ದಾರ ಪವಿತ್ರ, ಮನುಷ್ಯ ಅಸ್ಪೃಶ್ಯ

ದಾರ ಪವಿತ್ರ, ಮನುಷ್ಯ ಅಸ್ಪೃಶ್ಯ

ಜನಿವಾರದ ವಿಷಯ ಇನ್ನೂ ಚರ್ಚೆಯಾಗುತ್ತಲೇ ಇದೆ. ಬ್ರಾಹ್ಮಣ ಸಮುದಾಯ ಈ ಸಮಾಜವನ್ನು ಸಾಕಷ್ಟು ವರ್ಷಗಳ ಕಾಲ ತನ್ನ ಸಾಮರ್ಥ್ಯ, ಅಕ್ಷರ ಜ್ಞಾನ, ಬುದ್ಧಿಶಕ್ತಿ, ಚಾಣಕ್ಯ ತಂತ್ರ ಮುಂತಾದ ಈ ಎಲ್ಲಾ ಗುಣಗಳ ಸಮ್ಮಿಳನದಿಂದ ಈ ಸಮಾಜವನ್ನು ಇಲ್ಲಿಯವರೆಗೂ ಮುನ್ನಡೆಸಿಕೊಂಡು ಬಂದಿದೆ. ನಮ್ಮ ಪ್ರತಿ ಹುಟ್ಟಿನಿಂದ ಸಾಯುವವರೆಗೂ ಬಹುತೇಕ ಬ್ರಾಹ್ಮಣ ಸಮುದಾಯ ನೇರ ಅಥವಾ ಪರೋಕ್ಷ ನಿಯಂತ್ರಣ ಹೊಂದಿದೆ. ಅದು ವಾಸ್ತವ ಸಂಗತಿ. 

ಹಾಗೆಂದು ಬ್ರಾಹ್ಮಣರು ಬೇರಾರು ಅಲ್ಲ, ಅವರು ಸಹ ನಮ್ಮ ಸಮಾಜದ ಸಹಜೀವಿಗಳು, ನಮ್ಮ ನಿಮ್ಮ ನಡುವಿನ ಅತ್ಯಂತ ಗೌರವಾನ್ವಿತ ಬಂಧುಗಳು ಮತ್ತು ಪ್ರಜೆಗಳು. ಈಗಲೂ ಸಹ ಶಿಕ್ಷಣ ಕ್ಷೇತ್ರದಲ್ಲಿ, ಉದ್ಯಮ ಕ್ಷೇತ್ರದಲ್ಲಿ ಪತ್ರಿಕಾ ಮಾಧ್ಯಮ, ನ್ಯಾಯಾಂಗ, ರಾಜಕೀಯ ಎಲ್ಲದರಲ್ಲೂ ತಮ್ಮ ಕಡಿಮೆ ಸಂಖ್ಯೆಯನ್ನು ಮೀರಿ ಈ ಸ್ಪರ್ಧಾತ್ಮಕ ಯುಗದಲ್ಲೂ ಪ್ರಬಲವಾಗಿ ಎಲ್ಲವನ್ನು ಗೆಲ್ಲುತ್ತಾ ಬಂದಿದ್ದಾರೆ. ವಿದೇಶಗಳಲ್ಲಿ ಹೆಚ್ಚಿನ ಸಂಖ್ಯೆ ವಾಸ ಮಾಡುತ್ತಿರುವವರು ಸಹ ಬ್ರಾಹ್ಮಣರೇ. 

ದೇವಸ್ಥಾನಗಳು ಇಂದೂ ಸಹ ಬಹಳ ಭಕ್ತಿ, ಜನಪ್ರಿಯತೆ ಮತ್ತು ನಂಬಿಕೆ ಉಳಿಸಿಕೊಳ್ಳಲು ಬ್ರಾಹ್ಮಣ್ಯದ ಸಿದ್ಧಾಂತಗಳು ಮತ್ತು ಶಿಸ್ತಿನ ನಡವಳಿಕೆಗಳು ಕಾರಣವಾಗಿದೆ. ಸೈದ್ಧಾಂತಿಕ ವಿರೋಧ ಮತ್ತು  ಮೌಢ್ಯಗಳ ನಡುವೆಯೂ ಭಾರತದ ಸಾಂಸ್ಕೃತಿಕ ಮೌಲ್ಯಗಳ ಪ್ರಾತಿನಿಧಿಕತೆಯನ್ನು ಹೆಚ್ಚಾಗಿಯೇ ಹೊಂದಿದೆ. ಬ್ರಾಹ್ಮಣ ಎನ್ನುವುದು ಕೇವಲ ಹುಟ್ಟಿನಿಂದ ಬರುವ ಜಾತಿ ಅಥವಾ ಸಮುದಾಯವಲ್ಲ, ಬ್ರಹ್ಮ ವಿದ್ಯೆ ಕಲಿತವರು ಅಂದರೆ ಜ್ಞಾನಿಗಳು ಬ್ರಾಹ್ಮಣರು. ಆ ದೃಷ್ಟಿಯಿಂದ ಯಾರು ಬೇಕಾದರೂ ಬ್ರಾಹ್ಮಣರಾಗಬಹುದು ಎನ್ನುವ ಒಂದು ಉದಾರವಾದಿ ತತ್ವ ಸಹ ಚಲಾವಣೆಯಲ್ಲಿದೆ. 

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಜನಿವಾರದ ವಿವಾದವೊಂದು  ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಚರ್ಚೆಯಾಗುತ್ತಿದೆ. ನಿಜವಾಗಲೂ ಇದು ತೀರಾ ಗಂಭೀರವಾಗಿ ತೆಗೆದುಕೊಳ್ಳಬೇಕಾದ ವಿಷಯವೇನು ಅಲ್ಲ. ಏಕೆಂದರೆ ಈ ರೀತಿಯ ಅನ್ಯಾಯಗಳು, ಅವಮಾನಗಳು ಆಗಾಗ ಬೇರೆ ಬೇರೆ ಸಮುದಾಯದ ವಿಷಯಗಳಲ್ಲಿ ಈ ಸಮಾಜದಲ್ಲಿ ನಡೆಯುತ್ತಲೇ ಇದೆ. ಇತ್ತೀಚೆಗೆ ಚಾಮರಾಜನಗರದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಯಾರೋ ಮಲ ಬಳಿದಿದ್ದಾರೆ ಎಂದು ಸುದ್ದಿಯಾಯಿತು, ಬಸವಣ್ಣನವರ ಪ್ರತಿಮೆಯನ್ನು ವಿರೂಪಗೊಳಿಸುವುದು, ಗಾಂಧಿ ಪ್ರತಿಮೆಗೆ ಚಪ್ಪಲಿ ಹಾರ ಹಾಕಿರುವುದು, ರಾಷ್ಟ್ರಧ್ವಜಕ್ಕೆ, ರಾಷ್ಟ್ರಗೀತೆಗೆ ಅವಮಾನ ಮಾಡಿದ ಇತ್ಯಾದಿ ಒಂದಷ್ಟು ಘಟನೆಗಳು ಸಹ ಆಗಾಗ ನಡೆಯುತ್ತಲೇ ಇರುತ್ತವೆ. 

ಇವೆಲ್ಲವನ್ನೂ ವೈಯಕ್ತಿಕ ನೆಲೆಯಲ್ಲಿ, ಆ ಘಟನೆಗಳನ್ನು ಕಾನೂನು ಸುವ್ಯವಸ್ಥೆಯ ಆಧಾರದಲ್ಲಿ ನೋಡಬೇಕಾದ ವಿಷಯಗಳು. ದಲಿತರ ಮೇಲಿನ ದೌರ್ಜನ್ಯಗಳಂತು ಲೆಕ್ಕಕ್ಕೇ ಸಿಗುವುದಿಲ್ಲ. ಈ ಜನಿವಾರದ ವಿಷಯ ಮಾತನಾಡುವ ಮೊದಲು ನಾವು ಯಾರನ್ನೂ ವೈಯಕ್ತಿಕವಾಗಿ ನಿಂದಿಸಬಾರದು, ಯಾವುದನ್ನು ಮೇಲು - ಕೀಳು ಎಂದು ಭಾವಿಸಬಾರದು, 

ಸಮ ಸಮಾಜ ಎಂದರೆ ನೈತಿಕವಾಗಿ, ಕಾನೂನಾತ್ಮಕವಾಗಿ, ಮಾನವೀಯ ಮೌಲ್ಯಗಳ ಅನುಸಾರವಾಗಿ ಬ್ರಾಹ್ಮಣರು ಒಂದೇ, ದಲಿತರು ಒಂದೇ, ಮುಸ್ಲಿಮರು ಒಂದೇ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ, ಲಿಂಗಾಯಿತರು ಒಂದೇ. ಆದ್ದರಿಂದ ಮಾನ ಅವಮಾನ ಯಾರಿಗಾದರೂ ಅಲ್ಲಿ ನಾವಿರಲೇಬೇಕು. ಯಾರಿಗೇ ಅನ್ಯಾಯವಾದರೂ ಸಂಖ್ಯೆ ಎಷ್ಟೇ ಇರಲಿ, ಆ ಅನ್ಯಾಯದ ವಿರುದ್ಧ ನಾವು ದ್ವನಿ ಎತ್ತಬೇಕು.

ಎರಡನೆಯದಾಗಿ, ಬ್ರಾಹ್ಮಣ್ಯ ಅನ್ನುವುದು ಒಂದು ಸಾಮೂಹಿಕ ಪ್ರಜ್ಞೆ. ಅಂದರೆ ಬ್ರಾಹ್ಮಣ್ಯ ಎನ್ನುವ ಕೆಲವು ಆಚರಣೆಯ ಬಗೆಗಿನ, ಪ್ರಜಾಪ್ರಭುತ್ವೀಯ ನೆಲೆಯ ಸಾಮಾಜಿಕ ಅಸಮಾಧಾನ ಮಾತ್ರ. ಆದರೆ ವೈಯಕ್ತಿಕವಾಗಿ ಬ್ರಾಹ್ಮಣರೆಂಬುವವರು ನಮ್ಮ ಸ್ನೇಹಿತರು, ಸಂಬಂಧಿಕರೇ, ಭಾರತೀಯ ಪ್ರಜೆಗಳೇ. ಅವರಿಗೆ ಯಾವುದೇ ರೀತಿಯ ಅವಮಾನ ಆಗಬಾರದು. 

ಹಾಗೆಯೇ ಅಸ್ಪೃಶ್ಯತೆ ಆಚರಣೆ ಎಷ್ಟು ಕೆಟ್ಟದ್ದೋ, ಅಮಾನವೀಯವೋ ಹಾಗೆ ಬ್ರಾಹ್ಮಣರ ನಿಂದನೆ ಸಹ ಅಷ್ಟೇ ಕೆಟ್ಟದ್ದು. ಜೊತೆಗೆ ಬ್ರಾಹ್ಮಣ್ಯದ ಮೇಲು ಕೀಳಿನ ತಾರತಮ್ಯದ, ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾದ, ಸಂಪ್ರದಾಯದ ಹೆಸರಿನಲ್ಲಿ ಇನ್ನೊಬ್ಬರನ್ನು ಮುಟ್ಟಿಸಿಕೊಳ್ಳದ ‌ಆಚರಣೆ ಸಹ ಅಷ್ಟೇ ಕೆಟ್ಟದ್ದು ಮತ್ತು ಅಮಾನವೀಯವಾದದ್ದು. ಈ ಅಸಮಾನತೆ, ಮೇಲುಕೀಳಿನ ತಾರತಮ್ಯವನ್ನು ಯಾರೇ ಮಾಡಿದರು ಅದನ್ನು ನೇರವಾಗಿ ಖಂಡಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ದಲಿತ ಹತ್ಯೆ ಎಷ್ಟು ಹಿಂಸೆಯೋ ಬ್ರಾಹ್ಮಣ ಹತ್ಯೆಯೂ ಅಷ್ಟೇ ಹಿಂಸಾತ್ಮಕ. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯಕ್ಕೆ ಎಳ್ಳಷ್ಟು ಅವಕಾಶ ನೀಡಬಾರದು. 

ನಿಜವಾಗಲೂ ಪ್ರಬುದ್ಧ ಬ್ರಾಹ್ಮಣರು, ಬುದ್ದಿವಂತ ಬ್ರಾಹ್ಮಣರು, ದೇಶಭಕ್ತ ಬ್ರಾಹ್ಮಣರು, ಧರ್ಮನಿಷ್ಠ ಬ್ರಾಹ್ಮಣರು ಈ ಜನಿವಾರದ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯೇ ಇಲ್ಲ. ಏಕೆಂದರೆ ಅದು ಒಂದು ದಾರ ಅಷ್ಟೇ. ನೀವು ಇದನ್ನು ಇತರ ಧರ್ಮಗಳ ಯಾವುದೋ ಕರ್ಮಠ ಆಚರಣೆಗಳಿಗೆ, ಅವರ ಕಠಿಣ ಸಿದ್ಧಾಂತಗಳಿಗೆ ಹೋಲಿಕೆ ಮಾಡಿಕೊಂಡು ತಾವು ಅವರಂತೆ ವರ್ತಿಸುವುದು ಉತ್ತಮ ನಡೆಯಲ್ಲ. ಜ್ಞಾನಿಗಳಾದವರು ವಿಶಾಲ ಮನೋಭಾವದಿಂದ ಸಾಂದರ್ಭಿಕ ಸತ್ಯವನ್ನು ಗಮನಿಸಬೇಕು. ಅನಾವಶ್ಯಕ ರಾಜಕೀಯ ಪ್ರೇರಿತ ಆಕ್ರೋಶಕ್ಕೆ ಬಲಿಯಾಗಬಾರದು.  

ನೆನಪಿರಲಿ, ಉದಾರವಾದವೇ ಈ ಜಗತ್ತಿನ ಶ್ರೇಷ್ಠ ಮಾನವತವಾದ. ಜನಿವಾರವನ್ನು ಪರೀಕ್ಷಾ ಕೇಂದ್ರಗಳ ಒಳಗೆ ಬಿಡದೆ ಕತ್ತರಿಸಿದ್ದು ಏಕೋ ನನಗೆ ಗೊತ್ತಿಲ್ಲ. ಅದರಿಂದ ವೈಯಕ್ತಿಕವಾಗಿ ಅಥವಾ ಪರೀಕ್ಷಾ ದೃಷ್ಟಿಯಿಂದ ಅಂತಹ ತೊಂದರೆ ಏನೂ ಇರಲಿಲ್ಲ. ಜನಿವಾರವನ್ನು ಒಮ್ಮೆ ತಾಂತ್ರಿಕ ದೃಷ್ಟಿಯಿಂದ ಪರಿಶೀಲಿಸಿ ಒಳಗೆ ಬಿಡಬಹುದಿತ್ತು. ಕಾನೂನು ಸಹ ಅದಕ್ಕೆ ಮಾನ್ಯತೆ ನೀಡಿದೆ. ಏಕೋ ಏನೋ ಯಾರೋ ಹುಚ್ಚ ಬಹುಶಃ ಉದ್ದೇಶಪೂರ್ವಕವಲ್ಲದೆ ಇದನ್ನು ಮಾಡಿರಬಹುದು. ಒಂದು ವೇಳೆ ಉದ್ದೇಶಪೂರ್ವಕವಾಗಿ ಮಾಡಿದ್ದರೆ ಅವರ ಮೇಲೆ ಶಿಸ್ತಿನ ಕ್ರಮವಾಗಲಿ. ಆದರೆ  ಆ ವಿದ್ಯಾರ್ಥಿ ಜನಿವಾರಕ್ಕಾಗಿ ಪರೀಕ್ಷೆ ಬರೆಯಲು ನಿರಾಕರಿಸಿದ್ದು ತಪ್ಪು ನಿರ್ಧಾರ ಮತ್ತು ಮೂಲಭೂತವಾದಿತನ. ಅದನ್ನು  ಸಮುದಾಯ ಬೆಂಬಲಿಸಬಾರದು. ಅದೊಂದು ಬ್ರಾಹ್ಮಣ್ಯದ ಮೇಲೆ ನಡೆದ ಗಂಭೀರ ದೌರ್ಜನ್ಯ ಎಂದು ಭಾವಿಸಬಾರದು. ಏಕೆಂದರೆ ಕೇವಲ ಬ್ರಾಹ್ಮಣ ಸಮುದಾಯ ಮಾತ್ರವಲ್ಲ, ಭಾರತದ ಪ್ರತಿಯೊಬ್ಬ ಪ್ರಜೆಯೂ ಬ್ರಾಹ್ಮಣರ ಮೇಲೆ ಗೌರವ ಹೊಂದಿದ್ದಾರೆ‌. ನೀವೂ ಭಾರತೀಯರು. 

ಏನೇ ಆದರೂ ಇಲ್ಲಿಯವರೆಗೂ ಒಂದಷ್ಟು ಶಾಸ್ತ್ರ ಸಂಪ್ರದಾಯಗಳ ಮೂಲಕ ಜನರಿಗೊಂದಿಷ್ಟು ಸಂಸ್ಕಾರ ಕಲಿಸಿ ಮುಂದೆ ಕರೆದುಕೊಂಡು ಬಂದಿದ್ದೀರಿ. ನಿಮ್ಮ ಮೇಲೆ ಎಲ್ಲರಿಗೂ ಅಪಾರ ಗೌರವವಿದೆ. ನಿಮ್ಮನ್ನು ಟೀಕಿಸುವ, ಅವಮಾನಿಸುವ, ನಿಮ್ಮ ಅವಕಾಶ ತಪ್ಪಿಸುವ ಎಲ್ಲಕ್ಕೂ ನಮ್ಮ ವಿರೋಧವಿದೆ ಮತ್ತು ನಿಮಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಕೇವಲ ನಿಮಗೆ ಮಾತ್ರವಲ್ಲ ಈ ಭಾರತದ 145 ಕೋಟಿ ಪ್ರಜೆಗಳಿಗೂ ಕೂಡ ಎಲ್ಲಿಯೇ ಅನ್ಯಾಯವಾದರೂ ನಾವಿದ್ದೇವೆ. ಜಗತ್ತಿನ ಎಲ್ಲಾ ಮತ್ತು ಎಲ್ಲ ರೀತಿಯ ಶೋಷಿತರು ನಮ್ಮ ಸಂಗಾತಿಗಳೇ. 

ಆದ್ದರಿಂದ ಅನಾವಶ್ಯಕವಾಗಿ ಬೀದಿಗಿಳಿದು ಜನಿವಾರದ ವಿಷಯ ಹೆಚ್ಚು ಚರ್ಚೆಗೆ ಒಳಪಡಿಸುವುದು ಬೇಡ. ಅದನ್ನು ಉದಾರವಾಗಿ ಸ್ವೀಕರಿಸಿ. ಆದರೆ ನಿಮ್ಮ ಮೇಲಿನ ಉದ್ದೇಶಪೂರ್ವಕ ದಾಳಿ, ಅವಮಾನ, ನಿಂದನೆ ದಲಿತರ ಮೇಲಿನ ದೌರ್ಜನ್ಯದಷ್ಟೇ ಗಂಭೀರವಾಗಿ ಪರಿಗಣಿಸಿ ಸಮಾಜ ನಿಮ್ಮ ಬೆನ್ನಿಗೆ ನಿಂತಿರುತ್ತದೆ‌. ನಿಮಗಿಂತ ಮೊದಲು ಇತರ ಸಮುದಾಯಗಳು ನಿಮ್ಮ ನೆರವಿಗೆ ಧಾವಿಸುವುದು ಖಂಡಿತ. ಜಾತಿ ಮುಕ್ತ ಸಮಾಜ ನಿರ್ಮಿಸುವ  ಬಹುದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ಏಕೆಂದರೆ ನೀವು ಐತಿಹಾಸಿಕವಾಗಿಯೇ ಎಲ್ಲಾ ಸಮುದಾಯಗಳಿಗಿಂತ ಹೆಚ್ಚು ಬುದ್ಧಿವಂತರು ಮತ್ತು ಸಂಸ್ಕಾರವಂತರು.

ಈ ಜನಿವಾರಕ್ಕಿಂತ ಬ್ರಾಹ್ಮಣ ಸಮುದಾಯ ವಾಸ್ತವದಲ್ಲಿ ಎದುರಿಸುತ್ತಿರುವ ಇತರ ಅನೇಕ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿದರೆ ಉತ್ತಮ. ಜನಿವಾರ ನಿರ್ಜೀವ ವಸ್ತು, ಬ್ರಾಹ್ಮಣರು ಮನುಷ್ಯರು. ಆದ್ದರಿಂದ ಸಂಸ್ಕಾರವಂತರು ಯಾವುದಕ್ಕೆ ಹೆಚ್ಚು ಬೆಲೆ ಕೊಡಬೇಕು ಎಂಬುದನ್ನು ವಿವೇಚನೆಯಿಂದ ನಿರ್ಧರಿಸಬೇಕು.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ