ದಾನಶೂರ ಕರ್ಣ
ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಆರನೇ ಪುಸ್ತಕ ‘ದಾನಶೂರ ಕರ್ಣ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಕರ್ಣನ ವಿವರಗಳನ್ನು ಪುಟ್ಟದ್ದಾಗಿ ಈ ಪುಸ್ತಕದಲ್ಲಿ ನೀಡಿದ್ದಾರೆ. ೨೦೦೫ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿ ಈಗ ನಾಲ್ಕನೇ ಮುದ್ರಣವಾಗಿ ಹೊರಬಂದಿದೆ.
ಈ ಮಾಲಿಕೆಯ ಬಗ್ಗೆ ಪ್ರಕಾಶಕರು ಬೆನ್ನುಡಿಯಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ “ಜಗತ್ತಿನ ಮಹಾಕಾವ್ಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ‘ಮಹಾಭಾರತದ ಕಥೆ' ಪ್ರಾಚೀನ ಭಾರತದ ಕಥೆಯೂ ಆಗಿದೆ. ಈ ಕಥೆಯನ್ನು ಯಾರು, ಯಾವ ಕಾಲದಲ್ಲಿ ಓದಿದರೂ ಅದು ತಮ್ಮದೇ ಕಥೆ ಎಂಬ ಭಾವ ಗಾಢವಾಗಿ ಕಾಡುತ್ತದೆ. ಏಕೆಂದರೆ ಈ ಮಹಾಕಾವ್ಯದಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ಮಾನವ ಸಹಜ ಗುಣಗಳಿಂದ, ಭಾವಗಳಿಂದ ತೊಳಲಾಡುತ್ತ ನಮ್ಮ ಮಧ್ಯೆ ಈಗ ಕೂಡಾ ನಲಿದಾಡುತ್ತಿರುವಂತೆ ಭಾಸವಾಗುತ್ತದೆ. ಅವರ ಸಂಗದಲ್ಲಿ ನಮ್ಮ ವ್ಯಕ್ತಿತ್ವ ಇನ್ನಷ್ಟು ಹಸನಾಗುತ್ತದೆ, ಹಾಗೆಯೇ ದುಷ್ಟತನ, ಮಾತ್ಸರ್ಯದಂತಹ ದುರ್ಗುಣಗಳನ್ನು ತೊರೆಯಬೇಕೆಂಬ ಪ್ರಜ್ಞೆ ಜಾಗೃತವಾಗುತ್ತದೆ. ಮಹಾಭಾರತವನ್ನು ಕೇವಲ ದಾಯಾದಿ ಕಥೆಯೆಂದು ಭಾವಿಸದೇ ಮಾನವ ಜನಾಂಗಕ್ಕೆ ಸದಾ ಬೆಳಕು ತೋರುವ ಮಹಾಕೃತಿಯೆಂದು ವಿದ್ವಾಂಸರು ಪರಿಗಣಿಸಿದ್ದಾರೆ. ಈ ಮಾಲಿಕೆಯಲ್ಲಿ ಮಹಾಭಾರತದಲ್ಲಿ ಬರುವ ಹತ್ತು ಪ್ರಮುಖ ಪಾತ್ರಗಳ ಪರಿಚಯವನ್ನು ಕೊಡಲಾಗಿದೆ. ಕೃತಿಯ ಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಹೇಳಲು ಪ್ರಯತ್ನಿಸಲಾಗಿದೆ. ಪ್ರತಿ ಪಾತ್ರದ ಕಥೆಯನ್ನು ಮೊದಲಿನಿಂದ ಕಡೆಯವರೆಗೆ ಸಮಗ್ರವಾಗಿ ಆದರೆ ಸಂಕ್ಷಿಪ್ತವಾಗಿ ನಿರೂಪಿಸಲು ಪ್ರಯತ್ನಿಸಲಾಗಿದೆ. ಓದುಗರು ಈ ಕೃತಿಯನ್ನು ಆದರದಿಂದ ಸ್ವೀಕರಿಸುವರೆಂಬ ನಂಬಿಕೆ ನಮ್ಮದು" ಎಂದಿದ್ದಾರೆ.
'ದಾನಶೂರ ಕರ್ಣ' ಕೃತಿಯು ಆತನ ವಿಲಕ್ಷಣ ಜನನದ ಮೂಲಕ ಪ್ರಾರಂಭವಾಗುತ್ತದೆ. ದುರ್ವಾಸ ಮುನಿಯಿಂದ ತನಗೆ ಸಿಕ್ಕ ವರವನ್ನು ಪರೀಕ್ಷಿಸಲು ಹೋದ ರಾಜಕುಮಾರಿ ಕುಂತಿ ಸೂರ್ಯದೇವರನ್ನು ಪ್ರಾರ್ಥಿಸಿದಾಗ ಆತ ವರದ ಪ್ರಭಾವದಿಂದ ಪ್ರತ್ಯಕ್ಷನಾಗಿ ಆಕೆ ಕನ್ಯೆಯಾಗಿದ್ದರೂ ಕವಚ-ಕುಂಡಲ ಸಹಿತವಾದ ಮಗುವನ್ನು ದಯಪಾಲಿಸಿದ. ಲೋಕ ನಿಂದೆಗೆ ಹೆದರಿದ ಕುಂತಿ ಮಗುವನ್ನು ಬುಟ್ಟಿಯಲ್ಲಿಟ್ಟು ನದಿಯಲ್ಲಿ ತೇಲಿ ಬಿಡುತ್ತಾಳೆ. ಈ ಮಗು ಸಿಕ್ಕಿದ್ದು ಸೂತನಾದ ಕೌರವರ ಸಾರಥಿ ಅಧಿರಥ ಎಂಬ ವ್ಯಕ್ತಿಗೆ. ಈತನಿಗೆ ಮಕ್ಕಳಿರಲಿಲ್ಲ. ಆತನ ಹೆಂಡತಿ ರಾಧೆ. ಈ ಕಾರಣದಿಂದ ಕರ್ಣನನ್ನು ರಾಧೇಯ ಎಂದೂ ಕರೆಯುತ್ತಾರೆ. ಇಡೀ ಮಹಾಭಾರತದ ಕಥೆಗಳಲ್ಲಿ ಅತ್ಯಂತ ದುರದೃಷ್ಟವಂತ ವ್ಯಕ್ತಿ ಕರ್ಣ. ನಿಜಕ್ಕೂ ನೋಡಲು ಹೋದರೆ ಕರ್ಣ ಪಾಂಡವರಿಗೆ ಮತ್ತು ಕೌರವರಿಗೆ ಅಣ್ಣನಾಗಬೇಕು. ಅತ್ಯಂತ ಶಕ್ತಿಶಾಲಿ ಬಿಲ್ವಿದ್ಯಾ ಪ್ರವೀಣನಾಗಿದ್ದೂ ತಾನು ಹೇಳಿದ ಸುಳ್ಳು ಮಾತಿಗೆ ಬಲಿಯಾಗಿ ಆತನ ಗುರುವಾದ ಪರಶುರಾಮರ ಶಾಪಕ್ಕೆ ಗುರಿಯಾಗುತ್ತಾನೆ. ಮತ್ಸ್ಯ ಯಂತ್ರವನ್ನು ತುಂಡರಿಸಿ ದ್ರೌಪದಿಯನ್ನು ಮದುವೆಯಾಗುವ ಶಕ್ತಿ ಇದ್ದರೂ ಸೂತ ಪುತ್ರ ಎಂಬ ನಿಂದನೆಗೆ ಗುರಿಯಾಗಿ ಆ ಅವಕಾಶವನ್ನು ಕಳೆದುಕೊಳ್ಳುತ್ತಾನೆ. ದುರ್ಯೋಧನನ ಸ್ನೇಹಿತನಾಗಿ ಅನಿವಾರ್ಯವಾಗಿ ಅಧರ್ಮದ ಕಡೆ ನಿಲ್ಲುವ ಅವಮಾನಕ್ಕೆ ಗುರಿಯಾಗುತ್ತಾನೆ. ತನ್ನ ಜನ್ಮದ ರಹಸ್ಯ ತಿಳಿದ ಬಳಿಕವೂ ದುರ್ಯೋಧನನ ಸಂಗ ಬಿಡಲಾರದೇ ಇರುವುದು ಕರ್ಣನ ದೊಡ್ದ ಗುಣ.
ಮೋಸದಿಂದ ಕರ್ಣನ ಕವಚ ಕುಂಡಲಗಳನ್ನು ದಾನವಾಗಿ ಪಡೆದುಕೊಳ್ಳುವುದು ಅರ್ಜುನನ ತಂದೆ ಇಂದ್ರ. ಒಮ್ಮೆ ತೊಟ್ಟ ಬಾಣವನ್ನು ಮತ್ತೆ ತೊಡುವುದಿಲ್ಲ ಎಂಬ ಮಾತನ್ನು ತನ್ನ ತಾಯಿ ಕುಂತಿ ನೀಡುವ ಈತ ನಿಜಕ್ಕೂ ದಾನಶೂರನೇ.
ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ ಮತ್ತು ಅರ್ಜುನನ ಮುಖಾಮುಖಿಯಾಗಿ, ಕರ್ಣನ ರಥದ ಚಕ್ರ ಕೆಸರಿನಲ್ಲಿ ಸಿಲುಕಿದ್ದಾಗ ಅದನ್ನು ಹೊರತೆಗೆಯಲು ಹೋದ ಆತನನ್ನು ಅರ್ಜುನ ಹತ್ಯೆ ಮಾಡಿಬಿಡುತ್ತಾನೆ. ನಂತರದ ದಿನಗಳಲ್ಲಿ ಕರ್ಣನು ತಮ್ಮ ಹಿರಿಯಣ್ಣನಾಗಬೇಕಿತ್ತು ಎಂಬ ಸತ್ಯವನ್ನು ತಿಳಿದುಕೊಂಡಾಗ ಪಾಂಡವರು ಬಹಳ ದುಃಖಕ್ಕೆ ಈಡಾಗುತ್ತಾರೆ.
ಕೃತಿಗೆ ಪುಟಗಳ ಮಿತಿ ಇರುವುದರಿಂದ ಸಂಕ್ಷಿಪ್ತವಾಗಿ ಕರ್ಣನ ಮಾಹಿತಿಯನ್ನು ನೀಡಲಾಗಿದೆ. ಇದು ಮಕ್ಕಳಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಪೌರಾಣಿಕ ಪ್ರಬಂಧ, ಭಾಷಣ, ನಾಟಕ ರಚನೆಗೆ ಸಹಕಾರಿಯಾಗಬಲ್ಲದು. ಪುಸ್ತಕದ ಒಳಪುಟಗಳಲ್ಲಿ ಅಲ್ಲಲ್ಲಿ ಸೊಗಸಾದ ರೇಖಾಚಿತ್ರಗಳನ್ನು ನೀಡಲಾಗಿದೆ. ೫೦ ಪುಟಗಳ ಈ ಪುಟ್ಟ ಕೃತಿಯು ‘ದಾನಶೂರ ಕರ್ಣ'ನ ಬಗ್ಗೆ ಬಹಳಷ್ಟು ವಿಷಯಗಳನ್ನು ಚುಟುಕಾಗಿ ತಿಳಿಸುವಲ್ಲಿ ಸಹಕಾರಿಯಾಗಿದೆ.