ದಿಕ್ಕು ತೋಚದಾದಾಗ ದೇವರಿಗೆ ಶರಣಾಗಿ

ದಿಕ್ಕು ತೋಚದಾದಾಗ ದೇವರಿಗೆ ಶರಣಾಗಿ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

ಇದರ ಮುನ್ನುಡಿಯಲ್ಲಿ ಎ. ವೆಂಕಟ ರಾವ್ ಬರೆದಿರುವ ಈ ಮಾತುಗಳು ಗಮನಾರ್ಹ: "ಸತ್ಯಂ ವದ ಧರ್ಮಂ ಚರ”, "ದಯೆಯೇ ಧರ್ಮದ ಮೂಲವಯ್ಯಾ” ….. ಎಂಬ ಸೂಕ್ತಿಗಳನ್ನು ನಾವು ಹೇಳುತ್ತಲೇ ಇರುತ್ತೇವೆ. ಆದರೆ ವಾಸ್ತವ ನ್ಯಾಯದಾನದಲ್ಲಿ - ಆತ ಎಷ್ಟೇ ಉತ್ತಮ ಉದ್ದೇಶಗಳನ್ನು ಹೊಂದಿದ್ದರೂ - ಅನಿರೀಕ್ಷಿತ ಮತ್ತು ಪರಿಹಾರವಾಗಿರದ ನೂತನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. …. ಅಂಥ ಪ್ರತಿಯೊಂದು ಪ್ರಸಂಗದಲ್ಲಿಯೂ ಧರ್ಮಮಾರ್ಗದಿಂದ ನಾನು ವಿಚಲಿತನಾಗಿಲ್ಲ ಎಂಬ ತೃಪ್ತಿ ಸಮಾಧಾನಗಳು ನನಗಿವೆ”

ಇಡೀ ದೇಶದಲ್ಲಿ ಕಳೆದ ಏಳು ವರುಷಗಳ ಕಾಲ ಸಂಚಲನ ಮೂಡಿಸಿದ್ದ “ನಿರ್ಭಯಾ ಪ್ರಕರಣ”ದಲ್ಲಿ ೨೦ ಮಾರ್ಚ್ ೨೦೨೦ರಂದು ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜ್ಯಾರಿಯಾಗಿದೆ. ಈ ಹಿನ್ನೆಲೆಯಲ್ಲಿ, ನ್ಯಾಯಾಧೀಶರು “ಧರ್ಮಮಾರ್ಗ"ದಲ್ಲಿ ಹೇಗೆ ನಡೆಯಬೇಕೆಂದು ಬೆಳಕು ಚೆಲ್ಲುವ ಕೆಲವು ಆಯ್ದ ಅನುಭವಗಳನ್ನು ದಿ. ಎ. ವೆಂಕಟ ರಾವ್ ಅವರ ಪುಸ್ತಕದಿಂದ ಪ್ರಸ್ತುತ ಪಡಿಸುತ್ತಿದ್ದೇವೆ.)

೧೯೫೭-೬೦ರ ಅವಧಿಯಲ್ಲಿ ಬಂಟ್ವಾಳದಲ್ಲಿ ಮ್ಯಾಜಿಸ್ಟೇಟಾಗಿ ಕೆಲಸ ಮಾಡುತ್ತಿದ್ದಾಗ ಬೆಳ್ತಂಗಡಿ ತಾಲೂಕು ಕೂಡ ನನ್ನ ಅಧಿಕಾರವ್ಯಾಪ್ತಿಗೆ ಸೇರಿತ್ತು. ಆಗ ಬೆಳ್ತಂಗಡಿಯಲ್ಲಿ ಪ್ರತ್ಯೇಕ ನ್ಯಾಯಾಲಯ ಇರಲಿಲ್ಲ.
    ಆ ಊರಿನಲ್ಲಿ ಪಿ.ಡಬ್ಲ್ಯು.ಡಿ.ಯಲ್ಲಿ ಒಬ್ಬ ಅಸಿಸ್ಟೆಂಟ್ ಇಂಜಿನಿಯರ್ (ಎ.ಇ.) ಇದ್ದರು. ತುಂಬ ಪ್ರಾಮಾಣಿಕ; ಕಷ್ಟಪಟ್ಟು ಕೆಲಸ ಮಾಡುವವರೂ ಆಗಿದ್ದರು. ಒಂದು ದಿವಸ ಆಗ ತಾನೇ ಕಡಿದ ಮರಗಳ ರೆಂಬೆಗಳನ್ನು ಬೆಳ್ತಂಗಡಿಯ ಒಂದು ಹೊಟೇಲಿನ ಕಾಂಪೌಂಡಿನಲ್ಲಿ ಪೇರಿಸಿರುವುದನ್ನು ಗಮನಿಸಿದರು ಮತ್ತು ಹೊಟೇಲಿನವರ ಬಳಿ ವಿಚಾರಣೆ ಮಾಡಿದಾಗ ಪಿ.ಡಬ್ಲ್ಯು.ಡಿ. ಸೂಪರ್‌‌ವೈಸರ್ ಸೌದೆ ಎಂದು ತಮಗೆ ಮಾರಿದ್ದ ರಸ್ತೆ ಬದಿಯ ಮರಗಳ ಕೊಂಬೆಗಳು ಎಂಬ ಅಂಶ ಎ.ಇ.ಗೆ ತಿಳಿಯಿತು.
    ಅಸಿಸ್ಟೆಂಟ್ ಎಂಜಿನಿಯರು ಹೊಟೇಲ್‍ಮಾಲಿಕರ ಹೇಳಿಕೆ ಪಡೆದುಕೊಂಡರು. ಅಲ್ಲಿಯೇ ಮಹಜರು ಮಾಡಿ ಕಡಿದ ಮರದ ಕೊಂಬೆಗಳನ್ನು ವಶಪಡಿಸಿಕೊಂಡರು ಮತ್ತು ಕೊಂಬೆಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಿದುದಕ್ಕಾಗಿ ಪಿ.ಡಬ್ಲ್ಯು.ಡಿ. ಸೂಪರ್‌‍ವೈಸರ್ ವಿರುದ್ಧ ಪೊಲೀಸ್‍ಠಾಣೆಯಲ್ಲಿ ದೂರು ದಾಖಲು ಮಾಡಿದರು.
    ಅವರು ಹೊಟೇಲು ಮಾಲೀಕನ ಹೇಳಿಕೆ ಮತ್ತು ಮಹಜರನ್ನು ದೂರಿಗೆ ಲಗತ್ತಿಸಿದ್ದರು. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡರು ಮತ್ತು ಎ.ಇ.ಯವರ ದೂರು, ಮಹಜರು ಮತ್ತು ಹೊಟೇಲು ಮಾಲೀಕನ ಹೇಳಿಕೆ ಸಮೇತ ಪ್ರಥಮ ಮಾಹಿತಿ ವರದಿ (ಎಫ್.ಐ.ಆರ್.)ಯನ್ನು ಬಂಟ್ವಾಳದ ನ್ಯಾಯಾಲಯಕ್ಕೆ ಸಲ್ಲಿಸಿದರು. ಅದಾದ ನಂತರ ಸೂಪರ್‍‍ವೈಸರನ್ನು ಅಮಾನತ್ತಿನಲ್ಲಿ ಇಡಲಾಯಿತು.
    ಎ.ಇ.ಯವರು ತಮ್ಮ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ ಮತ್ತು ಪೊಲೀಸಿನವರು ಮುಂದಿನ ಯಾವುದೇ ಕ್ರಮವನ್ನು ಕೈಗೊಳ್ಳದೆ ತಮ್ಮನ್ನು ಅನಗತ್ಯವಾಗಿ ಅಮಾನತ್ತಿನಲ್ಲಿಡಲಾಗಿದೆ ಎಂದು ವಾದಿಸಿ, ಸುಮಾರು ಒಂದೂವರೆ ವರ್ಷದ ನಂತರ, ಅಮಾನತ್ತಿನಲ್ಲಿದ್ದ ಸೂಪರ್‌ವೈಸರ್ ಹೈಕೋರ್ಟಿನಲ್ಲಿ ರಿಟ್ ಸಲ್ಲಿಸಿದ.
    ಒಂದು ತಿಂಗಳ ಒಳಗೆ ತನಿಖೆಯನ್ನು ಪೂರೈಸಿ, ಅಂತಿಮ ವರದಿಯನ್ನು ಸಲ್ಲಿಸುವಂತೆ ಪೊಲೀಸರಿಗೆ ಹೈಕೋರ್ಟು ನಿರ್ದೇಶನ ನೀಡಿತು. ಅದರಂತೆ, ನಿಗದಿಪಡಿಸಲಾದ ಅವಧಿಯಲ್ಲಿ ಬೆಳ್ತಂಗಡಿಯ ಪೊಲೀಸ್ ಸಬ್‍ಇನ್‌‍ಸ್ಪೆಕ್ಟರ್ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಿದರು.
    ಅದನ್ನು ಸ್ವೀಕರಿಸಿದಾಗ, ಮೊಕದ್ದಮೆಯನ್ನು ದಾಖಲಿಸಲು ಮ್ಯಾಜೇಸ್ಟ್ರೇಟ್‍ರ ಮುಂದೆ ಪ್ರಥಮ ಮಾಹಿತಿ ವರದಿ ಮತ್ತು ಇತರ ದಾಖಲೆಗಳನ್ನು ಮಂಡಿಸಬೇಕಾದುದು ಬೆಂಚ್ ಕ್ಲರ್ಕ್ ಕರ್ತವ್ಯವಾಗಿರುತ್ತದೆ.
    ಈ ನಿರ್ದಿಷ್ಟ ಪ್ರಕರಣದಲ್ಲಿ, ಪ್ರಥಮ ಮಾಹಿತಿ ವರದಿ ಮತ್ತು ಪ್ರಥಮ ಮಾಹಿತಿ ವರದಿಯ ಜೊತೆಗೆ ಕಳುಹಿಸಲಾದ ಇತರ ದಾಖಲೆಗಳು ಕಾಣುತ್ತಿಲ್ಲವೆಂದು ಬೆಂಚ್‍ಕ್ಲರ್ಕ್ ಪರಮೇಶ್ವರ ನನಗೆ ತಿಳಿಸಿದರು. ಪ್ರಥಮ ಮಾಹಿತಿ ವರದಿ ಸ್ವೀಕರಿಸಿದ ಬಗ್ಗೆ ‘ಇವರಿಂದ’ ರಿಜಿಸ್ಟರಿನಲ್ಲಿ ನಮೂದಾಗಿದ್ದರೂ ಅದನ್ನು ಹಿಂದಕ್ಕೆ ಕಳುಹಿಸಿರುವ ಬಗ್ಗೆ ‘ಇವರಿಗೆ’ ರಿಜಿಸ್ಟರಿನಲ್ಲಿ ಯಾವುದೇ ನಮೂದು ಕಂಡುಬರಲಿಲ್ಲ.
    ಬೆಂಚ್‍ಕ್ಲರ್ಕ್ ತುಂಬ ಪ್ರಾಮಾಣಿಕರೂ ವಿಧೇಯರೂ ಆಗಿದ್ದುದರಿಂದ ನನಗೆ ಆತನ ಬಗ್ಗೆ ಸಂಪೂರ್ಣ ಭರವಸೆ ನಂಬಿಕೆಗಳಿದ್ದವು. ಕುಟುಂಬದ ವೆಚ್ಚ ಪೂರೈಸಲು ಆತನ ಮಡದಿ ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದಳು. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಥಮ ಮಾಹಿತಿ ವರದಿ ಹಾಗೂ ಅದಕ್ಕೆ ಸಂಬಂಧಿಸಿದ ಇತರ ದಸ್ತಾವೇಜುಗಳು ಪೊಲೀಸು ಠಾಣೆಯಲ್ಲಿ ಇವೆಯೇ ಎಂಬುದಾಗಿ ಬೆಳ್ತಂಗಡಿ ಠಾಣೆಯ ಪೊಲೀಸು ಸಬ್‍ಇನ್‌‌‌‌‌‌‍ಸ್ಪೆಕ್ಟರನ್ನು ವಿಚಾರಿಸಿದೆ. ಎಲ್ಲ ರೀತಿಗಳಲ್ಲಿ ಹುಡುಕಿದರೂ ಆ ದಾಖಲೆಗಳು ತಮ್ಮ ಠಾಣೆಯಲ್ಲಿ ಸಿಗಲಿಲ್ಲವೆಂದು ಕೆಲವು ದಿನಗಳ ತರುವಾಯ ಅವರು ಉತ್ತರಿಸಿದರು.
    ಅದಾದ ನಂತರ ನಾನು ಮತ್ತು ನಮ್ಮ ಸಿಬ್ಬಂದಿ ಬಾಕಿಯಿರುವ ಎಲ್ಲ ಪ್ರಕರಣಗಳ ಕಡತಗಳನ್ನು ಮತ್ತು ರೆಕಾರ್ಡ್ ರೂಮಿಗೆ ಸಾಗಿಸಲಾಗಿದ್ದ ವಿಲೆಯಾಗಿದ್ದ ಎಲ್ಲ ದಾಖಲೆಗಳನ್ನೂ ಸಂಪೂರ್ಣವಾಗಿ ಹುಡುಕಿದೆವು. ಈ ಕೆಲಸವನ್ನು ಸುಮಾರು ಹತ್ತು ದಿನಗಳ ಕಾಲ ಕಛೇರಿಯ ಕೆಲಸದ ನಂತರ ಮಾಡಿದೆವು. ಏನೇ ಆದರೂ ಆ ಪ್ರಕರಣದ ಪ್ರಥಮ ಮಾಹಿತಿ ವರದಿ (ಎಫ್.ಐ.ಆರ್.) ಮತ್ತು ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಪತ್ತೆ ಹಚ್ಚಲಾಗಲೇ ಇಲ್ಲ.
    ಮೂಲದಾಖಲೆಗಳ ಅಲಭ್ಯತೆಗಾಗಿ ಪಿ.ಡಬ್ಲ್ಯು.ಡಿ. ಸೂಪರ್‌ವೈಸರನ್ನು ನಿರಪರಾಧಿಯೆಂದು ನಿರ್ಣಯಿಸಬೇಕಾದರೆ ನ್ಯಾಯಾಲಯ ಮತ್ತು ಅದರ ಸಿಬ್ಬಂದಿಗೆ ಕಳಂಕವುಂಟಾಗುತ್ತದೆ; ಅದದಲ್ಲದೆ ಆ ಬಗ್ಗೆ ವಿಚಾರಣೆ ನಡೆಸಬೇಕಾದ ಅನಿವಾರ್ಯತೆಯೂ ಉದ್ಭವಿಸುತ್ತದೆ. ಹಾಗಾಗಿ ನಾನು ಚಿಂತೆಯಲ್ಲಿ ಮುಳುಗಿದ್ದೆ.
    "ದೇವರೇ, ನೀನು ಏನು ಬೇಕಾದರೂ ಮಾಡು, ಹಾಲಲ್ಲಾದರೂ ಅದ್ದು, ನೀರಲ್ಲಾದರೂ ಅದ್ದು" ಎಂದು ಹೇಳುತ್ತ ನನ್ನೆಲ್ಲ ಚಿಂತೆಗಳ ಮೂಟೆ ಕಟ್ಟಿ, ದೇವರ ಮೇಲೆ ಭಾರ ಹಾಕಿ ದೇವರಲ್ಲಿ ಮೊರೆಯಿಟ್ಟು ಬಿಟ್ಟೆ. ಆಶ್ಚರ್ಯವೆಂದರೆ, ಆ ಗಳಿಗೆಯೇ ನನ್ನ ಮನಸ್ಸಿಗೆ ನೆಮ್ಮದಿಯಾಗಿಬಿಟ್ಟಿತು.
    ನೀವು ನಂಬಿ ಅಥವಾ ಬಿಡಿ, ಇಲ್ಲವೇ ಕೇವಲ ಕಾಕತಾಲೀಯವೇ ಅನ್ನಿ. ಕೆಲವು ದಿನಗಳ ನಂತರ ಬೆಳ್ತಂಗಡಿ ಪೊಲೀಸ್ ಠಾಣೆಯ ಒಬ್ಬ ಕಾನ್‌ಸ್ಟೇಬಲ್ ನನ್ನ ನ್ಯಾಯಾಲಯಕ್ಕೆ ಬಂದ ಮತ್ತು ಈ ವರೆಗೆ ಕಾಣೆಯಾಗಿದ್ದ ದಾಖಲಾತಿಗಳನ್ನು ಹಾಜರುಪಡಿಸಿದ. ಸ್ಟೇಷನ್ ರೈಟರಿಗೆ ವರ್ಗವಾದುದ್ದರಿಂದ ಆತ ಕೆಲಸ ಮಾಡುತ್ತಿದ್ದಾಗ ಕುಳಿತುಕೊಳ್ಳುತ್ತಿದ್ದ ಮರದ ಪೆಟ್ಟಿಗೆಯನ್ನು ತೆರೆಯಲಾಯಿತು ಮತ್ತು ಈ ವರೆಗೆ ಕಾಣೆಯಾಗಿದ್ದ ದಾಖಲೆಗಳು ಅದರಲ್ಲಿದ್ದವು ಎಂದು ವಿವರಣೆ ನೀಡಿದ.
    ನಾನು ದೇವರಿಗೆ ವಂದಿಸಿದೆ ಮತ್ತು ಆತನ ಕರುಣೆಗಾಗಿ ಕೃತಜ್ಞತೆ ವ್ಯಕ್ತಪಡಿಸಿದೆ.