ದಟ್ಟ ಕಾನನದ ನಡುವೆ ಅರಳಿದ ಭೀಮೇಶ್ವರ

ದಟ್ಟ ಕಾನನದ ನಡುವೆ ಅರಳಿದ ಭೀಮೇಶ್ವರ

ಸುತ್ತಲೂ ದಟ್ಟ ಹಸಿರು ಹೊದಿಕೆಯ ಗುಡ್ಡಬೆಟ್ಟಗಳು, ನದಿ ತೊರೆಗಳ ಕಲರವ, ಕೊನೆಗೆ ಈ ಸ್ಥಳಕ್ಕೆ ಬರುವ ಪಯಣವೇ ಒಂದು ಚಾರಣ. ಇಂತಹ ಸಂಕೀರ್ಣ ಸೌಲಭ್ಯದ ಭೀಮಲಿಂಗೇಶ್ವರ ದೇವಸ್ಥಾನ ಸಾಗರ ತಾಲೂಕಿನ ಕೋಗಾರು ಎಂಬ ಪುಟ್ಟ ಹಳ್ಳಿಯ ಸಮೀಪದಲ್ಲಿದೆ. ಸಾಗರ, ಜೋಗದಿಂದ ಭಟ್ಕಳಕ್ಕೆ ತೆರಳುವ ಮಾರ್ಗದಲ್ಲಿ ಸಿಗುವ ಕೋಗಾರಿನಿಂದ ಮೂರು ಕಿ.ಮೀ. ದೂರದಲ್ಲಿ ಇದು ಪ್ರವಾಸಿಗರಿಗೆ ತೆರೆದುಕೊಳ್ಳುತ್ತದೆ. ವಾಹನಗಳ ಮೂಲಕ ಸಾಗುವಾಗ ಜಾಗೃತಿಯಿಂದ ಸಾಗಬೇಕು. ಇಳಿಜಾರಿನ ರಸ್ತೆ, ಚಾರಣಕ್ಕೆ ಹೇಳಿಮಾಡಿಸಿಟ್ಟಂತಿರುವ ಜಾಗ, ಜುಳು ಜುಳು ಹರಿವ ನೀರಿನ ತೊರೆ ದಾಟುವುದಿದೆ. ಮುಗಿಲೆತ್ತರದ ಮರಗಳ ನಡುವೆ ದಾರಿಯಲ್ಲಿ ಮರಗಳೇ ಸ್ವಾಗತಕ್ಕೆ ನಿಂತಿವೆಯೇನೋ ಎನ್ನಿಸಿಬಿಡುವಷ್ಟು ದೃಶ್ಯ ನಯನ ಮನೋಹರ.

ಇದಕ್ಕೂ ಒಂದು ಸ್ಥಳ ಪುರಾಣವಿದೆ. ದ್ವಾಪರ ಯುಗದಲ್ಲಿ ಪಾಂಡವರು ತಮ್ಮ ವನವಾಸದ ಸಂದರ್ಭದಲ್ಲಿ ಈ ಸ್ಥಳದಲ್ಲಿ ಕೆಲಕಾಲ ತಂಗಿದ್ದರಂತೆ. ಅದು ಮಹಾಶಿವರಾತ್ರಿಯ ಸಮಯವಾದ್ದರಿಂದ ಧರ್ಮರಾಯನು ಕಾಶಿಯಿಂದ ಈಶ್ವರ ಲಿಂಗವನ್ನು ತರಿಸಿ ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದನೆಂಬ ಪ್ರತೀತಿ. ಸ್ಥಳೀಯವಾಗಿ ಸಿಗುವ ಕಲ್ಲಿನ ಬಂಡೆಯನ್ನೇ ಹಲಗೆಯನ್ನಾಗಿಸಿ ನಿರ್ಮಿಸಿದ ದೇವಸ್ಥಾನದೆದುರು ಒಂದು ಬೃಹತ್‌ ಬಂಡೆ ಎರಡು ಹೋಳಾಗಿ ಮಲಗಿದೆ. ಅದಕ್ಕೆ ಪ್ರಮುಖ ಕಾರಣ ದೇವಸ್ಥಾನದ ಬಾಗಿಲಿಗೆ ಬೇಕಾದ ಕಲ್ಲು ಹಲಗೆಯಾಗಿ ಏಳಿಸಲು ಆಗದಿದ್ದಾಗ ಭೀಮನು ತನ್ನ ಕಾಲಿನಿಂದ ಬಲವಾಗಿ ಒದ್ದು ಅದು ಎರಡು ಹೋಳಾಯಿತು. ಒಂದು ಹೋಳು ಬಳಕೆಗೆ ಬಂದಿತು ಎನ್ನುತ್ತಾರೆ. ಸಾಕ್ಷಿಗೆ, ಇನ್ನೊಂದು ಕಲ್ಲು ಭಾಗದಲ್ಲಿ ಮೂಡಿರುವ ಭೀಮನ ಕಾಲಿನ ಹೆಜ್ಜೆಯ ಗುರುತು ತೋರಿಸಲಾಗುತ್ತದೆ. ಆದರೂ ಅವರಿಗೆ ನೀರಿನ ಸಮಸ್ಯೆ ಮುಗಿದಿರಲಿಲ್ಲ. ಅಭಿಷೇಕಕ್ಕೆ ನೀರಿಲ್ಲ! ಆಗ ಅರ್ಜುನ ತನ್ನ ಬಿಲ್ಲಿನಿಂದ ಬಾಣವೊಂದನ್ನು ಹೊಡೆದಾಗ ಅಲ್ಲಿ ನೀರು ಚಿಮ್ಮಿತಂತೆ. ಅದಕ್ಕೆ ಸರಳಹೊಳೆ ಎಂದು ಹೆಸರಿಟ್ಟನಂತೆ. ಈ ಸರಳ ಹೊಳೆ ಇಂದಿಗೂ ದೇವಸ್ಥಾನಕ್ಕಿಂತ, ನೂರು ಅಡಿ ಮೇಲ್ದಾಗದಲ್ಲಿ ಜನಿಸಿ ವರ್ಷಪೂರ್ತಿ ಮೈತುಂಬಿ ಹರಿಯುತ್ತಿರುವುದು ವಿಶೇಷ. ಸ್ವಾರಸ್ಯವೆಂದರೆ ಈ ಹೊಳೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಿದಂತೆಲ್ಲಾ ನೀರಿನ ಹರಿವಿನ ಪ್ರಮಾಣವೂ ತನ್ನಷ್ಟಕ್ಕೆ ಹೆಚ್ಚುತ್ತದೆ. 

ದೇವಸ್ಥಾನದ ಹಿಂಭಾಗದಲ್ಲಿರುವ ಹಿಡಿಂಬಾವನ ಎಂದು ಖ್ಯಾತಿಯಾಗಿದ್ದು, ಪ್ರಕೃತಿ ಸಹಜ ವನಸ್ಪತಿಗಳಿಂದ ತುಂಬಿ ತುಳುಕಾಡುತ್ತಿದೆ. ಅಸ್ತಮಾ ರೋಗಿಗಳು ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಇಲ್ಲಿ ವಾರಗಟ್ಟಲೆ ಉಳಿದು ತಮ್ಮ ಕಾಯಿಲೆ ವಾಸಿಮಾಡಿಕೊಳ್ಳುತ್ತಾರೆ ಎಂದು ದೇವಸ್ಥಾನದ ಮಹನೀಯರಾದ ಚಿದಂಬರರಾವ್ ಅವರ ಅಂಬೋಣ. ರಾಣಿ ಚನ್ನಭೈರವ ದೇವಿ ಒಡೆತನದಲ್ಲಿದ್ದ ಈ ದೇವಸ್ಥಾನದಲ್ಲಿ ಶಿವರಾತ್ರಿಯ ಜಾತ್ರೆ ಅಭೂತಪೂರ್ವವಾಗಿ ನಡೆಯುತ್ತಿತ್ತು. ಗುತ್ಯಮ್ಮನ ಕಾಯಿಲೆ ಎಂಬ ಹೆಸರು ಹೊತ್ತ ಪ್ಲೇಗ್ ಎಂಬ ಹೆಮ್ಮಾರಿಯ ಕಾಟದಿಂದ ಇಲ್ಲಿನ ಜನರು ಅನಿವಾರ್ಯವಾಗಿ ವಲಸೆಹೋಗಿ ಪ್ರದೇಶ ನಿರ್ಜನವಾಯಿತು. ಈ ಸ್ಥಳ ಮಹಿಮೆಯನ್ನು ಅರಿತ ಮೈಸೂರು ಮಹಾರಾಜರು 1705ರಲ್ಲಿ ಇಲ್ಲಿಗೆ ಭೇಟಿ ಕೊಟ್ಟು ಅತ್ಯಂತ ಆಕರ್ಷಿತರಾಗಿ ವಿಶೇಷ ಪೂಜೆ ಸಲ್ಲಿಸಿ,ದೇವರಿಗೆ ಬಂಗಾರ ಹಾಗೂ ಬೆಳ್ಳಿಯ ಆಭರಣವನ್ನು ನೀಡಿದ್ದಾರೆ ಎನ್ನುತ್ತದೆ ಇತಿಹಾಸದ ಪುಟಗಳು.

"ಈ ದೇವಸ್ಥಾನವು ಪಶ್ಚಿಮ ಘಟ್ಟದ ದಟ್ಟಾರಣ್ಯದ ಮದ್ಯೆ ಇರುವುದರಿಂದ ನೈಸರ್ಗಿಕವಾಗಿ ಹರಿಸಿನಿಂದ ಕೂಡಿದೆ. ವಿವಿಧ ರೀತಿಯ ಕಾಡಿನ ಗಿಡ ಮರಗಳು, ಹಲವಾರು ರೀತಿಯ ಚಿಟ್ಟೆಗಳು, ಬಗೆಬಗೆಯ ಪಕ್ಷಿಗಳು, ಮಂಗ ಮತ್ತು ಸಿಂಗಳಿಕಗಳು ಕಾಣಸಿಗುತ್ತವೆ ...... "ಬನ್ನಿ ಒಮ್ಮೆ ಭೀಮೇಶ್ವರಕ್ಕೆ ....

(ಚಿತ್ರಗಳು : ಅಂತರ್ಜಾಲ ಕೃಪೆ)

-ರಮೇಶ ನಾಯ್ಕ, ಉಪ್ಪುಂದ, ಬೈಂದೂರು