ದಯಾಮಯಿ ಸಿದ್ಧಾರ್ಥ
ಆತ ಬುದ್ಧನಾಗುವ ಮೊದಲು ಸಿದ್ಧಾರ್ಥನಾಗಿದ್ದ. ರಾಜಕುಮಾರನಾಗಿದ್ದ. ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದ. ಆದರೆ ಬಡವರ ಮೇಲೆ ಕರುಣೆ, ಮಮಕಾರ ಯಥೇಚ್ಛವಾಗಿತ್ತು ಸಿದ್ಧಾರ್ಥನಿಗೆ. ಪ್ರಾಣಿ ಪಕ್ಷಿಗಳ ಮೇಲೂ ಅವನಿಗೆ ಕರುಣೆಯಿತ್ತು. ರೋಗಪೀಡಿತ, ಮುದುಕ ವ್ಯಕ್ತಿಗಳನ್ನು ನೋಡಿ ಮುಂದೊಂದು ದಿನ ತಾನೂ ಹಾಗೇ ಆಗುತ್ತೇನೆ, ಬದುಕು ನಶ್ವರ ಎಂದು ತಿಳಿದ ಸಿದ್ಧಾರ್ಥ, ಒಂದು ರಾತ್ರಿ ಜಗವೆಲ್ಲಾ ಮಲಗಿರಲು ಅವನೆದ್ದು ಅರಮನೆ, ಹೆಂಡತಿ, ಮಗನನ್ನು ಬಿಟ್ಟು ಬುದ್ಧತ್ವವನ್ನು ಸಂಪಾದಿಸಲು ತೆರಳುತ್ತಾನೆ. ಬೋಧಿ ವೃಕ್ಷದ ಅಡಿಯಲ್ಲಿ ಸಿದ್ಧಾರ್ಥನಿಗೆ ಜ್ಞಾನೋದಯವಾಗುತ್ತದೆ. ನಂತರ ಅವನು ಬುದ್ಧ ಅಥವಾ ಗೌತಮ ಬುದ್ಧನಾಗುತ್ತಾನೆ. ಬುದ್ಧ ಬಾಲ್ಯದಲ್ಲಿ ಸಿದ್ಧಾರ್ಥನಾಗಿದ್ದಾಗ ನಡೆದ ಒಂದು ಘಟನೆಯ ಕಥೆಯಿದು.
ಒಮ್ಮೆ ಬಾಲಕ ಸಿದ್ಧಾರ್ಥ ಅರಮನೆಯ ಉದ್ಯಾನವನದಲ್ಲಿ ಆಡುತ್ತಾ ಇದ್ದ. ಸಿದ್ಧಾರ್ಥನ ತಂದೆ ಮಹಾರಾಜ ಶುದ್ಧೋದನ. ಆತ ತನ್ನ ಮಗನಿಗಾಗಿ ಸುಂದರವಾದ ಹೂದೋಟವನ್ನು ನಿರ್ಮಾಣ ಮಾಡಿದ್ದ. ಸಿದ್ಧಾರ್ಥನಿಗೆ ಬಾಲ್ಯದಿಂದಲೇ ಪ್ರಾಣಿ ಪಕ್ಷಿಗಳ ಮೇಲೆ ವಿಪರೀತ ಮಮಕಾರ. ಹೀಗೆ ಆಡುತ್ತಿರುವಾಗ ಆಕಾಶದಿಂದ ಕರುಣಾಜನಕವಾದ ಚೀತ್ಕಾರ ಕೇಳಿ ಬಂತು. ನೋಡುವಷ್ಟರಲ್ಲೇ ಒಂದು ಹಂಸ ಪಕ್ಷಿಯೊಂದು ದೊಪ್ಪನೆ ಅವನ ಬಳಿ ಬಂದು ಬಿತ್ತು.
ರಾಜಕುಮಾರ ಸಿದ್ಧಾರ್ಥ ನೋಡುವಾಗ ಬಾಣದ ಏಟಿಗೆ ಹಂಸ ಪಕ್ಷಿ ಗಾಯಾಳುವಾಗಿ ಬಿದ್ದಿತ್ತು. ಅದನ್ನು ಗಾಯ ಗೊಳಿಸಿದ ಬಾಣ ಇನ್ನೂ ಆ ಹಕ್ಕಿಯ ಮೈಯಲ್ಲೇ ಇತ್ತು. ಜೀವವಿನ್ನೂ ಹೋಗಿರಲಿಲ್ಲ. ಗಾಯವೂ ತುಂಬಾ ದೊಡ್ಡದಾಗಿರಲಿಲ್ಲ. ಇದನ್ನು ನೋಡಿದ ಸಿದ್ಧಾರ್ಥನಿಗೆ ತುಂಬಾ ನೋವಾಯಿತು. ಅವನು ಆ ಬಾಣವನ್ನು ಹಕ್ಕಿಯ ಮೈಯಿಂದ ಕಿತ್ತು ತೆಗೆದ.
ಆ ಬಾಣ ನಾಟಿದರೆ ಎಷ್ಟು ನೋವಾಗಬಹುದು ಎಂದು ನೋಡಲು ಆ ಬಾಣವನ್ನು ತನ್ನ ಮೈಗೆ ಚುಚ್ಚಿ ನೋಡಿದ. ನೋವಿನಿಂದ ಅವನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ನನಗೇ ಇಷ್ಟು ನೋವಾಗಬಹುದಾದರೆ ಈ ಪುಟ್ಟ ಹಕ್ಕಿಗೆ ಎಷ್ಟು ನೋವಾಗಿರಬಹುದು ಎಂದು ಅವನ ಮನವು ಚಿಂತಿಸಿತು.
ಅವನು ಕೂಡಲೇ ಆ ಹಕ್ಕಿಯ ಗಾಯವನ್ನು ತೊಳೆದು, ಅದಕ್ಕೆ ಮದ್ದನ್ನು ಹಚ್ಚಿದ. ನಂತರ ಆ ಹಂಸ ಪಕ್ಷಿಯನ್ನು ಎದೆಗೊತ್ತಿಕೊಂಡು ಮುದ್ದು ಮಾಡಲಾರಂಭಿಸಿದ. ಅಷ್ಟರಲ್ಲಿ ಅವರ ಸೋದರ ಸಂಬಂಧಿಯಾದ ದೇವದತ್ತನ ಧ್ವನಿಯು ದೂರದಿಂದ ಕೇಳಲಾರಂಭಿಸಿತು. ಆತ ತುಂಬಾ ಕೆಟ್ಟ ಸ್ವಭಾವದವನಾಗಿದ್ದ. ಬೇಟೆಯಾಡುವುದು ಅವನ ಮೆಚ್ಚಿನ ಹವ್ಯಾಸವಾಗಿತ್ತು. ಪ್ರಾಣಿ ಪಕ್ಷಿಗಳನ್ನು ಬೇಟೆಯಾಡುವುದೆಂದರೆ ಅವನಿಗೆ ಪಂಚ ಪ್ರಾಣ. ಈ ಹಂಸ ಪಕ್ಷಿಯನ್ನು ಅವನೇ ಬಾಣ ಹೂಡಿ ಹೊಡೆದು ಉರುಳಿಸಿದ್ದ.
ಸಿದ್ಧಾರ್ಥನ ಬಳಿ ಇದ್ದ ಹಂಸ ಪಕ್ಷಿಯನ್ನು ನೋಡುತ್ತಲೇ ಅವನು ಹೇಳಿದ' ಈ ಹಂಸ ನನ್ನದು, ನಾನು ಅದನ್ನು ಹೊಡೆದದ್ದು. ಅದನ್ನು ನನಗೆ ಕೊಟ್ಟು ಬಿಡು' ಎಂದ.
‘ನಾನು ಅದನ್ನು ಜೋಪಾನ ಮಾಡಿದ್ದೇನೆ. ಆದುದರಿಂದ ಆ ಹಕ್ಕಿ ನನ್ನದು' ಎಂದ ಸಿದ್ಧಾರ್ಥ.
‘ನಾನು ಹೊಡೆದ ಬಾಣವೂ ಇಲ್ಲಿದೆ. ಆ ಕಾರಣದಿಂದ ಆ ಹಕ್ಕಿಯ ಹಕ್ಕು ನನ್ನದೇ ಆಗುತ್ತದೆ. ಕೊಟ್ಟು ಬಿಡು ನನಗೆ ‘ ಎಂದ ಕೋಪದಿಂದ ದೇವದತ್ತ.
‘ನೀನು ಹೊಡೆದಿರಬಹುದು, ಆದರೆ ನಾನು ಅದನ್ನು ರಕ್ಷಿಸಿದ್ದೇನೆ. ನೀನು ನಿರಪರಾಧಿ ಪಕ್ಷಿಯ ಮೇಲೆ ಬಾಣ ಪ್ರಯೋಗ ಮಾಡಿರುವೆ. ಅದು ತಪ್ಪಲ್ಲವೇ? ಈ ಬಾಣ ನಿನಗೆ ತಗುಲಿದರೆ ಎಷ್ಟು ನೋವಾಗುತ್ತದೆಯೋ ಅದೇ ನೋವನ್ನು ಆ ಪಕ್ಷಿ ಅನುಭವಿಸುತ್ತಿದೆ. ನಾನು ಅದನ್ನು ನಿನಗೆ ಕೊಡಲಾರೆ. ನಾನು ಅದನ್ನು ಗುಣವಾಗುವ ತನಕ ಉಪಚರಿಸಿ ಮತ್ತೆ ಹಾರಾಡಲು ಬಿಡುತ್ತೇನೆ' ಎಂದ ಸಿದ್ಧಾರ್ಥ.
ಆದರೆ ದೇವದತ್ತ ಸಿದ್ದಾರ್ಥನಂತೆ ದಯಾಮಯಿಯಾಗಿರಲಿಲ್ಲ. ಆತ ಆ ಹಕ್ಕಿಗಾಗಿ ಸಿದ್ಧಾರ್ಥನೊಡನೆ ಜಗಳವಾಡತೊಡಗಿದ. ಈ ವಿಷಯ ರಾಜನ ಬಳಿಗೆ ಹೋಯಿತು.
ಆತ ತಕ್ಷಣ ಇಬ್ಬರನ್ನೂ ಕರೆಯಿಸಿದ. ವಿಷಯವನ್ನು ಇಬ್ಬರಿಂದಲೂ ಕೇಳಿದ ಬಳಿಕ ರಾಜ ಶುದ್ದೋದನ ದೇವದತ್ತನ ಬಳಿ ಕೇಳಿದ ‘ದೇವದತ್ತ, ನೀನು ಈ ಪಕ್ಷಿಯನ್ನು ಕೊಲ್ಲಬಲ್ಲೆಯಾ?’ ದೇವದತ್ತ ಆನಂದದಿಂದ' ಓಹೋ, ಇದು ನನಗೆ ಬಹಳ ಸುಲಭದ ಕೆಲಸ, ಈಗಲೇ ಪಕ್ಷಿಯನ್ನು ಕೊಟ್ಟರೆ, ನಿಮ್ಮ ಎದುರೇ ಕೊಂದು ತೋರಿಸುತ್ತೇನೆ' ಎಂದ.
ಮಹಾರಾಜ ಕೇಳಿದ ‘ಕೊಂದ ಬಳಿಕ ಅದನ್ನು ಮತ್ತೆ ಜೀವಂತ ಮಾಡಲು ನಿನ್ನಿಂದ ಸಾಧ್ಯವಿದೆಯಲ್ಲವೇ?’
‘ಅದು ಹೇಗಾಗುತ್ತದೆ ಮಹಾರಾಜಾ, ಒಮ್ಮೆ ಹೋದ ಜೀವ ಮತ್ತೆ ಬಾರದು' ಎಂದ ದೇವದತ್ತ.
ಅದಕ್ಕೆ ಮಹಾರಾಜ ಹೇಳಿದ ‘ಹಾಗಾದರೆ ಸರಿ, ಬೇಟೆಗಳ ನಿಯಮಗಳ ಪ್ರಕಾರ ಬಾಣ ತಗುಲಿ ಬಿದ್ದ ಪ್ರಾಣಿ ಪಕ್ಷಿಯ ಮೇಲೆ ಅಧಿಕಾರ ಬೇಟೆಗಾರನಿಗೆ ಇರುತ್ತದೆ. ಆದರೆ ಈ ಅಧಿಕಾರ ಅವನಿಗೆ ಬರುವುದು ಆ ಪಕ್ಷಿ ಸತ್ತ ಬಳಿಕವೇ, ಆದರೆ ಇಲ್ಲಿರುವ ಪಕ್ಷಿ ಸತ್ತಿಲ್ಲ. ಸಾಯುವ ಪಕ್ಷಿಯನ್ನು ಬದುಕಿಸಿದವನಿಗೆ ಅದನ್ನು ಹೊಡೆದವನಿಗಿಂತ ಜಾಸ್ತಿ ಅಧಿಕಾರ ಇರುತ್ತದೆ. ಸಿದ್ಧಾರ್ಥ ಹಂಸವನ್ನು ರಕ್ಷಿಸಿ ಬದುಕು ನೀಡಿರುವುದರಿಂದ ಅವನೇ ಇದರ ಪೂರ್ಣ ಹಕ್ಕುದಾರನಾಗುತ್ತಾನೆ. ಆದುದರಿಂದ ಈ ಪಕ್ಷಿ ಸಿದ್ಧಾರ್ಥನಿಗೆ ಸೇರುತ್ತದೆ.’ ಎಂದು ತೀರ್ಪು ನೀಡಿದ.
‘ಕೊಲ್ಲುವವನಿಗಿಂತ ಕಾಯುವವನೇ ದೊಡ್ಡವ’ ಎಂದು ಅರಿತ ದೇವದತ್ತ ನಿರುತ್ತರನಾಗಿ ಸಭೆಯಿಂದ ಹೊರನಡೆದ. ಬಾಲಕ ಸಿದ್ಧಾರ್ಥ ಆನಂದಿತನಾಗಿ ಪಕ್ಷಿಯನ್ನು ಮುದ್ದಾಡಿದ. ಅದನ್ನು ಕೆಲವು ದಿನಗಳ ಕಾಲ ಉಪಚರಿಸಿ, ಅದು ಹಾರಾಡಲು ಶುರು ಮಾಡಿದಾಗ ಅದನ್ನು ಬಿಟ್ಟು ಬಿಟ್ಟ. ಹೀಗಿದ್ದ ನಮ್ಮ ಬುದ್ಧ ತನ್ನ ಬಾಲ್ಯದಲ್ಲಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ