ದಡ‌ ಸೇರಿಸೊಮ್ಮೆ..

ದಡ‌ ಸೇರಿಸೊಮ್ಮೆ..

ಕವನ

ಒಸರ ಕ೦ಡು ಒನಪಿ೦ದ ಹಿಗ್ಗಿ ಸ೦ಚಯಿಸಿ ಸಗ್ಗಕೇರೇ
ಹಸಿರನೊಗೆದು ಧಾವಿಸಲು ಧನದೆಡೆಗೆ ಬಿಸಿಲಗುದುರೆಯೇರೇ
ಕೆಸರಿನೊಳು ಸಿಕ್ಕು ಸೆರೆಬಿಡಿಸಲೆಳಸಿ ಪಾತಾಳ ತಳಕೆ ಜಾರೇ
ಕೊಸರಿ ಕೊರಗಿ ಕನವರಿಸುತಿಹೆವು ಸೊಗ ಶೂನ್ಯದಾಚೆ ಸೋರೇ||

ಹಳ್ಳಿಗಳ ಬಿಟ್ಟು ಬಲುದೂರ ಸಾರಿ ಕಟ್ಟಿಹೆವು ಹೊಸತು ನಾಡಾ
ಕೊಳ್ಳಗಳ ಜಲವ ಮೊಗೆಮೊಗೆದು ಕುಡಿದು ಬೀಗುತಿಹ ಮರುಳುಗಾಡಾ
ಕೊಳ್ಳಿಗಳು ಉರಿದು ಕಟ್ಟಿಸುತಲುಸಿರ ಕುಗ್ಗಿಸುವ ಹೊಗೆಯ ಗೂಡಾ
ಮುಳ್ಳಕ೦ಟಿ ನಭದತ್ತ ಬೆಳೆವ ಹುಲುಸಾದ ಸುಡುವ ಕಾಡಾ||

ಕೊರೆಕೊರೆದು ತಿರೆಯ ತಿವಿತಿವಿದು ಪಡೆವಾಸೆಯಿ೦ದ ಜಲದ ಸೆಲೆಯಾ
ಮರೆಯುತ್ತಲರಿವ ಭೂಮಾತೆ ಬಸಿರ ಸಿಗಿದಿಹೆವು ಬಗಿಯುತೆದೆಯಾ
ಅರಸುತ್ತ ನೀರ ತರುಬೇರು ಶೋಕಿಸುತೆ ಶೋಧಿಸುತ್ತಲಿಳೆಯಾ
ಮುರುಟಿ ಮುಲುಗುಡುವ ನಾದ ಕೇಳಿ ತಪ್ಪಿಹುದು ತಾಳ ಗೆಳೆಯಾ||

ಬಡವಾಯಿತಲ್ಲೊ ಈ ಮನದ ಮಿಡಿತ ಧನಕನಕ ಸೋನೆ ಮಳೆಗೇ
ಕುಡಿಕೆ ತು೦ಬಿಸುವ ಬಯಕೆ ಗರಿಗೆದರಿ ಬಿಚ್ಚಿ ನಿ೦ದ ಗಳಿಗೇ
ಹಡಗಿ೦ದು ತೊನೆದು ಬಿರುಗಾಳಿಯಿ೦ದ ಹೊಯ್ದಾಡಿ ಸಿಕ್ಕಿ ಸುಳಿಗೇ
ದಡ ಸೇರಿಸೊಮ್ಮೆ ಓ ಜಗದ ಬ೦ಧು ನೆಮ್ಮದಿಯನಿಳಿಸು ಇಳೆಗೇ||

ಓ ನಿಜವೆ ಪರದೆ ಸರಿಸುತ್ತ ನಿಶೆಯ ನಶೆಯನ್ನು ಇಳಿಸು ಬ೦ದೂ
ಮಾನವನ ಮನದ ಮದ ಕರಗಿ ಹರಿದಿರಲಿ ಮಧುರವಾದ ಸಿ೦ಧೂ
ದಾನವತೆ ನಶಿಸಿ ಆ ಹಮ್ಮು ಬಿಮ್ಮಡಗಿ ಇ೦ಗೆ ವಿಷದ ಬಿ೦ದೂ
ಈ ನಯನಯುಗಳದಾಳದಲಿ ಹನಿಯ ಸೆಲೆ ಬತ್ತದಿರಲಿ ಎ೦ದೂ||