ದಯವಿಟ್ಟು ಯೋಚಿಸಿ ಯಾವುದು ನಮ್ಮ ಆಯ್ಕೆ…?

ದಯವಿಟ್ಟು ಯೋಚಿಸಿ ಯಾವುದು ನಮ್ಮ ಆಯ್ಕೆ…?

ಸೌಹಾರ್ದ V/S ಗಲಭೆ,

ಪ್ರೀತಿ V/S ದ್ವೇಷ,

ಸಂವಿಧಾನ V/S ಧರ್ಮ,

ಸಂಯಮ V/S ಉದ್ವೇಗ,

ಸರ್ಕಾರ V/S ಸಂಸ್ಥೆಗಳು,

ಹೊಂದಾಣಿಕೆ V/S ಹಠ,

ಶಾಂತಿ V/S ಅಶಾಂತಿ,

ಅಭಿವೃದ್ಧಿ V/S ವಿನಾಶ,

ಸಮಗ್ರತೆ V/S ಸಂಕುಚಿತತೆ...

ದಯವಿಟ್ಟು ಯೋಚಿಸಿ ಯಾವುದು ನಮ್ಮ ಆಯ್ಕೆ…?

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಯಾರೇ ಆಗಿರಲಿ ನಮ್ಮ ಆಯ್ಕೆ ಎಡ ಭಾಗದ  ಅಂಶಗಳೇ ಆಗಿರಬೇಕು. ಆಗಲೇ ದೇಶ ಸಮಾಜ ನಾಗರಿಕತೆಯತ್ತ ಸಾಗುವುದು. ಒಂದು ವೇಳೆ ನಮ್ಮ ಆಯ್ಕೆಗಳು ಬಲ  ಭಾಗದ ಅಂಶಗಳಾಗಿದ್ದರೆ ಇಡೀ ದೇಶ ಅಸಹನೆಯಿಂದ ನರಳುತ್ತದೆ. ಈಗ ದೇಶ ಎತ್ತ ಸಾಗುತ್ತಿದೆ ಎಂದು ಊಹಿಸಬಹುದು. ಹಾಗಾದರೆ ಭವಿಷ್ಯದ ದಿನಗಳು ಹೇಗಿರಬಹುದು ?

ಮೊದಲೇ ಹೇಳಿದಂತೆ ಇದೆಲ್ಲವೂ ಯಾವುದೋ ಅನಾಹುತದ ಮುನ್ಸೂಚನೆ ಎಂದೇ ಭಾಸವಾಗುತ್ತಿದೆ. ಅದು‌ ನಾಳೆಯೇ ಸಂಭವಿಸದಿರಬಹುದು. ಆದರೆ ‌ಮುಂದೆ ಆ ಸಾಧ್ಯತೆ ಹೆಚ್ಚಾಗಿದೆ. ಇಲ್ಲಿ ಸರಿ ತಪ್ಪುಗಳ ವಿಮರ್ಶೆಗಿಂತ ಎರಡು ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯ ಹೋಗಲಾಡಿಸುವುದೇ ಬಹುಮುಖ್ಯ ಆಧ್ಯತೆಯಾಗಬೇಕು. ವಾದಕ್ಕೆ ನಿಂತರೆ ಎಲ್ಲರೂ ಅವರವರದೇ ಚಿಂತನೆಗಳನ್ನು ಮುಂದಿಡುತ್ತಾರೆ. ಇದರಲ್ಲಿ ಸಾಮಾನ್ಯ ಜನರ ಹಿತಾಸಕ್ತಿ ಮಾತ್ರ ಕಾಣುವುದೇ ಇಲ್ಲ.

ಹಿಂದೂ ಮುಸ್ಲಿಂ ಧರ್ಮಗಳು ಮನೆಯೊಳಗೆ,

ಸಂವಿಧಾನ ಕಾನೂನು ಮನದೊಳಗೆ,

ಭಾರತೀಯತೆ ಎಲ್ಲರೊಳಗೆ,

ಮಾನವೀಯತೆ ನಮ್ಮೊಳಗೆ....

" ಸೌಹಾರ್ದ ಸತ್ಯಾಗ್ರಹ "

ದಿನಾಂಕ : 10/03/2022, ಭಾನುವಾರ

ಸಮಯ : ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ....

ಸ್ಥಳ : ಸ್ವಾತಂತ್ರ್ಯ ಉದ್ಯಾನವನ. ಬೆಂಗಳೂರು

ನಿರಂತರ 9 ಗಂಟೆಗಳ ಚರ್ಚೆ ಸಂವಾದ 

ಉದ್ದೇಶ :  ನಮ್ಮೊಳಗೆ ಒಂದು ಅಂತರಂಗದ ಚಳವಳಿ.

ಹಣವೇ ಮೌಲ್ಯಗಳಾಗಿ,

ಅಧಿಕಾರವೇ ಧರ್ಮವಾಗಿ,

ಪ್ರಚಾರವೇ ಸಂಪ್ರದಾಯವಾಗಿ,

ವಂಚನೆಯೇ ವೃತ್ತಿಯಾಗಿ,

ಮುಖವಾಡಗಳೇ ಸಹಜ ಗುಣಗಳಾಗಿ,

ಮಾರ್ಪಾಡಾಗುತ್ತಿರುವ ಈ ಹೊತ್ತಿನಲ್ಲಿ...

ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ. ಅದಕ್ಕಾಗಿ ಈ ಕ್ಷಣದಿಂದಲೇ ಮೌನವಾಗಿ ಪ್ರಾರಂಭಿಸೋಣ. ಹಣದ ಮೋಹ ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ, ಮಾನವೀಯ ಮೌಲ್ಯಗಳ ಪಾಲನೆ ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ, ದ್ವೇಷವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ, ಪ್ರೀತಿಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ, ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ, ತಾಳ್ಮೆಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ, ಸ್ವಾರ್ಥವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ, ತ್ಯಾಗವನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ, ಗಲಾಟೆಗಳನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ, ಸ್ನೇಹಿತರನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ, ಭ್ರಮೆಗಳನ್ನು ಸ್ವಲ್ಪ ದೂರ ಮಾಡೋಣ, ವಾಸ್ತವಕ್ಕೆ ಸ್ವಲ್ಪ ಹತ್ತಿರವಾಗೋಣ, ಬೂಟಾಟಿಕೆ ಸ್ವಲ್ಪ ಕಡಿಮೆ ಮಾಡೋಣ, ನ್ಯೆಜತೆಗೆ ಸ್ವಲ್ಪ ಹೆಚ್ಚು ಒತ್ತು ಕೊಡೋಣ, ಎಲ್ಲವನ್ನೂ ನಿಮ್ಮ ಕುಟುಂಬಕ್ಕಾಗಿ ಮಾಡಿ, ಆದರೆ ಸಮಾಜಕ್ಕಾಗಿ ಸ್ವಲ್ಪವಾದರೂ ಕೊಡಿ, ಎಲ್ಲವೂ ನಿಮಗಾಗಿ, ನೀವು ಮಾತ್ರ ಇತರರಿಗಾಗಿ, ವಾಸ್ತವ ಮನಸ್ಥಿತಿಗೆ ಹೆಚ್ಚು ಹತ್ತಿರವಾಗಿ, ಈಗಿನಿಂದಲೇ ಪ್ರಯತ್ನಿಸಿ, ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಎಲ್ಲರಿಗೂ ಒಳ್ಳೆಯದಾಗಲಿ. ದಯವಿಟ್ಟು ಪ್ರಬುದ್ಧ ಮನಸ್ಸುಗಳು - ಪ್ರೀತಿಯ ಮನಸ್ಸುಗಳು - ಶಾಂತಿಯ ಮನಸ್ಸುಗಳು ಭಾಗವಹಿಸಿ. ಇದು ಸಮಾಜದ ಒಳಿತಿಗಾಗಿ ನಮ್ಮ ನಿಮ್ಮ ಸ್ಪಂದನೆ. ನಿಮಗೆ ತುಂಬು ಹೃದಯದಿಂದ ಸುಸ್ವಾಗತ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು