ದಕ್ಷಿಣ ಕನ್ನಡದ ದೇವರಗುಂಡಿ ಜಲಪಾತ


ಸಣ್ಣಗೆ ಸುರಿವ ಮಳೆಯಲ್ಲಿ ಭೋರ್ಗರೆವ ಜಲಪಾತದ ಸಮ್ಮುಖಕ್ಕೆ ಹೋಗಿ ನಿಲ್ಲುವುದೇ ಒಂದು ಅಪೂರ್ವ ಅನುಭವ. ಅದರಲ್ಲೂ ಕಾಡ ನಡುವಿನ ಹಸಿರು ರಾಶಿಯ ನಡುವೆ ನೊರೆ ಹಾಲಿನಂತೆ ನೀರು ಧುಮ್ಮಿಕ್ಕುತ್ತಿದ್ದರೆ ಅದರ ಸಂಭ್ರಮವೇ ಬೇರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ತೊಡಿಕಾನ ಎಂಬ ಪುಟ್ಟ ಹಳ್ಳಿಯ ದಟ್ಟ ಕಾಡಿನ ಮಧ್ಯೆ ತನ್ನ ಪಾಡಿಗೆ ತಾನು ಹರಿಯುತ್ತಿರುವ ಪುಟ್ಟ ತೊರೆಯೊಂದು ಸೃಷ್ಟಿಸಿರುವ ದೇವರಗುಂಡಿ ಫಾಲ್ಸ್ ಇಂತಹದೊಂದು ಅನಿರ್ವಚನೀಯ ಅನಂದವನ್ನು ನೀಡುತ್ತದೆ. ದೇವರಗುಂಡಿ ಪ್ರಕೃತಿ ಪ್ರೇಮಿಗಳು ಮತ್ತು ಚಾರಣಿಗರ ಹಾಟ್ ಸ್ಪಾಟ್. ಆಸುಪಾಸಿನ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಬದುಕಿನ ಪಾಠ ಹೇಳಿಕೊಡುವ ಬೆಸ್ಟ್ ಪ್ಲೇಸ್.
ಸುಮಾರು 20 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ನೀರರಾಶಿ ಇಲ್ಲಿನ ಪ್ರಧಾನ ಆಕರ್ಷಣೆ. ಜತೆಗೆ ಅದು ಹರಿದು ಹೋಗುವ ದಾರಿಯಲ್ಲಿ ಎರಡು ಹಂತಗಳಲ್ಲಿ ಸೃಷ್ಟಿಸುವ ಪುಟ್ಟ ಪುಟ್ಟ ಜಲಧಾರೆ ಕಣ್ಣಿಗೆ ಹಬ್ಬ. ನೀರು ಬೀಳುವ ಜಾಗ ವಿಶಾಲವಾಗಿದ್ದು, ತುಂಬ ಅಪಾಯಕಾರಿ. ಏಕೆಂದರೆ, ಅದರ ಆಳದ ಬಗ್ಗೆ ತಲೆಗೊಂದು ಮಾತು ಕೇಳಿಬರುತ್ತೆ. ಆದರೆ, ಅದರ ತೊರೆಗಳಂತೂ ಸೇಫ್, ಸಾಮಾನ್ಯವಾಗಿ ಎರಡು ಧಾರೆಗಳಾಗಿ ಸುರಿವ ನೀರು ಮಳೆಗಾಲದಲ್ಲಿ ಒಂದಾಗಿ ಧುಮ್ಮಿಕ್ಕುತ್ತದೆ.
ಈ ಜಲಪಾತವಿರುವುದು ತೊಡಿಕಾನ ಮಲ್ಲಿಕಾರ್ಜುನ ದೇವಾಲಯದಿಂದ ಸುಮಾರು 1.5 ಕಿ.ಮೀ. ದೂರದಲ್ಲಿ. ಕೊಡಗಿಗೆ ಸೇರಿದ ಪಟ್ಟಿ ಬೆಟ್ಟಗಳನ್ನು ಹತ್ತುತ್ತಾ ಸಾಗುವ ದಾರಿಯಲ್ಲಿ ಈ ಹಾದಿಯಲ್ಲಿ ಜೀಪು ಬಿಟ್ಟರೆ, ಬೇರೆ ವಾಹನ ಕಷ್ಟ. ದ್ವಿಚಕ್ರ ವಾಹನವೂ ಹೋಗೋಲ್ಲ. ಕಾಡ ನಡುವಿನ ದಾರಿಯಲ್ಲಿ ನಡೆದು ಹೋದರೆ ಅದೇ ಅಪೂರ್ವ ಸುಖ. ಬೃಹತ್ ಗಾತ್ರದ ಮರಗಳ ನಡುವೆ ನಡೆಯುತ್ತಾ ಹೋದರೆ ಎರಡು ಕಡೆ ತೊರೆಗಳು ಕಾಲೆಳೆಯುತ್ತವೆ. ಮುಂದೆ ಸಾಗಿ ಬಲಕ್ಕೆ ಸುಮಾರು 100 ಮೀಟರ್ ಅಡಕೆ ತೋಟದಲ್ಲಿ ಬಳುಕುತ್ತಾ ಹೋದರೆ ಹೋಗಿ ನಿಲ್ಲುವುದು ದೇವರಗುಂಡಿಯ ಸಮ್ಮುಖದಲ್ಲಿ. ಅಲ್ಲಿ ನೋಡಬೇಕಾಗಿರುವುದು ಕೇವಲ ನೀರಲ್ಲ. ಸುತ್ತಲೂ ಇರುವ ವನರಾಶಿ, ವೈವಿಧ್ಯಮಯ, ಬಣ್ಣ ಬಣ್ಣದ ಕಾಡ ಹೂಗಳೂ ಇಲ್ಲಿವೆ. ಕಲ್ಲುಬಂಡೆಗಳ ಮೇಲೆ ತುಂಬ ಹೊತ್ತು ಕುಳಿತು ದಣಿವಾರಿಸಿಕೊಳ್ಳಬಹುದು. ನೀರಿಗೆ ಕಾಲಿಳಿಬಿಟ್ಟು ಕೂತರೆ ಅಪೂರ್ವ ನಿರಾಳತೆ. ಯಾವ ಕಾರಣಕ್ಕೂ ನೀರು ಧುಮ್ಮಿಕ್ಕುವ ಭಾಗದ ಕೊಳಕ್ಕೆ ಇಳಿಯಬೇಡಿ ಎನ್ನುವುದು ಅನುಭವಿ ಚಾರಣಿಗರು ಮತ್ತು ಸ್ಥಳೀಯರ ಎಚ್ಚರಿಕೆ. ಯಾಕೆಂದರೆ ಇಲ್ಲಿ ನೀರಿನೊಳಗೆ ನಿಗೂಢ ಗುಹೆಗಳಿವೆಯಂತೆ. ಅಲ್ಲಿ ಹಾಕಿದ ನಿಂಬೆ ಹುಳಿ ಒಳಗಿನಿಂದಲೇ ದಾಟಿ ಬಂದು ತೊಡಿಕಾನ ದೇವಳದ ಬಳಿ ಕಾಣಿಸಿಕೊಳ್ಳುತ್ತದೆ ಎಂಬ ಐತಿಹ್ಯವಿದೆ. ಧುಮ್ಮಿಕ್ಕುವ ತೊರೆ ನಿಧಾನಕ್ಕೆ ಹರಿಯುತ್ತಾ ಮತ್ಯ ತೀರ್ಥ ನದಿಯನ್ನು ಸೇರುತ್ತದೆ. ಮತ್ಯ ತೀರ್ಥ ನದಿ ತೊಡಿಕಾನ ದೇವಳವನ್ನು ಬಳಸಿಕೊಂಡು ಪಯಸ್ವಿನಿಯೊಂದಿಗೆ ಒಂದಾಗುತ್ತದೆ.
ಮಾರ್ಗ : ಸುಳ್ಯದಿಂದ ತೊಡಿಕಾನಕ್ಕೆ ಸುಮಾರು 20 ಕಿ.ಮೀ. ಅಲ್ಲಿಂದ ದೇವರಗುಂಡಿಗೆ ಫಾಲ್ಸ್‌ಗೆ 1.5 ಕಿ.ಮೀ. ದೇವಳದವರೆಗೆ ಬಸ್ ಸೌಕರ್ಯ ಇದೆ. ಮಡಿಕೇರಿಯಿಂದ ಬರುವುದಾದರೆ ಭಾಗಮಂಡಲ ದಾರಿಯಲ್ಲಿ ಪಟ್ಟಿವರೆಗೆ ಬಂದು 4 ಕಿ.ಮೀ. ಬೆಟ್ಟ ಇಳಿಯಬೇಕು. "ಸಣ್ಣಗೆ ಸುರಿವ ಮಳೆಯಲ್ಲಿ ಭೋರ್ಗರೆವ ಈ ಜಲಪಾತದ ಸಮ್ಮುಖಕ್ಕೆ ಹೋಗಿ ನಿಲ್ಲುವುದೇ ಒಂದು ಅಪೂರ್ವ ಅನುಭವ. ಅದರಲ್ಲೂ ಕಾಡ ನಡುವಿನ ಹಸಿರು ರಾಶಿಯ ನಡುವೆ ನೊರೆ ಹಾಲಿನಂತೆ ನೀರು ಧುಮ್ಮಿಕ್ಕುತ್ತಿದ್ದರೆ ದೇವರಗುಂಡಿ ಜಲಪಾತದ ಸಂಭ್ರಮವೇ ಬೇರೆ." ಬನ್ನಿ ಒಮ್ಮೆ ಪ್ರವಾಸಕ್ಕೆ...
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು