ದರ್ದಿಗೆ ದಾಖಲೆಗಳಿಲ್ಲ

ದರ್ದಿಗೆ ದಾಖಲೆಗಳಿಲ್ಲ

ಪುಸ್ತಕದ ಲೇಖಕ/ಕವಿಯ ಹೆಸರು
ಕವಿತಾ ಸಾಲಿಮಠ
ಪ್ರಕಾಶಕರು
ಮನ್ವಂತರ ಪ್ರಕಾಶನ, ತೋರಣಗಲ್ಲು, ಬಳ್ಳಾರಿ- ೫೮೩೧೨೩
ಪುಸ್ತಕದ ಬೆಲೆ
ರೂ. ೧೦೧.೦೦, ಮುದ್ರಣ ೨೦೨೨

ಕವಿತಾ ಸಾಲಿಮಠ ಅವರ ಗಝಲ್ ಗಳ ಸಂಗ್ರಹವೇ “ದರ್ದಿಗೆ ದಾಖಲೆಗಳಿಲ್ಲ". ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಹೈದರ್ ಹೈ. ತೋರಣಗಲ್ಲು ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ…

ಭಾವಕ್ಕೆ ಜೀವ ಕೊಟ್ಟ ಕವಿತ
ತನ್ ಉಜಲಾ ಮನ್ ಮೈಲಾ
ಸಾಧು ನಾಮ್ ಅನೇಕ್
ಹಮ್ ಸೆ ತೋ ಕಾಲಾ ಕವ್ವ ಭಲಾ
ಜೋ ಅಂದರ್ ಬಹಾರ್ ಏಕ್

ಶತಮಾನಗಳ ಹಿಂದೆ ಬರೆದ ಸಂತ ಕಬೀರ ದಾಸರ ಈ ದೋಹ ಅಂತರಂಗದ ಮಲೀನತೆಯನ್ನ ತೊಳೆದು ಒಳ ಹೊರದ ಆತ್ಮ ಶುದ್ದಿಗೆ ಅನುವಾಗಲು ಎಚ್ಚರಿಸುವ ದ್ವಿಪದಿಯಾಗಿದೆ. ಕಾಗೆ ಒಳಗೂ ಹೊರಗೂ ಒಂದೇ ತೆರನಾದ ಗುಣ ಸ್ವಭಾವದ ಪಕ್ಷಿಯಾಗಿದೆ. ಮನುಷ್ಯ ಹಾಗಲ್ಲ. ಬಹಿರಂಗದಲ್ಲಿ ಸಜ್ಜನನಂತೆ ನಟಿಸುತ್ತಾ ಅಂತರಂಗದಲ್ಲಿ ಕಪಟಿಯಾಗಿರುವುದನ್ನು ಈ ದ್ವಿಪದಿಯ ಮೂಲಕ ವ್ಯಂಗ್ಯವಾಗಿ ಎಚ್ಚರಿಸಿ ಅಂತರಂಗದ ಮತ್ತು ಬಹಿರಂಗದ ಕೊಳೆಯ ಕಳೆಯುವಿಕೆಗೆ ಒತ್ತು ಕೊಡಬೇಕೆಂದು ಸಾರುತ್ತಾರೆ.

ಶರೀರದ ಬೆತ್ತಲಿನ ಮುಂದೆ ಮನಸಿನ ಬೆತ್ತಲೆಗೆ ಸದಾ ಗೆಲುವಾಗುತ್ತದೆ. ಬಾಹ್ಯ ಸುಂದರತೆಯು ಆಂತರಿಕ ಸುಂದರತೆಯನ್ನ ಎಂದೂ ಸೋಲುಗೊಡುವುದಿಲ್ಲ. ರವಿ ನೇಯ್ದ ಕತ್ತಲನು ಶಶಿ ಹರಿದು ಹಾಕುವಂತೆ ಅಂತರಂಗದ ವಿಕೃತಿಯನ್ನು ಜ್ಞಾನದ ತಿಳಿಯೊಂದಿಗೆ ತೊಳೆದು ಮನವೆಲ್ಲಾ ಪರಿಶುದ್ಧಗೊಳಿಸಿಕೊಂಡಾಗ ಮನುಷ್ಯ ಪರಮಾತ್ಮನೊಂದಿಗೆ ಸಂವಾದಕ್ಕಿಳಿಯುವ ಸಾಹಸ ಮಾಡಬಹುದು.

ಕವಿ ಬಾಹ್ಯದಲ್ಲಿ ಸಂಘ ಜೀವಿಯಂತೆ ಕಂಡರೂ ಅಂತರಂಗದಲ್ಲಿ ಅವನು ತನ್ನೊಟ್ಟಿಗೆ ತಾನು ಅನುಸಂಧಾನಕ್ಕಿಳಿಯುತ್ತಾನೆ. ಪರಿಣಾಮ ಆತನ ಮನದಲ್ಲಿ ಸ್ಪಷ್ಟ ರೂಪದ ಚಿತ್ರಣ ಮೂಡುತ್ತದೆ. ಅದನ್ನ ಹಿಗ್ಗಿಸಿ ವಿವಿಧ ಆಕಾರವಾಗಿಸುತ್ತಾ ಅದಕ್ಕೊಂದು ಸುಂದರ ರೂಪ ಕೊಡುತ್ತಾನೆ, ಹಾಗೆ ರೂಪಿಸುವಾಗ ತೋರಣದಿಂದ ಆಕೃತಿಗೆ ಜೀವ ತುಂಬಿ ಕಾವ್ಯವಾಗಿಸುತ್ತಾನೆ, ಹೀಗೆ ಹುಟ್ಟಿದ ಕಾವ್ಯಕ್ಕೆ ಸಾಂಸ್ಕೃತಿಕವಾದ ತಾತ್ವಿಕ ನೆಲೆಯಿರಬೇಕು. ಆ ನೆಲೆಯ ಶೋಧಿಸಿ ಭಾವ ಜೀವಗಳ ಬೆಳಕ ಕೋಲಿನ ಹೆಜ್ಜೆ ಹುಡುಕಿ ದ್ವೇಷಕ್ಕೆ ನಾಕಾಬಂದಿ ಹಾಕಿ ಮನುಷ್ಯನಲ್ಲಿ ಪ್ರೀತಿಯ ಮೊಗ್ಗು ಅರಳಿಸಬೇಕು. ಪರಂಪರೆಯನ್ನು ಪೊರೆಯುತ್ತಲೇ 'ಅತೀತವೊಂದು ವರ್ತಮಾನದ ಜೊತೆನಿಂತು ಪ್ರೀತಿಯ ಪಾಲುದಾರಿಕೆಗೆ ಒತ್ತುಕೊಡುವ ಬಹು ಸುಂದರ ಭವಿಷ್ಯವನ್ನು ಬರಮಾಡಿಕೊಳ್ಳಬೇಕು. ಇಂಥಹ ಉಮ್ಮೀದಿನ ಪ್ರಯೋಗ ಶೀಲತೆಗೆ ಒಡ್ಡಿಕೊಳ್ಳುವುದು ಹೊಸ ತಲೆಮಾರಿನ ಗಜಲ್ಕಾರರಿಗೆ ಸ್ವಲ್ಪ ಕಷ್ಟಸಾಧ್ಯ. ಅದರಲ್ಲೂ ಗಜಲ್ ಸೌಂದರ್ಯದ ಸೊಕ್ಕನ್ನು ಮುರಿದು ಪರಂಪರೆಯನ್ನು ಪೊರೆಯುತ್ತಲೇ ಶೋಷಿತ ಮತ್ತು ಪೀಡಿತ ಜನಕೋಟಿಯ ಕಷ್ಟಗಳಿಗೆ ಸ್ಪಂದಿಸುತ್ತಾ ಬರೆದು ಗೆಲ್ಲುವುದು ತುಂಬಾ ಕಷ್ಟ. ಸಿದ್ಧಮಾದರಿಯ ಬಂಧಗಳ ಮುಂದು ಹೊಸ ಭರವಸೆ ಮೂಡಿಸಿದ ಕೆಲವೇ ಕೆಲ ಗಜಲ್ಕಾರದಲ್ಲಿ ಕವಿತಾ ಸಾಲಿಮಠ ಕಾಣಸಿಗುತ್ತಾರೆ.

ಹೆಣಗಳ ಅವಶ್ಯಕತೆಯಿದೆ ಕೋಟೆ ಕಟ್ಟಲು ಸಾಕಿ ಅಣಕ... ವ್ಯಂಗ್ಯ... ಭೀಬತ್ಸ. ಭಯಾನಕ ಮತ್ತು ಕರಾಳ ಚರಿತ್ರೆಯ ಪುಟ ತಿರುವಿ ನೋಡಿದಾಗ ಆಡಳಿತ ಶಾಯಿಯು ಹೆಣಗಳ ರಾಶಿಯ ಮೇಲೆ ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಂಡಿರುವುದನ್ನು ಇತಿಹಾಸದದುದ್ದಕ್ಕೂ ನೋಡುತ್ತೇವೆ. ಉಪದ್ರವಿಗಳ ಉಪಟಳದ ಜೊತೆಗೆ ಒತ್ತರಿಸಿ ಬಿತ್ತರಿಸಿ ಬಗೆದ ದೋಹಕ್ಕೆ ಅಮಾಯಕರು ಬಲಿಯಾದದ್ದನ್ನು ಮತ್ತು ಈಗಲೂ ನಿರ್ಗತಿಕ ಅಸಹಾಯಕರೇ ಇಂಥಹ ಪಾಖಂಡಿಗಳಿಗೆ ಆಹಾರವಾಗುವುದನ್ನು ಮೇಲಿನ ಮಿಸ್ರ ಧ್ವನಿಸುತ್ತಿದೆ.

ಸ್ತನಗಳನ್ನು ಕತ್ತರಿಸಿಕೊಂಡಿದ್ದಾಳೆ ಇತಿಹಾಸದೆದುರು
ವಿಕೃತ ಕ್ರೌರ್ಯಕ್ಕೆ ಶಿಕ್ಷೆ ಕೊಡಿಸದಿರುವುದೇ ದುರಂತ

ಹೀಗೆ ಹೇಳುವಾಗ 18ನೇ ಶತಮಾನದಲ್ಲಿ ಕೇರಳದ ನಂಬೂದರಿ ದೊರೆಗಳ ವಿಕೃತತೆ ಹೇಗಿತ್ತೆಂದರೆ.. ತಳ ಮತ್ತು ಶೋಷಿತ ಸಮುದಾಯದ ಶೂದ್ರಾತೀ ಶೂದ್ರ ಮಹಿಳೆಯರು ತಮ್ಮ ಸ್ತನಗಳನ್ನು ರವಿಕೆಯಿಂದ ಮುಚ್ಚಕೂಡದೆಂಬ ಅಮಾನುಷ ಮತ್ತು ಕರಾಳ ಕಾನೂನನ್ನು ಹೇರಿರುತ್ತಾರೆ. ಒಂದೊಮ್ಮೆ ಬಟ್ಟೆ ತೊಟ್ಟರೆ ದುಬಾರಿ ತೆರಿಗೆ ತೆತ್ತುವ ಪದ್ಧತಿಯನ್ನ ಜಾರಿಗೆ ತಂದು ಅಮಾಯಕ ಮೂಕ ಮಂದಿಯ ಜೀವಕ್ಕೆ ಸಂಚಕಾರ ತಂದಿರಿಸಿ ಕ್ರೌರ್ಯ ಮೆರೆದಿದ್ದಿದೆ ತೆರೆದೆದೆಯಿಂದಲೇ ಬದುಕಿಡೀ ಬಾಗುತ್ತಾ.. ದೊರೆಗಳಿಗಾಗಿ ದುಡಿಯುತ್ತಾ ಸವೆದು ಹೋಗುತ್ತಿದ್ದ ನಿಕೃಷ್ಣ ದಿನಮಾನದಲ್ಲಿ ಓರ್ವ ಯುವತಿ ಪ್ರತಿಭಟನೆಯ ರೂಪದಲ್ಲಿ ತನ್ನ ಸ್ತನಗಳನ್ನೇ ಕೊಯ್ದು ಆಳುವ ವರ್ಗಕ್ಕೆ ಉಡುಗೊರೆಯಾಗಿ ನೀಡುತ್ತಾಳೆ. ಅಷ್ಟಾದರೂ ಕನಿಕರಿಸದ ನಿರ್ದಯಿ ಖೂಳರ ನಡೆಯು ವರ್ತಮಾನದಲ್ಲಿ ರೂಪಾಂತರಗೊಂಡು ಮಗದೊಂದು ವೇಷತೊಟ್ಟು ಕುಣಿಯುತ್ತಿರುವ ಭಿನ್ನ ಮುಖವಾಡದ ವಿಧಗಳನ್ನು ಬಹು ಸೊಗಸಾಗಿ ಕಲ್ಲೆದೆಯನ್ನ ಕರಗಿಸಿದ್ದಾರೆ. ಹೀಗೆ ಸಾಮಾಜಿಕ ಚಿಂತನೆಯ ಜೊತೆಗೆ ವ್ಯವಸ್ಥೆಯ ಓರೆ ಕೋರೆಗಳನ್ನ ಪಟ್ಟಿಮಾಡಿ ಪರಿಹಾರೋಪಾಯಕ್ಕಾಗಿ ಪರಿತಪಿಸುತ್ತಾ ಸಾಗಿದ್ದಾರೆ.

ನ್ಯಾಯವಂತರ ನೆತ್ತರು ಉಸುರುತಿವೆ ಉತ್ತರ ಸಿಗದೆ
ಜಾತಿ ಮತಗಳ ಬೇಲಿಯ ಬಿಚ್ಚಿ ದ್ವೇಷವ ಚಿಮ್ಮುತಿಹರು
ಜಾತಿ ಮತದ ಮೇಲು ಕೀಳಿನ ಹರಿತದೆದರು ಈಜುತ್ತಾ

ಮನುಷ್ಯತ್ವವನ್ನು ಚಿಗುರಿಸಿ ಸಮ ಸಮಾಜವನ್ನ ಕಟ್ಟುವ ತತ್ವ ಸ್ವರೂಪ ವಿಚಾರಧಾರೆಗೆ ಅನುವು ಮಾಡುವ ಪ್ರಯತ್ನದ ಜೊತೆಗೆ ದಿಗ್ಧಮೆಯ ಕೆಟ್ಟಬದುಕನ್ನು ಪಳಗಿಸಿ ಮನುಷ್ಯ ಪ್ರೀತಿಯ ಹಂಬಲಕ್ಕೆ ತಳಕಿಸುವ ಕವಿಯಿತ್ತಿಯ ಜಾಣ್ಮೆ ಮೆಚ್ಚುವಂಥಹದು. ಹೀಗೆ ಗಜಲ್ ಸಂಸ್ಕೃತಿಯ ವಿಸ್ತರಣೆಯನ್ನು ಭಂಡುಕೋರ ಭಾವಗಳೊಂದಿಗೆ ಬೆಸೆಯುವ ಬಂಡಾಯದ ಗಜಲ್‌ಗಳು ಎಂಥವರನ್ನೂ ಕಾಡದೇಯಿರದು. ಇಡೀ ಸಂಕಲನದುದ್ದಕ್ಕೂ ಮನುಷ್ಯತ್ವವನ್ನು ಎದೆಯಿಂದ ಎದೆಗೆ ದಾಟಿಸಿ ಸುಂದರ ಲೋಕದ ಕನಸುಗಾರಿಕೆಗೆ ಹವಣಿಸುವ ಹಪಾಹಪಿ ಮನುಷ್ಯ ಮಾತ್ರನನ್ನು ಹಿಡಿದಿಡುವುದರಲ್ಲಿ ಸಂಶಯವಿಲ್ಲ. ನಿತ್ರಾಣಗೊಂಡು ಹತಾಷರಾಗಿ ಕೈಚೆಲ್ಲಿದ ಮನಸುಗಳನ್ನು ಮಾತನಾಡಿಸುತ್ತಾ ಅವರಲ್ಲಿ ಆತ್ಮಸ್ಥೆರ್ಯವನ್ನ ಬಿತ್ತಿ ಮಾನಸಿಕ ಸ್ವಸ್ಥತೆಗಾಗಿ ಪರಿತಪಿಸುತ್ತಾ ಸಾಗುವುದು ಕಯ ಕರ್ತವ್ಯ ಕವಿತಾ ಜೀ ಈ ನೆಲೆಯಲ್ಲೇ ಇಡೀ ಗಜಲ್‌ಗಳನ್ನು ಹೆಣೆದಿರುವುದನ್ನು ಕಾಣುತ್ತೇವೆ. ಶರಣರು ಸೂಫಿಗಳು ಬಂದು ನಿರ್ದಯಿಗಳ ನಡುವೆ ಪ್ರಣಯಿಯನ್ನ ತಂದು ಸಂಕಲನಕ್ಕೆ ಮೆರಗು ಮೂಡಿಸಿದ್ದಾರೆ. ಕಾಲದ ತಾಳಕ್ಕೆ ಕುಣಿಯದೇ ತಪ್ಪುಗಳನ್ನು ಪ್ರಶ್ನಿಸುತ್ತಾ ಸಮಾಜದ ಸುಂದರತೆಗೆ ಶ್ರಮಿಸುತ್ತಿದ್ದಾರೆ. ವಿಕೃತ ವ್ಯವಸ್ಥೆಯ ಗೌಪ್ಯತೆಗಳನ್ನ ಹೊರಹಾಕುತ್ತಾ ನೋವು ಗುಣಪಡಿಸುವ ಸ್ಪರ್ಷಕ್ಕಾಗಿ ಹಾತೊರೆದಿದ್ದಾರೆ.