ದಾರಿ ದೀಪಗಳು
ಬರಹ
ದಾರಿ ದೀಪಗಳು
ಬದುಕಿನ ದಾರಿಯಲಿ ಬಂದು ಹೋಗುವ ದಾರಿ ದೀಪಗಳೆಷ್ಟೋ
ಅರಿವಿಗೆ ಬಂದು ಲೆಕ್ಕ ಹಾಕಿರುವುದು ಅಷ್ಟೋ ಇಷ್ಟೋ
ಸ್ವಲ್ಪ ಕಾಲ ಉರಿವ ಹೆಚ್ಚು ಪ್ರಕಾಶಮಾನವಾದ ದೀಪ ಕೆಲವು
ದೀರ್ಘ ಕಾಲ ಬೆಳಗುವ ಕಡಿಮೆ ಬೆಳಕಿನವು ಹಲವಾರು
ಪುಟ್ಟ ದೀಪಕೆ ಬತ್ತಿ ಹೊಸೆದು ತುಪ್ಪ ಹಾಕಿ
ಜಗಕೆ ಬೆಳಕ ಚೆಲ್ಲಲು ಕಡ್ಡಿಗೀರಿದವಳು ಅಮ್ಮ
ನಡೆದಾಡುವ ದಾರಿಯಲಿ ಮಳೆ ಗಾಳಿಗೆ ನಂದದಿರಲೆಂದು
ಹಗಲೂ ರಾತ್ರಿ ಕಾಯ್ದಿಹರು ಸಹವರ್ತಿಗಳು ಹಲವಾರು
ತನ್ನ ಮನೆಯನು ಕತ್ತಲಿನಲ್ಲಿಟ್ಟು
ಊರ ಉದ್ಧರಿಸಲು ಬೆಳಗುತಿಹುದೀ ದೀಪ
ಈ ದೀಪವ ಹಗಲಿರುಳು ಕಾಯುತಿಹ
ಅದನೇ ನಂಬಿದ ನಂದಾದೀಪ ಮಾಡಿತ್ತೇನು ಪಾಪ
ಈ ಎಲ್ಲ ಒಳ್ಳೆಯ ದೀಪಗಳ ನಡುವೆಯೂ ಕಾಣುವಿರಿ
ಅಷ್ಟೇ ತೀಕ್ಷ್ಣವಾದ ಉರಿಯುತಿರುವ ಕೊಳ್ಳಿ
ದೀಪಗಳನೆಲ್ಲ ನಂಬಿಸಿ ವಂಚಿಸಿ ಮೋಸಿಸಿ ಹೌಹಾರಿಸುವ
ಕೆನ್ನಾಲಗೆ ಚಾಚಿಹ ನಯವಂಚಕ ಕೊಳ್ಳಿಯೂ
ದೀಪಕೆ ಬದುಕಿನ ಮಜಲು ತೋರಿಸಿಹುದು
ಶಂಕರ, ಬುದ್ಧ, ಗಾಂಧಿ ತೋರಿದ
ಅಮ್ಮ ಅಪ್ಪ ಒಡಹುಟ್ಟಿದವರು, ಒಡನಾಡಿಗಳು
ಬದುಕುವ ಪರಿ ತಿಳಿಸಿದ. ದೇದೀಪ್ಯಮಾನ ದೀಪಗಳು
ನಗರವಾಲಾ, ಹರ್ಷದ, ಕೇತನರು
ಆಕಾಶದಿ ನಕ್ಷತ್ರಗಳ ತೋರಿಪ ಬಳ್ಳಿಗಳೂ
ಹಿತವಚನಗಳದಿ ಹತ್ತಿರಾಗಿ ಚೂರಿ ಇರಿದು
ಮೈ ಮನಗಳ ಸುಡುವಂತೆ ಪಾಠ ಕಲಿಸಿದಾ ಕೊಳ್ಳಿಗಳು
ಇಷ್ಟಾದರೂ ನಯವಂಚಕ ಕೊಳ್ಳಿಯರ
ಮಾತಿಗೆ ಬಣ್ಣಕೆ ಮಾರು ಹೋಗಿ
ನಾಜೂಕಯ್ಯರ ಹಿಂದೆ ಹಿಂದೆಯೇ ಹೋಗುವುದಿದೀ ದೀಪ
ಕೊಳ್ಳಿಯು ತನ್ನ ಸುಟ್ಟರೂ ಅರಿವಾಗದುದು,
ಮನೆಯ ತಂಪು ತೊರೆವುದೊಂದು ಇದಕೆ ಶಾಪ
ಜನ್ಮ ಜನ್ಮಕೂ ಕೊಳ್ಳಿ ನೀಡದು ಸರಿದಾರಿಗೆ ಬೆಳಕ
ಇದೇ ಕೊಳ್ಳಿಯ ಸುಡುವಿಕೆಯಿಂದ ಕಲಿತಾ ಪಾಠ
ಮರಳಿ ತಂಪನೀವ ಸುಗಂಧದ ಮೊರೆ ಹೋಗಲು
ದೂರ ಸರಿಸದಾ ಪಾಪದವರೇ ಜೀವನದಾತಾರರು
ಉದಹೃತರ ನೋಡಿ, ಕಲಿಯದೇ ತಿಳಿಯದೇ
ಇದರ ಕರ್ಮ ಅನುಭವಿಸಿಯೇ ಕಲಿಯಬೇಕೇ?
ಕಣ್ಣಿದ್ದಾಗ ಕತ್ತಲೆಯಲಿ ತಡಕಾಡಲು ಬೇಕೀ ದೀಪ
ಕಣ್ಣೇ ಇಲ್ಲದಾದಾಗ ಹೊತ್ತಿಕೊಳ್ಳುವುದು ಒಳಗಣ ದೀಪ
ಒಳಗಣ ದೀಪ ಹೊತ್ತುರಿಯಲು ಬದುಕಲ್ಲಿ ಎಲ್ಲ ಗೌಣ
ಅದರ ಮುಂದೆ ಸರಿಸಾಟಿಯಾಗುವುದೇ ಹೊರಗಣ ದೀಪ ಪಾಪ
ಮನೆಯ ದೀಪವೂ ಕೊಳ್ಳಿಯೂ ನೀಡುವುದು ಬೆಳಕು
ಇವೆರಡರಲ್ಲೂ ಇರುವ ವ್ಯತ್ಯಾಸವೇನು
ಕೊಳ್ಳಿ ಕಲಿಸಿದಾ ಜೀವನದಿ ಮರೆಯದ ಪಾಠ
ಮನೆಯ ದೀಪ ಕಲಿಸಿತು ಮರೆಯುವ ಪಾಠ