ಥಾಮಸ್ ಎಡಿಸನ್ ಅವರ ಉದಾತ್ತ ಚಿಂತನೆಗಳು

ಥಾಮಸ್ ಎಡಿಸನ್ ಅವರ ಉದಾತ್ತ ಚಿಂತನೆಗಳು

ಥಾಮಸ್ ಆಲ್ವ ಎಡಿಸನ್ ಯಾರಿಗೆ ಗೊತ್ತಿಲ್ಲ? ಎಡಿಸನ್ ಓರ್ವ ಅಮೇರಿಕಾದ ವಿಜ್ಞಾನಿ ಹಾಗೂ ಸಂಶೋಧಕ. ಅವರು ಹಲವಾರು ವಸ್ತುಗಳನ್ನು ಸಂಶೋಧಿಸಿದ ಖ್ಯಾತ ಅನ್ವೇಷಕ ಎಂದು ಹೆಸರುವಾಸಿ. ಎಡಿಸನ್ ೧೮೪೭ ರಿಂದ ೧೯೩೧ರ ಕಾಲಘಟ್ಟದಲ್ಲಿ ಬದುಕಿದ್ದರು. ಬಾಲ್ಯದ ಬಡತನದ ಜೀವನ, ದಡ್ಡ ಹುಡುಗ ಎಂಬೆಲ್ಲಾ ಕೀಳಿರಿಮೆಗಳಿಂದ ಹೊರಬಂದು ಅವರು ಗಳಿಸಿದ ಕೀರ್ತಿ ಸದಾ ಅನುಕರಣೀಯ. ಅವರ ಬಾಳಿನ ಎರಡು ಘಟನೆಗಳನ್ನು ಇಲ್ಲಿ ಬರೆಯುತ್ತಿರುವೆ. ಅದರಿಂದ ಎಡಿಸನ್ ಅವರ ವ್ಯಕ್ತಿತ್ವ ಎಂಥದ್ದು ಎಂದು ಅರ್ಥವಾಗುತ್ತದೆ.

ಒಮ್ಮೆ ಎಡಿಸನ್ ವಿದ್ಯುತ್ ಬಲ್ಬ್ ಒಳಗೆ ಅಳವಡಿಸಬಹುದಾದ ಲೋಹದ ತಂತಿಯ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಅವರ ಬಳಿ ಹಲವಾರು ಸಹಾಯಕರೂ ಕೆಲಸ ಮಾಡುತ್ತಿದ್ದರು. ಹಲವಾರು ಸಂಶೋಧನೆಗಳ ವಿಫಲತೆಗಳ ನಂತರ ಕಡೆಗೊಮ್ಮೆ ಎಡಿಸನ್ ಮತ್ತು ತಂಡ ಸುಧಾರಿತ ವಿದ್ಯುತ್ ಬಲ್ಬ್ ತಯಾರಿಸುವಲ್ಲಿ ಸಫಲರಾಗುತ್ತಾರೆ. ಆ ಬಲ್ಬನ್ನು ಒಡೆದು ಹೋಗದಂತೆ ಎತ್ತರವಾದ ಸ್ಥಳದಲ್ಲಿ ಇರಿಸಲು ಎಡಿಸನ್ ತನ್ನ ಸಹಾಯಕ ಹುಡುಗನಿಗೆ ಹೇಳುತ್ತಾರೆ. ಆ ಹುಡುಗನಿಗೋ ಒಂದು ರೀತಿಯ ಭಯ. ಎಲ್ಲಿ ತನ್ನ ಕೈಯಿಂದ ಆ ಬಲ್ಬ್ ಒಡೆದು ಹೋಗುವುದೋ ಎಂದು. ಅದೇ ಅಂಜಿಕೆಯಿಂದ ಆ ಬಲ್ಬನ್ನು ಮೇಲಿನ ಮಹಡಿಯಲ್ಲಿ ಇರಿಸಲು ಮೆಟ್ಟಲೇರುತ್ತಾನೆ. ಅವನ ಹೆದರಿಕೆಗೆ ಸರಿಯಾಗಿ ಅವನ ಕಾಲು ಜಾರುತ್ತದೆ ಮತ್ತು ಮೊದಲೇ ನಡುಗುತ್ತಿದ್ದ ಅವನ ಕೈಗಳಿಂದ ಆ ಬಲ್ಬ್ ಜಾರಿ ಕೆಳಗಡೆ ಬಿದ್ದು ಒಡೆದು ಚೂರಾಗಿ ಬಿಡುತ್ತದೆ. ನೋಡ ನೋಡುತ್ತಿದ್ದಂತೆ ಹಲವಾರು ಸಮಯದ ಸಂಶೋಧನೆ ಒಡೆದು ಚೂರು ಚೂರಾಗಿ ಹೋಗಿತ್ತು.

ಎಡಿಸನ್ ಎದೆಗುಂದಲಿಲ್ಲ ಮತ್ತೆ ಸಂಗಡಿಗರ ಜೊತೆ ಸೇರಿ ಒಂದು ದಿನದಲ್ಲಿ ಮತ್ತೊಂದು ಬಲ್ಬ್ ತಯಾರು ಮಾಡಿದರು. ಆ ಬಲ್ಬನ್ನೂ ಮೇಲಿನ ಮಹಡಿಯಲ್ಲಿ ಇರಿಸಬೇಕಿತ್ತು. ಎಡಿಸನ್ ಮತ್ತೆ ಆ ಮೊದಲ ಬಲ್ಬ್ ಬೀಳಿಸಿದ ಹುಡುಗನನ್ನೇ ಕರೆದ. ಮೇಲೆ ಇರಿಸಿ ಬಾ ಎಂದು ಹೇಳಿದ. ಉಳಿದ ಸಹಾಯಕರಿಗೆ ಸಿಟ್ಟು ಬಂತು, ಅದರ ಜೊತೆ ಆಶ್ಚರ್ಯವೂ ಆಯಿತು. ಆದರೆ ಎಡಿಸನ್ ಗೆ ಆ ಬಲ್ಬ್ ಗಿಂತಲೂ ಆ ಹುಡುಗನ ಆತ್ಮಸ್ಥೈರ್ಯವನ್ನು ಸದೃಢಗೊಳಿಸುವುದು ಮುಖ್ಯವಾಗಿತ್ತು. ಬಲ್ಬ್ ಒಡೆದು ಹೋದರೆ ಮತ್ತೊಂದನ್ನು ತಯಾರು ಮಾಡಬಹುದು. ಆದರೆ ಆ ಹುಡುಗನ ಆತ್ಮವಿಶ್ವಾಸ ಕುಂದಿ ಹೋದರೆ ಅವನ ಜೀವನವೇ ಹಾಳಾಗಿ ಹೋಗುವ ಸಂಭವವಿತ್ತು. ಆ ಕಾರಣದಿಂದ ಎಡಿಸನ್ ಅವರು ಈ ನಿರ್ಧಾರ ತೆಗೆದುಕೊಂಡರು. ಅವರ ಅಚಲ ನಿರ್ಧಾರವನ್ನು ಆ ಹುಡುಗ ಸಮರ್ಥಿಸಿಕೊಂಡ. ಸರಿಯಾಗಿ ಆ ಬಲ್ಬನ್ನು ಮೇಲಿನ ಮಹಡಿಯ ಮೇಲೆ ಇರಿಸಿದ. ಇದರಿಂದ ಅವನ ಕೀಳಿರಿಮೆ ಹಾಗೂ ಭಯಗಳು ಬಹುತೇಕ ನಿವಾರಣೆಯಾಗಿ ಅವನಲ್ಲಿ ಆತ್ಮವಿಶ್ವಾಸ ಮೂಡಿತು.

ಎಡಿಸನ್ ಜೀವನದ ಮತ್ತೊಂದು ಪ್ರಸಂಗದಲ್ಲಿ ಇದೇ ವಿದ್ಯುತ್ ಬಲ್ಬ್ ಸಂಶೋಧಿಸಿದಕ್ಕೆ ಎಡಿಸನ್ ಅವರನ್ನು ಸಂಸ್ಥೆಯೊಂದು ಗೌರವಿಸಿ, ಸನ್ಮಾನ ಸಮಾರಂಭ ಇಟ್ಟುಕೊಂಡಿತ್ತು. ಆ ಸಮಾರಂಭದಲ್ಲಿ ಓರ್ವ ಮಹಿಳೆ ಎಡಿಸನ್ ಅವರಲ್ಲಿ ಪ್ರಶ್ನೆ ಮಾಡುತ್ತಾರೆ ‘ ನೀವು ವಿದ್ಯುತ್ ಬಲ್ಬ್ ಒಳಗಡೆ ಅಳವಡಿಸುವ ಸೂಕ್ತ ಲೋಹಕ್ಕಾಗಿ ಎಷ್ಟೊಂದು ಪ್ರಯೋಗಗಳನ್ನು ಮಾಡಿದಿರಿ. ನೀವು ಸುಮಾರು ಐವತ್ತಕ್ಕೂ ಅಧಿಕ ಬಗೆಯ ಲೋಹದ ತಂತಿಗಳನ್ನು ಬಳಸಿ ವಿಫಲರಾದಿರೆಂದು ತಿಳಿದುಕೊಂಡೆ. ಆ ಮೂಲಕ ನಿಮ್ಮ ಸಂಶೋಧನೆಗೆ ತೆಗೆದುಕೊಂಡ ಸಮಯ ಹಾಳು ಮಾಡಿದಂತೆ ಆಗಿಲ್ಲವೇ?’ ಎಂದರು. ಅದಕ್ಕೆ ಎಡಿಸನ್ ಹೇಳಿದರು. ‘ ನಿಮ್ಮ ಮಾತು ಸತ್ಯವಲ್ಲ. ನಾನು ಯಾವ ಯಾವ ಲೋಹದ ತಂತಿಯನ್ನು ವಿದ್ಯುತ್ ಬಲ್ಬ್ ಒಳಗೆ ಬಳಸಿ ವಿಫಲನಾದೆನೋ ಅವುಗಳ ಬಳಕೆ ವಿದ್ಯುತ್ ದೀಪಕ್ಕೆ ಆಗಲಾರದು ಎಂಬ ಸಂಶೋಧನೆಯಾಯಿತಲ್ವಾ? ಇದರಿಂದ ನಾನು ಬಲ್ಬ್ ಕಂಡು ಹಿಡಿಯಲು ಒಂದು ಪಕ್ಷ ವಿಫಲನಾಗುತ್ತಿದ್ದರೂ ಭವಿಷ್ಯದಲ್ಲಿ ಯಾರಾದರೂ ಸಂಶೋಧಕರು ನಾನು ಬಳಸಿ ವಿಫಲವಾದ ಲೋಹಗಳನ್ನು ಮತ್ತೊಮ್ಮೆ ತಮ್ಮ ಪ್ರಯೋಗಕ್ಕಾಗಿ ಬಳಸುವುದು ಅವಶ್ಯಕವಿಲ್ಲ ಅಲ್ಲವೇ?’ 

ಥಾಮಸ್ ಆಲ್ವ ಎಡಿಸನ್ ಅವರು ಎಷ್ಟು ದೊಡ್ಡ ವಿಜ್ಞಾನಿಯಾಗಿದ್ದರೋ, ಅಷ್ಟೇ ದೊಡ್ಡ ಆದರ್ಶ ವ್ಯಕ್ತಿಯಾಗಿದ್ದರು ಎಂದು ಈ ಎರಡು ಪ್ರಸಂಗಗಳಿಂದ ತಿಳಿದು ಬರುತ್ತದೆ. ಇಂತಹ ಹಲವಾರು ಪ್ರಸಂಗಗಳು ಎಡಿಸನ್ ಜೀವನದಲ್ಲಿ ನಡೆದಿವೆ. 

ಚಿತ್ರ ಕೃಪೆ: ಅಂತರ್ಜಾಲ ತಾಣ

 

 

Comments

Submitted by padmanabhasharma Fri, 10/09/2020 - 14:13

ತಾನೂ ಸೋತಂತೆ ಮತ್ತೊಬ್ಬರೂ ಕಾಲ ಹಣ ಸಮಯವನ್ನು ಹಾಳುಮಾಡಿಕೊಳ್ಳುವುದು ಬೇಡವೇ ಬೇಡವೆಂದರೇ ಅವನೇ ನಿಜವಾದ ಮನುಷ್ಯನು