ದಾಖಲೆಗಳ ಸರದಾರ, ಹಾಕಿ ದಿಗ್ಗಜ-ಬಲ್ಬೀರ್ ಸಿಂಗ್
ಕೆಲವೊಮ್ಮೆ ನನಗೆ ಪತ್ರಿಕೆಯಲ್ಲಿ ಯಾರಾದರೂ ಖ್ಯಾತ ವ್ಯಕ್ತಿಗಳು ನಿಧನ ಹೊಂದಿದ ಸುದ್ದಿ ತಿಳಿದಾಗ ಬೇಸರದ ಜೊತೆ ನಾಚಿಗೆಯೂ ಆಗುತ್ತದೆ. ಯಾಕೆಂದರೆ ಅವರ ಸಾಧನೆಗಳನ್ನು ಬದುಕಿರುವಾಗ ನಾವು ಗಮನಿಸಿರುವುದೇ ಕಮ್ಮಿ ಎಂದು ನಾಚಿಗೆ ಪಡುತ್ತೇನೆ. ಈಗ ನೋಡಿ ಇತ್ತೀಚೆಗೆ ನಮ್ಮ ಹಾಕಿಯ ಅಗ್ರಮಾನ್ಯ ಆಟಗಾರ, ಮಾಜಿ ನಾಯಕರಾದ ಬಲ್ಬೀರ್ ಸಿಂಗ್ ಸೀನಿಯರ್ ತಮ್ಮ ೯೬ನೇ ವರ್ಷದಲ್ಲಿ ನಿಧನ ಹೊಂದಿದರು. ಅವರ ಬಗ್ಗೆ ಇತ್ತೀಚೆಗೆ ಯಾರಾದರೂ ನೆನಪಿಸಿಕೊಂಡಿರುವುದು ನನಗೆ ನೆನಪಿಲ್ಲ. ತುಂಬಾ ಸಲ ಹೀಗೇ ಆಗುತ್ತೆ.
ಆದರೆ ಬಲ್ಬೀರ್ ಸಿಂಗ್ ಸೀನಿಯರ್ ಎಂಬ ಹಾಕಿ ದಿಗ್ಗಜರ ಬಗ್ಗೆ ಮರೆಯಲಾರದಷ್ಟು ವಿಷಯಗಳಿವೆ. ನಮ್ಮ ದೇಶವನ್ನು ಒಲಂಪಿಕ್ಸ್ ನಲ್ಲಿ ಪ್ರತಿನಿಧಿಸಿ ೩ ಸಲ ಚಿನ್ನದ ಬೇಟೆ ಆಡಲು ನೆರವಾದವರು ಇವರು. ಇವರು ಒಲಂಪಿಕ್ಸ್ ನಲ್ಲಿ ಹೊಡೆದ ಗೋಲುಗಳ ಸಂಖ್ಯೆಯೇ ಅವರ ಸಾಧನೆಗಳನ್ನು ಹೇಳುತ್ತದೆ. ಸ್ವಾತಂತ್ರ್ಯಾ ನಂತರದ ಭಾರತದ ಒಲಂಪಿಕ್ ಸ್ಪರ್ಧೆಗಳಲ್ಲಿ (ಅಂದರೆ ೧೯೪೮ರ ಲಂಡನ್ ಒಲಂಪಿಕ್ಸ್ ನಿಂದ ಮೊದಲ್ಗೊಂಡು) ಭಾರತವನ್ನು ಪ್ರತಿನಿಧಿಸಿ ಬ್ರಿಟನ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಬಲ್ಬೀರ್ ಸಿಂಗ್ ಅವರ ಹಾಕಿ ದಾಂಡಿನಿಂದ ಸಿಡಿದ ಎರಡು ಅದ್ಭುತ ಗೋಲ್ ನಿಂದ ಭಾರತ ೪-೦ ಅಂತರದಲ್ಲಿ ಒಲಂಪಿಕ್ಸ್ ಚಿನ್ನ ಗೆದ್ದುಕೊಂಡಿತು.
೧೯೫೨ರ ಫಿನ್ ಲ್ಯಾಂಡ್ ನ ಹೆಲ್ಸೆಂಕಿಯಲ್ಲಿ ನಡೆದ ಒಲಂಪಿಕ್ಸ್ ಸ್ಪರ್ಧೆಯಲ್ಲಿ ಬಲ್ಬೀರ್ ಸಿಂಗ್ ಉಪನಾಯಕರಾಗಿದ್ದರು. ಅಂದಿನ ಪಥ ಸಂಚಲನದಲ್ಲಿ ಭಾರತದ ತಿರಂಗವನ್ನು ಹಿಡಿದು ಸಾಗುವ ಗೌರವ ಬಲ್ಬೀರ್ ಸಿಂಗ್ ಅವರದ್ದಾಗಿತ್ತು. ಅದನ್ನು ಅವರು ಫೈನಲ್ ಪಂದ್ಯದಲ್ಲಿ ೫ ಗೋಲುಗಳನ್ನು ನೆದರ್ಲಾಂಡ್ ವಿರುದ್ಧ ಬಾರಿಸಿ ಅವರಿಗೆ ನೀಡಿದ ಗೌರವವನ್ನು ಸಮರ್ಥಿಸಿಕೊಂಡರು. ಭಾರತ ೫-೧ ಗೋಲುಗಳ ಅಂತರದಿಂದ ಆ ವರ್ಷ ಒಲಂಪಿಕ್ ಚಿನ್ನ ಗೆದ್ದುಕೊಂಡಿತು. ಇವರು ಹೊಡೆದ ೫ ಗೋಲುಗಳಿಂದ ಈಗಲೂ ಫೈನಲ್ ಪಂದ್ಯವೊಂದರಲ್ಲಿ ಗರಿಷ್ಟ ಗೋಲು ಹೊಡೆದ ಕೀರ್ತಿ ಬಲ್ಬೀರ್ ಸಿಂಗ್ ಹೆಸರಿನಲ್ಲೇ ಉಳಿದಿದೆ. ಮುಂದಿನ ೧೯೫೬ರ ಮೆಲ್ಬೋರ್ನ್ ಒಲಂಪಿಕ್ಸ್ ನಲ್ಲಿ ಬಲ್ಬೀರ್ ಸಿಂಗ್ ಅವರು ಭಾರತ ತಂಡದ ನಾಯಕರಾಗಿದ್ದರು. ಫೈನಲ್ ಪಂದ್ಯದ ಮೊದಲೇ ಗಾಯಾಳುವಾಗಿದ್ದರೂ ಹಠ ಹಿಡಿದು ಫೈನಲ್ ಪಂದ್ಯ ಆಡಿ ಭಾರತದ ಕೊರಳಿಗೆ ಚಿನ್ನವನ್ನು ಹಾಕಿದರು.
ಇಂತಹ ಅಪರೂಪದ ಪ್ರತಿಭೆ ಸ್ವಲ್ಪ ಮಟ್ಟಿಗೆ ಅದೃಷ್ಟ ಹೀನ ಎಂದೇ ಹೇಳ ಬಹುದೇನೋ? ಏಕೆಂದರೆ ನಮ್ಮ ದೇಶದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರಂತೆ ಇವರಿಗೆ ಪ್ರಸಿದ್ಧಿ ಸಿಗಲಿಲ್ಲ. ನಾವಿಂದು ಧ್ಯಾನ್ ಚಂದ್ ಅವರನ್ನು ನೆನಪಿಸಿಕೊಳ್ಳುವಂತೆ ಬಲ್ಬೀರ್ ಸಿಂಗ್ ಅವರನ್ನು ನೆನಪಿಸಿಕೊಳ್ಳುತ್ತಿಲ್ಲ. ನೋಡಲು ಹೋದರೆ ಇಬ್ಬರೂ ಭಾರತದ ಹಾಕಿ ಕ್ಷೇತ್ರದ ಎರಡು ಕಣ್ಣುಗಳಂತೆ ಇದ್ದವರು. ಆದರೆ ಆಟವಾಡಿದ ಸಮಯ ಮಾತ್ರ ಭಿನ್ನ ಭಿನ್ನ. ಆದರೆ ಬಲ್ನೀರ್ ಸಿಂಗ್ ಉತ್ತಮ ಆಟಗಾರರಷ್ಟೇ ಅಲ್ಲ ಅದ್ಭುತ ಕೋಚ್, ವ್ಯವಸ್ಥಾಪಕರು ಸಹಾ ಆಗಿದ್ದರು. ೧೯೭೧ರ ಸ್ಪೇನ್ ನಲ್ಲಿ ನಡೆದ ಹಾಕಿ ವಿಶ್ವಕಪ್ ಸಮಯದಲ್ಲಿ ಬಲ್ಬೀರ್ ಸಿಂಗ್ ಭಾರತ ತಂಡದ ವ್ಯವಸ್ಥಾಪಕರಾಗಿದ್ದರು. ವಿಶ್ವ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಸೋಲು ಇವರನ್ನು ಅಧೀರರನ್ನಾಗಿಸಲಿಲ್ಲ. ೧೯೭೫ರಲ್ಲಿ ಮಲೇಷ್ಯಾದ ಕೌಲಾಲಂಪುರ್ ನಲ್ಲಿ ನಡೆದ ಹಾಕಿ ವಿಶ್ವಕಪ್ ಪಂದ್ಯದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ವಿಶ್ವ ಕಪ್ ವಿಜೇತರಾಗುವಂತೆ ಮಾಡಿದರು. ಇದು ಇವರ ಛಲ ಮತ್ತು ಪ್ರತಿಷ್ಟೆಯ ಸಂಕೇತವಾಗಿತ್ತು.
೧೯೪೦ರ ದಶಕದಲ್ಲಿ ಹಾಕಿ ಎಂಬುದು ನಗರಗಳ ಪ್ರತಿಷ್ಟೆಯ ಸ್ವತ್ತಾಗಿತ್ತು. ಪೂರ್ವ ಪಂಜಾಬ್ ನ ಒಂದು ಸಣ್ಣ ಪಟ್ಟಣದಿಂದ ಹೊರ ಹೊಮ್ಮಿದ ಪ್ರತಿಭೆಯೇ ಬಲ್ಬೀರ್ ಸಿಂಗ್. ಅಪ್ಪಟ ಗ್ರಾಮಾಂತರ ಪ್ರತಿಭೆಯಾದ ಇವರು ಭಾರತದ ತಿರಂಗವನ್ನು ಎತ್ತಿ ಹಿಡಿದರು. ಇವರ ಚೆಂಡಿನ ಮೇಲಿನ ಹಿಡಿತ ಹಾಗೂ ಕಾಲಿನ ಚಲನೆಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿತ್ತು. ಅಂತಹ ಅಪ್ಪಟ ಪ್ರತಿಭೆ ತಮ್ಮ ತುಂಬು ಜೀವನವನ್ನು ಮುಗಿಸಿ ಮರಳಿ ಬರಲಾರದ ಲೋಕಕ್ಕೆ ತೆರಳಿದ್ದಾರೆ. ಅವರ ಹೆಸರನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವ ಸಲುವಾಗಿ ಪಂಜಾಬ್ ಸರಕಾರ ಮೊಹಾಲಿ ಕ್ರೀಡಾಂಗಣಕ್ಕೆ ಬಲ್ಬೀರ್ ಸಿಂಗ್ ಹೆಸರು ಇಡಲು ತೀರ್ಮಾನ ತೆಗೆದುಕೊಂಡಿದೆ. ಭಾರತ ಸರಕಾರ ಇವರಿಗೆ ಪದ್ಮಶ್ರೀ ಹಾಗೂ ಜೀವಮಾನದ ಸಾಧನೆಗಾಗಿ ಮೇಜರ್ ಧ್ಯಾನಚಂದ್ ಜೀವಮಾನದ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಗೆ ಬಲ್ಬೀರ್ ಸಿಂಗ್ ಸೀನಿಯರ್ ಇವರು ನೀಡಿದ ಕೊಡುಗೆ ಸದಾಕಾಲ ಚಿರಸ್ಮರಣೀಯ.
ಚಿತ್ರ ಕೃಪೆ: ಅಂತರ್ಜಾಲ ತಾಣ