ದಕ್ಷಿಣ ಭಾರತದ ಶಿಲ್ಪಕಲಾ ಮಕುಟಮಣಿ

ದಕ್ಷಿಣ ಭಾರತದ ಶಿಲ್ಪಕಲಾ ಮಕುಟಮಣಿ

ಲೊಕ್ಕಿಗುಂಡಿಯೆಂದು ಕರೆಯುತ್ತಿದ್ದ ಈ ಗ್ರಾಮ ಹಿಂದೊಮ್ಮೆ ಬಲಯುತ ವಾದ ಕೋಟೆಯಿಂದಾವೃತವಾದ ಮಹಾಗ್ರಾಮ. ಪುರಾತನ ಅಗ್ರಹಾರ ಕೂಡ. ಇಲ್ಲಿ ದೇವಾಲಯಗಳು, ಬಸದಿಗಳೂ ಸಾಂಸ್ಕೃತಿಕ ಕೇಂದ್ರಗಳಾಗಿ ರಾರಾಜಿಸುತ್ತಿದ್ದುವು. ಈ ಸ್ಥಳ ಶಿಲ್ಪಕಲಾಕೃತಿಗಳ ಆಗರವಾಗಿತ್ತು. ಇದನ್ನು "ದಕ್ಷಿಣ ಭಾರತದ ಶಿಲ್ಪಕಲಾ ಮಕುಟಮಣಿ" ಎಂದು ಅನೇಕ ಆಂಗ್ಲ ವಿದ್ವಾಂಸರು ಕೊಂಡಾಡಿದ್ದಾರೆ. 

ಇಲ್ಲಿನ ಆಡಳಿತವು ಕಾಲಕಾಲಕ್ಕೆ ನಾನಾ ರಾಜವಂಶಗಳಿಗೆ ಸೇರಿತ್ತು. ಹೊಯ್ಸಳರು, ದೇವಗಿರಿಯ ಯಾದವರು, ಕಲ್ಯಾಣಿ ಚಾಲುಕ್ಯರು ಇದನ್ನು ತಮ್ಮ ನೆಲೆವೀಡಾಗಿ ಮಾಡಿಕೊಂಡಿದ್ದರು. (973 - 1189) ಇಲ್ಲಿ 1001 ದೇವಸ್ಥಾನ, 101 ಬಾವಿ, 101 ಶಿವಲಿಂಗಗಳಿದ್ದುವಂತೆ. ಇಲ್ಲಿನ ದೇವಾಲಯಗಳು ಬಾದಾಮಿ, ಪಟ್ಟದಕಲ್ಲಿನ ದೇವಾಲಯಗಳಂತಿಲ್ಲ. ಅವುಗಳನ್ನು ಕಟ್ಟಿದುದು ಕೆಂಪುಕಲ್ಲಿನಲ್ಲಲ್ಲ. ಇವೆಲ್ಲದರ ರಚನೆ ಬಳಪದ ಕಲ್ಲಿನವು. ಇಲ್ಲಿನ ಶಿಲ್ಪಕಲೆಯ ಭವ್ಯತೆಯನ್ನು ಇಲ್ಲಿನ ಕಾಶಿ ವಿಶ್ವೇಶ್ವರಾಲಯದಲ್ಲಿ ಸ್ಪಷ್ಟವಾಗಿ ಕಾಣುತ್ತೇವೆ. ಇದು ಹೊಯ್ಸಳರ ಭವ್ಯತೆಗೆ ಸಾಕ್ಷಿ. ಇಲ್ಲಿನ ಒಳಾಂಗಣದ ಭಾಗ ಮೂಲತಃ ಕಲ್ಯಾಣಿ ಚಾಲುಕ್ಯರ ಕಾಲದ್ದು. (ದ್ವಿಕೂಟ) ಇದನ್ನು ಇಲ್ಲಿಯ ಜನ ಕರಿದೇವರಗುಡಿ ಎನ್ನುವರು.

ಸಂದರ್ಶಕರಿಗೆ ಇದು ಪ್ರಮುಖ ಆಕರ್ಷಣೆ. ಕುಂಚದಿಂದ ಕಾಗದದ ಮೇಲೆ ಮೋಡಗಳನ್ನು ಸೃಷ್ಟಿಸಿದಂತೆ ಇಲ್ಲಿ ಕಲ್ಲಿನಲ್ಲಿ ಮೋಡಗಳನ್ನು ಬಿಡಿಸಿದ್ದಾರೆ. ಮೈದುಂಬಿದ ಆನೆಗೆ ವಸ್ತ್ರ, ಆಭರಣ ತೊಡಿಸಿ ನಿಲ್ಲಿಸಿದ್ದಾರೆ. ಕಂಬಗಳ ಮೇಲೆ ಸುಂದರಾಕೃತಿಯ 2 ನವಿಲುಗಳ ಚಿತ್ರಣವಿದೆ. ಭಗ್ನವಾದರೂ ಇದರ ಸೌಂದರ್ಯ ಕಳೆದುಕೊಂಡಿಲ್ಲ. ಈ ಕಟ್ಟಡದ ಶಿಖರ ಔತ್ತರೇಯ ಮಾದರಿಯ ವಾಸ್ತುಶಿಲ್ಪವನ್ನು ಹೋಲುತ್ತದೆ. ಇಲ್ಲಿನ ಸೂರ್ಯ ದೇವಾಲಯವೂ ಸಹ ಕಂಬದ ಕುಸುರಿಯ ಕೆಲಸಕ್ಕೆ ಪ್ರಖ್ಯಾತ. 

ರನ್ನ ಕವಿಗೆ ಆಶ್ರಯದಾತಳಾದ ದಾನ ಚಿಂತಾಮಣಿ ಎಂಬ ಹೆಸರನ್ನು ಹೊತ್ತ ಅತ್ತಿಮಬ್ಬೆ ಇಲ್ಲಿ ಅನೇಕ ಬಸದಿಗಳ ನಿರ್ಮಾಪಕಳು. ಅವಳು ಕಟ್ಟಿಸಿದ ಬಸದಿಗಳ ಸಂಖ್ಯೆ ಸುಮಾರು 1500. ಆದರೆ ಅವಳು 1007ರಲ್ಲಿ ಕಟ್ಟಿಸಿದ ಬ್ರಹ್ಮ ಜಿನಾಲಯ ವೆಂಬ ಬಸದಿ ಅತ್ಯಂತ ಪ್ರಾಚೀನ ಹಾಗೂ ಮೊದಲು ಕಟ್ಟಿಸಿದ ಬಸದಿಗಳಿಗೆಲ್ಲಾ ಕಳಸಪ್ರಾಯ. ಈ ಗುಡಿ ವಿಶಾಲವಾಗಿದ್ದು ಮೂವತ್ತು ಸಭಾ ಮಂಟಪದ ವಿವಿಧ ಕಲಾಕೃತಿಯ ಕಂಬಗಳಿಂದ ಕೂಡಿದ್ದು, ಗರ್ಭಗುಡಿಯ ಸಿಂಹಾಸನದ ಮೇಲಿದ್ದ ಮುದ್ದಾದ ಮಹಾವೀರನ ಕಪ್ಪುಶಿಲೆಯ ವಿಗ್ರಹ ಧ್ಯಾನಸ್ಥ ಶಿಲಾ ಜಿನಮೂರ್ತಿ ಈಗ ಭಗ್ನವಾಗಿದೆ. ಎರಡು ಕಡೆ ಬ್ರಹ್ಮ ಹಾಗೂ ಸರಸ್ವತಿಯ ವಿಗ್ರಹಗಳಿದ್ದುವಂತೆ. ಅದರ ಕೆಳಗೆ ಗಜಲಕ್ಷ್ಮಿ ಲಾಂಛನ. ಈ ಬಸದಿಗೆ ಐದು ಬಾಗಿಲ ಚೌಕಟ್ಟಿದೆ. ಒಂದೊಂದೂ ಒಂದೊಂದು ವಿಧ. ಐದೈದು ತರಹದ ಚೌಕಟ್ಟುಗಳನ್ನು ಮೂರು ಸ್ತ್ರೀ ದೇವತೆಗಳು, ಎರಡು ಪುರುಷ ದೇವತೆಗಳು ಹೊತ್ತು ನಿಂತಿದ್ದಾರೆ. 

ಬಸದಿಯ ಒಳಗೆ ವಿಶಾಲ ರಂಗಮಂಟಪ. ಈ ಮಂಟಪಕ್ಕೆ ನಾಲ್ಕು ಕಂಬಗಳು, ಕಂಬಗಳ ಮೇಲೆ ಸಿಂಹ ಮುಖ. ಕಂಬದ ಕೆಳಭಾಗದಲ್ಲಿ ನಾಲ್ಕು ಕಡೆ ಚೌಕಾಕೃತಿ. ಈ ಚೌಕಿನಲ್ಲಿ ದರ್ಪಣ ಸುಂದರಿ, ಶುಕ ಭಾಷಿಣಿ, ಯಕ್ಷ ಮುಂತಾದ ಶಿಲ್ಪಕಲಾಕೃತಿಗಳಿವೆ. ರಂಗಮಂಟಪದ ಬಲಕ್ಕೆ ಚತುರ್ಮುಖ ಬ್ರಹ್ಮದೇವರು, ಎಡಕ್ಕೆ ಪದ್ಮಾವತಿ. ಇದಾದ ಕೂಡಲೆ ಸುಖನಾಸಿ, ಮಂಟಪ, ಗರ್ಭಗುಡಿಯ ಚೌಕಟ್ಟುಗಳು ಕಲೆಯ ಬಲೆಯ ಪೂರ್ಣ ಸ್ವರೂಪದವು. ದಿಗಂಬರ ಜೈನ ದೇವಾಲಯ ಅತಿ ಆಕರ್ಷಣೆಯ ಕೇಂದ್ರವಾಗಿದೆ.

ಲಕ್ಕುಂಡಿಯ ವೈಭವ ಇಷ್ಟು ಮಾತ್ರವೇ ಅಲ್ಲ. ಲಕ್ಕುಂಡಿಯಲ್ಲಿ ಟಂಕಸಾಲೆ ಇತ್ತು. ಕರ್ನಾಟಕದ ಪ್ರಮುಖ ಟಂಕಸಾಲೆಗಳಲ್ಲಿ ಮುಖ್ಯವಾಗಿತ್ತು. ಇತಿಹಾಸ ಪ್ರಸಿದ್ಧವಾದ ಪೊನ್, ಗದ್ಯಾಣ, ಲೊಕ್ಕಿಗದ್ಯಾಣ ಇಲ್ಲಿನ ಟಂಕ ಸಾಲೆಯಲ್ಲಿ ತಯಾರಾಗುತ್ತಿತ್ತು. ಇಲ್ಲಿ ಸಕಲ ಧರ್ಮಗಳಿಗೂ ಆಶ್ರಯವಿತ್ತು. ವೀರಶೈವ, ಜೈನ, ಬ್ರಾಹ್ಮಣ ಧರ್ಮದ ಜನರು ಪರಸ್ಪರ ಸೌಹಾರ್ದತೆಯಿಂದ ಬಾಳುತ್ತಿದ್ದರು. ಇಲ್ಲಿ ಉತ್ಖನನ ನಡೆಸಿದರೆ ಇದು ಮತ್ತೊಂದು ಮೊಹೆಂಜೊದಾರೊ ಆಗುವುದರಲ್ಲಿ ಸಂದೇಹವಿಲ್ಲ.

"ಶಿಲ್ಪ ಕಲೆಗಳ ಮುಕುಟ, ಅಪಾರ ವೈಭವದ ಸೆಳೆತ, ಕಣ್ಮನ ಸೆಳೆಯುವ ದೇವಾಲಯ, ಇತಿಹಾಸದ ಹಿರಿದಾದ ಕುರುಹು" ಇಲ್ಲಿವೆ... ಬನ್ನಿ ಪ್ರವಾಸ..

(ಚಿತ್ರಗಳು : ಅಂತರ್ಜಾಲ ಕೃಪೆ)

-ರಮೇಶ ನಾಯ್ಕ, ಉಪ್ಪುಂದ, ಬೈಂದೂರು