ದಕ್ಷಿಣ ಭಾರತದ ಗಾಂಧಿ- ಕಾರ್ನಾಡ್ ಸದಾಶಿವ ರಾವ್

ದಕ್ಷಿಣ ಭಾರತದ ಗಾಂಧಿ- ಕಾರ್ನಾಡ್ ಸದಾಶಿವ ರಾವ್

ಮಂಗಳೂರಿನ ಹೃದಯಭಾಗದಲ್ಲಿ ಒಂದು ರಸ್ತೆ ಇದೆ. ಅದನ್ನು ಎಲ್ಲರೂ ಕೆ.ಎಸ್. ಆರ್. ರಸ್ತೆ  ಅಥವಾ ಕೆ.ಎಸ್. ರಾವ್ ರಸ್ತೆ ಎಂದು ಕರೆಯುತ್ತಾರೆ. ಅದರ ವಿಸ್ತರಣಾ ರೂಪ ಹಲವರಿಗೆ ಮರೆತೇ ಹೋಗಿದೆ ಎಂದು ಕಾಣುತ್ತದೆ. ಮಹಾತ್ಮಾ ಗಾಂಧಿ ರಸ್ತೆ ಎಂಜಿ ರಸ್ತೆ ಆದಂತೆ ಮುಂದೊಂದು ದಿನ ಅಪ್ರತಿಮ ಸ್ವಾತಂತ್ರ್ಯ ಯೋಧ, ಸಮಾಜ ಸೇವಕ ಕಾರ್ನಾಡು ಸದಾಶಿವ ರಾವ್ ಅವರನ್ನು ನಮ್ಮ ಮುಂದಿನ ಪೀಳಿಗೆ ಕೇವಲ ಕೆ.ಎಸ್. ಆರ್ ಎಂದು ಗುರುತಿಸತೊಡಗುತ್ತದೆ ಎಂಬುದೇ ಬೇಸರದ ಸಂಗತಿ ಅಲ್ಲವೇ? ನಮ್ಮ ಸರಕಾರಗಳಿಗೂ ಯಾವುದಾದರೂ ರಸ್ತೆಗೆ, ವೃತ್ತಕ್ಕೆ ಅಥವಾ ಚೌಕಕ್ಕೆ ಮಹನೀಯರ ಹೆಸರು ಇಡಲಷ್ಟೇ ಆತುರ. ಆ ಮಹನೀಯರ ಬಗ್ಗೆ, ಅವರು ದೇಶಕ್ಕಾಗಿ, ಸಮಾಜಕ್ಕಾಗಿ ಮಾಡಿದ ಸತ್ಕಾರ್ಯಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶ ಇಲ್ಲವೇ ಇಲ್ಲ. ಆದುದರಿಂದಲೇ ಮಂಗಳೂರಿನಾದ್ಯಂತ ಹಲವಾರು ಮಹನೀಯರು ಕೇವಲ ಹೆಸರಿಗೆ ಮಾತ್ರ (ಅದೂ ಇನೀಶಿಯಲ್ ಮಾತ್ರ) ಆಗಿ ಹೋಗಿದ್ದಾರೆ. ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಶ್ರೀ ರಾಜೇಂದ್ರ ಭಟ್ ಅವರು ಕಾರ್ನಾಡ್ ಸದಾಶಿವ ರಾವ್ ಅವರ ಕುರಿತು ಬರೆದ ಪುಟ್ಟ ಲೇಖನ ನನ್ನ ಗಮನ ಸೆಳೆಯಿತು. ನೀವೂ ಒಮ್ಮೆ ಓದಿ ಕಾರ್ನಾಡ್ ಸದಾಶಿವ ರಾವ್ ಅಂತಹ ಮಹನೀಯರನ್ನು ಸ್ಮರಿಸಿ.

ಡಾ. ಸೂರ್ಯನಾಥ ಕಾಮತ್ ಅವರು ಬರೆದ "ತ್ಯಾಗ ವೀರ" ಪುಸ್ತಕವನ್ನು ಓದುತ್ತಾ ಹೋದಂತೆ ಕಣ್ಣ ತುಂಬಾ ನೀರು ಅಣೆಕಟ್ಟೆ ಒಡೆದು ಹರಿಯಿತು. ತನ್ನ ಮಹಾನ್ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ, ಸ್ವಾತಂತ್ರ್ಯದ ಹೋರಾಟಕ್ಕೆ ಹವಿಸ್ಸಾಗಿ ಸಂಪೂರ್ಣವಾಗಿ ಸಮರ್ಪಣೆ ಆದ ದೇಶಭಕ್ತ ಕಾರ್ನಾಡ್ ಸದಾಶಿವ ರಾವ್ ಅವರ ಬಗ್ಗೆ ಕಾಮತರು ಬರೆದ ಪುಸ್ತಕ ಅದು. ಕಾರ್ನಾಡ್ ಸದಾಶಿವ ರಾವ್ ಅವರನ್ನು  'ದಕ್ಷಿಣದ ಗಾಂಧಿ' ಎಂದು ಇತಿಹಾಸವು ಕರೆದಿದೆ.

ಅವರು ಜನಿಸಿದ್ದು ಹೆಸರಾಂತ ಮತ್ತು ಆಗರ್ಭ ಶ್ರೀಮಂತರ  ಕುಟುಂಬದಲ್ಲಿ. (1881). ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಕಾರ್ನಾಡು ಅವರ ಊರು. ಇವರು ಖ್ಯಾತ ವಕೀಲರಾಗಿದ್ದ ರಾಮಚಂದ್ರ ರಾವ್ ಹಾಗೂ ರಾಧಾಬಾಯಿ ದಂಪತಿಗಳ ಸುಪುತ್ರ. ಮಂಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ನಂತರ ಅವರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ಅದರ ನಂತರ ಮುಂಬೈಯಲ್ಲಿ ಕಾನೂನು ಪದವಿ ಪಡೆದು ಮಂಗಳೂರಿನಲ್ಲಿ ವಕೀಲಿಕೆಯ ಪ್ರಾಕ್ಟೀಸ್ ಆರಂಭ ಮಾಡಿದರು.

ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೆ ಕುದ್ಮುಲ್ ರಂಗರಾಯರ ' ದಲಿತೋದ್ಧಾರ '  ಚಳುವಳಿಯಿಂದ ಅವರು ಪ್ರಭಾವಿತರಾದರು. ತಮ್ಮ  ಪುಸ್ತಕ, ಬಟ್ಟೆ, ಚೀಲ ಎಲ್ಲವನ್ನೂ ದಲಿತರಿಗೆ ಹಂಚಿ ಬಿಡುತ್ತಿದ್ದರು. ಮಂಗಳೂರಿನ ದೇರೆಬೈಲಿನ ತಮ್ಮ ಸ್ವಂತ ಜಮೀನಿನಲ್ಲಿ ಸ್ವಂತ ಖರ್ಚಿನಲ್ಲಿ ದಲಿತರಿಗೆ ಒಂದು ವಸತಿ ಕಾಲನಿಯನ್ನೆ ಅವರು ಮಾಡಿಕೊಟ್ಟರು. ದಲಿತರ ಶಿಕ್ಷಣಕ್ಕೆ ಸಹಾಯ ಮಾಡಲು 'ತಿಲಕ್ ವಿದ್ಯಾಲಯ'  ಎಂಬ ಶಾಲೆಯನ್ನು ಸ್ಥಾಪನೆ ಮಾಡಿದರು. ಮನೆಯ ಅಂಗಳಕ್ಕೆ ಬರಲು ಕೂಡ ಹಿಂಜರಿಯುತ್ತಿದ್ದ ದಲಿತರನ್ನು ಮನೆಯ ಒಳಗೆ ಕರೆದುಕೊಂಡು ಹೋಗಿ ಮೃಷ್ಟಾನ್ನ ಭೋಜನ  ಬಡಿಸುತ್ತಿದ್ದರು. ಅವರ ಪತ್ನಿ ಶಾಂತಾಬಾಯಿ ಕೂಡ ಪತಿಯ ಎಲ್ಲಾ ಕಾರ್ಯಗಳಲ್ಲಿ ಸಹಕಾರ ನೀಡಿದರು. ಗೋಕರ್ಣದಿಂದ ಆರಂಭಿಸಿ ಕೇರಳದವರೆಗೆ ಎಲ್ಲಾ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ನೀಡಲು ಸ್ವಾಮೀಜಿಯಿಂದ ಅನುಮತಿ ಪತ್ರವನ್ನು ಪಡೆದು ಬಂದರು. 

ಅದೇ ಹೊತ್ತಿಗೆ ಸಂತ್ರಸ್ತರಾದ ಮತ್ತು ಧ್ವನಿಯನ್ನು ಕಳೆದುಕೊಂಡ ಮಹಿಳೆಯರ ಶ್ರೇಯಸ್ಸಿಗಾಗಿ  "ಮಹಿಳಾ ಸಭಾ" ಎಂಬ ಒಂದು ಸಂಸ್ಥೆಯನ್ನು ಅವರು ಸ್ಥಾಪನೆ ಮಾಡಿದರು. ಅವರು ಮತ್ತು ಅವರ ಪತ್ನಿ ಇಬ್ಬರೂ ಅಲ್ಲಿಗೆ ಬರುವ ಬಾಲ ವಿಧವೆಯರಿಗೆ ಮತ್ತು ಬಡ ಹೆಣ್ಮಕ್ಕಳಿಗೆ ಉಚಿತವಾಗಿ ನೂಲುವ ಮತ್ತು ನೇಯುವ ಕಲೆಯನ್ನು ಕಲಿಸಿ ಅವರನ್ನು ಸ್ವಾವಲಂಬಿಯಾಗಿ ಮಾಡುವ ಪ್ರಯತ್ನವನ್ನು ಮಾಡಿದರು. 

ಅಷ್ಟು ಹೊತ್ತಿಗೆ ಭಾರತದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಮಂಗಳೂರಿಗೆ ವ್ಯಾಪಿಸಿತ್ತು. ಗಾಂಧೀಜಿಯವರ ದಟ್ಟ ಪ್ರಭಾವಕ್ಕೆ ಕಾರ್ನಾಡರು ಒಳಗಾಗುತ್ತಾರೆ. ತನ್ನ ಮನೆಯಲ್ಲಿದ್ದ ಅಷ್ಟೂ  ಬಂಗಾರ, ಆಭರಣ, ವಸ್ತ್ರಗಳು  ಎಲ್ಲವನ್ನೂ ಬಡವರಿಗೆ ದಾನ ಮಾಡಿದರು. ಆಸ್ತಿ, ಜಮೀನು ಎಲ್ಲವನ್ನೂ ಬಡವರಿಗೆ ಧಾರೆ ಎರೆದರು. ತಾವೇ ತಯಾರಿಸಿದ ಖಾದಿ ಬಟ್ಟೆ ತೊಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಇಳಿದು ಬಿಟ್ಟರು. ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. "ಪ್ರತೀ ಮನೆ ಕೂಡ ಕಾಂಗ್ರೆಸ್ ಮನೆ" ಇದು ಅವರ ಘೋಷಣೆ.  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತು ರಾಜ್ಯ ಉಪಾಧ್ಯಕ್ಷರಾಗಿ ಅವರದ್ದು ದೀರ್ಘ ಅವಧಿಗೆ ಸೇವೆ. ಅತ್ಯಂತ ಸರಳವಾದ ಜೀವನ. ಉಪ್ಪಿನ ಸತ್ಯಾಗ್ರಹ ನಡೆಸಿ ಅರೆಸ್ಟ್ ಆಗಿ ಕಠಿಣವಾದ  ಜೈಲುವಾಸ ಕೂಡ ಅವರು ಅನುಭವಿಸಿದ್ದರು. 

ಗಾಂಧಿ, ಕಸ್ತೂರ್ಬಾ, ನೆಹರೂ ಮೊದಲಾದ ಕಾಂಗ್ರೆಸ್ ಹಿರಿಯ ನಾಯಕರು  ಮಂಗಳೂರಿಗೆ ಬಂದಾಗ ಕಾರ್ನಾಡರ  ಮನೆಯಲ್ಲಿಯೇ ಉಳಿದು ಕೊಳ್ಳುತ್ತಿದ್ದರು. ಅವರ ಮನೆ ಕಾಂಗ್ರೆಸ್ ಕಾರ್ಯಕರ್ತರ ಧರ್ಮಛತ್ರವೆ ಆಗಿ ಹೋಗಿತ್ತು. ಅವರ ಪತ್ನಿ ಎಷ್ಟು ಜನ  ಬಂದರೂ ಊಟ ಉಪಚಾರವನ್ನು ದಣಿವು ಇಲ್ಲದೆ  ಮಾಡುತ್ತಿದ್ದರು. 

ಕಾರ್ನಾಡರ ಅಂತ್ಯವೂ ಅತ್ಯಂತ ದಾರುಣವೇ ಆಗಿತ್ತು. ಅವರ ಪತ್ನಿ, ಸಣ್ಣ ಮಗಳು ಸಣ್ಣ ಪ್ರಾಯದಲ್ಲೇ ಅವರನ್ನು ಆಗಲಿ ಹೋದಾಗ ಅವರು ಒಂದು ಕ್ಷಣ  ವಿಚಲಿತರಾಗಿ ಬಿಟ್ಟರು. ಅಹಮದಾಬಾದಿಗೆ ಹೋಗಿ ಗಾಂಧೀಜಿಯವರ ಆಶ್ರಮದಲ್ಲಿ  ಉಳಿದರು. ಗಾಂಧೀಜಿ ಅವರಿಗೆ ಧೈರ್ಯ ತುಂಬಿಸಿ ಮತ್ತೆ ಹೋರಾಟಕ್ಕೆ ಸಿದ್ಧಪಡಿಸಿದರು.1937ರಲ್ಲಿ ಮುಂಬೈ ನಗರದಲ್ಲಿ ಅವರ ಆರೋಗ್ಯ ಕುಸಿಯಿತು. ಅದೇ ವರ್ಷ ಜನವರಿ 9ರಂದು ಅವರು ಆಸ್ಪತ್ರೆಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ದುರಂತವೆಂದರೆ ಅವರ ಅಂತ್ಯಕ್ರಿಯೆಗೆ ಕೂಡ ಹಣವಿಲ್ಲದೆ ಅವರ ಮೂವರು  ಅನುಯಾಯಿಗಳು ಸೇರಿ ಅವರ ಅಂತ್ಯಕ್ರಿಯೆಯನ್ನು ಸರಳವಾಗಿ  ನಡೆಸಿದರು.  ಆಗರ್ಭ  ಶ್ರೀಮಂತರ ಕುಟುಂಬದಲ್ಲಿ ಜನಿಸಿದ, ಮಂಗಳೂರಿನಲ್ಲಿ ಬಹು ದೊಡ್ಡ ವಕೀಲರಾದ ಅವರು ಎಷ್ಟು ವೈಭವದಲ್ಲಿ ಬೇಕಾದರೂ ಬದುಕಬಹುದಿತ್ತು. ಆದರೆ ರಾಷ್ಟ್ರಕ್ಕೆ ಸರ್ವಸ್ವವನ್ನೂ ಧಾರೆ ಎರೆದ ಅವರು ತೀರಿ ಹೋದಾಗ ತಮಗಾಗಿ ಏನನ್ನೂ ಉಳಿಸಿರಲಿಲ್ಲ. ಅವರು ಸಾಯುವಾಗಲೂ ಅವರ ಅಮ್ಮ ಬದುಕಿದ್ದು, ಮಗನ ದಾರಿ ಕಾಯುತ್ತಾ  ಮಂಗಳೂರಿನಲ್ಲಿ ಕಣ್ಣೀರು ಸುರಿಸುತ್ತಿದ್ದರು. 

 ಅಮರರಾದ ನಂತರ ಅವರ ಹೆಸರಿನ ಒಂದು ಬಡಾವಣೆ ಬೆಂಗಳೂರಿನಲ್ಲಿ  ನಿರ್ಮಾಣ ಆಗಿದೆ.  ಮಂಗಳೂರಿನಲ್ಲಿ ಒಂದು ಪ್ರಮುಖ ರಸ್ತೆಗೆ ಅವರ ಹೆಸರಿಡಲಾಗಿದೆ. ಮೂಲ್ಕಿಯಲ್ಲಿ ಅವರ ಒಂದು ಸುಂದರವಾದ ಪ್ರತಿಮೆಯು ಅನಾವರಣ ಆಗಿದೆ. ಕಾರಂತರು ಕಾರ್ನಾಡರನ್ನು  'ಧರ್ಮರಾಜ' ಎಂದು ಕರೆದರು. ಕಾರ್ನಾಡರು ಬದುಕಿದ ರೀತಿಯೇ ಹಾಗಿತ್ತು!  

(ರಾಜೇಂದ್ರ ಭಟ್ ಕೆ.)