ದಾಲ್ಚಿನ್ನಿ ನೀರು ಕುಡಿದು ನಿಮ್ಮ ಬೊಜ್ಜು ಕರಗಿಸಿ !

ಬಹಳಷ್ಟು ಮಂದಿಗೆ ತಮ್ಮ ಏರಿದ ತೂಕವನ್ನು ಕಡಿಮೆ ಮಾಡುವುದು ಹೇಗೆಂಬ ಚಿಂತೆ. ಬೊಜ್ಜು ಕರಗಿಸಿ ತೂಕ ಕಡಿಮೆ ಮಾಡಬಲ್ಲ ಹಲವಾರು ವಸ್ತುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಮಾತ್ರೆಗಳು, ಸಿರಪ್, ಜ್ಯೂಸ್, ವ್ಯಾಯಾಮ ಸಾಧನಗಳು, ಡಯಟ್ ಉಪಾಯಗಳು ಎಲ್ಲವೂ ಇದೆ. ಆದರೆ ಇವೆಲ್ಲಾ ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಪರಿಣಾಮಕಾರಿ? ದುಷ್ಪರಿಣಾಮಗಳು ಇಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು? ಆರೋಗ್ಯದಾಯಕ ವಿಧಾನದಲ್ಲಿ ನೈಸರ್ಗಿಕ ರೀತಿಯಲ್ಲಿ ಬೊಜ್ಜು ಕರಗಿಸಿ ಸ್ಲಿಮ್ ಆಂಡ್ ಫಿಟ್ ಆಗಬಹುದಲ್ಲವೇ? ಇಲ್ಲಿದೆ ಒಂದು ಸರಳ ಉಪಾಯ.
ಇದಕ್ಕೆ ನಿಮಗೆ ಬೇಕಾಗಿರುವುದು ದಾಲ್ಚಿನ್ನಿ ಎನ್ನುವ ಅದ್ಭುತ ಪದಾರ್ಥ. ಇದರಿಂದ ನೀವು ತಯಾರಿಸುವ ಒಂದು ಮ್ಯಾಜಿಕ್ ಪಾನೀಯ ನಿಮ್ಮ ತೂಕವನ್ನು ಸಹಜ ರೀತಿಯಲ್ಲಿ ಕಡಿಮೆ ಮಾಡುತ್ತದೆ. ದಾಲ್ಚಿನ್ನಿ ಎನ್ನುವ ಸಾಂಬಾರ ಪದಾರ್ಥವನ್ನು ನಾವು ನಮ್ಮ ಅಡಿಗೆಯಲ್ಲಿ ಬಳಸುತ್ತಾ ಇರುತ್ತೇವೆ. ಇದರಿಂದ ನಿಮ್ಮ ಕೆಮ್ಮು, ಜ್ವರ ಕಡಿಮೆಯಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ನಿಮ್ಮ ಏರುತ್ತಿರುವ ತೂಕವನ್ನು ನಿಯಂತ್ರಿಸುತ್ತದೆ. ಹಾಗಾದರೆ ದಾಲ್ಚಿನ್ನಿ ಬಳಸಿ ಒಂದು ಕುಡಿಯುವ ನೀರನ್ನು (ಪೇಯ) ತಯಾರು ಮಾಡುವ
ಇದಕ್ಕೆ ಬೇಕಾಗುವ ವಸ್ತುಗಳು: ದಾಲ್ಚಿನ್ನಿ ಹುಡಿ ಅರ್ಧ ಟೀ ಚಮಚ, ನೀರು ೨ ಕಪ್, ನಿಂಬೆ ರಸ ೧ ಟೀ ಚಮಚ, ಜೇನು ತುಪ್ಪ ೧ ಟೀ ಚಮಚ.
ತಯಾರಿಕೆ: ದಾಲ್ಚಿನ್ನಿ ನೀರು ಮಾಡಲು, ಮೊದಲು ೨ ಕಪ್ ನೀರನ್ನು ಪಾತ್ರೆಯಲ್ಲಿ ಹಾಕಿ, ಅರ್ಧ ಟೀ ಚಮಚ ದಾಲ್ಚಿನ್ನಿ ಹುಡಿ ಹಾಕಿ ಚೆನ್ನಾಗಿ ಕುದಿಸಿ. ನೀರು ಅರ್ಧ ಆದಮೇಲೆ ಬೆಂಕಿ ಆರಿಸಿ. ಸ್ವಲ್ಪ ತಣ್ಣಗಾದ ಮೇಲೆ ೧ ಟೀ ಚಮಚ ನಿಂಬೆ ರಸ, ೧ ಟೀ ಚಮಚ ಜೇನುತುಪ್ಪ ಹಾಕಿ ಕುಡಿಯಿರಿ. ಈ ಪೇಯವು ನಿಮ್ಮ ತೂಕವನ್ನು ಇಳಿಸಲು ಖಂಡಿತಾ ನೆರವಾಗುತ್ತದೆ. ದಾಲ್ಚಿನ್ನಿಯಲ್ಲಿ ಮೆಟಬಾಲಿಸಂ ಹೆಚ್ಚಿಸುವ ಗುಣಗಳಿವೆ. ಇದು ನಿಮ್ಮ ದೇಹದ ಕ್ಯಾಲೊರಿಗಳನ್ನು ಬೇಗ ಕರಗಿಸುತ್ತವೆ. ಇದರಿಂದ ನಿಮ್ಮ ತೂಕ ನೈಸರ್ಗಿಕವಾಗಿ ಕಡಿಮೆಯಾಗುತ್ತದೆ. ಈ ರೀತಿಯಾಗಿ ದಾಲ್ಚಿನ್ನಿ ನೀರನ್ನು ತಯಾರಿಸಿ ನಿಯಮಿತವಾಗಿ ಕುಡಿಯುತ್ತಾ ಬಂದರೆ ಖಂಡಿತವಾಗಿಯೂ ನಿಮ್ಮ ಬೊಜ್ಜು ಕರಗುತ್ತದೆ.
ಈ ತೂಕ ಇಳಿಸಲು ಸಹಕಾರಿಯಾದ ದಾಲ್ಚಿನ್ನಿ ನೀರನ್ನು ನೀವು ಯಾವಾಗ ಕುಡಿಯುವುದು ಉತ್ತಮ ಎನ್ನುವುದು ಎಲ್ಲರ ಪ್ರಶ್ನೆ. ಇದನ್ನು ನೀವು ರಾತ್ರಿ ಮಲಗುವ ಒಂದು ಗಂಟೆ ಮುಂಚೆ ಕುಡಿಯಿರಿ. ಆದರೆ ಗರ್ಭಿಣಿ ಸ್ತ್ರೀಯರು ಹಾಗೂ ವಿವಿಧ ಬಗೆಯ ದೈಹಿಕ ಸಮಸ್ಯೆ ಇರುವವರು ದಾಲ್ಚಿನ್ನಿ ನೀರು ಸೇವಿಸುವ ಮೊದಲು ತಜ್ಞ ವೈದ್ಯರನ್ನು ಸಂಪರ್ಕಿಸಿರಿ.
ದಾಲ್ಚಿನ್ನಿಯಿಂದ ಕಾಫಿ ಮಾಡಬಹುದು ಗೊತ್ತೇ? ದಾಲ್ಚಿನ್ನಿ ಕಾಫಿ ಮಾಡಲು ಮೊದಲು ದಾಲ್ಚಿನ್ನಿ ನೀರು ತಯಾರಿಸಿ. ನಂತರ ಆ ನೀರಿಗೆ ಕಾಫಿ ಹುಡಿ, ಸ್ವಲ್ಪ ಸಕ್ಕರೆ ಹಾಕಿ ಕಲಸಿ. ಈಗ ನಿಮ್ಮ ದಾಲ್ಚಿನ್ನಿ ಕಾಫಿ ತಯಾರು. ಈ ಕಾಫಿಯನ್ನು ಕುಡಿದ ಬಳಿಕ ಅರ್ಧ ಗಂಟೆ ಏನನ್ನೂ ಸೇವಿಸಬಾರದು. ದಾಲ್ಚಿನ್ನಿಯಲ್ಲಿ ಸತು, ವಿಟಮಿನ್ ಗಳು, ನಿಯಾಸಿನ್, ಥಯಾಮಿನ್, ಲೈಕೋಫೀನ್, ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ತಾಮ್ರ, ಕಾರ್ಬೋಹೈಡ್ರೇಟ್ ಗಳು ಇವೆ. ಇವುಗಳಲ್ಲದೇ ದಾಲ್ಚಿನ್ನಿಯಲ್ಲಿ ಆಂಟಿ ಆಕ್ಸಿಂಡೆಂಟ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್ ಗುಣಗಳಿವೆ. ತೂಕ, ಮಧುಮೇಹ, ಅಧಿಕ ರಕ್ತದೊತ್ತಡ ಶಮನಕ್ಕೆ ದಾಲ್ಚಿನ್ನಿ ಉತ್ತಮ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ