ದಾರಿ ತಪ್ಪಿದ ಮಗ?

ದಾರಿ ತಪ್ಪಿದ ಮಗ?

  ಆವತ್ತು ಸಿಟ್ಟು , ಒಂದೇ "ಸಮನೇ "ನೆತ್ತಿಗೆ ಏರಿತ್ತು .

ನನ್ನ ಮಗ "ರವಿಯ "ಬಾಯಲ್ಲಿ ಇದ್ದ , ಚೀವಿಂಗ್ ಗಮ್ ನೋಡಿ .

          ಕೈಯಲ್ಲಿ ಕೋಲು ಬಂದಿತ್ತು , ಮನೆಯ ಅಂಗಳಕ್ಕೆ ದರ ದರ ಎಳೆದುಕೊಂಡು ಹೋಗಿದ್ದೆ .

       ಆಳುತ್ತಿದ್ದ ಆತ , "ಅಪ್ಪ ಪಕ್ಕದ ಮನೆ ತ್ರಯಾಂಭಕ ಚೀವಿಂಗ್ ಗಮ್ ಕೊಟ್ಟನೆಂದು".

         "ಜೀವಮಾನದಲ್ಲಿ ಇನ್ನು ತಿನ್ನುವುದಿಲ್ಲ "ಎಂದು .

ಕೋಲು ಪುಡಿ ಆಗುವ ತನಕ ಹೊಡೆದಿದ್ದೆ .

ಆತ ಕೈ ಮುಗಿಯುತಿದ್ದ ..."ಇದೊಂದು ಸಾರಿ ಬಿಟ್ಟು ಬಿಡು ಅಪ್ಪ " ಎಂದು .

         ಮಗನ ಹದ್ದು ಬಸ್ತಿನಲ್ಲಿ ಇಟ್ಟಿದ್ದೆ .

ಆದರೆ ನಾನು ಸಣ್ಣವನಿದ್ದಾಗ , ಅಪ್ಪನ "ಜೇಬಿನಿಂದ " ದುಡ್ಡು ಹಾರಿಸಿಕೊಂಡು ಹೋಗಿ ...ಶುಂಠಿ ಪೇಪರ್ ಮೆಂಟ್ , 

   ಸೋಡಾ "ಕುಡಿದಿದ್ದು "ಮರೆತು ಹೋಗಿತ್ತು 

ನಾಲ್ಕನೇ ವರ್ಷಕ್ಕೆ ಆತನ ಶಾಲೆಗೆ ಹಾಕುವಾಗ , ಪ್ರತಿ ಬಾರಿ ಆತನ "ಕಲಿಕೆಯ "ಮೇಲೆ ನನ್ನ ಗಮನ .

     "ನನ್ನ ಮಗ ನೂರರಲ್ಲಿ ಒಬ್ಬನಾಗಬೇಕು" ಎಂಬ ಹಂಬಲ ನನ್ನದು .

ನನ್ನಾಕೆ ಯಾವತ್ತೂ , ನನ್ನ "ಆಸೆಗೆ "ಒತ್ತೆಯಾಗಿ ನಿಂತವಳು .

           ಮದುವೆ ಆಗಿ ಹೊಸದರಲ್ಲಿ , ನಾಲ್ಕು ವರ್ಷ ಮಕ್ಕಳು ಬೇಡ ಎಂದುಕೊಂಡಿದ್ದೆ .

ಆದರೆ "ಅಚಾನಕ್ಕಾಗಿ "ಒಂದೇ ವರ್ಷದಲ್ಲಿ , ನನ್ನವಳು ಗರ್ಭಿಣಿ ಆಗಿದ್ದು ಕೂಡ ...."ಅವ ಬೇಡದ ಮಗನಾಗಿದ್ದ ಇರಬೇಕು ನನಗೆ ".

       ಪ್ರತಿ ಶಬ್ದ ಕೂಡ "ನನ್ನೆದುರಿಗೆ "ತಿದ್ದ ಬೇಕಿತ್ತು ಅವ .

ತಪ್ಪು ಆದರೆ , ಆ ಪುಟ್ಟ ಕೈಗಳು ಹೊಡೆತ ತಿನ್ನುತ್ತಿದ್ದವು .

         ಗಡ ಗಡ  ನಡುಗುತ್ತಿದ್ದ ಅವನ ಕೈ ಗಳು , ಮತ್ತಷ್ಟು ತಪ್ಪು ಮಾಡುತಿತ್ತು .

          ಆಗ ಬೀಳುತಿತ್ತು "ಬೆನ್ನ "ಮೇಲೆ ಹೊಡೆತ .

ನನ್ನ ಅಕ್ಷರಗಳು , ಇವತ್ತಿಗೂ ಓರೆ ಕೋರೆ ಎಂಬುದು ಮರೆತು ಹೋಗಿತ್ತು .

      ಊಟಕ್ಕೆ ಕುಳಿತಾಗ , ಸುಮ್ಮನೆ "ಊಟ " ಮಾಡಬೇಕಿತ್ತು ಅವ . 

ಆರು ವರ್ಷ ಆಗ ಅವನಿಗೆ .

     ಆದರೆ ಕೆಲ ದಿನ ಗಮನಿಸಿದ ಹಾಗೆ , ಅವನ ಊಟ ನಿಧಾನವಾಗಿ ಹೋಗುತ್ತಿತ್ತು .

   ನನ್ನಾಕೆ , "ನೋಡಿ ಈಗಲೇ ಶುರು ಮಾಡಿ ಕೊಂಡಿದ್ದಾನೆ ...ಊಟದ ಸಮಯದಲ್ಲಿ ಆಟ " ಎಂದಿದ್ದಳು .

          ಎಂಜಲ ಕೈಯಲ್ಲಿ , ಕಪಾಳಕ್ಕೆ ನಾಲ್ಕು ಹಾಕಿದ್ದೆ .

ಆ ಮುದ್ದು ಮುಖದಲ್ಲಿ , ನನ್ನ ಬೆರಳು ಮೂಡುವ ತನಕ .

       ಆದರೆ "ಮುಂದಿನ "ಮೂರು ಹಲ್ಲು ಬಿದ್ದು , ಆತನ ಊಟ ನಿಧಾನ ಆಗುತ್ತಿದೆ ಎಂಬುದು ಗೊತ್ತಾಗಿ ಇರಲಿಲ್ಲ .

         "ಬಿಡು ಅಪ್ಪ , ಬೇಗ ಮಾಡುತ್ತೇನೆ "ಎಂದು ...

ಗಭ ಗಭ ಬಾಯಿಗೆ "ತುರುಕಿ "ನುಂಗಿದಾಗ ಸಮಾಧಾನ ನನಗೆ .

      ಆತನ "ಕಣ್ಣೀರು "ಆತನ ತಟ್ಟೆಗೆ ಬೀಳುತಿತ್ತು .

ಆದರೆ ನಾನು ಗಂಟೆ ಗಟ್ಟಲೇ ಅಮ್ಮನ ಗೊಳಾಡಿಸಿ , ಆಕೆ ತುತ್ತು ಹಾಕಿದ್ದು ಕೂಡ ನೆನಪಿಗೆ ಬಂದಿರಲಿಲ್ಲ .

         ಒಂದು ವೇಳೆ ಬಂದಿದ್ದರು ಕೂಡ , ನನ್ನ ಮಗ "ನೂರರಲ್ಲಿ ಒಬ್ಬನಾಗಬೇಕು ".

       ಜಾತ್ರೆಯಲ್ಲಿ ಹಠ ಮಾಡಿ ," ರಿಮೋಟ್ ಕಾರ್ "ಬೇಕು ಎಂದಿದ್ದ . ಕೊಡಿಸಿದೆ ಅದನ್ನು ಕೂಡ .

   ಆರು ನೂರು ರೂಪಾಯಿಗಳ ಕಾರ್ ಅದು .

     ಒಂದೇ ದಿನದಲ್ಲಿ ಅದು, " ಕೆಟ್ಟು "ನಿಂತಿತ್ತು .

ಅದರ "ಚಕ್ರಗಳು" ಬೇರೆ ಬೇರೆ ಆಗಿದ್ದವು .

ಕೊಟ್ಟ "ಆರು ನೂರು ರೂಪಾಯಿ "ಮಾತ್ರ , ನನ್ನ ಕಣ್ಣೆದುರಿಗೆ ನಿಂತಿದ್ದು ಆಗ . 

                ಅಳುತ್ತಾ ಇದ್ದ ಅವ , "ಕಾರ್ ಗೋಡೆಗೆ ಹೊಡೆದು ...ಚಕ್ರಗಳು ಕಳಚಿ ಹೋಯಿತು "ಎಂದು .

      ಆದರೆ , ಆವತ್ತು ಇಡೀ "ಕಾಲಿನ "ಮೇಲೆ ಬರೆ ಹಾಕಿದ್ದೆ .

ಆದರೆ , ಅಪ್ಪ ನನಗೆ  ....ನಾನು ಸಣ್ಣವನಿದ್ದಾಗ ಕೊಡಿಸಿದ ಸೈಕಲ್ .....ಒಂದೇ ದಿನದಲ್ಲಿ ಹಾಳು ಮಾಡಿದ್ದೆ .

ಅದರ ಕಡ್ಡಿಗಳನ್ನು ಮುರಿದು .....

         ಆದರೆ ಅಪ್ಪನ ಮುಖದಲ್ಲಿ ಆವತ್ತು ಇದ್ದಿದ್ದು , ನನ್ನದು "ಕಪಿ ಚೇಷ್ಟೆ "ಎಂದು ಮಾತ್ರ 

     ಮೂರನೇ "ಕ್ಲಾಸ್ "ಇರಬೇಕು ಆಗ ರವಿ .

ಪಕ್ಕದ ಮನೆ ಹುಡುಗನಿಗೆ , ಎಲ್ಲವೂ ನೂರರ ಬಳಿ .

ಆದರೆ 

.....ನನ್ನ ಮಗನಿಗೆ ಎಲ್ಲವೂ ತೊಂಬತ್ತು .

ಆವತ್ತು ಮಾತ್ರ , ನನ್ನ ಮೈಯಲ್ಲಿ "ರಾಕ್ಷಸನ "ಆವಾಹನೆ ಆಗಿತ್ತು .

ನನ್ನವಳು , "ಮುಂದೆ ದನ ಕಾಯಲಿ ಇವ "ಎಂದು ಬೇರೆ ಹೇಳಿದ್ದಳು .

            ಕಾಲು ಹಿಡಿದಿದ್ದ ನನ್ನ ಮಗ , "ಹೊಡೆಯ ಬೇಡ " ಎಂದು .

          ಅದರ ಆವತ್ತು ನಾನು ಉಪಯೋಗಿಸಿದ್ದು , ನನ್ನ ಸೊಂಟದ ಬೆಲ್ಟ್ .

ಅದು ಪುಡಿಯಾಗಿ , ತುಂಡಾಗಿ ಹೋಗುವ ತನಕ ಸಮಾಧಾನ ಇರಲಿಲ್ಲ .

                  ಅಳು ನಿಂತು , ಉಸಿರು ಕಟ್ಟಿ ಕಟ್ಟಿ ಬಿಡುತ್ತಿದ್ದ ಭಯದಿಂದ .

ಆದರೂ ಹೊಡೆದಿದ್ದೆ , ನನ್ನ ಕೈ ನೋವು ಬರುವ ತನಕ .

    ಆದರೆ ನನ್ನ ಜೊತೆ , ಓದಿದವರು ಎಂಜಿನಿಯರ್ ಆಗಿದ್ದರು .

ಕೆಲವರು ಡಾಕ್ಟರ್ ಕೂಡ .

ಇನ್ನು ಕೆಲವರು "ವಿದೇಶದಲ್ಲಿ "ಒಳ್ಳೆಯ ನೌಕರಿ .

ಆದರೂ "ಐವತ್ತು "ಅಂಕ ತೆಗೆಯುತ್ತಿದ್ದ ನನಗೆ , ಅಪ್ಪ ಯಾವತ್ತೂ ಹೊಡೆದಿರಲಿಲ್ಲ .

ಅಮ್ಮ ಯಾವತ್ತೂ ಗದರಿಸಿ ಇರಲಿಲ್ಲ .

        ಆದರೆ ನಾನು .....ನೂರರಲ್ಲಿ ಒಬ್ಬನ ಮಾಡಲು ಹೊರಟಿದ್ದೆ ನನ್ನ ಮಗನ .

  ಆತನ ಬಾಲ್ಯ , ಆತನ ಆಟ ಎಲ್ಲವೂ ಕೇವಲ ನನ್ನ ಕಣ್ಣಂಚಿನ ತುದಿಯಲ್ಲಿ ಇರಬೇಕಿತ್ತು .

            ಪ್ರತಿನಿತ್ಯ ಆತನ ಪಾಠ , ಆತನ ನೋಟ್ಸ್ ಚೆಕ್ ಮಾಡುವುದು .

ತಕ್ಷಣವೇ ಅದರಲ್ಲಿ ಇದ್ದ , ಯಾವುದಾದರೂ ಪ್ರಶ್ನೆ ಕೇಳುವುದು "ಅಭ್ಯಾಸ" ಆಗಿ ಹೋಗಿತ್ತು .

          ಆಗ ತಡವರಿಸಿ ಹೋಗುತಿದ್ದ ರವಿ .

ಕೋಪ ಮತ್ತೊಮ್ಮೆ "ನೆತ್ತಿಗೆ "ಏರುತಿತ್ತು .

ಮೈ ತುಂಬಾ ಬಾಸುಂಡೆ ಬೀಳುತಿತ್ತು ರವಿಗೆ . 

          ಕೇವಲ ಆರನೇ ತರಗತಿಯಲ್ಲಿ , ಬೆಳಗ್ಗಿನ ಜಾವ ಐದು ಗಂಟೆಗೆ ಎದ್ದು ಓದುತ್ತಿದ್ದ .

          ಆದರೆ ನಾ ಯಾವತ್ತಿಗೂ , ಏಳು ಗಂಟೆಯ ಮುನ್ನ ಎದ್ದಿದ್ದು ನೆನಪಿರಲಿಲ್ಲ.

          ಹತ್ತನೇ ತರಗತಿಗೆ ಬಂದಿದ್ದ ರವಿ , ಎಲ್ಲಿಗೆ ಹೋಗಬೇಕಾದರೂ ನನ್ನ ಕೇಳಿ ಹೋಗಬೇಕಿತ್ತು ಅವ .

     "ಅಪ್ಪ ಅಕ್ಷಯನ ಹುಟ್ಟಿದ ಹಬ್ಬವಂತೆ , ಕರೆದಿದ್ದಾನೆ " ಎಂದಿದ್ದ ಮೆಲ್ಲಗೆ .

    "ತಿರುಬೋಕಿ , ಈ ಸಲ ಮಾರ್ಕ್ಸ್ ಒಂದು ಕಡಿಮೆ ಬರಲಿ ನೋಡು ... ಹುಟ್ಟಲಿಲ್ಲ ಎಂದೆನಿಸಿ ಬಿಡುತ್ತೇನೆ "ಎಂದಿದ್ದು ಕೇಳಿ ...ಮತ್ತೆ "ಪುಸ್ತಕ "ಹಿಡಿದು ಕುಳಿತಿದ್ದ .

      ಆದರೆ ನಾನು ಕೊನೆಯವರೆಗೆ , ತಿರುಬೋಕಿ ಆಗಿದ್ದು ಮಾತ್ರ ಮರೆತು ಹೋಗಿತ್ತು .

       ಅದೃಷ್ಟದಲ್ಲೋ , ನನ್ನ ತಂದೆ ಕೊಟ್ಟ ಲಂಚದಲ್ಲೋ , ಸಿಕ್ಕ "ಸರಕಾರಿ ನೌಕರಿ "ನನ್ನ ಅಂತಸ್ತನ್ನು ಜಾಸ್ತಿ ಮಾಡಿತ್ತು .

         ಹತ್ತನೇ ತರಗತಿಯ "ಗಣಿತದ "ಕೊನೆ ಪರೀಕ್ಷೆ ಬಂದಾಗ ಕೇಳಿದ್ದೆ .

"ಹೇಗೆ ಮಾಡಿದೆ ಪರೀಕ್ಷೆ " ಎಂದು .

ತಲೆ ತಗ್ಗಿಸಿ ಬಿಟ್ಟಿದ್ದ ರವಿ .

"ಅಪ್ಪ ಸಮಯ ಸಾಕಾಗಲಿಲ್ಲ , ಅದರಲ್ಲಿಯೂ ಪಠ್ಯದಲ್ಲಿ ಇರದ ಪ್ರಶ್ನೆ ಇತ್ತು "ಎಂದು ಅವ ನುಡಿದಿದ್ದ ನೋಡಿ , ನನ್ನ ಮೈ ಕಂಪಿಸಿ ಹೋಗಿತ್ತು .

          "ರಿಸಲ್ಟ್ ಬರಲಿ , ಅವತ್ತು ಇದೆ ನಿನಗೆ "ಎಂದಿದ್ದೆ ಕಷ್ಟ ಪಟ್ಟು‌ , ಆಕ್ರೋಶ ತಡೆ ಹಿಡಿದು .

             ಆದರೆ "ರಿಸಲ್ಟ್ "ತನಕ ಕಾಯಲೇ ಇಲ್ಲ ರವಿ .

    ತಿಂಡಿಯ ವೇಳೆಗೆ ಕೂಡ ಅವ ಬಾರದೆ ಇದ್ದಾಗ , ಅವನ ಮೇಲೆ ಸಿಟ್ಟು ಬಂದಿತ್ತು .

ಸೋಮಾರಿ ಎನ್ನುತ್ತಲೇ , ಅವನ ರೂಮಿಗೆ ಹೋಗಿದ್ದೆ .

         ಮೊದಲು ಕಂಡಿದ್ದು , 

         "ನೇತಾಡುತ್ತ ಇದ್ದ ರವಿಯ ಕಾಲು" .

 

       ನೇಣು ಹಾಕಿ ಕೊಂಡು ಬಿಟ್ಟಿದ್ದ ರವಿ .

ನನ್ನ ಏಟಿಗೆ ಹೆದರಿ ಅಲ್ಲ .

       "ಎಲ್ಲಿ ನನ್ನ ಮರ್ಯಾದಿ ಹೋಗುತ್ತೋ ತನ್ನಿಂದ " ಎಂದು .

         ಕುಸಿದು ಕುಳಿತಿದ್ದೆ .

ಅದೇ "ನೇತಾಡುತ್ತ "ಇದ್ದ ಕಾಲಿಗೆ , ಅದೆಷ್ಟು ಹೊಡೆದಿದ್ದೆ ಹಿಂದೆ .

        ಜೋತು ಬಿದ್ದ "ಕೈ "ಬೆರಳುಗಳು ಮುರಿದು ಹೋಗುವಂತೆ , ಜಜ್ಜಿ ಹಾಕಿದ್ದೆ ...ಸಣ್ಣ ಅಕ್ಷರದ ತಪ್ಪಿಗೆ ಕೂಡ .

        ಹಗ್ಗ ಹಾಕಿಕೊಂಡ ಕುತ್ತಿಗೆಯನ್ನು , ಅದೆಷ್ಟು ಬಾರಿ ಹಿಡಿದು ...ದರ ದರ ಎಳೆದುಕೊಂಡು ಬಂದಿದ್ದೆ .

             ಹೊರಬಂದ ನಾಲಿಗೆಗೆ ಕೂಡ , ಮೆಣಸು ಹಾಕಿ ತಿಕ್ಕಿದ್ದೆ ...ಮಗ್ಗಿ ತಪ್ಪು ಹೇಳಿದಾಗ .

              ಬಾಗಿ ಹೋಗಿದ್ದ "ತಲೆಗೆ "ಅದೆಷ್ಟು ಏಟು ಕೊಟ್ಟಿದ್ದೆ , ಎಂಬುದು ಕೂಡ ನೆನಪಿರಲಿಲ್ಲ .

           ಆದರೆ ಕೇವಲ ನನ್ನ ಮರ್ಯಾದಿ ಉಳಿಸಲು , ತಾನು "ನೇಣು "ಬಿಗಿದು ಕೊಂಡು ಬಿಟ್ಟಿದ್ದ ರವಿ .

           ಅವನಿಗೆ ಸಣ್ಣ ಇರುವಾಗ ಕೊಡಿಸಿದ ಆಟದ ಸಮಾನಿನಲ್ಲಿ , ಆಟ ಆಡಿಯೇ ಇರಲಿಲ್ಲ ಅವ .

ಎಲ್ಲಿ ಹಾಳು ಆಗುತ್ತದೋ ಎಂದು .

            ಎಲ್ಲವನ್ನೂ "ಜೋಡಿಸಿ "ಇಟ್ಟು ಖುಷಿ ಪಟ್ಟಿದ್ದ .

                    ಅದೆಷ್ಟು ಚಿತ್ರ ಬರೆದಿದ್ದ , ಪುಟ್ಟ ಮನೆ .

ಅದರಲ್ಲಿ ಅವ , ನಾನು ಮತ್ತು ನನ್ನವಳು .

                I love my home ಎಂದು ಬೇರೆ .

       ಬಲಿ ಕೊಟ್ಟು ಬಿಟ್ಟಿದ್ದೆ ನಾನೇ , ಸ್ವತಃ ನನ್ನ ಮಗನ .

ನನ್ನವಳ ಆಕ್ರಂದನ ಕೇಳುತ್ತಾ ಇತ್ತು .

         ಅವಳಾದರು ಹೇಳಬಹುದಿತ್ತು ನನಗೆ ...

ಆದರೆ ಪ್ರತಿ ದಿನ ಸಂಜೆ ...ಆಫಿಸ್ ಮುಗಿಸಿ ಬಂದ ಮೇಲೆ , ಅವನ ಕೈ ಹಿಡಿದು ತಂದು ನಿಲ್ಲಿಸುತ್ತಿದ್ದಳು .

       ಅವನ ಬಗ್ಗೆ ಆವತ್ತಿನ ವಿಚಾರಣೆಗೆ .

ಜಡ್ಜ್ ನಂತೆ , ನಾನು ಅವನ ವಿಚಾರಣೆ ಮಾಡುತ್ತಿದ್ದೆ .

            ಮರಣದಂಡನೆ ಒಂದು ಕೊಟ್ಟಿರಲಿಲ್ಲ .

ಆದರೆ ಅದನ್ನು , ಅವನೇ ವಿಧಿಸಿಕೊಂಡು ಬಿಟ್ಟಿದ್ದ .

              ಜಗತ್ತಿನ ಯಾವ "ಕೋರ್ಟ್ "ಕೂಡ ನನ್ನನ್ನು ತಪಿತಸ್ಥ ಎಂದು ಹೇಳುವುದಿಲ್ಲ .

     ಜನ ಕೂಡ .

ಪರೀಕ್ಷೆಯ "ಪಲಿತಾಂಶಕ್ಕೆ "ಹೆದರಿ ಆತ್ಮಹತ್ಯೆ , ಎಂದು ನಮೂದು ಆಗಿ ಹೋಗುತ್ತದೆ ಅದು .

              ರಾಕ್ಷಸನಂತೆ ಕುಳಿತೇ ಇದ್ದೆ .

ಒಂದೊಂದಾಗಿ ತೇಲಿ ಬರುತಿತ್ತು , ನಾ ಕೊಟ್ಟ ಶಿಕ್ಷೆ ....

      ಅವ ಕೈ ಮುಗಿಯುವ ದೃಶ್ಯ ಎಲ್ಲವೂ .

ಕಾಲು ಹಿಡಿದಾಗ , ಬೆನ್ನಿನ ಮೇಲೆ ಅದೆಷ್ಟು ಹೊಡೆದಿದ್ದೆ .

               ಬೇಡದ ಸಮಯಕ್ಕೆ ಹುಟ್ಟಿದ ಮಗು ಎಂದೇ ?.

ಅಥವಾ ನನ್ನ ಘನತೆ ಇನ್ನಷ್ಟು ಹೆಚ್ಚುತ್ತದೆ ಎಂದೇ ?.

   ಮಗನ ಒಂದೇ ಒಂದು ಹುಟ್ಟಿದ ಹಬ್ಬವನ್ನು ಮಾಡದ ನಾನು , ಸಮಾಜಕ್ಕೆ ಹೆದರಿ ಅವನ "ತಿಥಿ "ಶಾಸ್ತ್ರೋಕ್ತವಾಗಿ ಮಾಡಲು ಹೊರಟಿದ್ದೆ .

           ನಮಗೆ ಯಾಕೆ ಮಕ್ಕಳು.

ಒಮ್ಮೆಯೂ ಎದುರು ನುಡಿಯದ , ಹದಿ ಹರೆಯಕ್ಕೆ ಕಾಲು ಇಡುತ್ತಿದ್ದ ಮಗ ..... ಒಂದೂ ಮಾತನಾಡದೆ ಹೋಗಿ ಬಿಟ್ಟಿದ್ದ . 

                 ನ್ಯಾಯ , ನೀತಿ ಅಪರಾಧ ಯಾವುದು ಕೂಡ ನನಗೆ ಅಂಟದಂತೆ .

-ನಟೇಶ್ ಎಂ. ಜಿ

( ಈ ಕಥೆ ಸಾಮಾಜಿಕ ಜಾಲತಾಣದಲ್ಲಿ ಓದಿದೆ. ಮನಸು ದ್ರವಿಸಿಹೋಯಿತು. ಇದು ಕಥೆಯಾಗಿಯೇ ಇರಲಿ. ಯಾರದೂ ಬಾಳ ಕಥೆಯಾಗದಿರಲಿ ಎಂಬ ಆಶಯದೊಂದಿಗೆ ನಮ್ಮ ಸಂಪದದಲ್ಲಿ ಹಂಚಿಕೊಳ್ಳುತ್ತಿದ್ದೇನೆ)

(ಸಂಗ್ರಹ) ಹಾ ಮ ಸತೀಶ್