ದನದಿಂದ ಜನರೇಟರಿಗೆ ಸ್ಪೂರ್ತಿ (ಇ-ಲೋಕ-21)(5/5/2007)

ದನದಿಂದ ಜನರೇಟರಿಗೆ ಸ್ಪೂರ್ತಿ (ಇ-ಲೋಕ-21)(5/5/2007)

ಬರಹ

biorefineryಅಮೆರಿಕಾದ ಮಿಲಿಟರಿಗೋಸ್ಕರ ಪುರ್ಡ್ಯೂ ವಿಶ್ವವಿದ್ಯಾಲಯದ ಸಂಶೋಧಕರು ರಚಿಸಿದ, ವಿದ್ಯುಜ್ಜನಕ ಯಂತ್ರಕ್ಕೆ ದನದ ಹೊಟ್ಟೆಯೇ ಸ್ಪೂರ್ತಿ. ದನದ ಜಠರವು ಮಿಥೇನ್ ಅನಿಲವನ್ನು ಉತ್ಪಾದಿಸುತ್ತದಂತೆ. ಅದೇ ರೀತಿ ಕೆಲಸ ಮಾಡಿ ಅನಿಲ ಉತ್ಪಾದಿಸುವಂತೆ ವಿದ್ಯುಜನಕ ಯಂತ್ರವನ್ನು ರಚಿಸಬಾರದೇಕೇ ಎಂದು ಯೋಚಿಸಿದ ಸಂಶೋಧಕರು, ಯಂತ್ರದಲ್ಲಿ ಬೇಡದ ಕಸವನ್ನು ಇಂಧನವಾಗಿ ಬಳಸುತ್ತಾರೆ. ಯಂತ್ರದ ಘಟಕವೊಂದರಲ್ಲಿ ಜೈವಿಕ ವಸ್ತುಗಳ ಕೊಳೆತು ಮಿಥೇನ್ ಅನಿಲ ಉತ್ಪಾದನೆಯಾಗುತ್ತದೆ.ಈ ಕ್ರಿಯೆಯನು ಚುರುಕುಗೊಳಿಸಲು ಕಿಣ್ವಗಳ ಬಳಕೆಯಾಗುತ್ತದೆ. ಯೀಸ್ಟ್‌ಗಳು ಅನಿಲದ ಉತ್ಪಾದನೆಗೆ ನೆರವಾಗುತ್ತವೆ. ಪ್ಲಾಸ್ಟಿಕ್ ವಸ್ತುಗಳು ಇದ್ದರೆ,ಅವು ಪ್ರತ್ಯೇಕಗೊಂಡು ಇನ್ನೊಂದು ಘಟಕಕ್ಕೆ ಹೋಗಿ,ಅಲ್ಲಿ ಒತ್ತಲ್ಪಟ್ಟು ಗೋಲಿಗಳಾಗಿ ಬಿಡುತ್ತವೆ. ಈ ಗೋಲಿಗಳನ್ನು ಉರಿಸಿ, ಬಿಡುಗಡೆಯಾದ ಸಂಯುಕ್ತ ಅನಿಲವು, ಮೊದಲ ಘಟಕದ ಮಿಥೇನ್ ಅನಿಲದ ಜತೆ ಸೇರಿ, ಡಿಸೇಲ್ ಚಾಲಿತ ವಿದ್ಯುಜ್ಜನಕ ಯಂತ್ರಕ್ಕೆ ಬರುತ್ತದೆ. ಇಲ್ಲಿ ಇಂಧನದ ಶೇಕಡಾ ಹತ್ತು ಡಿಸೇಲ್ ಬಳಕೆಯಾಗುತ್ತದೆ. ವಿದ್ಯುಜ್ಜನಕ ಯಂತ್ರವು ಅರುವತ್ತು ಕಿಲೋವ್ಯಾಟಿನದ್ದು. ವ್ಯಾನ್ ಗಾತ್ರದ ಈ ಬಯೋ ವಿದ್ಯುತ್ ಸ್ಥಾವರ ಐದು ಸಾವಿರ ಕೆಜಿ ಕಸವನ್ನು ಬಳಸುತ್ತದೆ.ಆರುನೂರು ಜನರ ಕಸವನ್ನು ಬಳಸಿ,ಅವರ ವಿದ್ಯುಚ್ಚಕ್ತಿಯ ಬೇಡಿಕೆಯನ್ನಿದು ಪೂರೈಸುತ್ತದೆ.

ಯುಟ್ಯೂಬ್ ಮೂಲಕ ಸೆಲ್‌ಫೋನ್ ನಂಬರ್ ನೀಡಿದ ಭೂಪ

 ಯುಟ್ಯೂಬ್ ಎನ್ನುವ ಅಂತರ್ಜಾಲ ತಾಣದ ಬಗ್ಗೆ ನಿಮಗೆ ಗೊತ್ತಿದೆ. ಇದು ಗೂಗಲ್ ಗುಂಪಿನ ವಿಡಿಯೋ ತುಣುಕುಗಳನ್ನು ವಿನಿಮಯ ಮಾಡಿಕೊಳ್ಳುವ ತಾಣ. ಪಿಟ್ಸೆರಾಲ್ಡ್ ಎನ್ನುವ ನಿರುದ್ಯೋಗಿ ಯುವಕ ತನ್ನ ವಿಡಿಯೊ ತುಣುಕಿನಲ್ಲಿ "ನಾನು ಸದ್ಯ ಬಿಡುವಾಗಿದ್ದೇನೆ. ನಿಮ್ಮೊಡನೆ ಮಾತನಾಡಲು ನಾನು ಸಿದ್ಧ,ಈ ಸಂಖ್ಯೆಗೆ ಕರೆ ಮಾಡಿ" ಎಂದು ತನ್ನ ನಂಬರನ್ನು ನೀಡಿದ್ದೇ ಸರಿ-ತೆಗೊಳ್ಳಿ ಅವನಿಗೆ ಒಂದರ ಹಿಂದೆ ಒಂದು ಐದು ಸಾವಿರ ಕರೆಗಳು ಬಂದಿವೆ. ಲೇಖನ ಬರೆಯುವವರೆಗೆ ಆತ ಬಂದ ಕರೆಗಳಿಗೆ ಸಮಾಧಾನದಿಂದ ಉತ್ತರಿಸಿದ್ದಾನೆ. ಇನ್ನೇನು ಒಳಬರುವ ಉಚಿತ ಕರೆಗಳ ಸಮಾಯಾವಧಿ ಮುಗಿದು ಹೋಗಲಿದೆಯಂತೆ. ಆಮೇಲೆ ಒಳಕರೆಗಳಿಗೂ ದುಡ್ಡು ತೆತ್ತು ಮಾತನಾಡುವ ಪರಿಸ್ಥಿತಿ, ಆ ನಿರುದ್ಯೋಗಿ ಯುವಕನದ್ದು.ಪಾಪ ಎನ್ನೋಣವೇ?

ಉಬುಂಟು ಲೀನಕ್ಸ್ ಹೆಚ್ಚು ಬಳಕೆದಾರ ಸ್ನೇಹಿ ಲೀನಕ್ಸ್ಉಬುಂಟು

ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶದ ಹಲವು ವಿತರಣೆಗಳು ಲಭ್ಯ. ಉಬುಂಟು ಎನ್ನುವುದು ಈಗ ಜನಪ್ರಿಯ. ಲೀನಕ್ಸ್ ವಿತರಣೆಗಳ ಪೈಕಿ ಉಬುಂಟು ಬಳಸಲು ಹೆಚ್ಚು ಸರಳ ಎಂಬ ಅಭಿಪ್ರಾಯವಿದೆ. ಡೆಲ್ ಕಂಪೆನಿಯೂ ತನ್ನ ಲೀನಕ್ಸ್ ವ್ಯವಸ್ಥೆ ಜತೆ ಬರುವ ಕಂಪ್ಯೂಟರುಗಳಲ್ಲಿ ಇದನ್ನೇ ನೀಡಲು ಸಿದ್ಧತೆ ನಡೆಸಿದೆ. ಇಂಟರ್ನೆಟ್ ಬಳಸಲು ಉಬುಂಟು ಅನುವು ಮಾಡಿಕೊಡುವುದು ಧನಾತ್ಮಕ ಅಂಶ. ಡೆಲ್ ಯಂತ್ರಾಂಶಗಳು ಉಬುಂಟುವಿನ ಜತೆ ಸಮಸ್ಯೆ ಸೃಷ್ಟಿಸದೆ ಕಾರ್ಯಾಚರಿಸಲು ವಿನ್ಯಾಸಗೊಳಿಸಲಾಗಿದೆಯಂತೆ.ಅಂದ ಹಾಗೆ ಉಬುಂಟು ಮುಕ್ತ ತಂತ್ರಾಂಶದ ಹಿಂದಿನ ಚಾಲಕ ಶಕ್ತಿ ಮಾರ್ಕ್ ಶಟಲ್‍ವರ್ತ್,ಸ್ಪೇಸ್ ಶಟಲಿನಲ್ಲಿ ಹಾರಿದ ಮೊದಲ "ಪ್ರವಾಸಿ" ಬಾಹ್ಯಾಕಾಶಯಾನಿ.

ಅಂತರ್ಜಾಲದಲ್ಲಿ ಸೆನ್ಸಾರ್ ಬೇಡ:ಜನಾಭಿಪ್ರಾಯಕ್ಕೆ ಮಣಿದ ಡಿಗ್

 ಡಿಗ್ ಎನ್ನುವ ತಾಣದಲ್ಲಿ ಜನರು ತಮಗನಿಸಿದ್ದನ್ನು ಪ್ರಕಟಪಡಿಸಲು ಅವಕಾಶವಿದೆ. ಈ ತಾಣವನ್ನು ನಿರ್ವಹಿಸಲು ಹದಿನಾರು ಜನ ಸಾಕಾಗುವ ಹಿಂದಿನ ಗುಟ್ಟು ಇದೇ ಆಗಿದೆ. ಜನರಿಗೆ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಪ್ರಕಟಿಸಲು ಅವಕಾಶ ಇರುವ ಕಾರಣ ಅವರ ಬರಹಗಳನ್ನು ಯಾರೂ ತಿದ್ದುವುದಿಲ್ಲ. ಅದರೆ ಈ ವಾರ ಅದಕ್ಕೆ ಚ್ಯುತಿ ಬಂತು.ಹೊಸ ಎಚ್.ಡಿ. ಡಿವಿಡಿಗಳಲ್ಲಿ ಮತ್ತು ಬ್ಲೂರೇಡಿಸ್ಕ್‌ಗಳಲ್ಲಿ ದಾಖಲಿತ ಮಾಹಿತಿ, ಖರೀದಿಸಿದವರಿಗೆ ಮಾತ್ರಾ ಸಿಗುವಂತೆ ಗುಪ್ತಪದವನ್ನು ನೀಡಬೇಕಾಗುತ್ತದೆ.ಈ ಗೌಪ್ಯತೆಯನ್ನು ಮುರಿಯಲು ಶಕ್ತರಾದ ಕೆಲ ಟೆಕಿಗಳು, ಡಿವಿಡಿ ಬಳಸಲು ನೀಡಬೇಕಾದ ಗುಪ್ತಪದವನ್ನು ಡಿಗ್ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದರು. ಕಾಪಿರೈಟ್ ಕಾಯಿದೆಯನ್ನು ಉಲ್ಲಂಘಿಸಲು ನೆರವಾದುದಕ್ಕೆ ಡಿಗ್ ತಾಣದ ನಿರ್ವಾಹಕರಿಗೆ ಕೋರ್ಟು ನೋಟೀಸು ಬಂತು. ತಕ್ಷಣ ಜಾಗೃತರಾದ ಡಿಗ್ ತಾಣದ ನಿರ್ವಾಹಕರು, ಗುಪ್ತಪದವನ್ನು ಬಹಿರಂಗ ಪಡಿಸಿದ ಪುಟಗಳನ್ನು ತಾಣದಿಂದ ತೆರವುಗೊಳಿಸಿದರು.ಈ ಕ್ರಮದ ಬಗ್ಗೆ ವ್ಯಾಪಕ ಪ್ರತಿಭಟನೆ ಕಂಡು ಬಂತು. ಡಿವಿಡಿ ಕಂಪೆನಿಗಳ ಲಾಬಿಗೆ ಮಣಿದುದಕ್ಕೆ ಡಿಗ್‌ಗೆ ಜನ ಛೀಮಾರಿ ಹೇಳಿದರು. ಕೊನೆಗೇ ಜನಮತಕ್ಕೇ ಗೆಲುವಾಯಿತು. "ಆದದ್ದಾಗಲಿ, ನಾವು ಯಾವ ಪುಟವನ್ನೂ ಸೆನ್ಸಾರ್ ಮಾಡುವುದಿಲ್ಲ.ನ್ಯಾಯಾಲಯ ತಾಣವನ್ನು ಮುಚ್ಚಿಸಿದರೆ, ಹಾಗೇ ಆಗಲಿ", ಎಂದು ಅಂತರ್ಜಾಲ ತಾಣದ ನಿರ್ವಾಹಕರು ಪ್ರಕಟಿಸಿ,ವಿವಾದಕ್ಕೆ ಅಂತ್ಯ ಹೇಳಿದ್ದಾರೆ.

 ಗುರುಗ್ರಹದ (ವಿ)ಚಿತ್ರಗಳು

 ಗುರುಗ್ರಹದ ಉಪಗ್ರಹಗಳೂ ಸೇರಿದಂತೆ, ಗ್ರಹದ ಅನೇಕ ಸಮೀಪ ದೃಶ್ಯಗಳನ್ನು ಸೆರೆ ಹಿಡಿದು ಕಳುಹಿಸಿರುವ ನಾಸಾದ ಅತ್ಯಧಿಕ ವೇಗದ ಬಾಹ್ಯಾಕಾಶ ವಾಹನ ನ್ಯೂ ಹರೈಸನ್‌ನ ಚಿತ್ರಗಳು ಅತ್ಯಮೂಲ್ಯ ಮಾಹಿತಿಯನ್ನು ವಿಜ್ಞಾನಿಗಳಿಗೆ ನೀಡಿದೆ.ವಾಹನವೀಗಾಗಲೇ ಒಂದು ವರ್ಷವನ್ನು ಪ್ಲುಟೋವಿನತ್ತದ ತನ್ನ ಪ್ರಯಾಣದಲ್ಲಿ ಕಳೆದಿದೆ. ಏಳು ಕ್ಯಾಮರಾಗಳು ಹಿಡಿದ ಅಸಂಖ್ಯ ಚಿತ್ರಗಳು ಮೂವತ್ತನಾಲ್ಕು ಗಿಗಾಬಿಟ್‌ನಷ್ಟು ದೀರ್ಘವಾಗಿವೆ.ಗುರುವಿನ ನಾಲ್ಕು ಗುಲಾಮ ಉಪಗ್ರಹಗಳ ಚಿತ್ರಗಳನ್ನೂ ವಿಜ್ಞಾನಿಗಳು ಪಡೆದಿದ್ದಾರೆ.

*ಅಶೋಕ್‌ಕುಮಾರ್ ಎ