ದಿಗಂತ

ದಿಗಂತ

ಬರಹ

ಗುರಿಯಿರದ ದಾರಿಯಲ್ಲಿ, ಸುಳಿವ ಸುಳಿಯಲೆಯಲ್ಲಿ
ಒಬ್ಬಂಟಿಯಾಗಿ ಈಜುತಿರುವೆ ನಾನು
ಯಾವ ಆಸರೆಯಿಲ್ಲ ತಡೆಗೋಡೆಗಳಿಲ್ಲ ನಿಲುಗಡೆಗಳಿಲ್ಲ
ದಿಕ್ಕು ದೆಸೆಯಿಲ್ಲದೆ ಜಾರುತಿರುವೆ ನಾನು

ಇದು ಜೀವನ ಇದು ಪಾವನವೆಂಬ ಮಂತ್ರ ಮನದಲಿ
ಹೊಸ ಹಾದಿಯು ತೆರೆಯುತಲಿದೆಯೆಂಬ ಆಸೆ ಎದೆಯಲಿ
ಹುಟ್ಟಿರದ, ಗುರಿಯಿರದ ಬರಿದೇ ವ್ಯರ್ಥ ಪಯಣವೀ
ತೆರೆ ತೆರೆಗಳ ನಡು ನಡುವೆ ದೂರ ತೀರ ಯಾನ

ಎದುರಾಗುವ ಹೆದ್ದೆರೆಗಳ ಸಹಿಸುವುದೆಂತೋ
ಅದನು ದಾಟಿ ತೆರೆಯ ಮೀಟಿ ಮುಂದರಿಯುವುದೆಂತೋ
ಈಜಿ ಈಜಿ ತೇಲಿ ತೇಲಿ ತಿರುಗಿ ನಿಂತ ಜಾಗಕೆ
ಬಗೆಯೇನೋ ತಿಳುಹೇನೋ ದೂರದ ಆ ತೀರಕೆ

ನಾ ಹೋಗುವೆ ನಾ ಸೇರುವೆ ನಾ ಬಾಳುವೆನೆಂಬ ಬೆಳಕಿದೆ
ನಾ ದುಡುಕುವೆ ಹಿಂದುಳಿಯುವೆ ನಾನಳಿವೆನೆಂಬ ನೆರಳು
ಆದಿಯಿಲ್ಲ ಅಂತ್ಯವಿಲ್ಲ ದಿಟ್ಟಿಗದೋ ದಿಗಂತವು
ಬಂದೆ ಬಂತು ಎನ್ನುವಲ್ಲೇ ದೂರಾಯಿತು ಅನಂತರವೂ

ಈಜು ಈಜು ಈಜು ಎಂದು ಪ್ರೇರಣೆಯ ಜೊತೆಯಲೇ
ಸಾಗಬೇಕು ದಿನದ ಬಂಡಿ ದಿಗಂತ ಕಡೆಗೆಲೇ...