ದಡದಿ ನಿಂತಳೇತಕೆ?

ದಡದಿ ನಿಂತಳೇತಕೆ?

ಕವನ

ನಸುಕಿನಲ್ಲಿ ಮುಸುಕನೆಳೆದು

ಖುಷಿಯ ನಿದ್ರೆ ಮಾಡದೆ

ಬಿಸಿಲು ತರುವ ಬಿಸಿಗೆ ಬೆದರಿ

ನಿಶೆಯಲೆದ್ದು ಬಂದಳೆ

 

ಕೊಡವನೊಂದು ನಡುವಲಿಟ್ಟು

ನಡೆದಳಾಕೆ ನೀರಿಗೆ

ಕುಡಿವ ಜಲವ ಕೊಡದಿ ತುಂಬಿ

ದಡದಿ ನಿಂತಳೇತಕೆ

 

ಕೊಳದಲಿಳಿದು ಜಳಕ ಗೈದು

ಬಳುಕುತಿರುವ ಬಾಲೆಗೆ

ಗೆಳೆಯನೊಡನೆ ಕಳೆದ ಕ್ಷಣದ

ಹಳೆಯ ನೆನಪು ಕಾಡಿತೆ

 

ಗಗನದಿಂದ ಮುಗಿಲ ತುಣುಕು

ಬಗೆದು ಕೇಶಕಿಟ್ಟಳೆ?

ಹಗಲಿನಲ್ಲಿ ಸಿಗದ ಚುಕ್ಕಿ

ತೆಗೆದು ನಯನಕಿಟ್ಟಳೆ?

 

ಚದುರೆ ಇವಳ ಅಧರದಲ್ಲಿ

ಮಧುರ ನಗುವು ಮೆರೆದಿದೆ

ಮದನ ಬಾಣ ಹೃದಯ ಸೇರಿ

ಕದಪು ಕೆಂಪಗಾಯಿತೆ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್