ದಳ್ಳಾಳಿಗಳಿಂದ ರೈತರ ಶೋಷಣೆಗೆ ತಡೆ

ದಳ್ಳಾಳಿಗಳಿಂದ ರೈತರ ಶೋಷಣೆಗೆ ತಡೆ

ದಳ್ಳಾಳಿಗಳಿಂದ ರೈತರ ಶೋಷಣೆ ಹೇಗೆ ನಡೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿಕ್ಕಾಗಿ 2014ರ ಘಟನೆಯೊಂದನ್ನು ಪರಿಶೀಲಿಸೋಣ. ಫೆಬ್ರವರಿ 2014ರಲ್ಲಿ ಢೆಲ್ಲಿಯಲ್ಲಿ ಮುಷ್ಕರಕ್ಕೆ ಕರೆ ನೀಡಲಾಯಿತು; ಆ ಕರೆ ನೀಡಿದ್ದು ಯಾವುದೇ ರಾಜಕೀಯ ಪಕ್ಷವಲ್ಲ; ಹಣ್ಣು ಹಾಗೂ ತರಕಾರಿಗಳ ವ್ಯಾಪಾರಿಗಳು ಮತ್ತು ದಳ್ಳಾಳಿಗಳು!
ಇದೆಲ್ಲ ಶುರುವಾದದ್ದು ಫೆಬ್ರವರಿ 2014ರ ಮೊದಲ ವಾರದಲ್ಲಿ ಢೆಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಹೊರಡಿಸಿದ ಒಂದು ಸುತ್ತೋಲೆಯಿಂದ. ಆ ಸುತ್ತೋಲೆಯ ಆದೇಶ ಹೀಗಿತ್ತು: ಮಂಡಿಗಳಲ್ಲಿ (ಸರಕಾರದ ರಖಂ ಮಾರುಕಟ್ಟೆಗಳಲ್ಲಿ) ರೈತರು ಮಾರಾಟ ಮಾಡುವ ಕೃಷಿ ಉತ್ಪನ್ನಗಳಿಗೆ ರೈತರಿಂದ ದಳ್ಳಾಳಿಗಳು ವಸೂಲಿ ಮಾಡುತ್ತಿದ್ದ ಶೇಕಡಾ 6 ದಳ್ಳಾಳಿಗೆ (ಕಮಿಷನಿಗೆ) ನಿಷೇಧ. ಈ ಆದೇಶವು ವ್ಯಾಪಾರಿ-ದಳ್ಳಾಳಿಗಳ ಕೂಟದ ಬಿಗಿಹಿಡಿತದಲ್ಲಿರುವ ಮಂಡಿಗಳಲ್ಲಿ ರೈತರ ಶೋಷಣೆ ತಪ್ಪಿಸಲಿಕ್ಕಾಗಿ ಪ್ರಮುಖ ಕ್ರಮ ಎನ್ನಬಹುದು.
ಡೆಲ್ಲಿಯ ಅಜಾದ್-ಪುರ ಏಷ್ಯಾದ ಅತಿ ದೊಡ್ಡ ತರಕಾರಿ ಮಾರುಕಟ್ಟೆ. ಅದಲ್ಲದೆ ಢೆಲ್ಲಿಯಲ್ಲಿ ಇನ್ನೂ ಕೆಲವು ಸಣ್ಣ ಮಾರುಕಟ್ಟೆಗಳಿವೆ. ಇಲ್ಲಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ರೈತರಿಗೆ ಈ ಆದೇಶದಿಂದ ಅನುಕೂಲ.
ಆದರೆ ಈ ಆದೇಶಕ್ಕೆ ವ್ಯಾಪಾರಿಗಳು ಹಾಗೂ ದಳ್ಳಾಳಿಗಳಿಂದ 5 ಫೆಬ್ರವರಿ 2014ರಂದು ಭಾರೀ ಪ್ರತಿಭಟನೆ. ಆಗ ಢೆಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರಕಾರದ ಆಡಳಿತ. ಅದು ಸುಮ್ಮನಿರಲಿಲ್ಲ; ವ್ಯಾಪಾರಿಗಳು ಹಾಗೂ ದಳ್ಳಾಳಿಗಳ  ವಿರುದ್ಧ ಕಠಿಣ ಎಸ್ಮಾ ಕಾಯಿದೆ ಜ್ಯಾರಿ ಮಾಡುವುದಾಗಿ ಬೆದರಿಸಿತು. ತಕ್ಷಣವೇ ವ್ಯಾಪಾರಿಗಳು ಮತ್ತು ದಳ್ಳಾಳಿಗಳು ತಮ್ಮ ಮುಷ್ಕರದ ಕರೆ ಹಿಂತೆಗೆದುಕೊಂಡರು!
ಇವೆಲ್ಲ ಬೆಳವಣಿಗೆಗಳ ಮೂಲ ಅಕ್ಟೋಬರ 2013ರ ಢೆಲ್ಲಿ ಹೈಕೋರ್ಟಿನ ಆದೇಶದಲ್ಲಿದೆ. ಅದರಲ್ಲಿ, ದಳ್ಳಾಳಿಯನ್ನು ರೈತರಿಂದಲ್ಲ, ಬದಲಾಗಿ ಕೃಷಿ ಉತ್ಪನ್ನಗಳ ಖರೀದಿದಾರರಿಂದ ವಸೂಲಿ ಮಾಡುವಂತೆ ಎಪಿಎಂಸಿ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ಆದೇಶಿಸಿತ್ತು. ಅದರ ಅನುಸಾರ, ಕೃಷಿ ಉತ್ಪಾದನೆಯ “ಸರಪಳಿ”ಯಲ್ಲಿ ರೈತರು ಅತ್ಯಂತ ದುರ್ಬಲ ಘಟಕವಾದ್ದರಿಂದ, ಅವರಿಂದ ದಳ್ಳಾಳಿ ವಸೂಲಿ ಮಾಡುವುದು ಶೋಷಣೆ. ಈ ಹಿನ್ನೆಲೆಯಲ್ಲಿ, ಡೆಲ್ಲಿ ಹೈಕೋರ್ಟಿನ ಆದೇಶ ಜ್ಯಾರಿ ಮಾಡುವುದಷ್ಟೇ ತನ್ನ ಕೆಲಸ ಎಂಬುದು ಢೆಲ್ಲಿ ಸರಕಾರದ ನಿಲುವು.
ಈ ಕ್ರಮದಿಂದಾಗಿ ಹಣ್ಣು ಮತ್ತು ತರಕಾರಿಗಳ ಬೆಲೆ ಇನ್ನಷ್ಟು ಹೆಚ್ಚಾಗಲಿದೆ ಎಂಬುದು ಅವುಗಳ ದಳ್ಳಾಳಿಗಳ ಅಂಬೋಣ. ಅಜಾದ್-ಪುರ ಮಾರುಕಟ್ಟೆಗೆ ಪ್ರತಿದಿನ ಬರುವ ಹಣ್ಣು ಮತ್ತು ತರಕಾರಿಗಳ ಪರಿಮಾಣ 2,500 ಟ್ರಕ್ ಲೋಡುಗಳಿಗಿಂತ ಅಧಿಕ.. ಈ ಮಂಡಿಯ ಪ್ರತಿವರುಷದ ವಹಿವಾಟು (2013ರಲ್ಲಿ) ರೂ.6,500 ಕೋಟಿ. ಆದ್ದರಿಂದ, ದಳ್ಳಾಳಿಯನ್ನು ಖರೀದಿದಾರರಿಂದ ವಸೂಲಿ ಮಾಡೋದಾದರೆ, ಅವರು ರೂ.400 ಕೋಟಿ ಜಾಸ್ತಿ ಪಾವತಿಸಬೇಕಾಗುತ್ತದೆ ಎಂಬುದೊಂದು ಅಂದಾಜು.
ಮಂಡಿಗಳಲ್ಲಿ ಏನು ನಡೆಯುತ್ತದೆ? ಹಲವು ಶತಮಾನಗಳಿಂದ ವಹಿವಾಟು ನಡೆಸುತ್ತಿರುವ ಮಂಡಿಗಳನ್ನು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಸರಕಾರ ಬಲಪಡಿಸಿತು – ದಳ್ಳಾಳಿಗಳನ್ನು ನೇಮಿಸುವ ಮೂಲಕ. ಇವರಿಂದಾಗಿ ಏಲಂ ವ್ಯವಸ್ಥೆಯಲ್ಲಿ ರೈತರಿಗೆ ಖರೀದಿದಾರರು ಸಿಗಬೇಕೆಂಬುದು ಸರಕಾರದ ಉದ್ದೇಶ.
ಆದರೆ ಹಾಗಾಗಲಿಲ್ಲ. ಯಾಕೆಂದರೆ, ಖರೀದಿದಾರರಿಂದ ದಳ್ಳಾಳಿ ವಸೂಲಿ ಮಾಡಬೇಕಾಗಿದ್ದ ದಳ್ಳಾಳಿಗಳು ರೈತರಿಗೆ ಸಾಲ ನೀಡಲು ಶುರುವಿಟ್ಟರು. ಇದರಿಂದಾಗಿ ದಳ್ಳಾಳಿಗಳು “ಸಾಲ ನೀಡುವ ದೊರೆ”ಗಳಾದರು. ಕ್ರಮೇಣ ಇದೊಂದು ಲಾಭದ ಕೊಳ್ಳೆ ಹೊಡೆಯುವ ಶೋಷಣಾ ವ್ಯವಸ್ಥೆಯಾಗಿ ಬೇರು ಬಿಟ್ಟಿತು.
“ಹೀಗೆ ಸಾಲ ನೀಡುವುದು ರೈತರನ್ನು ಕಟ್ಟುಪಾಡಿಗೆ ಸಿಲುಕಿಸುವ ವರಸೆ. ರೈತರು ಬಡವರು. ದಳ್ಳಾಳಿಯೊಬ್ಬನು ರೈತನಿಗೆ ಮುಂಗಡ ಹಣ ನೀಡಿದಾಗ, ಆ ರೈತ ತಾನು ಬೆಳೆಸಿದ್ದನ್ನೆಲ್ಲ ಆ ದಳ್ಳಾಳಿಗೇ ಮಾರಬೇಕಾಗುತ್ತದೆ” ಎನ್ನುತ್ತಾರೆ, ಕಿಸಾನ್ ಜಾಗೃತಿ ಮಂಚ್ ಎಂಬ ರೈತ ಸಂಘಟನೆಯ ಸುಧೀರ್ ಪನ್ವಾರ್.
ಬರಬರುತ್ತಾ ಏನಾಯಿತು? ಮಂಡಿಗಳ ದೊಡ್ಡ ವ್ಯಾಪಾರಿಗಳು ದಳ್ಳಾಳಿಗಳ ಮೂಲಕ ರೈತರಿಗೆ ಮುಂಗಡ ನೀಡಲು ಶುರು ಮಾಡಿದರು. ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಈ ದಳ್ಳಾಳಿಗಳು ರೈತರ ಜಾಲ ನಿರ್ಮಿಸಿಕೊಂಡರು. ಎರಡೂ ಕಡೆಯಿಂದ ತಮ್ಮ ದಳ್ಳಾಳಿ ವಸೂಲಿ ಮಾಡಲು ದಳ್ಳಾಳಿಗಳು ಆರಂಭಿಸಿದರು. ಅತ್ತ ದೊಡ್ದ ವ್ಯಾಪಾರಿಗಳಿಂದ ದಳ್ಳಾಳಿ ವಸೂಲಿ, ಇತ್ತ ರೈತರ ಉತ್ಪನ್ನಗಳ ಮಾರಾಟ ಬೆಲೆಯಿಂದ ಶೇಕಡಾ 6 ದಳ್ಳಾಳಿ ವಸೂಲಿ. ಹೀಗೆ ನಡೆಯುತ್ತಿದೆ ವ್ಯಾಪಾರಿ-ದಳ್ಳಾಳಿಗಳ ಕೂಟದಿಂದ ರೈತ ಸಮುದಾಯದ ನಿರಂತರ ಶೋಷಣೆ.
ಕೃಷಿ ಉತ್ಪಾದನೆಯ ಸರಪಳಿಯ ತಳಮಟ್ಟದಲ್ಲಿರುವ ರೈತ ಇದೆಲ್ಲದರ ವಿರುದ್ಧ ಸೊಲ್ಲು ಎತ್ತುವಂತಿಲ್ಲ. ಆತನಿಗೆ ತಾನು ಬೆಳೆಸಿದ್ದನ್ನು ಉತ್ತಮ ಬೆಲೆಗೆ ಮಾರುವ ಆಯ್ಕೆಯೇ ಇಲ್ಲ. ಯಾಕೆಂದರೆ, ಅವನು ಬೆಳೆಸಿದ್ದನ್ನು ಖರೀದಿಸುವ ವ್ಯಾಪಾರಿ ಪೂರ್ವ ನಿರ್ಧರಿತ. ಆ ವ್ಯಾಪಾರಿ ಹೇಳಿದ್ದೇ ಬೆಲೆ. ರೈತನಿಗೆ ಸಿಗೋದು ಕನಿಷ್ಠ ಬೆಲೆ.
“ಈಗಿನ ವ್ಯವಸ್ಥೆಯಲ್ಲಿ ರೈತನಿಗೆ ದಳ್ಳಾಳಿ ಪ್ರತಿಯೊಂದು ಸಲ ಮುಂಗಡ ಕೊಟ್ಟಾಗಲೂ ಶೇಕಡಾ ಆರು ದಳ್ಳಾಳಿ ಮುರಿದುಕೊಳ್ಳುತ್ತಾನೆ. ಇದು ಲೂಟಿ. ಯಾಕೆಂದರೆ ಒಂದು ವರುಷದಲ್ಲಿ ಹತ್ತು ಸಲ ಈ ಸುಲಿಗೆ ನಡೆಯುತ್ತದೆ” ಎಂದು ಈ ವ್ಯವಸ್ಥೆಯ ಶೋಷಣೆಯನ್ನು ವಿವರಿಸುತ್ತಾರೆ ಎಪಿಎಂಸಿಯ ಮಾಜಿ ಅಧ್ಯಕ್ಷ ರಾಜೇಂದ್ರ ಕುಮಾರ್ ಶರ್ಮಾ.
ಮಂಡಿ ಎಂಬುದೊಂದು ರೈತರ ಶೋಷಣೆಯ ಅಚ್ಚುಕಟ್ಟಿನ ವ್ಯವಸ್ಥೆ. ಸಾಲದ ಸುಳಿಯಲ್ಲಿ ಸಿಲುಕಿರುವ ರೈತರನ್ನು ಇದರಿಂದ ಬಚಾವ್ ಮಾಡಬೇಕಾದರೆ ಇರುವ ದಾರಿ: ತರಕಾರಿ ಮತ್ತು ಹಣ್ಣುಗಳ ಬೆಲೆ ನಿಗದಿಗಾಗಿ ಪಾರದರ್ಶಕ ವ್ಯವಸ್ಥೆಯೊಂದನ್ನು ರೂಪಿಸುವುದು. ಮಂಡಿಗಳಲ್ಲಿ ರೈತರ ಶೋಷಣೆ ತಪ್ಪಿಸಲು ಸಾಧ್ಯ ಎಂಬುದನ್ನು ಢೆಲ್ಲಿ ಸರಕಾರ ಮತ್ತು ಎಪಿಎಂಸಿ ತೋರಿಸಿ ಕೊಟ್ಟಿವೆ.
ರೈತರ ಶೋಷಣೆ ತಪ್ಪಿಸಲಿಕ್ಕಾಗಿ ಸರಕಾರ ತೆಗೆದುಕೊಳ್ಳುವ ಕ್ರಮಗಳನ್ನು ರೈತರು ಬೆಂಬಲಿಸುವುದು ಅತ್ಯಗತ್ಯ - ತಮ್ಮದೇ ಹಿತಕ್ಕಾಗಿ. ಅದರ ಬದಲಾಗಿ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಒಳಗಾದರೆ ರೈತರ ಶೋಷಣೆ ನಿರಂತರ, ಅಲ್ಲವೇ?