ದಣಿವರಿಯದ ಹಕ್ಕಿ - ಸಮುದ್ರ ಗರುಡ

ದಣಿವರಿಯದ ಹಕ್ಕಿ - ಸಮುದ್ರ ಗರುಡ

ನಾವು ಒಂದಷ್ಟು ಪಕ್ಷಿಪ್ರಿಯರು ಸೇರಿಕೊಂಡು ಒಮ್ಮೆ ಉತ್ತರಕನ್ನಡ ಜಿಲ್ಲೆಯ ಕೈಗಾ ಎಂಬ ಊರಿಗೆ ಹೋಗಿದ್ದೆವು. ನಮ್ಮಂತೆಯೇ ಪಕ್ಷಿವೀಕ್ಷಕರು ಸೇರಿಕೊಂಡು ಅಲ್ಲಿನ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕೈಗಾ ಪಕ್ಷಿ ಹಬ್ಬವನ್ನು ಆಯೋಜನೆ ಮಾಡಿದ್ದರು. ಅಲ್ಲಿ ಕಾಳೀನದಿ ಹರಿಯುತ್ತಿತ್ತು. ಕಾಳೀ ನದಿಗೆ ಅಡ್ಡಲಾಗಿ ನಾಲ್ಕು ಅಣೆಕಟ್ಟೆಗಳನ್ನು ಕಟ್ಟಲಾಗಿದೆ. ಅವುಗಳೆಂದರೆ ಗಣೇಶಗುಡಿ, ಬೊಮ್ಮನಹಳ್ಳಿ, ಕೊಡಸಳ್ಳಿ ಮತ್ತು ಕದ್ರಾ. ಕಾಳೀ ನದಿ ಸಮುದ್ರ ಸೇರುವ ಮೊದಲು ಈ ಕದ್ರಾ ಅಣೆಕಟ್ಟನ್ನು ದಾಟಿಯೇ ಬರಬೇಕು. ಕದ್ರಾ ಅಣೆಕಟ್ಟೆಯ ತುಸು ದೂರದಲ್ಲೇ ಕೈಗಾ ಅಣುವಿದ್ಯುತ್‌ ಸ್ಥಾವರ ಮತ್ತು ಅಲ್ಲಿನ ನೌಕರರು ವಾಸವಾಗಿರುವ ವಸತಿ ಸಂಕೀರ್ಣಗಳು ಇವೆ. ಕದ್ರಾ ಅಣೆಕಟ್ಟಿನಲ್ಲಿ ಹಿನ್ನೀರು ತುಂಬಿರುವ ಕಾಲದಲ್ಲಿ ಅದು ಸಮುದ್ರದಂತೆಯೇ ಕಾಣುತ್ತದೆ. ಹಿನ್ನೀರಿನ ಆಸುಪಾಸಿನಲ್ಲಿ ಪಕ್ಷಿವೀಕ್ಷಣೆ ಮಾಡಲು ನಾವು ಹೋಗಿದ್ದೆವು. ನಾನು ಮೊದಲನೆಯ ಬಾರಿ ಈ ಸಮುದ್ರ ಗರುಡ ಹಕ್ಕಿಯನ್ನು ನೋಡಿದ್ದು ಅಲ್ಲೇ. 

ಗಿಡುಗದ ಜಾತಿಯ ಹಕ್ಕಿಗಳು ಆಕಾಶದಲ್ಲಿ ಹಾರುವಾಗ ರೆಕ್ಕೆ ಬಡಿಯುವುದು ಬಹಳ ಅಪರೂಪ. ಗಾಳಿಪಟದಂತೆ ರೆಕ್ಕೆಯನ್ನು ಅಗಲವಾಗಿ ಬಿಚ್ಚಿಕೊಂಡು ಎತ್ತರಕ್ಕೆ, ಇನ್ನೂ ಎತ್ತರಕ್ಕೆ ಹಾರುತ್ತವೆ. ಇಷ್ಟು ಕಡಿಮೆ ಶ್ರಮದಲ್ಲಿ ಅಷ್ಟು ಎತ್ತರಕ್ಕೆ ಹೇಗೆ ಹಾರುತ್ತವೆ ಎಂಬುದು ನನಗೂ ಸೋಜಿಗದ ವಿಷಯವಾಗಿತ್ತು. ಸಾಮಾನ್ಯವಾಗಿ ಗಿಡುಗ, ಹದ್ದುಗಳು ಮತ್ತು ಗರುಡ ಜಾತಿಯ ಹಕ್ಕಿಗಳು ಉಳಿದ ಹಕ್ಕಿಗಳಂತೆ ಬೆಳ್ಳಂಬೆಳಗ್ಗೆ ಆಹಾರ ಹುಡುಕಲು ಹೊರಡುವುದಿಲ್ಲ. ಅವು ಹಾರಾಟ ಪ್ರಾರಂಭಮಾಡುವುದು ಸುಮಾರು ಎಂಟು ಗಂಟೆಯ ನಂತರ. ಅದಕ್ಕೊಂದು ಕಾರಣ ಇದೆ. ರಾತ್ರಿ ಇಡೀ ಸೂರ್ಯನ ಬೆಳಕು ಇಲ್ಲದ ಕಾರಣ ಭೂಮಿಯ ವಾತಾವರಣ ಒಂದಿಷ್ಟು ತಂಪಾಗಿರುತ್ತದೆ. ಬೆಳಗ್ಗೆ ಸೂರ್ಯನ ಬಿಸಿಲು ಬೀಳಲು ಪ್ರಾರಂಭವಾದಮೇಲೆ ನಿಧಾನವಾಗಿ ಗಾಳಿ ಬಿಸಿಯಾಗಲು ಪ್ರಾರಂಭವಾಗುತ್ತದೆ. 

ಬಿಸಿಯಾದಾಗ ವಸ್ತುಗಳು ಹಿಗ್ಗುತ್ತವೆ. ಹಿಗ್ಗಿದಾಗ ಅವುಗಳ ಸಾಂದ್ರತೆ (density) ಕಡಿಮೆಯಾಗಿತ್ತದೆ. ಆಗ ಬಿಸಿಗಾಳಿ ಹಗುರವಾಗಿ ನಿಧಾನಕ್ಕೆ ಮೇಲೇರಲು ಪ್ರಾರಂಭವಾಗುತ್ತದೆ. ವಾತಾವರಣದಲ್ಲಿ ಉಂಟಾಗುವ ಈ ಬದಲಾವಣೆಯನ್ನೇ ಬಳಸಿಕೊಂಡು ಹಲವಾರು ಹಕ್ಕಿಪ್ರಬೇಧಗಳು ಹಾರಾಟ ಮಾಡುತ್ತವೆ. ಈ ಹಾರಾಟಕ್ಕೆ ಅತ್ಯಂತ ಕಡಿಮೆ ಶಕ್ತಿ ಖರ್ಚಾಗುವುದರಿಂದ ಗಿಡುಗಗಳು ಸಂಜೆಯವರೆಗೂ ಎತ್ತರದಲ್ಲಿ ಹಾರಾಡುವುದನ್ನು ನೀವು ನೀಡಿರುತ್ತೀರಿ. 

ಹೀಗೆ ಎತ್ತರದಲ್ಲಿ ಹಾರಾಟ ಮಾಡುವಾಗ ಆಹಾರ ಹುಡುಕಬೇಕಾದರೆ ಅವುಗಳಿಗೆ ಕೆಳಗೇನಿದೆ ಎಂದು ಕಾಣಬೇಕಲ್ಲವೇ ? ಗಿಡುಗ, ಹದ್ದು, ಗರುಡದ ಜಾತಿಯ ಹಕ್ಕಿಗಳಿಗೆ ಅಷ್ಟು ಎತ್ತರದಿಂದಲೂ ಕೆಳಗಿರುವ ತನ್ನ ಆಹಾರವನ್ನು ಗುರುತಿಸುವ ಸಾಮರ್ಥ್ಯ ಇದೆ. ಈ ಸಮುದ್ರ ಗರುಡ ಹಕ್ಕಿಯ ಆಹಾರ ಸಮುದ್ರದಲ್ಲಿ ಸಿಗುವ ಮೀನು ಮತ್ತು ಹಾವುಗಳು. ಸಮುದ್ರದಮೇಲೆ ಬೀಸುವ ಗಾಳಿಯಲ್ಲಿ ತೇಲುತ್ತಾ ಹಾರಾಡುತ್ತಾ ನೀರಿನ ಮೇಲ್ಮೈಯಲ್ಲಿ ಓಡಾಡುವ ಮೀನು ಮತ್ತು ಸಮುದ್ರ ಹಾವುಗಳನ್ನು ಗಮನಿಸಿ ನೀರಿನ ಒಳಗೆ ಮುಳುಗದೆ ಕೇವಲ ತನ್ನ ಕಾಲುಗಳಿಂದ ಅವುಗಳನ್ನು ಹಿಡಿಯುತ್ತದೆ. ಅದಕ್ಕಾಗಿ ಬಹಳ ಹೊತ್ತು ಸಮುದ್ರದ ಅಲೆಗಳ ಮೇಲೆ ಹಾರಾಟ ಮಾಡುವ ಸಾಮರ್ಥ್ಯ ಈ ಹಕ್ಕಿಗಳಿಗೆ ಇದೆ. 

ಅಕ್ಟೋಬರ್‌ ನಿಂದ ಜೂನ್‌ ತಿಂಗಳ ನಡುವೆ ಸಮುದ್ರದ ಬದಿಯ ಅಥವಾ ಸ್ವಲ್ಪ ಒಳಗೆ ದೊಡ್ಡ ಮರಗಳ ಮೇಲೆ ಕಟ್ಟಿಗೆ, ಕಡ್ಡಿಗಳು ಮತ್ತು ಎಲೆಗಳನ್ನು ಬಳಸಿ ಅಟ್ಟಳಿಗೆಯ ಆಕಾರದ ಗೂಡನ್ನು ಮಾಡಿ ಮೊಟ್ಟೆ ಇಟ್ಟು ಮರಿಮಾಡುತ್ತದೆ. ಸಮುದ್ರತೀರದ ಮಂಗಳೂರು, ಕುಂದಾಪುರ, ಕಾರವಾರದಲ್ಲಿ ಹಲವು ಪಕ್ಷಿವೀಕ್ಷಕರು ಈ ಹಕ್ಕಿಯನ್ನು ಗಮನಿಸಿ ದಾಖಲಿಸಿದ್ದಾರೆ. ಭಾರತದ ಕರಾವಳಿ ತೀರದ ಉದ್ದಕ್ಕೂ ಈ ಹಕ್ಕಿ ಕಾಣಸಿಗುತ್ತದೆ ಎಂದು ಹೇಳುತ್ತಾರೆ. ಮುಂದಿನಬಾರಿ ಸಮುದ್ರತೀರಕ್ಕೆ ಹೋದಾಗ ಈ ಸಮುದ್ರ ಗರುಡ ನಿಮಗೂ ಕಾಣಲು ಸಿಗಬಹುದು. ಗಮನಿಸ್ತೀರಲ್ಲ.

ಕನ್ನಡ ಹೆಸರು: ಸಮುದ್ರ ಗರುಡ

ಇಂಗ್ಲೀಷ್‌ ಹೆಸರು: White-bellied Sea Eagle

ವೈಜ್ಞಾನಿಕ ಹೆಸರು: Haliaeetus leucogaster

-ಅರವಿಂದ ಕುಡ್ಲ, ಬಂಟ್ವಾಳ