ದಲಿತತ್ವದಿಂದ ಉನ್ನತಿಯೆಡೆಗೆ! - 1
ನನ್ನ ಸ್ನೇಹಿತರೊಬ್ಬರು ಈಗಲೂ ನಡೆಯುತ್ತಿರುವ ದಲಿತರ ಮೇಲಿನ ಸವರ್ಣೀಯರ ದೌರ್ಜನ್ಯ ಎಂಬ ತಲೆಬರಹದಲ್ಲಿ ಫೇಸ್ ಬುಕ್ಕಿನಲ್ಲಿ ಚಿತ್ರವೊಂದನ್ನು ಶೇರ್ ಮಾಡಿ ಪ್ರಕಟಿಸಿದ್ದರು. ಆ ಚಿತ್ರವನ್ನು ನೋಡಿದ ಯಾರಿಗೇ ಆಗಲಿ, ಅಂತಹ ದೌರ್ಜನ್ಯವೆಸಗಿದವರ ವಿರುದ್ಧ ಆಕ್ರೋಷ ಬರದೇ ಇರಲು ಸಾಧ್ಯವಿರಲಿಲ್ಲ. ಆ ಘಟನೆ ನಡೆದದ್ದು ಹಲವಾರು ವರ್ಷಗಳ ಹಿಂದೆಯಾದರೂ ಈಗ ನಡೆದಂತೆ ಪ್ರಚುರಪಡಿಸಲಾಗುತ್ತಿರುವ ಹಿನ್ನೆಲೆ ಅರ್ಥವಾಗದುದೂ ಅಲ್ಲ. ಈಗಿನ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವ ತಂತ್ರವೂ ಅದರಲ್ಲಿದೆ. ಅದೇನೇ ಇರಲಿ, ಒಂದಂತೂ ಒಪ್ಪಿಕೊಳ್ಳಲೇಬೇಕು. ಅಸಹಾಯಕರ ವಿರುದ್ಧದ ದೌರ್ಜನ್ಯ ಸಹಿಸುವಂತಹದು ಅಲ್ಲ, ಸಹಿಸಲೂಬಾರದು. ಇಂದು ದಲಿತ ಎಂಬ ಪದ ರೂಢಿಗತ ಅರ್ಥಕ್ಕಿಂತ ವಿಭಿನ್ನ ರೀತಿಗಳಲ್ಲಿ ಉಪಯೋಗಿಸಲ್ಪಡುತ್ತಿರುವುದು ನಿಜದಲಿತರ ದುರ್ಭಾಗ್ಯವಾಗಿದೆ.
ದಲಿತ ಎಂಬ ಪದ ದಳವಾಗಿರುವುದು, ವಿಂಗಡಿಸಲ್ಪಟ್ಟಿರುವುದು, ವಿಭಜಿಸಲ್ಪಟ್ಟಿರುವುದು, ಮುರಿಯಲ್ಪಟ್ಟಿರುವುದು ಇತ್ಯಾದಿ ಅರ್ಥಗಳನ್ನು ಹೊರಡಿಸುತ್ತದೆ. ದಲಿತ ಎಂಬ ಪದವನ್ನು ತುಳಿತಕ್ಕೊಳಗಾದವರು ಎಂಬುದಕ್ಕೆ ಪರ್ಯಾಯವಾಗಿ ಬಳಸಲಾಗುತ್ತಿದೆ. 19ನೆಯ ಶತಮಾನದಲ್ಲಿ ಈ ಪದದ ಬಳಕೆ ಪ್ರಾರಂಭವಾಯಿತೆನ್ನಲಾಗಿದೆ. ದಲಿತರ ದೌರ್ಬಲ್ಯ, ಬಡತನ ಮತ್ತು ಮೇಲುವರ್ಗಗಳಿಂದ ಆಗುವ ದೌರ್ಜನ್ಯಗಳನ್ನು ಈ ಪದ ಬಿಂಬಿಸುತ್ತದೆ. ಅಸ್ಪೃಷ್ಯತೆಯ ಮಹಾನ್ ಪಿಡುಗಿನ ವಿರುದ್ಧ ನೊಂದ ನೋವಿನ ಎಳೆ ಇಲ್ಲಿ ಕಾಣುತ್ತದೆ. ಭಾರತ ರತ್ನ ಅಂಬೇಡ್ಕರರು ಈ ಪದಬಳಕೆಯನ್ನು ಜನಪ್ರಿಯಗೊಳಿಸಿದರು. ಹಿಂದಿನ ನಾಲ್ಕು ವರ್ಣಗಳಿಂದಲೂ ಹೊರಗಿಟ್ಟಿದ್ದರೆನ್ನಲಾದ ಇವರನ್ನು ಐದನೆಯ ವರ್ಣಕ್ಕೆ ಸೇರಿದವರೆಂದು ಪಂಚಮರೆಂದು ಕರೆಯುತ್ತಿದ್ದುದೂ ಉಂಟು. ಈ ರೀತಿಯಾಗಿ ಸಾಂಪ್ರದಾಯಿಕರಿಂದ, ಮೇಲುವರ್ಗದವರಿಂದ ದೂರೀಕರಿಸಲ್ಪಟ್ಟ ಇವರಿಗೆ ಭಾರತ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರೆಂದು ಕಾನೂನು ರೀತ್ಯದ ಹೆಸರನ್ನು ಅಧಿಕೃತವಾಗಿ ಕೊಟ್ಟಿದೆ. ಮಹಾತ್ಮ ಗಾಂಧಿಯವರು ಇವರನ್ನು ಹರಿಜನರೆಂದು ದೇವರ ಮಕ್ಕಳು ಎಂಬ ಅರ್ಥದಲ್ಲಿ ಬಳಸಲು ಉತ್ತೇಜಿಸಿದ್ದರು ಮತ್ತು ಹರಿಜನ ಎಂಬ ಪತ್ರಿಕೆಯನ್ನೂ ನಡೆಸುತ್ತಿದ್ದರು. ದಶಕಗಳ ಕಾಲ ಈ ಪದಬಳಕೆ ಚಾಲ್ತಿಯಲ್ಲಿತ್ತು. ಈಗ ಈ ಪದಬಳಕೆ ನಿಂದಾತ್ಮಕವೆಂದು ಪರಿಗಣಿಸಿ ನಿಷೇಧಿಸಲ್ಪಟ್ಟಿದೆ. ೨೦೦೪ರಲ್ಲಿ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ದಲಿತ ಎಂಬ ಪದವನ್ನು ಪರಿಶಿಷ್ಟ ಜಾತಿಗಳು ಎಂಬುದಕ್ಕೆ ಪರ್ಯಾಯವಾಗಿ ಬಳಕೆ ಮಾಡುವುದು ಅಸಾಂವಿಧಾನಿಕ ಎಂದು ಪರಿಗಣಿಸಿ ರಾಜ್ಯ ಸರ್ಕಾರಗಳು ಈ ಪದದ ಬಳಕೆಯನ್ನು ನಿಲ್ಲಿಸಲು ಸೂಚಿಸಿತ್ತು. ಇದನ್ನು ಅನುಸರಿಸಿ ಛತ್ತೀಸಘಡ ಸರ್ಕಾರವು ಸರ್ಕಾರದ ವ್ಯವಹಾರಗಳಲ್ಲಿ ಈ ಪದಬಳಕೆಯನ್ನು ಹಿಂದೆಯೇ ಕೊನೆಗೊಳಿಸಿದೆ.
ದಲಿತರು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿ ಆಯಾ ಪ್ರದೇಶಗಳಲ್ಲಿ ಪ್ರಚಲಿತವಿರುವ ಭಾಷೆಗಳನ್ನು, ಆಚರಣೆಗಳನ್ನು ಅನುಸರಿಸುತ್ತಾರೆ. ೨೦೧೧ರ ಜನಗಣತಿಯ ಅಂಕಿ-ಅಂಶಗಳಂತೆ ಶೇ.16.6ರಷ್ಟಿರುವ ಪರಿಶಿಷ್ಟ ಜಾತಿಗಳವರು, ಶೇ.8.6ರಷ್ಟಿರುವ ಪರಿಶಿಷ್ಟ ಪಂಗಡಗಳವರು ಒಟ್ಟಾಗಿ ದೇಶದ ಒಟ್ಟು ಜನಸಂಖ್ಯೆಯ ಶೇ. 25.2ರಷ್ಟಿದ್ದಾರೆ. ಭಾರತದ ನಾಲ್ಕು ರಾಜ್ಯಗಳಲ್ಲಿ ಒಟ್ಟು ದಲಿತ ಜನಸಂಖ್ಯೆಯ ಸುಮಾರು ಅರ್ಧದಷ್ಟು ಜನರು [ಉತ್ತರಪ್ರದೇಶದಲ್ಲಿ(ಶೇ.20.5), ಪ.ಬಂಗಾಳದಲ್ಲಿ (ಶೇ.10.7), ಬಿಹಾರದಲ್ಲಿ(ಶೇ.8.2) ಮತ್ತು ತಮಿಳುನಾಡಿನಲ್ಲಿ(ಶೇ.7.2)] ಇರುವುದು ವಿಶೇಷವಾಗಿದೆ. ಪಂಜಾಬಿನ ಜನಸಂಖ್ಯೆಯ ಶೇ.31.9ರಷ್ಟು ಜನರು ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದವರಾಗಿದ್ದಾರೆ. ಮಿಜೋರಾಂ ರಾಜ್ಯದಲ್ಲಿ ಇವರ ಸಂಖ್ಯೆ ಶೂನ್ಯವಾಗಿದೆ. 1990ರ ಸಂವಿಧಾನ (ಪ.ಜಾ.) ಆದೇಶಗಳು (ತಿದ್ದುಪಡಿ) ಕಾಯದೆಯ ಪ್ರಕಾರ ಪರಿಶಿಷ್ಟ ಜಾತಿಗಳವರು ಹಿಂದೂ, ಸಿಖ್ ಅಥವ ಬೌದ್ಧ ಧರ್ಮಕ್ಕೆ ಮಾತ್ರ ಸೇರಿದವರಾಗಿರಬಹುದು. ಕರ್ನಾಟಕದಲ್ಲಿ ಇರುವ 6.10,95297 ಜನರ ಪೈಕಿ 1.04,74992 ಪ.ಜಾ. ಮತ್ತು 42,48987 ಪ.ಪಂ.ಕ್ಕೆ ಸೇರಿದವರೆಂದು 2011ರ ಜನಗಣತಿ ಅಂಕಿ-ಅಂಶಗಳು ಹೇಳುತ್ತವೆ. ಅಂದರೆ ರಾಜ್ಯದ ಜನಸಂಖ್ಯೆಯ ಶೇ.24ರಷ್ಟು ಜನರು ದಲಿತವರ್ಗಕ್ಕೆ ಸೇರಿದವರಾಗಿದ್ದಾರೆ. ಈ ಪ್ರಮಾಣದಷ್ಟು ಜನರು ದಲಿತರಾಗಿಯೇ ಮುಂದುವರೆಯಬೇಕೇ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಆದಿದ್ರಾವಿಡ, ಆದಿಕರ್ನಾಟಕ, ಆದಿ ಆಂಧ್ರ ಮತ್ತು ಆದಿಧರ್ಮಿ -ಇವು ಒಂದು ಕಾಲದಲ್ಲಿ ಅಸ್ಪೃಷ್ಯವೆಂದು ಪರಿಗಣಿಸಲ್ಪಟ್ಟಿದ್ದ ಜಾತಿಗಳವರಿಗೆ ಅನುಕ್ರಮವಾಗಿ ತಮಿಳುನಾಡು, ಕರ್ನಾಟಕ, ಆಂಧ್ರ ಮತ್ತು ಪಂಜಾಬು ರಾಜ್ಯಗಳಲ್ಲಿ ಸರ್ಕಾರಿ ದಾಖಲಾತಿಗಳಲ್ಲಿ ಕೊಡಲಾಗಿರುವ ಹೆಸರುಗಳು. ಇಲ್ಲಿ ಆದಿ ಎಂದರೆ ಮೂಲನಿವಾಸಿಗಳು ಎಂಬ ಅರ್ಥ ಧ್ವನಿಸುತ್ತದೆ.
ಕಾಯದೆಯ ಪ್ರಕಾರ ಪ.ಜಾ.ಗೆ ಸೇರಿದವರು ಹಿಂದೂ, ಸಿಖ್ ಅಥವ ಬೌದ್ಧ ಧರ್ಮಕ್ಕೆ ಮಾತ್ರ ಸೇರಿದವರಾಗಿರಬಹುದಾಗಿದ್ದು, ಪ.ಪಂ.ಗಳವರಿಗೆ ಆ ನಿರ್ಬಂಧವಿರುವುದಿಲ್ಲ. 61ನೆಯ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಸ್ಥೆಯ ಸಮೀಕ್ಷೆಯಂತೆ ಬೌದ್ಧ ಧರ್ಮೀಯರಲ್ಲಿ ಶೇ.90ರಷ್ಟು, ಸಿಕ್ಖರ ಮೂರನೆಯ ಒಂದು ಭಾಗದಷ್ಟು ಮತ್ತು ಕ್ರಿಶ್ಚಿಯನರ ಮೂರನೆಯ ಒಂದು ಭಾಗದಷ್ಟು ಜನರು ಪ.ಜಾ. ಅಥವ ಪ.ಪಂ.ಗಳವರಾಗಿದ್ದಾರೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ಅಲ್ಲಿ ಸಿಗುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡೂ, ಸರ್ಕಾರದ ವ್ಯಾವಹಾರಿಕ ಸವಲತ್ತುಗಳನ್ನು ಪಡೆಯುವ ಸಲುವಾಗಿ ಪ.ಜಾ. ಎಂದೇ ದಾಖಲಾತಿಗಳಲ್ಲಿ ಉಳಿದು ಎರಡೂ ಕಡೆಯ ಸೌಲಭ್ಯಗಳನ್ನು ಪಡೆಯುವವರನ್ನು ಕಿಶ್ಚಿಯನರದೇ ಭಾಷೆಯಲ್ಲಿ Crypto-Christians ಅಥವ ಗುಪ್ತ ಕ್ರಿಶ್ಚಿಯನರು ಎಂದು ಕರೆಯುತ್ತಾರೆ. ಇಂತಹವರ ಸಂಖ್ಯೆಯೂ ಗಣನೀಯವಾಗಿದೆ. ಇವರುಗಳ ಈ ನಡೆಯಿಂದಾಗಿ ಎರಡೂ ಕಡೆಗಳಲ್ಲಿ ಕಡೆಗಣಿಸಲ್ಪಟ್ಟು ನೋವು ಅನುಭವಿಸುವವರೂ ಇದ್ದಾರೆ. ಕ್ರಿಶ್ಚಿಯನರಾಗಿ ಮತಾಂತರಿತರಾದರೂ ದಲಿತರನ್ನು ತಮ್ಮಲ್ಲೊಬ್ಬರಾಗಿ ಪರಿಗಣಿಸದೆ ಅವರನ್ನು ಪ್ರತ್ಯೇಕವಾಗಿಯೇ ಕಾಣುವ ಮನೋಭಾವ ಇರುವುದೂ ಅನುಭವಕ್ಕೆ ಬಂದಿದೆ. ಇಂತಹ ಪ್ರತ್ಯೇಕತೆಯ ವಿರುದ್ಧ ಅಲ್ಲಲ್ಲಿ ಪ್ರತಿಭಟನೆಗಳೂ ನಡೆದಿವೆ.
ತುಳಿತಕ್ಕೊಳಗಾದವರ ಪರವಾಗಿ ಧ್ವನಿಯೆತ್ತಿದ, ಅವರನ್ನು ಮುಂದೆ ತರಲು ಶ್ರಮಿಸಿದ ಸಮಾಜ ಸುಧಾರಕರುಗಳಿಗೆ ಕೊರತೆಯಿಲ್ಲ. ಅಂತಹವರ ಶ್ರಮದ ಫಲಗಳು ಈಗ ಗೋಚರಿಸುತ್ತಿವೆ. ಜಾತಿಗಳನ್ನು ಒಗ್ಗೂಡಿಸಲು ಬಸವಣ್ಣನವರು ಮಾಡಿದ ಪ್ರಯತ್ನ ಅವರನ್ನು ಇಂದಿಗೂ ಮಹಿಮರ ಸಾಲಿನಲ್ಲಿ ನಿಲ್ಲಿಸಿದೆ. ದುರಾದೃಷ್ಟಕ್ಕೆ ಬಸವಣ್ಣನವರ ಅನುಯಾಯಿಗಳದೇ ಪ್ರತ್ಯೇಕ ಜಾತಿ, ಪಂಗಡಗಳಾಗಿ ಈಗ ಗುರುತಿಸಲ್ಪಡುತ್ತಿದೆ. ಬುದ್ಧ, ಮಹಾವೀರರೂ ಜಾತಿ ಕಾರಣದ ಭಿನ್ನತೆಗಳನ್ನು ವಿರೋಧಿಸಿದವರು. ಶುಕ್ಲಾಚಾರ್ಯರು ಅಸ್ಪೃಷ್ಯರೆನ್ನಲಾಗುತ್ತಿದ್ದ ಬಹುಜನರಿಗೆ ಮಂತ್ರದೀಕ್ಷೆ ನೀಡಿ ಉಪನಯನ ಸಂಸ್ಕಾರ ನೀಡಿ ಬ್ರಾಹ್ಮಣರನ್ನಾಗಿಸಿದ್ದರು. ಇಂದು ಬ್ರಾಹ್ಮಣ ಸಮುದಾಯದಲ್ಲಿರುವ ಶುಕ್ಲ ಯಜರ್ವೇದಿಗಳೆಂದು ಕರೆಯಲ್ಪಡುವವರು ಹೀಗೆ ಪರಿವರ್ತಿಸಲ್ಪಟ್ಟವರ ಸಂತತಿಯಾಗಿದ್ದಾರೆ. ರಾಮಾನುಜಾಚಾರ್ಯರು ದಲಿತ ಶಿಷ್ಯರನ್ನೂ ಸಾರ್ವಜನಿಕವಾಗಿ ತಮ್ಮವರೆಂದೇ ಸ್ವೀಕರಿಸಿದ್ದಲ್ಲದೆ ದಲಿತ ನಮ್ಮಾಳ್ವಾರರ ಕೃತಿಗಳನ್ನು ದ್ರಾವಿಡವೇದವೆಂದು ಪ್ರಚುರಪಡಿಸಿದ್ದರು. ಮಧ್ಯಪ್ರದೇಶದಲ್ಲಿ ಜಾತಿಗಳನ್ನು ಮೀರಿ ನಿಂತು ತಮ್ಮನ್ನು ಅಜಾತಿಯವರು ಎಂದು ಕರೆದುಕೊಂಡವರೇ ಇಂದು ಅಜಾತರು ಎಂಬ ಜಾತಿಯವರಾಗಿ ಗುರುತಿಸಲ್ಪಡುತ್ತಿದ್ದಾರೆ. ಮಹಾತ್ಮ ಗಾಂಧಿಯವರಂತೂ ದಲಿತರನ್ನು ಹರಿಜನರೆಂದು ಕರೆದು ಅವರೊಂದಿಗೆ ಭಾವನಾತ್ಮಕವಾಗಿ ಒಂದಾಗಿದ್ದರು. ಅಸ್ಪೃಷ್ಯತೆಯ ನಿವಾರಣೆಗೆ ಅವರ ಪ್ರಾಮಾಣಿಕ ಪ್ರಯತ್ನ, ಜಾತಿವೈಷಮ್ಯಗಳಿಗೆ ಅವರ ವಿರೋಧ ಮಾದರಿಯದಾಗಿತ್ತು. ಬಾಬಾ ಅಮ್ಟೆಯವರು(1914-2008) ಗ್ರಾಮೀಣ ಗೃಹ ಕೈಗಾರಿಕೆಗಳನ್ನು ಉತ್ತೇಜಿಸಿ ಸ್ವತಂತ್ರ ಬದುಕು ರೂಪಿಸಿಕೊಳ್ಳಲು ದಲಿತರನ್ನು ಪ್ರೇರಿಸಿದವರು. ಮಹಾರಾಷ್ಟ್ರದ ಕುಷ್ಟ ರೋಗಿಗಳ, ದುರ್ಬಲರ, ಅಸಹಾಯಕರ ನೆರವಿಗಾಗಿ ಮೂರು ಆಶ್ರಮಗಳನ್ನು ಸ್ಥಾಪಿಸಿದ್ದರು.
(ಮುಂದುವರೆಯುವುದು)
-ಕ.ವೆಂ.ನಾಗರಾಜ್.
Comments
ಉ: ದಲಿತತ್ವದಿಂದ ಉನ್ನತಿಯೆಡೆಗೆ! - 1
ಇಂದು ಅನೇಕ ಜನ ಬಲಿತವರು ದಲಿತರ ಹೆಸರನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ. ನಿಜವಾದ ಹಿಂದುಳಿದವರಿಗೆ ಸಲ್ಲಬೇಕಾದ ಸೌಲಭ್ಯ ಸಿಗದಂತೆ ಮಾಡುವಲ್ಲಿ ಕ್ರಿಪ್ಟೋ ಕ್ರೈಸ್ತರ ಪಾತ್ರವೂ ಮಹತ್ತರವಾಗಿದೆ. ಎರಡೂ ಕಡೆ ಹೀಗೆ ಸೌಲಭ್ಯ ಪಡೆಯುತ್ತಿರುವವರು ತಮ್ಮ ಸ್ವಾರ್ಥವನ್ನು ಬದಿಗಿರಿಸಿ ಶೋಷಿತರಿಗೆ ನ್ಯಾಯವಾಗಿ ಸಲ್ಲಬೇಕಾದ ಸವಲತ್ತುಗಳನ್ನು ದೊರೆಯುವಂತೆ ಮಾಡಿದಲ್ಲಿ ದಲಿತರ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿಯೂ ಸಾಧ್ಯ. ವಂದನೆಗಳು, ಕವಿಗಳೆ. :)