ದ.ರಾ.ಬೇಂದ್ರೆಯವರನ್ನು ಕನ್ನಡ ನುಡಿಗಳಿಂದ ನೆನಪಿಸುವ ದಿನವಿಂದು...

ದ.ರಾ.ಬೇಂದ್ರೆಯವರನ್ನು ಕನ್ನಡ ನುಡಿಗಳಿಂದ ನೆನಪಿಸುವ ದಿನವಿಂದು...

ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಹೊಸ ವರುಷಕ್ಕೆ ಹೊಸ ಹರುಷವ ಹೊಸತು ಹೊಸತು ತರುತಿದೆ

ಸರಸ ಜನನ

ವಿರಸ ಮರಣ

ಸಮರಸವೇ ಜೀವನ

ಕುಣಿಯೋಣು ಬಾರ

ಕುಣಿಯೋಣು ಬಾ

ತಾಳ್ಯಾಕ ತಂತ್ಯಾಕ ರಾಗಾದ ಚಿಂತ್ಯಾಕ

ಹೆಜ್ಯಾಕ ಗೆಜ್ಯಾಕ ಕುಣಿಯೋಣು ಬಾ

ಹರುಷ ರಸವೇ ಕರುಣದ ಸೇವೆ

ಜೀವ-ಧರ್ಮ-ಧಾರಣಾ

ವಿಯೋಗವೆಂಬುದು ವಿರಹದ ಬೆಂಕಿ ಕಾಣೋ

ಮರ್ಯದೆ ಕೊಡದವನಿಗೆ ಮರ್ಯಾದೆ ಯಾತಕೆ?

ಕೊಟ್ಟು ತಗೊಳ್ಳೋದೆ ಮರ್ಯಾದೆಯ ಮರ್ಮ 

ಅಂಬಿಕಾತನಯದತ್ತ ಎಂಬ ಕಾವ್ಯನಾಮ ಹೊಂದಿದ್ದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ (ದ.ರಾ.ಬೇಂದ್ರೆ) ಇವರ  ಕವನದ ಸಾಲುಗಳು, ಮಾತುಗಳು, ಹೇಳಿಕೆಗಳನ್ನು ಅವಲೋಕಿಸಿದಾಗ ಸತ್ಯಾಂಶಗಳ ಸಾರವನ್ನು ನಾವು ಕಾಣಬಹುದು. 

೧೮೯೬ ಜನವರಿ ೩೧ರಂದು ಜನಿಸಿದವರು ಕನ್ನಡ ನಾಡು ಕಂಡ ಈ ಧೀಮಂತ ಸಾಹಿತಿಯವರು, ಕವಿಗಳು, ಉತ್ತಮ ವಾಗ್ಮಿಗಳು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು, ಅಜ್ಜಿಯ ಆಸರೆಯಲ್ಲಿ ಬೆಳೆದು, ಬಡತನದ ಬದುಕನ್ನೇ ಮೈಗೂಡಿಸಿಕೊಂಡವರು.

ನಾನು ಬಡವಿ

ಆತ ಬಡವ

ಒಲವೆ ನಮ್ಮ ಬದುಕು

ಎಂಬುದಾಗಿ ಲಕ್ಷ್ಮೀ ಬಾಯಿಯವರೊಂದಿಗೆ ಬದುಕಿನ ಏಳು-ಬೀಳುಗಳ ಹಂಚಿಕೊಂಡವರು. ಹುಟ್ಟಿದ ಮನುಷ್ಯ ತಿಂದುಂಡು ನಲಿದರೆ ಸಾಕೇ? ಅದರಾಚೆಗೆ ಒಮ್ಮೆ ಇಣುಕಬಾರದೇ? ಇದು ಅವರ ಧೋರಣೆ. ನಮಗೆಲ್ಲ ಈ ಮಾತುಗಳು ಮಾರ್ಗದರ್ಶನವಾಗಬಹುದಲ್ಲವೇ? ಬರಿಯ ಜೀವನ ಸಾಧನೆಯಲ್ಲ. ಸಮಾಜಮುಖಿಯಾಗಿ ಏನಾದರೂ ಸಾಧಿಸಿರೆಂದ ಸಾಧನಕೇರಿಯ ಸಾಧಕರು. ‘ಹತ್ತರೊಟ್ಟಿಗೆ ಹನ್ನೊಂದಾಗದಿರಿ’ ಸದಾ ಸ್ನೇಹಿತರೊಂದಿಗೆ ತಮಾಷೆಗೆ ಹೇಳುತ್ತಿದ್ದ ಅನಿಸಿಕೆ. ಎಲ್ಲಿ ಯದ್ವತದ್ವಾ ಹುರುಳಿಲ್ಲದ ಆಡಳಿತವಾಗಲಿ, ಚಿಂತನೆಗಳಾಗಲಿ ಇರುವುದೋ ಅಲ್ಲಿಯ ಹಾದಿ ಸುಗಮವಲ್ಲ ಎಂದವರು.

ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ

ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ

ಅದರ ಸವಿಯನ್ನಷ್ಟೆ ಉಣಿಸು ನನಗೆ

ಕನಸು ಕಾಣುವುದು ತಪ್ಪಲ್ಲ. ಸಹಜ. ಆದರೆ ಕಂಡ ಕನಸೆಲ್ಲ ನನಸಾದರೆ ನಮ್ಮನ್ನು ಹಿಡಿದಿಡಲು ಸಾಧ್ಯವೇ? ಎಂತಹ ಕಠಿಣ ಪರಿಸ್ಥಿತಿಗೂ ಎದೆಗುಂದಬಾರದು, ಹಿಮ್ಮೆಟ್ಟಬಾರದು, ಬೆನ್ನು ತಿರುಗಿಸಬಾರದು. ಕಷ್ಟಗಳು ಮನುಜರಿಗಲ್ಲದೆ ಮರಕ್ಕೆ ಬರುತ್ತದೆಯೇ? ಗಿಡಮರಗಳನ್ನು ಕಡಿದಷ್ಟು ಮತ್ತೆ ಮತ್ತೆ ಚಿಗುರುತ್ತವೆ, ತಲೆಯೆತ್ತಿ ನಿಲ್ಲುತ್ತವೆ, ಇದೇ ಮನುಕುಲಕ್ಕೊಂದು ಪಾಠ. ಕಷ್ಟ ಆಯಿತೆಂದು ‌ಸೋಲುವುದಲ್ಲ, ಮರಳಿ ಯತ್ನವ ಮಾಡಬೇಕು. ಒಮ್ಮೆ ಸೋತರೇನಾಯಿತು? ನಂತರ ಗೆಲುವು ಸಿಗಬಹುದೆಂಬ ಆಶಾವಾದಿಗಳು ನಾವಾಗಬೇಕು.

ಮುಖ್ಯವಾಗಿ ಸ್ವಯಂ ಬೆಳಗಬೇಕು. ಒಂದು ಹಂತದವರೆಗೂ ಇತರರ ಸಹಕಾರ, ಆಮೇಲೆ ನಮ್ಮದೇ ಕೈಬಾಯಿ. ದ.ರಾ.ಬೇಂದ್ರೆಯವರ ಒಂದೊಂದು ನುಡಿಗಳೂ ಹೊನ್ನುಡಿಗಳೆನ್ನಬಹುದು. ಓರ್ವ ಹೆಣ್ಣು ಮಗಳನ್ನು ಕಂಡಾಗ ಮೊದಲು ಕಣ್ಣೆದುರು ಬರಬೇಕಾದ್ದು ನಮ್ಮನ್ನು ಹೊತ್ತು ಹೆತ್ತು ಭೂಮಿಯ ಬೆಳಕು ತೋರಿಸಿದ ತಾಯಿ. ಒಡಹುಟ್ಟಿದ ಅಕ್ಕ ತಂಗಿಯರು. ಈ ಬಗ್ಗೆ ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳಬೇಕಷ್ಟೆ. ೧೦೦ರ ಮುದುಕಿಯಿಂದ  ಹಾಲುಗಲ್ಲದ ಹಸುಗೂಸನ್ನು ಸಹ ಬಿಡದ ಪೈಶಾಚಿಕರು ನಮ್ಮ ನಿಮ್ಮ ನಡುವೆ ಇದ್ದಾರೆ ಎಂದರೆ ತಲೆತಗ್ಗಿಸುವ ಹೇಯ ಕೃತ್ಯವಲ್ಲವೇ? ಅವರೆಲ್ಲ ಹಸಿವಿಗೆ ಅನ್ನ ಬಿಟ್ಟು ಬೇರೇನಾದರೂ ತಿನ್ನುತ್ತಾರೋ ಏನೋ ಅನ್ನಿಸುವುದಿದೆ.

ಜೀವ ಮತ್ತು ಜೀವನ ಧರ್ಮ ದೊಡ್ಡದು.ಪ್ರತಿಯೊಬ್ಬರಿಗೂ ಎಚ್ಚರಿಕೆಯ ಕರೆಗಂಟೆಯಿದು. ಧರ್ಮದಾಚೆ ಇಣುಕುವ ಅವಶ್ಯಕತೆಯಿಲ್ಲ. ‘ತನ್ನ ತಟ್ಟೆಯಲ್ಲಿ ಏನಿದೆಯೋ ಅದನ್ನು ಮಾತ್ರ ನೋಡು, ಬೇರೆಯವರ ತಟ್ಟೆಯಲ್ಲಿ ಏನಿದೆ ಎಂಬ ಆಸಕ್ತಿ, ಕುತೂಹಲ ಎರಡೂ ಬೇಡ. ಅದು ಇದೆಯೋ ನಿನ್ನ ಬದುಕು ಮೂರಾಬಟ್ಟೆ ನೋಡು’ ಎಚ್ಚರಿಸಿದರು.ಆದರೆ ನಾವುಗಳು ಅದೇ ಕೆಲಸ ಮಾಡುತ್ತೇವೆ.

ಭಾವನೆ, ಭಾವಗಳ ತೋಟ ಬೇಂದ್ರೆ ಅಜ್ಜ ಅವರಿಗೆ ಬಹಳ ಇಷ್ಟವಂತೆ. ಅವರ ಸಾಕಷ್ಟು ರಚನೆಗಳಲ್ಲಿ ನಿತ್ಯಸತ್ಯದ ವಿಚಾರಗಳು, ಕಲ್ಪನಾಲೋಕದ ವಿಹಾರಗಳೂ ಕಂಡುಬರುತ್ತದೆ. ಕವನ, ಕಾವ್ಯಗಳಲ್ಲಿ ಭಾವನೆಗಳ ರಸದೂಟ ನೀಡಬೇಕು. ಓದುಗನ ಮನಸ್ಸಿನಲ್ಲಿ ಬದಲಾವಣೆಯಾಗುವಂತಿರಬೇಕು ನಮ್ಮ ಬರವಣಿಗೆ ಎಂದರು. ಅದೇ ರೀತಿ ನಡೆದುಕೊಂಡರು. ‘ಹೂವೊಂದು ಅರಳಿ ಪರಿಮಳವ ಬೀರಿ ಸಂಜೆ ಬಿದ್ದು ಹೋಗುತ್ತದೆ. ಅದರ ಸಾರ್ಥಕತೆ ದೇವರ ಗುಡಿಯೋ, ಹೆಂಗಳೆಯರ ಮುಡಿಯೋ ಅಲ್ಲ ನೋಡುಗನ ಕಣ್ಣಿಗೆ ಹಬ್ಬವೋ’ ಈ ರೀತಿ ಬಾಳಿನ ಸಾರ್ಥಕ್ಯವನ್ನು ಕಾಣುವುದು ಮನುಷ್ಯ ಧರ್ಮ. ಪ್ರಕೃತಿಯಿಂದ ಪಾಠ ಕಲಿಯೋಣವೆಂದರು.

ಸ್ನೇಹವೆಂಬ ಬಂಧವನ್ನು ಗಟ್ಟಿಯಾಗಿಸಿ, ಹೊಸ ಸ್ನೇಹ ಬೆಸೆಯಬೇಕು.ಯಾರಲ್ಲೂ ಹೇಳದ ಎಷ್ಟೋ ಗುಟ್ಟುಗಳನ್ನು ಸ್ನೇಹಿತರಲ್ಲಿ ಹೇಳ್ತೇವೆ. ಹಾಗಾಗಿ ‘ಗೆಳೆಯರ ಬಳಗ’ ಅಮೂಲ್ಯವಾದುದು ಎಂದರು. ಬಳಗವನ್ನು ಕಟ್ಟಿ ಸಾಹಿತ್ಯ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದರಂತೆ. ಗೆಳೆಯರ ಕೂಟವನ್ನು ಇನ್ನಷ್ಟೂ ಗಾಢವಾಗಿಸಿಕೊಳ್ಳೋಣ. ಯಾರು ಕೈಬಿಟ್ಟರೂ ಗೆಳೆಯ ಕೈಬಿಡಲಾರ ನೆನಪಿರಲೆಂದ ಅವರ ನುಡಿ ನಿತ್ಯಸತ್ಯ. ಮಾತುಗಳು ಮಂತ್ರವಾಗಿ ಜೀವನ ಸ್ವತಂತ್ರವಾಗಿ ಆಡುವ ಮಾತಿನಲ್ಲಿ ಸತ್ಯ ಮತ್ತು ಶಕ್ತಿ ಇರುವಂತಿರಬೇಕು. ಅವರ ಮಾತುಗಳ ಒಂದಂಶವಾದರೂ ನಾವು ಬದುಕಿನ ಹಾದಿಯಲಿ ಅಳವಡಿಸಿದರೆ ಅದೇ ನಾವು ಸಲ್ಲಿಸುವ ಗೌರವ.

ಕಥೆ, ಕವನ, ವಿಮರ್ಶೆ, ಅನುವಾದ, ಕಾದಂಬರಿ ಬರೆದು, ಸಾಹಿತ್ಯದ ವಿವಿಧ ಮಜಲಿನಲ್ಲಿ ಕನ್ನಡಮ್ಮನ ಕೈಂಕರ್ಯ ಕೈಗೊಂಡರು. ಈ ಯುಗದ ದಾರ್ಶನಿಕ ಕವಿಯಿವರು. ಧಾರವಾಡದ ಸಾಧನಕೆರೆ ಇವರ ಅಚ್ಚುಮೆಚ್ಚಿನ ತಾಣವಂತೆ. ಹಾಗಾಗಿಯೇ ಸಾಧನಕೇರಿಯ ಬೇಂದ್ರೆ ಅಜ್ಜ ಎನಿಸಿದರು. ಕಾಮಕಸ್ತೂರಿ, ನಾಕುತಂತಿ, ಗರಿ, ಸೂರ್ಯಪಾನ, ನಾದಲೀಲೆ, ಕಾದಂಬರಿ, ಅನುವಾದ ಕೃತಿಗಳು, ಜೀವಲಹರಿ, ಶ್ರೀಮಾತಾ, ಅರಳು ಮರಳು, ನಮನ, ಗಂಗಾವತರಣ, ಹೃದಯಸಮುದ್ರ ಮುಂತಾದವುಗಳನ್ನು ರಚಿಸಿ ಪ್ರಸಿದ್ಧಿಯಾದರು.

ಸಂವಾದ ಕೃತಿಗೆ ಕೇಳ್ಕರ್ ಪ್ರಶಸ್ತಿ, ನಾಕುತಂತಿ ಮೇರುಕೃತಿ ಜ್ಞಾನಪೀಠದಂತಹ ಅತ್ಯುನ್ನತ ಪುರಸ್ಕಾರಕ್ಕೆ ಭಾಜನವಾಯಿತು. ಅನುವಾದ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಗರಿ ಲಭಿಸಿತು. ಕಾಶಿ, ವಾರಣಾಶಿ, ಮೈಸೂರು, ಕರ್ನಾಟಕ ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ನೀಡಿ ಅಭಿನಂದಿಸಿದವು. ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಅರವಿಂದರ ಆಂಗ್ಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದರು. ಸ್ವಾತಂತ್ರ್ಯ ಚಳುವಳಿ ಸಮಯದಲ್ಲಿ ಅದರಲ್ಲಿ ಧುಮುಕಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಸೆರೆಮನೆವಾಸ ಅನುಭವಿಸಿದರು. ಜಾನಪದ ಶೈಲಿ ಅವರ ಇಷ್ಟದ ಪ್ರಕಾರವಾಗಿದ್ದು,ಸೊಗಸಾಗಿ ಹಾಡುತ್ತಿದ್ದರು.

‘ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ’ ಮರೆಯಲು ಸಾಧ್ಯವೇ? ಬೆಳಗು ಸಂಕಲನದ ‘ಮೂಡಣ ಮನೆಯ ಮುತ್ತಿನ ನೀರಿನ ಎರಕಾವ ಹೊಯಿದ’ ನವಿರಾದ ಸುಂದರ ಬೆಳಗಿನ ದೃಶ್ಯಗಳ ಸಮ್ಮಿಲನ. ‘ಇಳಿದು ಬಾ ತಾಯೇ ಇಳಿದು ಬಾ’ ಮೈ ನವಿರೇಳುವಂತಿದೆ.

ಮುಚ್ಚಿಡುವುದೇಕಿನ್ನು ಬಚ್ಚಿಡುವುದಿನ್ನೆಲ್ಲಿ

ಮುಚ್ಚುಮರೆ ಮಾಳ್ಪದಕೆ ಮುಸುಕು ಇಹುದೆಲ್ಲಿ?

ನೆಚ್ಚು ಮೆಚ್ಚುಗಳನ್ನು ಬಿಚ್ಚು ಜೀವದೊಳೊತ್ತಿ

ಹೊಚ್ಚಿ ಪ್ರೀತಿಯ ಸೆರಗ ಎತ್ತಿಕೊ ಎನ್ನ

ಎಷ್ಟು ಅರ್ಥಗರ್ಭಿತವಲ್ಲವೇ?

ಅನುಭವವೇ ಸುಖ-ದು:ಖದ ಮೈಲುಗಲ್ಲು, ಸದಾಚಾರ ಚಿತ್ತ ಸದಾ ಇರಲಿ, ಸಮತೂಕದ ಜೀವನಯಾನ, ಪ್ರಬುದ್ಧತೆಯ ಬದ್ಧತೆ ಎನುವ ಧೋರಣೆಯವರು, ಸಮಾಜಕ್ಕೆ ಬರವಣಿಗೆಗಳ ಮೂಲಕ ಸಂದೇಶ ನೀಡಿದರು.

ನವೋದಯ ಕಾಲದ ಕವಿವರ್ಯರು.ವರಕವಿ ದ.ರಾ ಬೇಂದ್ರೆಯವರು ನಮ್ಮೆಲ್ಲರನ್ನು ಅಗಲಿದ ದಿನವಿಂದು. ಮಹಾನ್ ಸಾಹಿತಿಗಳು, ನಾಕುತಂತಿಯ ಮೀಟಿದ ಸರದಾರರನ್ನು ಗೌರವ ಪೂರ್ವಕವಾಗಿ (ನಿಧನ: ಅಕ್ಟೋಬರ್ ೨೬, ೧೯೮೧) ಕನ್ನಡ ನುಡಿಯ ಕಿಂಚಿತ್ ಪದ ಸಾಲುಗಳಿಂದ ನೆನಪಿಸಿಕೊಳ್ಳುತ್ತಿರುವೆ.

-ರತ್ನಾ ಕೆ.ಭಟ್ ತಲಂಜೇರಿ

(ಸಂಗ್ರಹ:ವಿವಿಧ ಸಾಹಿತ್ಯ ಪುಸ್ತಕಗಳಿಂದ)