಜನ ತಮಿಳರು, ಐದು ಜನ ಮಲೆಯಾಳಿಗಳು, ಮಿಕ್ಕ ನಾಲ್ವರು ಬಂಗಾಲ ಮತ್ತು ಉತ್ತರ ಭಾರತೀಯರು.) ( ಮಾ)
ಚರ್ಚೆಯಲ್ಲಿ ಮಾಲಿಕರ ಕಡೆಯಿಂದ ಮುಂದಾಳತ್ವ ವಹಿಸಿದ್ದು ಒಬ್ಬ ತಮಿಳ. ಅವನಿಗೆ ಕುಮ್ಮಕ್ಕು ಕೊಟ್ಟದ್ದು ಇನ್ನೊಬ್ಬ ತಮಿಳ ಹಾಗೂ ಮಲೆಯಾಳಿ. ಕನ್ನಡಿಗರ್ಯಾರೂ ತುಟಿ ಬಿಚ್ಚಲಿಲ್ಲ.
ನಡೆದ ಸಂಭಾಷಣೆಯ ಸಂಕ್ಷಿಪ್ತ ವಿವರ ಹೀಗಿದೆ.
ಮಾ: ನಮ್ಮ ಸಮೂಹದಲ್ಲಿ ಇನ್ನೂರಕ್ಕೂ ಹೆಚ್ಚು ಫ್ಲಾಟುಗಳಿದ್ದರೂ ಇದುವರೆಗೂ ನೂರಕ್ಕೂ ಹೆಚ್ಚಾಗಿ ಫ್ಲಾಟುಗಳು ಖಾಲಿಯಿವೆ. ಬಿಲ್ಡರ್ ಇನ್ನೂ ಕೆಲಸ ಮುಗಿಸಿಲ್ಲವಾದ್ದರಿಂದ ಮಾಲಕರ ಅಸೋಸಿಯೇಶನ್ ಇನ್ನೂ ಸಮೂಹದ ಉಸ್ತುವಾರಿ ತೆಗೆದುಕೊಂಡಿಲ್ಲ. ಬಿಲ್ಡರ್ ನಿಮ್ಮನ್ನು ಸೆಕ್ಯೂರಿಟಿಗಾಗಿ ನೇಮಿಸಿದ್ದಾರೆ. ಆದೆರೆ ಕೆಲಸ ಸಮರ್ಪಕವಾಗಿಲ್ಲ. ಖಾಲಿ ಮನೆಗಳಲ್ಲಿ ಫಿಟ್ಟಿಂಗುಗಳು ಕಳ್ಳತನ ಆಗ್ತಾಯಿದೆ. ನಿಮ್ಮ ಗಾರ್ಡುಗಳು ಇರಬೇಕಾದ ಕಡೆ ಇರೋಲ್ಲ. ಅವರ ಸಂಖ್ಯೆಯೂ ತೀರ ಕಡಿಮೆ. ಯಾರು ಬೇಕಾದರೂ ಯಾವಾಗ ಬೇಕಾದರೂ ಸಮೂಹದ ಒಳಗೆ ಸ್ವಛ್ಛಂದವಾಗಿ ಓಡಾಡಿಕೊಂದು ಇರಬಹುದು. ಹೇಳುವವರು ಕೇಳುವವರು ಯಾರೂ ಇಲ್ಲ. ಇದ್ರ ಜೊತೆಗೇ ನಿಮ್ಮ ಗಾರ್ಡುಗಳು ಉಧ್ಧಟತನದಿಂದ ವರ್ತಿಸುತ್ತಾರೆ. ತಮ್ಮ ಕೆಲಸವೊಂದನ್ನು ಬಿಟ್ಟು ಮನೆಕೆಲಸ ಮಾಡುವ ಹೆಂಗಸರನ್ನು ಒದಗಿಸುವ ಬ್ರೋಕರ್ ಆಗಿಯೋ ಅಥವಾ ಹಾಲು , ಪೇಪರ್ ಮಾರುವವರ ಏಜೆಂಟ್ಗಳಾಗಿಯೋ ಕೆಲಸ ನಡೆಸಿದ್ದಾರೆ.
ಹೀಗೆ ಮುಂದುವರಿಯೋದು ಸಾಧ್ಯವಿಲ್ಲ. ನೀವು ಕೂಡಲೆ ಗಾರ್ಡ್ಗಳನ್ನು ಬದಲಿಸಿ, ಅವರ ಸಂಖ್ಯೆಯನ್ನು ಹೆಚ್ಚಿಸಬೇಕು.
ಸೆಮು: ಮನ್ನಿಸಬೇಕು. ನಮ್ಮನ್ನು ನೇಮಕಾತಿ ಮಾಡಿದ್ದು ಬಿಲ್ಡರ್ ಸಾಹೇಬರು. ಅದೂ ಅಲ್ಲದೆ ನಮ್ಮ ಕರ್ತವ್ಯ ಈ ಸಮೂಹದ ನಿರ್ಮಾಣದ ಸಮಯದಲ್ಲಿ ಆಸ್ತಿ ಪಾಸ್ತಿಗಳ ರಕ್ಷಣೆ ಯಷ್ಟೆ ಹೊರತು, ನೀವು ಹೇಳುವ ಹಾಗೆ ಪ್ರತಿಯೊಬ್ಬರ ಕಾವಲು ಅಲ್ಲ. ನಮಗೆ ಕೊಡುತ್ತಿರುವ ಸಂಭಾವನೆಯೂ ಈ ಕೆಲಸಕ್ಕೆ ತಕ್ಕ ಹಾಗೆಯೇ ಇದೆ. ನೀವು ಹೇಳುವ ಹಾಗೆ ಸುರಕ್ಷೆ ಒದಗಿಸಲು ಸಾಧ್ಯ ಆದರೆ ಅದಕ್ಕೆ ನಮ್ಮ ಸಂಭಾವನೆಯೂ ಜಾಸ್ತಿ. ನೀವು ಹೇಳುವುದು ಸರಿಯೇ ಆದರೂ ಬಿಲ್ಡರ್ ಒಪ್ಪಿಗೆ ಯಿಲ್ಲದೆ ನಾವೇನೂ ಮಾಡುವಂತಿಲ್ಲ.
ಮಾ: ಬಿಲ್ಡರ್ನನ್ನು ಒಪ್ಪಿಸೋ ಭಾರ ನಮಗೆ ಬಿಡಿ. ನೀವು ನಮಗೆ ಬೇಕಾದ ಹಾಗೆ ಸುರಕ್ಷೆ ಒದಗಿಸಲು ಹೆಚ್ಚು ಹಣ ಕೊಡಿಸುತ್ತೇವೆ. ಆದರೆ ನಮಗೆ ಒಳ್ಳೆಯ ತರಬೇತಿ ಹೊಂದಿದ ಗಾರ್ಡ್ ಗಳನ್ನು ಒದಗಿಸಬೇಕು.
ಸೆಮು: ನೀವು ಕೇಳುವಂತಹ ಸುರಕ್ಷೆ ಕೊಡಬೇಕಾದರೆ ನಮ್ಮ ಮೇಲಿರುವ ನಿರ್ಬಂಧಗಳನ್ನು ತೆಗೆದುಹಾಕಬೇಕಾಗುತ್ತೆ. ಎಲ್ಲ ಗಾರ್ಡ್ ಗಳು ಸ್ಥಳೀಯರೇ ಆಗಿರಬೇಕು ಅಂತ ನೀವು ಹೇಳಿದರೆ ಅದು ಸಾಧ್ಯವಿಲ್ಲ. ಸ್ಥಳಿಯರನ್ನು ತರಬೇತಿ ಮಾಡುವುದಕ್ಕಂತೂ ನಮ್ಮಿಂದ ಸಾಧ್ಯವಿಲ್ಲ. ಅವ್ರ್ಯಾರಿಗೂ ಸ್ವಲ್ಪವೂ ಕ್ಷಮತೆಯಿಲ್ಲ. ಕಲಿಯಲು ಇಛ್ಛೆಯೂ ಇಲ್ಲ. ಅವರನ್ನು ತಂದು ಹಾಕಿದರೆ ಈ ಬ್ರೋಕರ್ ಕೆಲಸ ಮಾಡುವ ಪಿಡುಗು ನಿಮಗೆ ತಪ್ಪುವುದಿಲ್ಲ. ಯಾವ ನಿರ್ಬಂಧವೂ ಇಲ್ಲದೆ ನಮಗೆ ಉತ್ತರ ಭಾರತೀಯರನ್ನಾಗಲಿ, ತಮಿಳರನ್ನಾಗಲೀ ನೇಮಿಸುವ ಸ್ವಾತಂತ್ರ್ಯ ಕೊಟ್ಟು ಅವರ ಸಂಬಳವನ್ನೂ ಹೆಚ್ಚಿಸಿದರೆ ಮಾತ್ರ ಇದು ಸಾಧ್ಯ. ಇನ್ನು ನಿರ್ಣಯ ನಿಮಗೆ ಬಿಟ್ಟದ್ದು.
ಸೆಮುಸ: ಹೌದು ಸಾರ್! ಸುತ್ತಮುತ್ತಲಿನ ಹಳ್ಳಿಯ ಕನ್ನಡದವರನ್ನು ಕೆಲಸಕ್ಕೆ ತೊಗೊಂಡರೆ ನಮಗೆ ತಲೆನೋವೆ ಹೆಚ್ಚು. ಅವರ ಮನೆಯವರನ್ನೆಲ್ಲಾ ಕರಕೊಂಡು ಬಂದು ರಾಧ್ಧಾಂತ ಮಾಡ್ತಾರೆ. ಬೇರೆಯವರಾದ್ರೆ ಮುಚ್ಕೊಂಡು ಕೆಲ್ಸಾ ಮಾಡ್ತಾರೆ. ಎಷ್ಟಾದ್ರೂ ಸಮಯ ಕೆಲ್ಸಾ ಮಾಡ್ತಾರೆ. ನಮ್ಮವರಾದ್ರೆ ಬರೀ ರೂಲ್ಸು ತೆಗೀತಾರೆ.
ಮಾ: ಹಾಗೆಯೇ ಆಗಲಿ. ಆದರೆ ನೀವು ಗಾರ್ಡ್ ಗಳನ್ನು ಪ್ರತಿ ತಿಂಗಳಿಗೊಮ್ಮೆ ಬದಲಾಯಿಸಿ. ಯಾವ ರೀತಿಯಲ್ಲೂ ಅವರ ಇಲ್ಲಿ ಬೇರೂರದೇ ಇರೋಥರ ನೋಡ್ಕೋಬೇಕು.
ಅಲ್ಲಿದ್ದ ಕನ್ನಡಿಗರು ಯಾರು ಸೊಲ್ಲೆತ್ತಲಿಲ್ಲ. ಸುಮ್ಮನೆ ಗೋಣು ಆಡಿಸಿದರು. ಮೀಟಿಂಗ್ ಮುಕ್ತಾಯವಾಯಿತು.
ಈ ಚರ್ಚೆಯಾದ ಆರು ತಿಂಗಳು ಸಂದಿವೆ. ಸಮೂಹದಲ್ಲೆಲ್ಲೂ ಕನ್ನಡದ ಕಲರವ ಕೇಳಿಸೋಲ್ಲ. ಗಾರ್ಡ್ ಗಳೆಲ್ಲರೂ ಪರಭಾಷೀಯರೇ. ಸೆಕ್ಯೂರಿಟಿ ಇಂಪ್ರೂವ್ ಆಗಿದೆ ಅಂತ ಎಲ್ಲರ ಅನಿಸಿಕೆ. ಮಾಲೀಕರ ಅಸೋಸಿಯೇಶನ್ನಲ್ಲಿ ಕೂಡ ತಮಿಳರದೇ ಅಟಾಟೋಪ. ತೋರಿಕೆಗೆ ಕನ್ನಡಿಗ ವಯಸ್ಕರೊಬ್ಬರಿಗೆ ಆನರೆರಿ ಅಧ್ಯಕ್ಷರ ಪಟ್ಟ ಕಟ್ಟಿದ್ದಾರೆ.
“ಆದದ್ದೆಲ್ಲಾ ಒಳಿತೇ ಆಯಿತು” ಅಂತ ಪುರಂದರದಾಸರ ಕೀರ್ತನೆ ಎಲ್ಲೋ ದೂರದ ರೇಡಿಯೋನಲ್ಲಿ ಕೇಳಿಬರುತ್ತಿದೆ.
ನಿಮಗೇನನ್ನಿಸುತ್ತೆ? ಒಳಿತೇ ಆಯಿತೆ?
- ನವರತ್ನ ಸುಧೀರ್