ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ...!
ಭಾರತ ದೇಶದ ಪ್ರಜಾಪ್ರಭುತ್ವ ಮೌಲ್ಯಗಳ ಹಿತದೃಷ್ಟಿಯಿಂದ ಒಂದು ನೇರ ಅಭಿಪ್ರಾಯ ವ್ಯಕ್ತಪಡಿಸುವುದು ಜವಾಬ್ದಾರಿ ಮತ್ತು ಅನಿವಾರ್ಯ. ಹಿಂದಿನ ತಪ್ಪುಗಳು ಇಂದಿನ ತಪ್ಪುಗಳಿಗೆ ಸಮರ್ಥನೆ ಆಗಬಾರದು. ನ್ಯಾಯದ ದಂಡ ಎಲ್ಲಾ ಕಾಲಕ್ಕೂ ಎಲ್ಲಾ ಸಂದರ್ಭಗಳಿಗೂ ಒಂದೇ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ನಿಧಾನವಾಗಿ ಸರ್ವಾಧಿಕಾರಿ ಧೋರಣೆಯತ್ತ ಶ್ರೀ ನರೇಂದ್ರ ಮೋದಿಯವರು ಸಾಗುತ್ತಿರುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
ಹಿಂದಿನ ಸರ್ಕಾರಗಳು ಮಾಡಿದ್ದ ಸಣ್ಣ ತಪ್ಪುಗಳನ್ನು ಶ್ರೀ ನರೇಂದ್ರ ಮೋದಿಯವರು ದೊಡ್ಡದಾಗಿ ಮಾಡುತ್ತಿದ್ದಾರೆ ನ್ಯಾಯಾಧೀಶರ ನಿವೃತ್ತಿಯ ನಂತರ ಮತ್ತೊಂದು ಪ್ರಮುಖ ಹುದ್ದೆ ನೀಡುವ ಮೂಲಕ… ಪರೋಕ್ಷವಾಗಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ಆಶಯವನ್ನು ಕೊಲ್ಲಲು ಅದಕ್ಕೆ ನಿಧಾನ ವಿಷ ಬೆರೆಸುತ್ತಿದ್ದಾರೆ. ಪ್ರಜೆಗಳ ನಂಬಿಕೆಯ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಈಗಾಗಲೇ ಬಹುತೇಕ ಮಾಧ್ಯಮಗಳು ಮಾರಾಟವಾಗಿವೆ, ಕಾರ್ಯಾಂಗ ಬಹುತೇಕ ಗುಲಾಮಗಿರಿಯ ಹಾದಿಯಲ್ಲಿದೆ. ನ್ಯಾಯಾಂಗವೂ ಶಿಥಿಲವಾದರೆ ಪ್ರಜಾಪ್ರಭುತ್ವದ ಸಮಾಧಿಗೆ ಅಡಿಪಾಯ ಹಾಕಿದಂತಾಗುತ್ತದೆ.
ನ್ಯಾಯಾಂಗದ ಅತ್ಯುನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಯೊಬ್ಬರು ನಿವೃತ್ತಿಯ ನಂತರ ಮತ್ತೆ ಕಾರ್ಯಾಂಗ ಅಥವಾ ಶಾಸಕಾಂಗದ ಪ್ರಮುಖ ಹುದ್ದೆಗೆ ನೇಮಕವಾದರೆ ಅದು ಯಾವ ಸಂದೇಶ ನೀಡುತ್ತದೆ. ಅವರ ಅನುಭವದ ಉಪಯೋಗ ಮಾತ್ರವೇ ಅಥವಾ ಅದಕ್ಕಿಂತ ಹೆಚ್ಚಿನ ಒಳ ಅರ್ಥಗಳಿವೆಯೇ? ನಿವೃತ್ತ ನ್ಯಾಯಾಧೀಶರಿಗೂ ಸ್ವಲ್ಪ ಮಾನ ಮರ್ಯಾದೆ ಬೇಡವೇ. ಈ ರೀತಿ ನಿವೃತ್ತಿಯ ನಂತರ ಮತ್ತೊಂದು ಹುದ್ದೆಯನ್ನು ಪಡೆದರೆ ನ್ಯಾಯಾಂಗದ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಏನಾಗಬಹುದು. ಇಡೀ ನಂಬಿಕೆಯ ಸೌಧವೇ ಕುಸಿದು ಬೀಳುವುದಿಲ್ಲವೇ?
ಒಂದು ರೀತಿಯಲ್ಲಿ ಹೇಳುವುದಾದರೆ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಾಧೀಶರ ಹುದ್ದೆಗಿಂತ ರಾಜ್ಯಪಾಲ ಅಥವಾ ರಾಜ್ಯಸಭೆಯ ಸದಸ್ಯತ್ವ ದೊಡ್ಡದೇನು ಅಲ್ಲ. ಜೊತೆಗೆ 65 ವರ್ಷ ವಯಸ್ಸಿನವರೆಗೆ ನ್ಯಾಯಾಂಗದ ವಿವಿಧ ಹುದ್ದೆಯಲ್ಲಿ ನ್ಯಾಯ ದೇವತೆಯಂತೆ ಕುಳಿತು ತೀರ್ಪು ನೀಡಿ ಅದನ್ನು ಇಡೀ ದೇಶ ಪ್ರಶ್ನಿಸದೆ ಒಪ್ಪಿಕೊಳ್ಳುವಷ್ಟು ನಂಬಿಕೆ ಇರುವಾಗ ನಿವೃತ್ತಿಯ ನಂತರ ಯಾವುದೋ ಒಂದು ಪಕ್ಷ ನೀಡುವ ಅಧಿಕಾರದ ಆಸೆಗೆ ಬಲಿಯಾದರೆ ಅದು ಬಹುತೇಕ ನೇರ ಭ್ರಷ್ಟಾಚಾರಕ್ಕೆ ಸಮ.
ಇದನ್ನು ಬೇರೆ ಬೇರೆ ರೀತಿಯಲ್ಲಿ ಅನುಕೂಲಕರ ವಾದಗಳನ್ನು ಮಂಡಿಸಿ ಸಮರ್ಥಿಸಿಕೊಳ್ಳಬಹುದು. ಮುಖ್ಯ ನ್ಯಾಯಾಧೀಶರಾಗಿದ್ದ ರಂಜನ್ ಗಗೋಯಿ ಅವರು ಒಂದು ಟಿವಿ ಸಂದರ್ಶನದಲ್ಲಿ ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡಿದ್ದನ್ನು ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ಸಮರ್ಥಿಸಿಕೊಂಡರು. ಕಳ್ಳನ ಪರವಾಗಿ ತೀರ್ಪು ನೀಡಿ ಮುಂದೆ ನಿವೃತ್ತಿಯ ನಂತರ ಕಳ್ಳನ ಮನೆಯಲ್ಲಿಯೇ ಆಶ್ರಯ ಪಡೆದು ಇದು ನನ್ನ ಹಕ್ಕು ಮತ್ತು ಸ್ವಾತಂತ್ರ್ಯ ಎಂದು ಸಮರ್ಥಿಸಿಕೊಂಡರೆ ಅದನ್ನು ಯಾವ ರೀತಿ ಅರ್ಥೈಸಬೇಕು. ಕನಿಷ್ಠ ಸಾರ್ವಜನಿಕ ಸಂಕೋಚವಾದರೂ ಬೇಡವೇ?
ಹಾಗೆಯೇ ನರೇಂದ್ರ ಮೋದಿಯವರ ತಾಳ್ಮೆಯ ಮಟ್ಟ ಕುಸಿದು ಅಸಹನೆ ಬೇಗ ಪ್ರಕಟಗೊಳ್ಳುತ್ತಿದೆ. ಅವರಿಗೆ ಸಿಗುತ್ತಿರುವ ಜನಪ್ರಿಯತೆ ಮತ್ತು ಚುನಾವಣಾ ವಿಜಯಗಳಿಂದ ಈ ರೀತಿ ಆಗುತ್ತಿರಬಹುದು. ಬಿಬಿಸಿ ಎಂಬ ಒಂದು ಸುದ್ದಿ ಸಂಸ್ಥೆ ಅವರ ಬಗ್ಗೆ ಕೆಲವು ಗಂಭೀರ ಟೀಕೆಗಳನ್ನು ಮಾಡಿರಬಹುದು. ಸಾರ್ವಜನಿಕ ಜೀವನದಲ್ಲಿ ಅದು ಸಹಜ. ಅದನ್ನೇ ನೆಪವಾಗಿಟ್ಟುಕೊಂಡು ಸೇಡಿನ ರೀತಿಯಲ್ಲಿ ಅದರ ಮೇಲೆ ತಕ್ಷಣವೇ ಆದಾಯ ತೆರಿಗೆ ದಾಳಿ ಮಾಡಿಸುವುದು ಸರ್ವಾಧಿಕಾರಿ ಧೋರಣೆ ಎಂಬುದರಲ್ಲಿ ಸಂಶಯವಿಲ್ಲ. ಈಗಾಗಲೇ ಈ ರೀತಿ ಕೆಲವು ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಇರುವಾಗ ಇದು ಅದಕ್ಕೆ ಸಾಕ್ಷ್ಯ ಒದಗಿಸಿದಂತೆ ಆಗಿದೆ.
ಹೌದು, ಯಾವುದೂ ದೇಶದ ಕಾನೂನಿಗಿಂತ ದೊಡ್ಡದಲ್ಲ ನಿಜ. ಆದರೆ ಈ ದಾಳಿಯಲ್ಲಿ ಸೇಡು ಪ್ರಮುಖ ಪಾತ್ರ ವಹಿಸಿದಂತಿದೆ. ಬಿಬಿಸಿ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿ ಅದಕ್ಕೆ ಛೀಮಾರಿ ಹಾಕಿಸುವ ಅವಕಾಶ ಇದ್ದರೂ ಅದಕ್ಕಿಂತ ಭಿನ್ನ ಮಾರ್ಗ ತುಳಿದದ್ದು ಒಳ್ಳೆಯದಲ್ಲ. ನರೇಂದ್ರ ಮೋದಿಯವರ ವೈಯಕ್ತಿಕ ಅಭಿಮಾನಿಗಳೇ ಮತ್ತು ಅವರ ಕಾರ್ಯವೈಖರಿಯನ್ನು ಮೆಚ್ಚುವವರೇ,
ಧರ್ಮ ರಕ್ಷಣೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಸರ್ವಾಧಿಕಾರಿಯೊಬ್ಬ ಹುಟ್ಟುವ ಲಕ್ಷಣಗಳನ್ನು ಗುರುತಿಸಿ ನಿಧಾನವಾಗಿ ಯೋಚಿಸಿ, ಸಮಗ್ರವಾಗಿ ಚಿಂತಿಸಿ ದಯವಿಟ್ಟು ಅಭಿಪ್ರಾಯ ರೂಪಿಸಿಕೊಳ್ಳಿ. ಹಿಂದೆ ಇದೇ ರೀತಿಯ ಅಸಹನೆಗೆ ಒಳಗಾದ ಶ್ರೀಮತಿ ಇಂದಿರಾ ಗಾಂಧಿಯವರು " ತುರ್ತು ಪರಿಸ್ಥಿತಿ " ಹೇರಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಅದನ್ನು ಖಂಡಿಸುವ ಮನಸ್ಸಿನವರು ಇದು ಬೇರೆ ರೂಪದಲ್ಲಿ ಜಾರಿಯಾಗುವ ಎಚ್ಚರಿಕೆಯನ್ನು ಪ್ರದರ್ಶಿಸಬೇಕು. ಮೋದಿಯವರ ಆರಾಧಕರು ನೀವಾಗಿದ್ದರೆ ಅದು ನಿಮ್ಮ ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಆದರೆ ದೇಶ ಮತ್ತು ಪ್ರಜಾಪ್ರಭುತ್ವ ಅದಕ್ಕಿಂತ ಮುಖ್ಯ ಎಂದು ನೆನಪಿಸುತ್ತಾ....
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ