ದಶಪಥ ರಸ್ತೆಯ‌ ಮಹಾ ದಾನಿಗಳು…!

ದಶಪಥ ರಸ್ತೆಯ‌ ಮಹಾ ದಾನಿಗಳು…!

ಯೋಜನಾ ಗಾತ್ರ ಸುಮಾರು 8500 ಕೋಟಿಗಳು (ರಸ್ತೆ ಮೂಲಭೂತ ಅವಶ್ಯಕತೆಯೇ ಹೊರತು Luxurious ಅಲ್ಲ ಎಂದು ನೆನಪಿಸುತ್ತಾ.....) ಬೆಂಗಳೂರು - ಮೈಸೂರು ಹೊಸ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಕಾಮಗಾರಿಗಾಗಿ ತಮ್ಮ ಸ್ವಂತ ಹಣವನ್ನು ದಾನವಾಗಿ ನೀಡಿದ ದಾನಿಗಳ ಹೆಸರು...

ಬಿಜೆಪಿ ನಾಯಕರು ೫೦೦೦ ಕೋಟಿ

ಕಾಂಗ್ರೆಸ್ ನಾಯಕರು ೨೦೦೦ ಕೋಟಿ

ಜೆಡಿಎಸ್ ನಾಯಕರು ೧೫೦೦ ಕೋಟಿ

ಜನ ಸಾಮಾನ್ಯ - 000

ಇದಲ್ಲದೆ ಉಳಿದ ಹಣವನ್ನು ಬಿಜೆಪಿ, ಕಾಂಗ್ರೇಸ್ ಮತ್ತು ಜನತಾದಳ ನೀಡಿವೆ. ಯಾವ ಸಾಮಾನ್ಯ ವ್ಯಕ್ತಿಯು ಒಂದು ಪೈಸೆಯನ್ನು ಕೊಟ್ಟಿಲ್ಲ. ಆದ್ದರಿಂದಲೇ ವಿವಿಧ ಪಕ್ಷಗಳ ನೇತಾರರು ಅಪಾರ ಹಣ ಖರ್ಚು ಮಾಡಿ ಅದ್ದೂರಿಯಾಗಿ ಉದ್ಘಾಟಿಸುತ್ತಿದ್ದಾರೆ ಮತ್ತು ನಾವೇ ಈ ರಸ್ತೆ ಅಭಿವೃದ್ಧಿ ಆಗಲು ಕಾರಣ ಎಂದು ಹೇಳುತ್ತಿದ್ದಾರೆ‌. ಇದು ನಿಜವೇ, ಅದು ಅವರ ಸ್ವಂತ ಹಣವೇ. ರಸ್ತೆ ಅವರ ಮನೆಯ ಆಸ್ತಿಯೇ, ಭೂಮಿ ಅವರ ಪಿತ್ರಾರ್ಜಿತ ಸ್ವತ್ತೇ?

ಮೇಲೆ ಹೇಳಿದ ಬಹುತೇಕ ಎಲ್ಲರೂ ಜನಪ್ರತಿನಿಧಿಗಳಾಗಿದ್ದರೂ ಸಹ ಸರ್ಕಾರಿ ಸೇವಕರು ಮತ್ತು ಸಾರ್ವಜನಿಕ ಖಜಾನೆಯ ಸಂಬಳ ಪಡೆಯುವವರು ಹಾಗು ಕಾನೂನಾತ್ಮಕ ಅಧಿಕಾರ ಪಡೆದಿರುವವರು. ರಸ್ತೆ ನಿರ್ಮಿಸುವುದು ಅವರ ಉದ್ಯೋಗದ ಒಂದು ಸಾಮಾನ್ಯ ಕರ್ತವ್ಯ ಮತ್ತು ಜವಾಬ್ದಾರಿ ಮಾತ್ರ. ಅಲ್ಲದೇ ಇವರ್ಯಾರು ಆ ರಸ್ತೆಗಾಗಿ ಅಗೆದಿಲ್ಲ, ಮಣ್ಣು ಹೊತ್ತಿಲ್ಲ, ಟಾರು ಸಿಮೆಂಟ್ ಹಾಕಿಲ್ಲ ಬೆವರು ಸುರಿಸಿಲ್ಲ. ಒಂದು ಪೈಸೆಯನ್ನು ತಮ್ಮ ಮನೆಯಿಂದ ನೀಡಿಲ್ಲ. ಅತಿಹೆಚ್ಚು ಎಂದರೆ ಯಾರೋ ತಯಾರು ಮಾಡಿದ ಕಡತಗಳನ್ನು ಪರಿಶೀಲಿಸಿ ಸಹಿ ಮಾಡಿದ್ದಾರೆ ಅಷ್ಟೇ. ಅದಕ್ಕಾಗಿ ಎಷ್ಟು ಕಾನೂನು ಬಾಹಿರ ಹಣ ಪಡೆದಿರಬಹುದು ಎಂಬುದನ್ನು ಆಪಾದನೆ ಮಾಡಲು ನಮ್ಮ ಬಳಿ ಯಾವುದೇ ದಾಖಲೆ ಇಲ್ಲ.

ಸಹಿ ಮಾಡಿದವರು ಮತ್ತು ಕಡತಗಳ ವಿಲೇವಾರಿ ಮಾಡಿಸಲು ಒಂದಷ್ಟು ಪ್ರಯತ್ನ ಪಟ್ಟವರೇ ರಸ್ತೆ ನಿರ್ಮಾಣದ ಲಾಭ ಪಡೆಯಲು ಹವಣಿಸುತ್ತಿರುವಾಗ, ಇನ್ನು ರಸ್ತೆಗಾಗಿ ತೆರಿಗೆ ಹಣ ಪಾವತಿಸಿದ ಸಾಮಾನ್ಯ ಜನ, ರಸ್ತೆಗಾಗಿ ಹಣ ಪಡೆದರೂ ತಮ್ಮ ಜಾಗ ಕಳೆದುಕೊಂಡ ರೈತರು, ಹೊಟ್ಟೆ ಪಾಡಿಗಾಗಿಯಾದರೂ ಹಗಲಿರಳು ಶ್ರಮ ಪಟ್ಟ ಎಂಜಿನಿಯರುಗಳು, ಕಾರ್ಮಿಕರು ಮುಂತಾದವರು ರಸ್ತೆಯ ನಿರ್ಮಾಣದಲ್ಲಿ ಪಾಲು ಕೇಳಬಹುದಲ್ಲವೇ?

ದಯವಿಟ್ಟು ಕ್ಷಮೆ ಇರಲಿ. ನನ್ನ ಅಭಿಪ್ರಾಯ ಸ್ವಲ್ಪ ತಪ್ಪು ಇರಬಹುದು. ಆದರೂ ಆ ಒಂದು ಕೋನದಿಂದ ಯೋಚಿಸಿದಾಗ ಈಗ ಉದ್ಘಾಟನೆ ಆಗುತ್ತಿರುವ ಬೃಹತ್ ರಸ್ತೆಯ ಅವಶ್ಯಕತೆಯೇ ಇರಲಿಲ್ಲ. ಬೆಂಗಳೂರು ಮತ್ತು ಮೈಸೂರಿನ 140 ಕಿಲೋಮೀಟರ್ ಗಳ ನಡುವೆ ಬೃಹತ್ ಎನ್ನುವ ಯಾವುದೇ ವಾಣಿಜ್ಯ ವ್ಯವಹಾರಗಳು ಇಲ್ಲ. ಸಣ್ಣ ಪುಟ್ಟ ವ್ಯವಹಾರ ಹೊರತುಪಡಿಸಿದರೆ ಪ್ರವಾಸೋದ್ಯಮ ಮಾತ್ರ ತುಂಬಾ ದೊಡ್ಡದಿದೆ. ಅದು ವರ್ಷದ ಕೆಲವು ತಿಂಗಳುಗಳಲ್ಲಿ. ಅದಕ್ಕಾಗಿ ಈಗಾಗಲೇ ವಿಶಾಲ ರಸ್ತೆಗಳು, ರೈಲು, ವಿಮಾನ, ನೈಸ್ ಕಾರಿಡಾರ್ ಮುಂತಾದ ಸಂಪರ್ಕ ಮಾಧ್ಯಮಗಳು ಇದ್ದವು. ಈಗ ಸಾವಿರಾರು ಎಕರೆ ಕೃಷಿ ಭೂಮಿಯನ್ನು, ಅಪಾರ ಪರಿಸರ ನಾಶವನ್ನು, ಸರ್ಕಾರಿ ಬೊಕ್ಕಸದ ಸಾವಿರಾರು ಕೋಟಿಗಳನ್ನು ಮತ್ತು ಅದನ್ನು ಲಾಭವಾಗಿ ಪರಿವರ್ತಿಸಲು ಟೋಲ್ ಶುಲ್ಕವನ್ನು ವಿಧಿಸುವ ಅನಿವಾರ್ಯತೆ ಅಷ್ಟೇನು ಇರಲಿಲ್ಲ ಎನಿಸುತ್ತದೆ. ಈಗಾಗಲೇ ಕೃಷಿ ಭೂಮಿಯ ನಾಶದಿಂದ ಆಹಾರ ಪದಾರ್ಥಗಳು ಒತ್ತಡ ಅನುಭವಿಸುತ್ತಿವೆ. ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂ ಎಂಬ ಗಾದೆ ಮಾತಿನಂತಿದೆ ಈ ರಸ್ತೆ ಕಾಮಗಾರಿ.

ಒಂದು ಅಥವಾ ಮುಕ್ಕಾಲು ಗಂಟೆ ಪ್ರಯಾಣದ ಅವಧಿ ಕಡಿಮೆ ಮಾಡಲು ಇಷ್ಟೊಂದು ಶ್ರಮ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು ಬೇಕಿರಲಿಲ್ಲ. ಜೊತೆಗೆ ಇನ್ನೊಂದು ಅಪಾಯಕಾರಿ ಅಧ್ಯಯನದ ವರದಿಯನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕಿದೆ. ರಸ್ತೆಗಳು ಹೆಚ್ಚು ಆಧುನಿಕವಾಗಿ ವೇಗಕ್ಕೆ ಅವಕಾಶ ನೀಡಿದಷ್ಟೂ ಅಪಘಾತಗಳ ಸಂಖ್ಯೆ ತುಂಬಾ ಏರಿಕೆಯಾಗಿ ಈಗಾಗಲೇ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸಾವುಗಳು ಸಂಖ್ಯೆ ಹೆಚ್ಚಾಗಿರುವ ಅಂಕಿಅಂಶಗಳು ನಮ್ಮ ಮುಂದಿವೆ.

ವಿವೇಚನೆ ಇಲ್ಲದ ಮನುಷ್ಯನಿಗೆ ನೀವು ಎಷ್ಟೇ ಸುರಕ್ಷಿತ ಅವಕಾಶ ನೀಡಿದರು ಅಷ್ಟೇ. ಮನವೆಂಬ ಮರ್ಕಟದ ಮೇಲೆ ನಿಯಂತ್ರಣ ಸಾಧಿಸದ ಹೊರತು ಎಷ್ಟು ದೊಡ್ಡ ರಸ್ತೆ ನಿರ್ಮಿಸಿದರು ವ್ಯರ್ಥ. ನನ್ನ ಪ್ರಕಾರ ರಸ್ತೆ ನಿರ್ಮಾಣ ಎಂಬುದೇ ಒಂದು ದೊಡ್ಡ ದಂಧೆ ಎಂಬಂತಾಗಿದೆ. ಪ್ರಾರಂಭದಲ್ಲಿ ಇದು ಅತ್ಯಂತ ಅವಶ್ಯಕ ಇತ್ತು ನಿಜ. ಆದರೆ ಈಗ ಅತಿರೇಕಕ್ಕೆ ಹೋಗಿದೆ. ರಾಜ್ಯದ ಪಾದಯಾತ್ರೆಯ ಸಮಯದಲ್ಲಿ ಅವಶ್ಯಕತೆ ಇಲ್ಲದ ಕಡೆಯೂ ಕೂಡ ರಸ್ತೆಗಳು ನಿರ್ಮಾಣ ಆಗಿರುವುದನ್ನು ಗಮನಿಸಿದ್ದೇನೆ. ರಸ್ತೆ ನಿರ್ಮಾಣವೇ ಅಭಿವೃದ್ಧಿ ಎಂಬ ಭ್ರಮೆಯನ್ನು ಹುಟ್ಟುಹಾಕಲಾಗಿದೆ. ನೆನಪಿಡಿ ರಸ್ತೆ ಒಂದು ಮೂಲಭೂತ ಅವಶ್ಯಕತೆಯೇ ಹೊರತು ಲಕ್ಸುರಿಯಲ್ಲ. ಬಹುಶಃ ರಸ್ತೆ ನಿರ್ಮಾಣದಿಂದ ಅಭಿವೃದ್ಧಿಯ ಹೆಸರಲ್ಲಿ ಹೆಚ್ಚು ಸುರಕ್ಷಿತ, ಸುಲಭ ಮತ್ತು ಬೃಹತ್ ಮೊತ್ತ ಕಮೀಷನ್ ರೂಪದಲ್ಲಿ ದೊರಕುವುದರಿಂದ ಇದಕ್ಕೆ ಹೆಚ್ಚು ಮಹತ್ವ ಕೊಟ್ಟಿರಬೇಕು. ಅದೇ ರೀತಿಯ ಆಸಕ್ತಿ ಕೆರೆಗಳ ನಿರ್ಮಾಣ, ಸರ್ಕಾರಿ ‌ಶಾಲೆ ಮತ್ತು ಆಸ್ಪತ್ರೆಗಳ ಆಧುನೀಕರಣ, ಕಾಡುಗಳ ನಿರ್ಮಾಣ ಮುಂತಾದ ವಿಷಯಗಳಲ್ಲಿ ಕಾಣಬರುವುದಿಲ್ಲ. ಇದರ ಬಗ್ಗೆ ಮತ್ತಷ್ಟು ಯೋಚಿಸುವ ಮತ್ತು ವಿವೇಚನೆಯಿಂದ ಅಭಿಪ್ರಾಯ ರೂಪಿಸಿಕೊಳ್ಳುವ ನಿಮ್ಮ ಸ್ವಾತಂತ್ರ್ಯವನ್ನು ಗೌರವಿಸುತ್ತಾ...

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ