ದಯವಿಟ್ಟು ಯೋಚಿಸಿ...

ದಯವಿಟ್ಟು ಯೋಚಿಸಿ...

ಇನ್ನೂ ನಾವುಗಳು ಮೌನವಾಗಿದ್ದರೆ ನಮ್ಮ ಜನ ಪ್ರತಿನಿಧಿಗಳು ಇನ್ನಷ್ಟು ತಲೆಯ ಮೇಲೆ ಕುಳಿತುಕೊಳ್ಳುವುದು ನಿಶ್ಚಿತ. ಅವರಿಗೆ ಬಿಸಿ ತಾಗಿಸಲೇ ಬೇಕಿದೆ. ಇಲ್ಲದಿದ್ದರೆ ಅವರ ಭಾಷೆ ವರ್ತನೆ ತೀರಾ ಕೆಳಮಟ್ಟಕ್ಕೆ ಇಳಿದು ನಮ್ಮ ಮಕ್ಕಳ ಭವಿಷ್ಯ ಹಾಳಾಗುವುದು ಮತ್ತು ನಮ್ಮ ತೆರಿಗೆ ಹಣವನ್ನು ಅವರು ಮಜಾ ಉಡಾಯಿಸುವುದು ನಿಲ್ಲುವುದೇ ಇಲ್ಲ.

ಅಬ್ಬಬ್ಬಾ ಏನು ಭಾಷೆ…? ಶಾಸಕರು ಮಂತ್ರಿಗಳು ರಾಜಕೀಯ ಅನುಭವಿಗಳಾಗಿದ್ದರೂ ಸಹ ಕನಿಷ್ಠ ಸಂಸ್ಕಾರದ ಗಂಧ ಗಾಳಿಯೂ ಇಲ್ಲದಂತೆ ಬಾಯಿಗೆ ಬಂದಂತೆ ಅತಿಯಾದ ಕುಡುಕರು ಮಾತನಾಡಿದಂತೆ ಚರಂಡಿಯ ಕೊಚ್ಚೆ ಭಾಷೆಯಲ್ಲಿ ಬೊಗಳುತ್ತಾರೆ. ಈ ಮಾತು ಕೇಳಲು ನಾವು ಕಷ್ಟ ಪಟ್ಟು ಸರತಿ ಸಾಲಿನಲ್ಲಿ ನಿಂತು ಪವಿತ್ರ ಎಂದು ಕರೆಯಲ್ಪಡುವ ಮತದಾನ ಮಾಡಬೇಕು...ಛೇ ಛೇ..... 

ಹಿರಿಯರ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ ಇದು ಮಾಧ್ಯಮಗಳ ಮುಖಾಂತರ ಇಡೀ ಜನ ಸಮೂಹಕ್ಕೆ ತಲುಪಿ ಅವರೂ ಅದೇ ರೀತಿ ವರ್ತಿಸುತ್ತಾರೆ. ಕೋತಿ ವನ ಕೆಡಿಸಿದಂತೆ, ಅವರ ಹಿಂಬಾಲಕರು ಅಥವಾ ಅವರ ಪಕ್ಷದ ಬೆಂಬಲಿಗರು ಸಹ ಈ ಅಯೋಗ್ಯ ನಾಯಕರನ್ನು ಅವರ ದುಷ್ಟ ಸಂಸ್ಕಾರ ಸಮೇತ ಬೆಂಬಲಿಸುವುದು ಮತ್ತಷ್ಟು ಅಪಾಯಕಾರಿ ಸನ್ನಿವೇಶ ಸೃಷ್ಟಿಸುತ್ತಿದೆ.

ಹಿಂದೆ ಮಕ್ಕಳ ಬಾಯಲ್ಲಿ ಹೊಲಸು ಮಾತುಗಳು ಬಂದರೆ ಹಿರಿಯರು ಸಹಿಸುತ್ತಿರಲಿಲ್ಲ. ಅದನ್ನು ಗಂಭೀರವಾಗಿ ಪರಿಗಣಿಸಿ ಸಾಮಾ ದಾನ ದಂಡ ಪ್ರಯೋಗಿಸಿ ಅವರನ್ನು ಪರಿವರ್ತಿಸಲು ಪ್ರಯತ್ನಿಸುತ್ತಿದ್ದರು. ದುರಂತವೆಂದರೆ ಈಗ ಬಹುತೇಕ ಜನ ಅದನ್ನು ಆಸ್ವಾಧಿಸುತ್ತಿದ್ದಾರೆ. ವ್ಯವಸ್ಥೆಯ ಮಲಿನತೆಗೆ ಇದಕ್ಕಿಂತ ಉದಾಹರಣೆ ಬೇಕೆ?

ಭ್ರಷ್ಟಾಚಾರ ಜಾತಿ ವ್ಯವಸ್ಥೆ ಧರ್ಮದ ಅಮಲು ಹಣ ಹೆಂಡದ ಹಂಚುವಿಕೆ ಎಲ್ಲವನ್ನೂ ಸಹಜವಾಗಿ ಸ್ವೀಕರಿಸುತ್ತಿರುವ ನಾವುಗಳು ಈಗ ಈ ಅಸಹ್ಯಕರ ಮಾತುಗಳನ್ನು ಸಹಜ ಎಂದು ಸ್ವೀಕರಿಸುವ ಹಂತ ತಲುಪಿದ್ದೇವೆ. ವ್ಯಕ್ತಿ ಯಾರೇ ಇರಲಿ, ಪಕ್ಷ ಧರ್ಮ ಜಾತಿ ಪ್ರದೇಶ ಯಾವುದೇ ಆಗಿರಲಿ, ಹಣ ಅಧಿಕಾರ ಎಷ್ಟೇ ಇರಲಿ ಕನಿಷ್ಠ ಪ್ರಮಾಣದ ಸಾರ್ವಜನಿಕ ನಡವಳಿಕೆ ಪಾಲಿಸಲೇ ಬೇಕು. ಇಲ್ಲದಿದ್ದರೆ ಅಂತಹವರನ್ನು ಸಾಮೂಹಿಕ ಬಹಿಷ್ಕಾರಕ್ಕೆ ಒಳಪಡಿಸುವ ವ್ಯವಸ್ಥೆ ರೂಪಿಸಬೇಕು.

ಅದಕ್ಕಾಗಿ ಬಹುದೊಡ್ಡ ಚಳವಳಿ ಅಥವಾ ಪ್ರತಿಭಟನೆ ಅಥವಾ ಪ್ರದರ್ಶನದ ಅವಶ್ಯಕತೆ ಇಲ್ಲ. ಮಾಧ್ಯಮಗಳು, ಧರ್ಮಾಧಿಕಾರಿಗಳು, ಶಿಕ್ಷಕರು ಒಂದಷ್ಟು ಆಸಕ್ತಿ ವಹಿಸಿ ಈ ರೀತಿಯ ಅಸಭ್ಯ ಪದಗಳನ್ನು ಸಾರ್ವಜನಿಕವಾಗಿ ಬಳಸುವ ವ್ಯಕ್ತಿಗಳಿಗೆ ಬಹಿರಂಗವಾಗಿ ಛೀಮಾರಿ ಹಾಕಿ ಇಂತಹವರಿಗೆ ನಮ್ಮಲ್ಲಿ ಪ್ರವೇಶ ಇಲ್ಲ ಎಂದು ಘೋಷಿಸಲಿ. ಆಗ ಇದನ್ನೇ ನೆಪವಾಗಿ ಇಟ್ಟುಕೊಂಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಪ್ರತಿನಿಧಿಗಳನ್ನು ನೈತಿಕವಾಗಿ ಬಹಿಷ್ಕರಿಸುವ ಪರಿಪಾಠ ಪ್ರಾರಂಭಿವಾದರೆ ಕನಿಷ್ಠ ಒಂದಷ್ಟು ಜಾಗೃತಿ ಮೂಡಿಬಹುದು.

ಒಳ್ಳೆಯ ಸಮಾಜದ ಕನಸು ಕಾಣುವ, ಒಳ್ಳೆಯ ಆಡಳಿತದ ಕನಸು ಕಾಣುವ, ಸಾರ್ವಜನಿಕವಾಗಿ ಒಳ್ಳೆಯ ಮಾತುಗಳನ್ನಾಡುವ ಪ್ರಜ್ಞಾವಂತ ಸಮುದಾಯ ಸಮಾಜಕ್ಕಾಗಿ ಕನಿಷ್ಠ ಇಷ್ಟಾದರೂ ಪ್ರಯತ್ನಿಸುವುದು ಬೇಡವೇ?

ಹಾಗೆಯೇ ಸಾಮಾನ್ಯ ನಾಗರಿಕರಾದ ನಾವು ಕೂಡ ಈ ನಿಟ್ಟಿನಲ್ಲಿ ನಮ್ಮ ಹಂತದಲ್ಲಿ ಈ ದುಷ್ಟ ಶಕ್ತಿಗಳನ್ನು ನಿಯಂತ್ರಿಸಲು ಹೇಗೆ ಸಾಧ್ಯ ಎಂದು ಯೋಚಿಸೋಣ. ಸಾಮಾಜಿಕ ಜಾಲತಾಣಗಳ ಮುಖಾಂತರ ಅವರಿಗೆ ಹೇಗೆ ಪಾಠ ಚಲಿಸಬಹುದು ದಯವಿಟ್ಟು ಯೋಚಿಸಿ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ