ದಾಸರ ದಾಸ ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು

ದಾಸರ ದಾಸ ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು

    ನಮಸ್ಕಾರ ಸ್ನೇಹಿತರೆ,
    ಕನ್ನಡ ಹರಿದಾಸ ಪರಂಪರೆ, ಕೀರ್ತನಾ ಲೋಕದ ಕೊಂಡಿಯೊಂದು ಕಳಚಿದೆ. ಸಂತ, ಹಿರಿಯ ಕೀರ್ತನೆಗಾರರಾದ ‘ಕೀರ್ತನ ಕೇಸರಿ’ ಭದ್ರಗಿರಿ ಅಚ್ಯುತದಾಸರು ತಮ್ಮ 83 ನೇ ವಯಸ್ಸಿನಲ್ಲಿ ತಾವು ಕಟ್ಟಿ ಬೆಳೆಸಿದ ಹರಿಕಥಾ ಪ್ರಪಂಚವನ್ನು ತೊರೆದು ಶ್ರೀಹರಿಯತ್ತ ನಡೆದಿದ್ದಾರೆ. ಕೀರ್ತನಾ ಕಲಾಪರಿಷತ್ ಗೌರವಾಧ್ಯಕ್ಷರಾಗಿದ್ದ ಸಂತ ಭದ್ರಗಿರಿ ಅಚ್ಯುತದಾಸರು ತಮ್ಮ ವಾಕ್ ಸಾಮರ್ಥ್ಯ, ಸಂಗೀತ, ಹಾಸ್ಯ ಚಟಾಕಿಗಳ ಮೂಲಕ ಜನಮಾನಸದಲ್ಲಿ ನೆಲೆಯೂರಿದ್ದರು. ಕನ್ನಡ, ಮರಾಠಿ, ಕೊಂಕಣಿ, ತುಳು ಹೀಗೆ ನಾನಾ ಭಾಷೆಗಳಾಲ್ಲಿ ಪ್ರೌಢಿಮೆ ಸಾಧಿಸಿದ್ದ ಸಂತ ಅಚ್ಯುತದಾಸರು ತಾವು ಹರಿವಂಶ, ಭಾಗವತ, ರಾಮಾಯಣ, ಮಹಾಭಾರತದ ತಾತ್ವಿಕ ಅಂಶಗಳನ್ನು ಸಾಮಾನ್ಯರ ಮನಮುಟ್ಟುವಂತೆ ವಿವರಿಸಿ ಹೇಳುವ ಸಾಮರ್ಥ್ಯವನ್ನು ಹೊಂದಿದ್ದರು.
    ಇಂದಿನ ಆಧುನಿಕ ಯುಗದಲ್ಲಿ ನಶಿಸುತ್ತಿರುವ ಸಂಕೀರ್ತನಾ ಕಲೆಯನ್ನು ಜನಪ್ರಿಯಗೊಳಿಸುವುದರಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದ ಅಚ್ಯುತದಾಸರು ತಮ್ಮ ಸಹೋದರ ದಿ. ಭದ್ರಗಿರಿ ಕೇಶವದಾಸರ ಜತೆಗೂಡಿ ಅನೇಕ ಹರಿಕಥಾ ಸಮ್ಮೇಳನಗಳಾನ್ನು ನಡೆಸಿದ್ದರು. ಅಣ್ಣ-ತಮ್ಮಂದಿರಿಬ್ಬರೂ ತಮ್ಮ ಸ್ವ ಪ್ರತಿಭೆಯಿಂದ ‘ಸಂತ’ ಪದವಿಗೆ ಭಾಜನರಾಗಿದ್ದರು. ಸಂತ ಭದ್ರಗಿರಿ ಕೇಶವ ದಾಸರು ವಿದೇಶಗಳಲ್ಲಿಯೂ ಆಂಗ್ಲ ಭಾಷೆಯಲ್ಲಿ ಸಂಕೀರ್ತನೆಗಳಾನ್ನು ನಡೆಸಿ ಪ್ರಸಿದ್ದರಾಗಿದ್ದರೆ ಸಂತ ಭದ್ರಗಿರಿ ಅಚ್ಯುತ ದಾಸರು ಭರತಖಂಡವ್ಯಾಪಿ ತಮ್ಮ ಹರಿಕಥಾ ಶ್ರವಣ ಮಾಡುವ ಮೂಲಕ ನಾಡಿನ ಮೂಲೆ ಮೂಲೆಗಳಾಲ್ಲಿ ಮನೆಮಾತಾಗಿದ್ದರು. 

ವ್ಯಕ್ತಿ ಪರಿಚಯ

    ಉಡುಪಿಯ ಸಮೀಪದ ಬ್ರಹ್ಮಾವರದ ಬಳಿಯಲ್ಲಿನ ಬೈಕಾಡಿ ಗ್ರಾಮದ ಪುಟ್ಟ ಹಳ್ಳಿಯಲ್ಲಿ ವೆಂಕಟರಮಣ ಪೈ ಹಾಗೂ ರುಕ್ಮಿಣಿಬಾಯಿ ದಂಪತಿಗಳಿಗೆ ನಾಲ್ಕನೆ ಮಗನಾಗಿ ಜನಿಸಿದ (1931 ಮಾರ್ಚ್ 31)ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು ಬಾಲ್ಯದಿಂದಲೂ ಸಂಗೀತದ ಬಗ್ಗೆ ಒಲವಿದ್ದವರು. ಇದಕ್ಕೆ ಅವರು ಹುಟ್ತಿದ ಮನೆಯ ಪರಿಸರವೂ ಪೋಷಕವಾಗಿತ್ತು. ತ್ಂದೆ ವೆಂಕಟರಮಣಾ ಪೈಗಳು ಯಕ್ಷಗಾನದ ಬಗ್ಗೆ ಒಲವುಳ್ಳವರಾಗಿದ್ದರೆ ತಾಯಿ ರುಕ್ಮಿಣಿಬಾಯಿ ತಾವು ದೇವರ ಭಜನೆಗಳನ್ನು ಶುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರು.
    ಅಚ್ಯುತದಾಸರು ಕಲಿತದ್ದು ಕೇವಲ ಮೂರನೆ ತರಗತಿಯಾದರೂ ತಾವೇ ಕಂಡುಕೊಂಡ ಲೋಕಾನುಭವದ ಶಿಕ್ಷಣದಿಂದ ಅತ್ಯಂತ ಮಹತ್ವವಾದುದನ್ನು ಸಾಧಿಸಲಿಕ್ಕೆ ಸಾಧ್ಯವಾಯಿತು. ತಮ್ಮ ಬಾಲ್ಯದಿಂದಲೂ ಯಕ್ಷಗಾನ್ದಲ್ಲಿ ಆಸಕ್ತಿ ತಾಳಿದ ಅಚ್ಯುತದಾಸರು ತಾವು ತಾಳಮದ್ದಳೆಗಳಾಲ್ಲಿ ಅರ್ಥಧಾರಿಗಳಾಗಿದ್ದರು. ಮುಂದೆ ನಾಟಕಗಳಲ್ಲಿ ಪಾತ್ರವಹಿಸಿ ರಂಗಗೀತೆಗಳನ್ನು ಹಾಡುವುದರಲ್ಲಿ ತೊಡಗಿದರು. ಅಷ್ಟಲ್ಲದೆ ಭಾರತೀಯ ಸಂಸ್ಕೃತಿಯ ತಾಯಿ ಬೇರಾದ ರಾಮಾಯಣ. ಮಹಾಭಾರತಗಳನ್ನು ಅಮೂಲಾಗ್ರವಾಗಿ ತಿಳಿದುಕೊಂಡರು. ಕನ್ನಡದ ಪಂಪ, ರನ್ನ, ಕುಮಾರವ್ಯಾಸರನ್ನು ಓದಿಕೊಂಡ ಅಚ್ಯುತದಾಸರು ತಾವು ಭಾರತೀಯ ಸಂಸ್ಕೃತಿಯ ಹರಿಕಾರರೆನಿಸಿದರು.
    1951 ರಫೆಬ್ರವರಿ 23 ರಂದು ಭದ್ರಗಿರಿಯ ಕಾಮೇಶ್ವರ ದೇವಾಲಯದಲ್ಲಿ ಮಲ್ಪೆ ಶಂಕರನಾರಾಯಣಾ ಸಾಮಗರ ಹರಿಕಥಾ ಶ್ರವಣಾವು ಏರ್ಪಾಡಾಗಿತ್ತು. ಆದರೆ ಕಾರಣಾಂತರಗಳಿಂದ ಕಾರ್ಯಕ್ರಾಮಕ್ಕೆ ಸಾಮಗರು ಬರದೆ ಹೋದಾಗ ಅಚ್ಯುತದಾಸರು ತಾವು ಹರಿಕಥಾ ಕಾಲಕ್ಷೇಪವನ್ನು ನಡೆಸಿಕೊಟ್ತರು. ಅಂದಿನ ಹರಿಕಥೆಗೆ ಸೇರಿದ್ದ ನೂರಾರು ಜನ ಅಚ್ಯುತದಾಸರ ಹರಿಕಥೆಯ ಮೋಡಿಗೆ ಸಿಲುಕಿದರು. ಅಂದಿನಿಂದ ದಾಸರು ನಿರಂತರ ಹರಿಕಥಾ ಕಾಯಕದಲ್ಲಿ ತೊಡಗಿಕೊಂಡರು.
    1956 ರಲ್ಲಿ ಕಾಶೀ ಮಠದ ಸ್ವಾಮೀಜಿಗಳಾಗಿದ್ದ ಸುಧೀಂಧ್ರ ತೀರ್ಥ ಶ್ರೀಪಾದಂಗಳು ಉಡುಪಿಯಲ್ಲಿ ಚಾತುರ್ಮಾಸ ವ್ರತದಲ್ಲಿ ತೊಡಗಿದ್ದಾಗ ಅಚ್ಯುತದಾಸರು ನಿತ್ಯವೂ ಮಹಾಭಾರತದ ಕುರಿತು ಹರಿಕಥೆ ನಡೆಸಿಕೊಟ್ಟಿದ್ದರು. ಆ ಸಂದರ್ಭದಲ್ಲಿ ಶ್ರೀ ಗುರುಗಳು ಅಚ್ಯುತದಾಸರಿಗೆ ದಂಡಿಗೆ ಬೆತ್ತದ ಹಾಸ ದೀಕ್ಷೆಯನ್ನು ನೀಡಿ ಚಕ್ರಾಂಕಪೂರ್ವಕ ಮೂಲನಾರಾಯಣ ಎಂಬ ಅಂಕಿತವನ್ನು ನೀಡಿದ್ದರು. ಅದು ಕಾರಣವಾಗಿ ಮುಂದೆ ಮೂಲನಾರಾಯಣ ಅಂಕಿತನಾಮದಲ್ಲಿ ಸಾವಿರಾರು ಕೀರ್ತನೆ, ಸುಳಾದಿ, ಉಗಾಭೋಗಗಳನ್ನು ರಚಿಸಿದ ಅಚ್ಯುತದಾಸರ ಕನ್ನಡ, ತುಳು, ಕೊಂಕಣಿ ಕೀರ್ತನೆ ಹಾಗೂ ಸುಳಾದಿಗಳು ನಾಡಿನಾದ್ಯಂತದ ಸಾವಿರಾರು ಜನರ ನಾಲಿಗೆಯಲ್ಲಿ ಇಂದಿಗೂ ಹರಿದಾಡುತ್ತಿದೆ.
    ಕರ್ನಾಟಕದ ನಾನಾ ಕಡೆಯಲ್ಲಿ ನೆಲೆಸಿದ್ದ ಕೀರ್ತನಾಕಾರರನ್ನು ಒಟ್ಟು ಸೇರಿಸಿ ಅಖಿಲ ಕರ್ನಾಟಕ ಕೀರ್ತನ ಸಮ್ಮೇಳನವನ್ನು 1964 ರಲ್ಲಿ ಆಯೋಜಿಸಿದ್ದ ಕೀರ್ತಿ ಶ್ರೀ ಭದ್ರಗಿರಿ ಅಚ್ಯುತದಾಸರಿಗೆ ಸಲ್ಲಬೇಕು. ಅಲ್ಲದೆ 1965 ರಲ್ಲಿ ಭಾರತದಾದ್ಯಂತದ ಕೀರ್ತನಾಕಾರರನ್ನು ಒಟ್ಟುಗೂಡಿಸಿ ಅಖಿಲ ಭಾರತ ಜೀರ್ತನ ಸಮ್ಮೇಳಾನವನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದರು. ಆ ಸಮ್ಮೇಳನವನ್ನು ಭಾರತದ ಅಂದಿನ ರಾಷ್ಟ್ರಪತಿಗಳಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಉದ್ಘಾಟಿಸಿದ್ದರು. ಹೀಗೆ ದೇಶಾದ್ಯಂತದ ಕೀರ್ತನಾಕಾರರನ್ನು ಒಂದೆಡೆ ಸೇರಿಸಿ ಅವರ ಪರಸ್ಪರ ಪರಿಚಯ, ವಿಚಾರ ವಿನಿಮಯಕ್ಕೆ ವೇದಿಕೆಯೊಂದನ್ನು ಒದಗಿಸಿಕೊಟ್ಟ ಕೀರ್ತಿ ಶ್ರೀ ಅಚ್ಯುತದಾಸರದು.
    ಶ್ರೀಯುತರ ಜೀವನ ಸಾಧನೆಯನ್ನು ಗುರುತಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ. ಅವುಗಳಲ್ಲಿ ಮುಖ್ಯವಾಗಿ ಕರ್ನಾಟಕ ಸರ್ಕಾರದ ‘ಕನಕ ಪುರಂದರ ಪ್ರಶಸ್ತಿ’ , ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ‘ನಾಡೋಜ’ ಗೌರವ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಗೌರವ ಪ್ರಶಸ್ತಿಗಳು ಸಂದಿವೆ. ಕಾಶಿ ಮಠದವರು ನೀಡಿದ ‘ಕೀರ್ತನಾಗ್ರೇಸರ’ , ಗೋಕರ್ಣ ಪರ್ತಕಾಳಿ ಮಠದವರಿಂದ ‘ಕೀರ್ತನಾಚಾರ್ಯ’ , ಉಡುಪಿ ಪೇಜಾವರ ಮಠದಿಂದ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿಗೆ ಭಾಜನರಾಗಿದ್ದ ಭದ್ರಗಿರಿ ಅಚ್ಯುತದಾಸರು ಅದಮಾರು ಮಠದಿಂದ ಹರಿದಾಸ ಕುಲಭೂಷಣಾ ಪ್ರಶಸ್ತಿ ರಾಮಚಂದ್ರಾಪುರ ಮಠದಿಂದ ಪುರುಷೋತ್ತಮ ಪ್ರಶಸ್ತಿಗಳಿಂದಲೂ ಪುರಸ್ಕೃತರಾಗಿದ್ದರು.
    ಇಷ್ಟೇ ಅಲ್ಲದೆ ಮಾಡಿನಾದ್ಯಂತದ ವಿದ್ಯಾಸಂಸ್ಥೆಗಳು, ಸಂಘಟನೆಗಳೂ ಸಹ ಅಚ್ಯುತದಾಸರ ಪ್ರತಿಭೆಗೆ ಮನ್ನಣೆ ನೀಡಿ ಅನೇಕ ಬಗೆಯಲ್ಲಿ ಅವರನ್ನು ಸನ್ಮಾನಿಸಿವೆ, ಗೌರವಿಸಿವೆ.
    ಇಂತಹಾ ಸಂತರೋರ್ವರು ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಹರಿದಾಸ ಪರಂಪರೆಯನ್ನು ಈ ವಿದ್ಯ್ನ್ಮಾನ ಮಾದ್ಯಮಗಳ ಭರಾಟೆಯ ಈ ದಿನಗಳಲ್ಲಿಯೂ ಮುಂದುವರಿಸಿಕೊಂಡು ಬಂದಿದ್ದ ಹಿರಿಯ ಚೇತನವೊಂದು ಬಾರದ ಲೋಕಕ್ಕೆ ತನ್ನ ಪಯಣವನ್ನು ಬೆಳೆಸಿದೆ.
    ಅವರು ಮಾಡಿದ ಕಾರ್ಯಗಳನ್ನು ನೆನೆಯುತ್ತಾ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆದೆವಾದರೆ ಆ ದಿವ್ಯಾತ್ಮಕ್ಕೆ ಅದಕ್ಕಿಂತ ಸಂತೋಷವು ಬೇರೆಯಿರಲಾರದು.
    ನಮಸ್ಕಾರ. 

 

Comments

Submitted by H A Patil Fri, 10/25/2013 - 19:39

ರಾಘವೇಂದ್ರ ಅಡಿಗರಿಗೆ ವಂದನೆಗಳು
ಭದ್ರಗಿರಿ ಅಚ್ಯುತ ದಾಸರ ಕುರಿತು ತಾವು ಬರೆದ ಲೇಖನ ಅವರ ಕುರಿತು ಹಲವು ಉಪಯುಕ್ತ ಮಾಹಿತಿಗಳನ್ನು ನೀಡಿತು. ಅವರ ಕಂಚಿನ ಕಂಠದಲ್ಲಿ ಹೊಮ್ಮಿ ಬರುತ್ತಿದ್ದ ಹರಿಕಥೆ ಇಂದಿಗೂ ನನ್ನ ಕಿವಿಯಲ್ಲಿ ಗುಂಯ್ಗುಡುತ್ತಿದೆ, ಧನ್ಯವಾದಗಳು.