ದಕ್ಷಿಣ ಕನ್ನಡದ ಚಿಟ್ಟೆಗಳು

ದಕ್ಷಿಣ ಕನ್ನಡದ ಚಿಟ್ಟೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ದೀಪಕ್ ನಾಯ್ಕ್, ವಿಶ್ವಾಸ, ದೇವಿಪ್ರಸಾದ್ ಕೆ.ಯನ್.
ಪ್ರಕಾಶಕರು
ನೇಚರ್ ಕ್ಲಬ್, ವಿವೇಕಾನಂದ ಕಾಲೇಜು, ನೆಹರುನಗರ, ಪುತ್ತೂರು
ಪುಸ್ತಕದ ಬೆಲೆ
ರೂ. 450/-

ಚಿಟ್ಟೆಗಳು ವಿಭಿನ್ನವಾದ ದೇಹ ರಚನೆಯಿಂದಾಗಿ ತುಂಬಾ ಆಕರ್ಷಣೀಯ ವಾಗಿರುತ್ತವೆ. ಪ್ರಾಣಿಜಗತ್ತಿನ ಅಪೂರ್ವ ಜೀವಿಗಳಿವು. ಹೂವಿಗೂ ಚಿಟ್ಟೆಗೂ ಪ್ರಕೃತಿಯಲ್ಲಿ ಅವಿನಾಭಾವ ಸಂಬಂಧ. ಹತ್ತಾರು ವಿಧದ ಹೂಗಳನ್ನು ಮನೆಯ ಸುತ್ತ ನೆಟ್ಟು ಬೆಳೆಸಿದರೆ ಚಿಟ್ಟೆಗಳು ಹೂಗಳಿಗೆ ಆಕರ್ಷಿತವಾಗುತ್ತವೆ. ಆಗ ಹತ್ತಿರದಿಂದ ನೋಡಲು ಅಂದ.
ನಿಸರ್ಗದ ಆಹಾರ ಸರಪಳಿಯಲ್ಲಿ ಚಿಟ್ಟೆಗಳಿಗೆ ವೈಶಿಷ್ಟ್ಯವಾದ ಪಾತ್ರ. ಇವುಗಳಿಗೆ ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಮಹತ್ತರ ಜವಾಬ್ದಾರಿ. ಚಿಟ್ಟೆ ವೀಕ್ಷಣೆ, ಅವುಗಳ ಅಧ್ಯಯನ, ದಾಖಲೀಕರಣಗಳಲ್ಲಿ ತೊಡಗಿಸಿಕೊಂಡರೆ ಪರೋಕ್ಷವಾಗಿ ಚಿಟ್ಟೆಗಳನ್ನು ಸಂರಕ್ಷಿಸಿದಂತಾಗುತ್ತದೆ.
ಚಿಟ್ಟೆಯ ಆಹಾರ ಮತ್ತು ಅತಿಥೇಯ ಸಸ್ಯಗಳು ನಾಶವಾಗದಂತೆ ಸಂರಕ್ಷಣೆ ಮಾಡಬೇಕು. ಮನೆಯ ಸುತ್ತಮುತ್ತ ಹಾಗೂ ವಿವಿಧ ಭೂಪ್ರದೇಶಗಳಲ್ಲಿ ಇಂತಹ ಸಸ್ಯಗಳನ್ನು ನೆಟ್ಟು ಬೆಳೆಸಿ ಅವುಗಳು ಸದಾ ಚಿಟ್ಟೆಗಳಿಗೆ ದೊರೆಯುವಂತೆ ಮಾಡಬೇಕು. ಪರಿಸರ ಮಾಲಿನ್ಯ, ಭೂಪ್ರದೇಶದ ಬದಲಾವಣೆ, ಕೀಟನಾಶಕ ಬಳಕೆ ಮೊದಲಾದವುಗಳಿಂದ ಇವುಗಳ ಸಂತತಿ ಕಡಿಮೆಯಾಗುತ್ತಿದೆ.
ಚಿಟ್ಟೆ ವೀಕ್ಷಣೆಯ ಅವಧಿಯಲ್ಲಿ ಯಾವುದೇ ರೀತಿಯ ದೈಹಿಕ ಹಿಂಸೆ ನೀಡಬಾರದು. ಅದನ್ನು ಹಿಡಿಯಲೇ ಬೇಕಾದ ಸಂದರ್ಭದಲ್ಲಿ ವೈಜ್ಞಾನಿಕ ಸಾಧನವನ್ನು ಉಪಯೋಗಿಸಿ ಅಧ್ಯಯನದ ಬಳಿಕ ನಿಸರ್ಗಕ್ಕೆ ಪುನಃ ಬಿಟ್ಟುಬಿಡಬೇಕು. ಕೆಲವರಿಗೆ ಚಿಟ್ಟೆ ಹಿಡಿದು ಸಂಗ್ರಹಿಸಿಕೊಳ್ಳುವ ಕೆಟ್ಟ ಹವ್ಯಾಸವಿದೆ. ಇದಕ್ಕೆ ಆಸ್ಪದ ಕೊಡಬಾರದು.
ಚಿಟ್ಟೆ ವೀಕ್ಷಣೆ ಹವ್ಯಾಸ ಬೆಳೆಸಿಕೊಳ್ಳುವವರು ಮತ್ತು ಚಿಟ್ಟೆಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವವರು ತಿಳಿದುಕೊಳ್ಳಬೇಕಾದ ಅಂಶಗಳು ಹಲವಾರಿವೆ. ಉದಾ: ಚಿಟ್ಟೆಯ ಜೀವನಚಕ್ರ, ದೇಹರಚನೆ, ಸ್ವಭಾವ, ವೈಶಿಷ್ಟ್ಯಗಳು.. ಚಿಟ್ಟೆ ವೀಕ್ಷಣೆಯು ಯಾರ ಸಹಾಯವಿಲ್ಲದೆ ನಾವಾಗಿಯೇ ರೂಢಿಸಿಕೊಳ್ಳಬಹುದಾದ ಹವ್ಯಾಸ.
‘ದಕ್ಷಿಣ ಕನ್ನಡದ ಚಿಟ್ಟೆಗಳು’ ಪುಸ್ತಕವು ಅಧ್ಯಯನಕ್ಕೊಂದು ಕೈಪಿಡಿ. ಪುತ್ತೂರಿನ ವಿವೇಕಾನಂದ ಕಾಲೇಜಿನ ‘ನೇಚರ್ ಕ್ಲಬ್’ ಪ್ರಾಯೋಜಿತ ‘ಚಿಟ್ಟೆಗಳ ಅಧ್ಯಯನ’ ಯೋಜನೆಯಲ್ಲಿ ದಾಖಲಾದ ಚಿಟ್ಟೆಗಳ ವಿವರಗಳು ಪುಸ್ತಕದ ಹೂರಣ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ರೀತಿಯ ಭೂಪ್ರದೇಶಗಳಲ್ಲಿ ಕ್ಷೇತ್ರ ಕಾರ್ಯ ನಡೆಸಿ ದಾಖಲಿಸಿದ್ದಾರೆ. ನೂರಕ್ಕೂ ಮಿಕ್ಕಿ ಚಿಟ್ಟೆಗಳ ಜೀವನಕ್ರಮದ ವಿವರಣೆಯಿದೆ. ವೈಜ್ಞಾನಿಕ ಮಾಹಿತಿಯಿದೆ. ಗುರುತಿಸಲು ವರ್ಣಚಿತ್ರಗಳಿವೆ.
ವಿವೇಕಾನಂದ ಕಾಲೇಜಿನ ಸಸ್ಯಶಾಸ್ತ್ರ ಪ್ರಾಧ್ಯಾಪಕ ದೇವಿಪ್ರಸಾದ್ ಇವರ ನಿರ್ದೇಶನದಂತೆ ಬಿಎಸ್ಸಿ ವಿದ್ಯಾರ್ಥಿಗಳಾದ ದೀಪಕ್ ನಾಯ್ಕ್, ವಿಶ್ವಾಸ್ ಕ್ಷೇತ್ರಭೇಟಿ ಮಾಡಿ ಚಿಟ್ಟೆ ಅಧ್ಯಯನ ಮಾಡಿದ್ದಾರೆ. ವಿವಿಧ ಸಮ್ಮೇಳನಗಳಲ್ಲಿ ಮಂಡನೆ ಮಾಡಿದ್ದಾರೆ. ಇವರೆಲ್ಲರ ಅಧ್ಯಯನ ವಿಚಾರಗಳ ಸಾರವಾಗಿ ಪುಸ್ತಕ ರೂಪುಗೊಂಡಿದೆ.