ದಾಳಿಂಬೆ ಹಣ್ಣಿನ ಔಷಧೀಯ ಗುಣಗಳು
ಕಣ್ಣು ಕುಕ್ಕುವ ಕೆಂಪು ಬಣ್ಣದ, ನಮ್ಮ ಹಲ್ಲಿನ ಗಾತ್ರದ ದಾಳಿಂಬೆ ಬೀಜಗಳನ್ನು ನೋಡುವುದೇ ಒಂದು ಸೊಗಸು. ಅದಕ್ಕೇ ಕವಿಗಳು ತಮ್ಮ ಕವನಗಳಲ್ಲಿ ದಾಳಿಂಬೆ ಜೀಜದಂತಹ ದಂತ ಪಂಕ್ತಿಗಳು ಎಂದು ಹಾಡಿ ಹೊಗಳಿದ್ದಾರೆ. ಸುಮಾರು ಎರಡು ದಶಕಗಳ ಹಿಂದೆ ಪ್ರತಿಯೊಬ್ಬರ ಹಿತ್ತಲಿನಲ್ಲಿ ದಾಳಿಂಬೆ ಗಿಡವಿತ್ತು. ಆ ಗಿಡದ ಎಲೆ, ಚಿಗುರು, ತೊಗಟೆ, ಹಣ್ಣು, ಹಣ್ಣಿನ ಸಿಪ್ಪೆ ಎಲ್ಲವೂ ಉಪಯೋಗಕ್ಕೆ ಬರುತ್ತಿತ್ತು. ಆಗ ದಾಳಿಂಬೆ ಬೀಜಗಳಲ್ಲಿ ನಿಜಕ್ಕೂ ಬೀಜವಿತ್ತು. ಅದನ್ನು ಕಡಿದು ತಿನ್ನುವುದು ತ್ರಾಸದಾಯಕವೂ ಆಗಿತ್ತು.
ಕಾಲ ಕ್ರಮೇಣ ಬೀಜ ರಹಿತ (ಸೀಡ್ ಲೆಸ್) ದಾಳಿಂಬೆ ಹಣ್ಣುಗಳು ಮಾರುಕಟ್ಟೆಗೆ ಬಂದವು. ಬೀಜದ ವರ್ಣವೂ ಆಕರ್ಷಣೀಯವಾಯಿತು. ಹಿಂದೆ ಯಾವುದೇ ಮಾರುಕಟ್ಟೆ ದರ ಇಲ್ಲದಿದ್ದ ದಾಳಿಂಬೆ ಹಣ್ಣು ಈಗ ಸುಮಾರು ರೂ. ೨೦೦ ಮೇಲಿನ ದರ ಹೊಂದುವಂತಾಯಿತು. ದಾಳಿಂಬೆ ಹೃದಯಕ್ಕೆ ಉತ್ತಮ, ಸಿಪ್ಪೆಯ ಸಾರು ಹೊಟ್ಟೆಗೆ ಉತ್ತಮ ಎಂಬ ಮಾತುಗಳನ್ನು ಕೇಳಿ ಇದರ ಬೆಲೆಯೂ ಕೇಳ ಕಂಡರಿಯದಂತೆ ಹೆಚ್ಚಾಯಿತು. ನಾವು ಸಣ್ಣವರಿರುವಾಗ ದಾಳಿಂಬೆ ಬೀಜಗಳನ್ನು ತಿಂದದ್ದು ಕಡಿಮೆ. ಏಕೆಂದರೆ ಅದರಲ್ಲಿರುವ ಬೀಜಗಳನ್ನು ತಿನ್ನುವಾಗ ‘ಕುಟು ಕುಟು' ಎಂದು ಕಿರಿಕಿರಿಯಾಗುತ್ತಿತ್ತು. ಆದರೆ ನನ್ನ ಅಮ್ಮ ಈ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ತೆಗೆದಿಟ್ಟು ನಂತರ ಬೇಕಾದಾಗಲೆಲ್ಲಾ ಸೊಗಸಾದ ಸಾರು ಮಾಡುತ್ತಿದ್ದರು. ಈ ಸಾರನ್ನು ಅನ್ನಕ್ಕೆ ಹಾಕಿ ಊಟ ಮಾಡಿದರೆ ಅದೇ ಮೃಷ್ಟಾನ್ನ ಭೋಜನ. ಚಿಗುರೆಲೆಯ ತಂಬುಳಿಯೂ ಆಗುತ್ತಿತ್ತು. ಆದರೆ ಈಗ ಬಹುತೇಕರ ಮನೆಯಲ್ಲಿ ದಾಳಿಂಬೆ ಸಸಿ ಇಲ್ಲ. ಎಲ್ಲದಕ್ಕೂ ಮಾರುಕಟ್ಟೆಗೇ ಹೋಗಬೇಕು.
ಸಣ್ಣವರಿರುವಾಗ ನಾವು ದಾಳಿಂಬೆ ತಿನ್ನದೇ ಇರಲು ಇನ್ನೊಂದು ಕಾರಣವಿತ್ತು, ಅದೇನು ಗೊತ್ತೇ? ಅದು ಹಣ್ಣನ್ನು ಬಿಡಿಸಿ, ಬೀಜಗಳನ್ನು ಪ್ರತ್ಯೇಕ ಮಾಡುವುದು ಹುಟ್ಟಾ ಆಲಸಿಗಳಾದ ನಮಗೆ ದೊಡ್ದ ಕಷ್ಟಕರವಾದ ಕೆಲಸವಾಗಿತ್ತು. ಆ ಸಮಯ ಹಿತ್ತಲಿನಲ್ಲಿ ಸಿಗುತ್ತಿದ್ದ ಹಣ್ಣಿನ ಬೀಜಗಳೂ ಅಷ್ಟೊಂದು ರುಚಿಕರವಾಗಿರಲಿಲ್ಲ. ಈಗ ಹೊಸ ಹೊಸ ಹೈಬ್ರೀಡ್ ತಳಿಗಳು ಮಾರುಕಟ್ಟೆಗೆ ಬಂದಿವೆ. ಅಲ್ಲಡಿ, ವಡಕ್ಕಿ, ಕೇಸರಿ ಮೊದಲಾದ ತಳಿಗಳ ಬೀಜಗಳು ಬಹಳ ರುಚಿಕರ. ನೂರಾರು ವರ್ಷಗಳಿಂದ ನಮ್ಮ ಹಿರಿಯರು ಇದನ್ನು ನಾನಾ ಬಗೆಯಲ್ಲಿ ಆಹಾರಕ್ಕೆ ಬಳಸುತ್ತಿದ್ದರು. ಈಗ ಹಣ್ಣುಗಳಿಂದ ಐಸ್ ಕ್ರೀಂ, ಜ್ಯೂಸ್ ತಯಾರಿಸಿದರೆ, ತೊಗಟೆಯಿಂದ ಹಲ್ಲಿನ ಹುಡಿ, ಸಿಪ್ಪೆಯಿಂದ ಸಾರು ತಯಾರಿಸುತ್ತಾರೆ.
ದಾಳಿಂಬೆ ಸಸಿ ದೊಡ್ದ ಮರವಾಗುವುದಿಲ್ಲ. ಸುಮಾರು ಹತ್ತು ಅಡಿಗಳವರೆಗೆ ಬೆಳೆಯುತ್ತದೆ. ಗೆಲ್ಲುಗಳಲ್ಲಿ ಸಣ್ಣ ಸಣ್ಣ ಮುಳ್ಳುಗಳಿರುತ್ತದೆ. ಹೂವುಗಳ ಬಣ್ಣ ಕೆಂಪು. ಎರಡು-ಮೂರು ಎಲೆಗಳು ಜೊತೆಯಾಗಿರುತ್ತವೆ. ದಾಳಿಂಬೆ ಹಣ್ಣಿನ ಕೆಲವೊಂದು ಔಷಧೀಯ ಗುಣಗಳನ್ನು ನಾವು ಈಗ ಗಮನಿಸುವ. ಯಾವುದೇ ಸಮಸ್ಯೆಗೆ ದಾಳಿಂಬೆಯನ್ಮು ಬಳಸುವ ಮೊದಲು ನಿಮ್ಮ ಆರೋಗ್ಯಕ್ಕೆ ಇದು ಸರಿಹೊಂದುತ್ತದೆಯೇ ಎಂಬುವುದನ್ನು ದಯವಿಟ್ಟು ಪರೀಕ್ಷಿಸಿ. ಕೆಲವರಿಗೆ ಅಲರ್ಜಿಯಾಗುವ ಸಂಭವವಿರುತ್ತದೆ.
* ದಾಳಿಂಬೆ ಹಣ್ಣಿನ ತೊಗಟೆಯನ್ನು ಮಜ್ಜಿಗೆಯಲ್ಲಿ ತೇಯ್ದು ಸೇವಿಸುವುದರಿಂದ ಅತಿಸಾರದ ಸಮಸ್ಯೆ ದೂರವಾಗುತ್ತದೆ.
* ಕರುಳಿನಲ್ಲಿರುವ ಜಂತು ಹುಳಗಳನ್ನು ನಾಶ ಪಡಿಸಲು ದಾಳಿಂಬೆ ಗಿಡದ ತೊಗಟೆ, ಬೇರು ಮತ್ತು ಕಾಂಡದ ಚೂರುಗಳಿಂದ ಕಷಾಯ ತಯಾರಿಸಿ ಕುಡಿಯಬೇಕು.
* ದಾಳಿಂಬೆ ಹಣ್ಣಿನ ಸೇವನೆ ಬೇಸಿಗೆ ಕಾಲದಲ್ಲಿ ಅತ್ಯುತ್ತಮ. ಏಕೆಂದರೆ ಇದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ. ಪಿತ್ತಶಮನವಾಗುತ್ತದೆ. ರಕ್ತಶುದ್ಧಿಯಾಗಿ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ.
* ದಾಳಿಂಬೆ ಹಣ್ಣಿನ ರಸ ಸೇವಿಸುವುದರಿಂದ ಹೊಟ್ಟೆ ನೋವು, ಹೊಟ್ಟೆ ಉರಿ, ಜ್ವರದಿಂದಾಗುವ ನಿತ್ರಾಣ, ಮಾನಸಿಕ ಒತ್ತಡ, ನರದೌರ್ಬಲ್ಯ ಶಮನವಾಗುತ್ತದೆ.
* ದಾಳಿಂಬೆ ಸಸ್ಯದ ಚಿಗುರನ್ನು ಜಗಿದು ತಿಂದರೆ ವಸಡಿನಿಂದ ಆಗುವ ರಕ್ತಸ್ರಾವ ಹತೋಟಿಗೆ ಬರುತ್ತದೆ.
* ಒಂದು ಲೋಟ ಹುರುಳಿ ಕಾಳಿನ ಸೂಪಿನ ಜೊತೆ ಒಂದು ಚಮಚ ದಾಳಿಂಬೆ ಹಣ್ಣಿನ ಬೀಜಗಳನ್ನು ಬೆರೆಸಿ ಸೇವಿಸುವುದರಿಂದ ಮೂತ್ರಕೋಶ, ಮೂತ್ರ ನಾಳದಲ್ಲಿರುವ ಕಲ್ಲು ನಿಧಾನಕ್ಕೆ ಕರಗುತ್ತದೆ.
* ದಾಳಿಂಬೆ ಹಣ್ಣಿನ ತೊಗಟೆಯಿಂದ ಕಷಾಯ ತಯಾರಿಸಿ ಅದಕ್ಕೆ ಒಂದು ಚಿಟಿಕೆ ಉಪ್ಪು ಸೇರಿಸಿ ಅದರಿಂದ ಬಾಯಿಯನ್ನು ಮುಕ್ಕಳಿಸುವುದರಿಂದ ಹಲ್ಲು ನೋವು, ಗಂಟಲು ನೋವು, ಬಾಯಿ ಹುಣ್ಣು ಮೊದಲಾದ ಸಮಸ್ಯೆಗಳು ನಿವಾರಣೆಯಾಗುತ್ತದೆ.
* ದಾಳಿಂಬೆ ಸಸ್ಯದ ಬೇರನ್ನು ನೀರಿನಲ್ಲಿ ಅರೆದು ಹಣೆಗೆ ಲೇಪಿಸುವುದರಿಂದ ಆಯಾಸ ಮತ್ತು ಸೆಖೆಯಿಂದಾಗಿ ಉಂಟಾಗುವ ತಲೆನೋವು ಶಮನವಾಗುತ್ತದೆ.
* ದಾಳಿಂಬೆ ಸಸಿಯ ಬೇರು, ಜೀರಿಗೆ, ಕೊತ್ತಂಬರಿ ಮತ್ತು ಗುಲಾಬಿ ಹೂವಿನ ಎಸಳನ್ನು ಹಿಂದಿನ ದಿನ ನೀರಿನಲ್ಲಿ ನೆನೆಸಿ ಆ ನೀರನ್ನು ಬಸಿದುಕೊಂಡು ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಸೇವಿಸುವುದರಿಂದ ಸೆಖೆ ಗುಳ್ಳೆಗಳು ನಿವಾರಣೆಯಾಗುತ್ತವೆ.
* ದಾಳಿಂಬೆಯ ಹೂವಿನ ಮೊಗ್ಗುಗಳನ್ನು ಒಣಗಿಸಿ ಅದನ್ನು ಚೂರ್ಣ ಮಾಡಿಟ್ಟು ದಿನಕ್ಕೆ ಎರಡು ಬಾರಿಯಂತೆ ಕಾಲು ಚಮಚ ಸೇವನೆ ಮಾಡಿದರೆ ಕೆಮ್ಮು ನಿಯಂತ್ರಣಕ್ಕೆ ಬರುತ್ತದೆ.
* ದಾಳಿಂಬೆ ಹಣ್ಣಿನ ರಸದ ಜೊತೆ ಸಮ ಪ್ರಮಾಣದ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ದೇಹಕೆ ನವಚೈತನ್ಯ ಉಂಟಾಗುತ್ತದೆ.
ಇವಿಷ್ಟೇ ಅಲ್ಲದೆ ದಾಳಿಂಬೆ ಹಣ್ಣಿನಿಂದ ಇನ್ನೂ ಹಲವಾರು ಉಪಯೋಗಗಳಿವೆ. ಆದುದರಿಂದ ಹಣ್ಣನ್ನು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಬಳಸಿ, ಹೃದಯ ಸುಸ್ಥಿತಿಯಲ್ಲಿರುತ್ತದೆ. ನಿಮ್ಮ ಹಿತ್ತಲಿನಲ್ಲಿ ಅಥವಾ ಮನೆಯ ಮುಂದೆ ಜಾಗವಿದ್ದರೆ ದಾಳಿಂಬೆ ಸಸಿಯನ್ನು ನೆಡಿ. ಹಣ್ಣಾದರೆ ನಿಮಗೆ ಮಾರುಕಟ್ಟೆಯಲ್ಲಿ ದೊರೆಯಬಹುದು. ಆ ಸಸ್ಯದ ಚಿಗುರು, ಎಲೆ ಮೊದಲಾದುವುಗಳು ಬೇಕಿದ್ದರೆ ನಿಮ್ಮ ಮನೆಯಲ್ಲೇ ಒಂದು ಸಸಿ ಇರುವುದು ಅನಿವಾರ್ಯ ಅಲ್ಲವೇ? ಅದಕ್ಕೆ ಇಂದೇ ಒಂದು ದಾಳಿಂಬೆ ಗಿಡ ನೆಟ್ಟು ಬೆಳೆಸಿ…
(ಆಧಾರ ಮಾಹಿತಿ)
ಚಿತ್ರ ಕೃಪೆ: ಅಂತರ್ಜಾಲ ತಾಣ