ದಾಸರ ದಾರಿಯಲ್ಲಿ

ದಾಸರ ದಾರಿಯಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಎಫ್ ಡಿ ಗಡ್ಡಿಗೌಡರ
ಪ್ರಕಾಶಕರು
ಚೇತನ್ ಬುಕ್ಸ್, ವಿಜಯನಗರ ಎರಡನೇ ಹಂತ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ : ೨೦೨೨

ದಾಸರ ಕೀರ್ತನೆ ಬಗ್ಗೆ ನಾನು ಬರೆದ ಕೀರ್ತನೆಗಳ ಸಂಕಲನ ‘ದಾಸರ ದಾರಿಯಲ್ಲಿ' ಶ್ರೇಷ್ಟಮಟ್ಟದ ದಾಸರ ಕೃಷಿ ವಿಶ್ವವ್ಯಾಪಿಯಾಗಿ, ಪ್ರಮುಖವಾಗಿ ಪುಂರಂದರ ದಾಸರು ಮತ್ತು ಕನಕದಾಸರು ಹಾಗೂ ಜಗನ್ನಾಥ ದಾಸರ ಕೀರ್ತನೆಗಳಿಂದ ಜನಪ್ರೀಯತೆ ಪಡೆದ ಈ ಸಾಹಿತ್ಯವು ಅಕ್ಷರಸ್ಥರಿಂದ ಹಿಡಿದು ಅನಕ್ಷರಸ್ಥರವರೆಗೂ ಪರಿಚಯ. ತನ್ನ ಅರ್ಥಗರ್ಭಿತ ಸಂದೇಶ ಮತ್ತು ಸಂಗೀತ ಸಂಯೋಜನೆಗೆ ಒಳಪಡುವ ಸಾಹಿತ್ಯವಾದುದರಿಂದ ಸಾರ್ವತ್ರಿಕ ಮನ್ನಣೆ ಪಡೆದಿದೆ ಎನ್ನುವುದು ನನ್ನ ಅಭಿಪ್ರಾಯ. ‘ದಾಸರ ದಾರಿಯಲ್ಲಿ’ ಕೀರ್ತನೆಗಳಿಗೆ ಬರೆದ ನನ್ನ ಮಾತು ನಿಮ್ಮ ಓದಿಗಾಗಿ ಇಲ್ಲಿ ನೀಡಿರುವೆ. ಓದಿದ ಬಳಿಕ ಪುಸ್ತಕವನ್ನೂ ಕೊಂಡು ಓದುವಿರೆಂದು ನನ್ನ ನಂಬಿಕೆ.

“ಕನ್ನಡ ಸಾಹಿತ್ಯದ ತವನಿಧಿಗಳಲ್ಲಿ ದಾಸ ಸಾಹಿತ್ಯವು ಒಂದು. ವಚನ ಸಾಹಿತ್ಯದ ನಂತರ ಪ್ರಚಾರಗೊಂಡ ಕೀರ್ತನ ಸಾಹಿತ್ಯ ಕನ್ನಡದ ಮೇರು ಪರ್ವತ. ನರಹರಿತೀರ್ಥ ದಾಸರಿಂದ ಆರಂಭಗೊಂಡ ಹರಿದಾಸ ಸಾಹಿತ್ಯ ಕಂಗೊಳಿಸಿತು. ಅನೇಕ ಶ್ರೇಷ್ಠ ಮಟ್ಟದ ದಾಸರ ಕೃಷಿಯು ವಿಶ್ವವ್ಯಾಪಿಯಾಗಿ ಪ್ರಮುಖವಾಗಿ ಪುಂರಂದರ ದಾಸರು ಮತ್ತು ಕನಕದಾಸರು ಹಾಗೂ ಜಗನ್ನಾಥ ದಾಸರ ಕೀರ್ತನೆಗಳಿಂದ ಜನಪ್ರೀಯತೆ ಪಡೆದ ಈ ಸಾಹಿತ್ಯವು ಅಕ್ಷರಸ್ಥರಿಂದ ಹಿಡಿದು ಅನಕ್ಷರಸ್ಥರವರೆಗೂ ಪರಿಚಯ. ತನ್ನ ಅರ್ಥಗರ್ಭಿತ ಸಂದೇಶ ಮತ್ತು ಸಂಗೀತ ಸಂಯೋಜನೆಗೆ ಒಳಪಡುವ ಸಾಹಿತ್ಯವಾದುದರಿಂದ ಸಾರ್ವತ್ರಿಕ ಮನ್ನಣೆ ಪಡೆದಿದೆ.

ದಾಸರು ಶ್ರೇಷ್ಠ ದಾರ್ಶನಿಕರು ಸಮಾಜವನ್ನು ಸೂಕ್ಷ್ಮವಾಗಿ ಅವಲೋಕಿಸಿದವರು. ಜಗದ ಅಂಕುಡೊಂಕುಗಳನ್ನು ತಿದ್ದಿತೀಡಿ ಅರೋಗ್ಯಪೂರ್ಣ ಸಮಾಜದ ರಚನೆಗೆ ಮುಂದಾಗಿ ಅವಿಶ್ರಾಂತಿ ಶ್ರಮಿಸಿದವರು. ಆತ್ಮ ಕಲ್ಯಾಣದ ಮೂಲಕ ಸಮಾಜ ಕಲ್ಯಾಣವನ್ನು ಜಯಿಸಿ ಮಾನವ ಜನ್ಮದ ಸಾರ್ಥಕತೆಗೆ ಬೇಕಾದ ರೀತಿ ನಿಯಮಗಳನ್ನು ತಿಳಿಸಿಕೊಟ್ಟವರು. ಭಕ್ತಿಯನ್ನು ತಮ್ಮ ಪ್ರಮುಖ ಮಾರ್ಗವಾಗಿಸಿಕೊಂಡ ಅವರು ಭವ ಬಂಧನದಿಂದ ಬಿಡುಗಡೆಯಾಗಿ ಪರಮ ಸುಖ ಪಡೆಯಲು ಹೋರಾಡಿದವರು. ಅಷ್ಟೇ ಅಲ್ಲದೆ, ಆತ್ಮ ನಿವೇದನೆ, ವೈರಾಗ್ಯ ಭಾವ, ಲೋಕ ನೀತಿ ತತ್ವಗಳನ್ನು ಸಾರಿ ಸಾಮಾಜಿಕ ವಿಡಂಬನೆಯ ಮೂಲಕ ಅಂಧ ಹಾಗೂ ಹೀನ ಸಂಪ್ರದಾಯಗಳನ್ನು ಬಹುವಾಗಿ ಖಂಡಿಸಿ ವೈಚಾರಿಕ ಸತ್ಯವನ್ನು ಪ್ರತಿಪಾದಿಸಿದವರು. ಈಜಬೇಕು ಇದ್ದು ಜಯಿಸಬೇಕು. ಮಾನವ ಜನ್ಮ ದೊಡ್ಡದು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ, ಕುಲ ಕುಲವೆಂದು ಹೊಡೆದಾಡುವಿರಿ, ಎಲ್ಲರು ಮಾಡೋದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಮುಂತಾದ ನೀತಿಯ ನುಡಿಗಳು ಮಾನವ ಜನ್ಮದ ಆತ್ಮಸಾಕ್ಷಾತ್ಕಾರದ ದೀಪವಾಗಿದ್ದಾವೆ. ದಾಸರು ತಮ್ಮ ಅನುಭವಗಳನ್ನು ಮುಖ್ಯವಾಗಿ ಪಲ್ಲವಿ ದಾಸರ ದಾರಿಯಲ್ಲಿ ಅನುಪಲ್ಲವಿ, ಸುಳಾದಿ, ಉಗಾಭೋಗ, ಮುಂಡಿಗೆಗಳ ರೂಪದಲ್ಲಿ ಅಭಿವ್ಯಕ್ತಗೊಳಿಸಿದ್ದು ಸಾಹಿತ್ಯ ರಚನೆಯ ಪ್ರಮುಖ ವಿಶೇಷವಾಗಿದೆ.

ವಚನ ಮತ್ತು ತತ್ವಪದಗಳಂತೆ ನನಗೆ ಕೀರ್ತನೆಗಳು ತುಂಬಾ ಇಷ್ಟ ಬಾಲಕನಾಗಿದ್ದಾಗಿನಿಂದಲೂ ನನ್ನ ಗ್ರಾಮದಲ್ಲಿ ಭಜನಾ ಕಲಾವಿದರು ಕೀರ್ತನೆಗಳನ್ನು ತುಂಬಾ ಮಧುರವಾಗಿ ಹಾಡುತ್ತಿದ್ದರು. ಈಗಲೂ ಆ ಪರಂಪರೆಯಿದೆ. ಅವರ ಹಾಡುಗಾರಿಕೆಗೆ ಮನಸೋತ ನಾನು ಕೀರ್ತನ ಸಾಹಿತ್ಯದ ಪ್ರೇಮಿಯಾದೆ. ಪ್ರೌಢಶಿಕ್ಷಣ ಮತ್ತು ಪದವಿ ಹಂತದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಪುರಂದರ ಮತ್ತು ಕನಕದಾಸರ ಕುರಿತು ಹೆಚ್ಚು ಪರಿಚಯಿಸಿಕೊಟ್ಟಿತು. ನಂತರ ಎಂ.ಎ ಕನ್ನಡ ವಿದ್ಯಾರ್ಥಿಯಾದ ಮೇಲೆ ದಾಸ ಸಾಹಿತ್ಯದ ತಕ್ಕ ಮಟ್ಟಿಗೆ ಪರಿಚಯ ಮಾಡಿಕೊಂಡೆ. ಮುಂದೆ ಅಧ್ಯಾಪಕನಾದ ಮೇಲೆ ದಾಸ ಸಾಹಿತ್ಯದ ಆಳವಾದ ಅಧ್ಯಯನ ಮತ್ತು ಬೋಧನೆ ಉನ್ನತ ಮಟ್ಟದಲ್ಲಿ ಕ್ರೀಯಾರೂಪ ಪಡೆಯಿತು. ಈಗಾಗಲೇ ಆಧುನಿಕ ವಚನ ಮತ್ತು ತತ್ವ ಪದಗಳನ್ನು ರಚಿಸಿದ ನನಗೆ ಕೀರ್ತನೆಗಳನ್ನು ರಚಿಸಬೇಕೆಂಬ ಮನಸ್ಸಾಯಿತು. ಆ ದಿಸೆಯಲ್ಲಿ ನನ್ನ ಅನುಭವಕ್ಕೆ ಬಂದ ಮೌಲ್ಯಗಳನ್ನು ಮುಂದಿಟ್ಟುಕೊಂಡು ದಾಸ ಪದಗಳನ್ನು ರಚಿಸಿದ ಕ್ರಮ ನನಗೆ ನೆಮ್ಮದಿ ತಂದಿದೆ. ಅದರಂತೆ ತಮಗೆಲ್ಲರಿಗೂ ಈ ದಾಸ ಪದಗಳು ಸಂತೋಷವನ್ನುಂಟು ಮಾಡಿದರೆ ಸಾಕು ಅದಕ್ಕಿಂತ ಬೇರಾವ ಖುಷಿ ಎನಗೆ ಬೇಕಿಲ್ಲ. ೮೮ ಪುಟಗಳ ಈ ಪುಟ್ಟ ಪುಸ್ತಕವು ನಿಮಗೆ ಉತ್ತಮ ಮಾಹಿತಿಯನ್ನು ಖಂಡಿತಾ ನೀಡುವುದೆಂಬ ನಂಬಿಕೆ ನನ್ನದು.

- ಎಫ್.ಡಿ. ಗಡ್ಡಿಗೌಡರ, ಬೈಲಹೊಂಗಲ