ದರ್ಜಿ ಹಕ್ಕಿಯ ಕರಾಮತ್ತು !

ದರ್ಜಿ ಹಕ್ಕಿಯ ಕರಾಮತ್ತು !

ಒಂದು ದಿನ ನನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದೆ. ನಮ್ಮ ಚಿಕ್ಕಪ್ಪನಿಗೆ ಗಾರ್ಡನಿಂಗ್ ಬಹಳ ಪ್ರೀತಿಯ ಹವ್ಯಾಸ. ಅವರ ಮನೆ ಹಿತ್ತಲಿನಲ್ಲಿ ಹಲವಾರು ಗಿಡಗಳನ್ನ ನೆಟ್ಟು ಬೆಳೆಸಿದ್ದರು. ಅಲ್ಲಿಗೆ ಹಲವಾರು ಜಾತಿಯ ಹಕ್ಕಿಗಳು ಬರೋದನ್ನು ನೋಡಿದ್ದ ನಾನು ಹೋಗ್ತಾ ಕ್ಯಾಮರಾ ತಗೊಂಡೇ ಹೋಗಿದ್ದೆ. ಮಾತಾಡ್ತಾ ಮಾತಾಡ್ತಾ “ ಇಲ್ಲೊಂದು ಹಕ್ಕಿ ಗೂಡು ಮಾಡಿದೆ, ಆದ್ರೆ ಗೂಡು ಇದೆ ಅಂತ ಗೊತ್ತಾಗೋದೇ ಇಲ್ಲ. ಕಳೆದ ವರ್ಷನೂ ಅದೇ ಮರದಲ್ಲಿ ಗೂಡು ಮಾಡಿತ್ತು, ಆದ್ರೆ ಮರಿ ಆಗಿ ಕೆಲವೇ ದಿನಕ್ಕೆ ಹಾವು ಬಂದು ಮರಿಯನ್ನು ತಿಂದುಬಿಟ್ಟಿತ್ತು. ಪಾಪ ಆ ಜೋಡಿಯ ರಂಪಾಟ ಕೇಳಲಿಕ್ಕೆ ಕಷ್ಡ ಆಗಿತ್ತು. ಈ ಸಾರೀನೂ ಗೂಡು ಮಾಡಿದೆ. ಅವುಗಳ ಓಡಾಟ ಜೋರಾಗಿಯೇ ನಡೆದಿದೆ, ನಾವು ಹತ್ರ ಹೋದ್ರೆ ಹಾರಿ ಹೋಗುತ್ತೆ “ ಅಂತ ತಮ್ಮ ಹಿತ್ತಿನಲ್ಲಿ ಬೆಳೆಸಿದ್ದ ಅಂಜೂರ ಮರದ ಹತ್ರ ಕರ್ಕೊಂಡು ಹೋದ್ರು. 

ಮರದ ಮಧ್ಯೆ ಬಹಳ ಸೇಫ್ ಜಾಗದಲ್ಲಿ ಒಂದು ದೊಡ್ಡ ಎಲೆಯನ್ನು ಕೆಳಮುಖವಾಗಿ ಮಡಚಿ, ಬಹುಶಃ ಜೇಡನಬಲೆಯ ಎಳೆಗಳನ್ನು ತಂದು, ಗಾಯಕ್ಕೆ ಹೊಲಿಗೆ ಹಾಕುವಂತೆ ಹೊಲಿದು, ಅದರ ಒಳಗೆ ಹುಲ್ಲನ್ನು ಬುಟ್ಟಿಯಾಕಾರದಲ್ಲಿ ಸೇರಿಸಿ, ಒಳಗೆ ಬರೋದಕ್ಕೆ ಬೇಕಾದಷ್ಟು ಜಾಗ ಮಾತ್ರ ಬಿಟ್ಟು ಗೂಡು ತಯಾರಾಗಿತ್ತು. ಒಳಗಡೆ ಎರಡೋ ಮೂರೋ ಮೊಟ್ಟೆಗಳು ಇದ್ದವು. ಪಕ್ಕನೆ ನೋಡಿದ್ರೆ ಕೆಂಜಿರುವೆಯ ಗೂಡಿನ ಹಾಗೆ ಕಾಣ್ತಾ ಇತ್ತು. ಯಾರಿಗೂ ಸಂಶಯ ಬರ್ಲಿಕ್ಕೆ ಸಾಧ್ಯಾನೇ ಇಲ್ಲ. Perfect Stitching... ಹಾಗಾಗಿಯೇ ಈ ಹಕ್ಕಿಗೆ ದರ್ಜಿ ಹಕ್ಕಿ ಅನ್ನೋ ಹೆಸರು ಬಂದಿರಬೇಕು. 

ಟುವ್ವಿ, ಟುವ್ವಿ ಅಂತ ಹಾಡುತ್ತಾ ಮನೆಯ ಹಿತ್ತಲಿನ ಪೋದೆಗಳಲ್ಲಿ ಕೀಟ, ಕಂಬಳಿಹುಳ (caterpillar) ಹುಡುಕುತ್ತಾ ಓಡಾಡಿಕೊಂಡು ಇರ್ತವೆ. ನಿಮ್ಮ ಮನೇ ಹಿತ್ತಲಿನಲ್ಲೂ ಈ ಟುವ್ವಿ ಹಕ್ಕಿ ನೋಡ್ಲಿಕ್ಕೆ ಸಿಗಬಹುದು. ಹಾಂ... ಒಂದು ವಿಷಯ ಹೇಳೋದು ಮರೆತೆ. ಗೂಡು ಕಂಡ್ರೆ ದೂರದಿಂದಲೇ ನೋಡಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ... ಹಕ್ಕಿಗೂ ಒಳ್ಳೆದು, ಹಾಗೇ     ನಮಗೂ .... ಅಲ್ವಾ ?

ಕನ್ನಡ ಹೆಸರು: ದರ್ಜಿ ಹಕ್ಕಿ,  ಸಿಂಪಿಗ,  ಟುವ್ವಿ ಹಕ್ಕಿ

English name: Common Tailorbird

Scientific Name: Orthotomus sutorius

ಚಿತ್ರ-ಬರಹ: ಅರವಿಂದ ಕುಡ್ಲ, ಬಂಟ್ವಾಳ