ದಿನಕರ ದೇಸಾಯಿಯವರ ಐದು ಚುಟುಕುಗಳು
ಕವನ
೧
ಒಳಿತು ಮಾಡಿದರೆ ಅದು ಪುಣ್ಯಗಳ ರಾಶಿ
ಕೆಡಕು ಮಾಡಿದರೆ ಅದು ಪಾಪ ಬಿಕನಾಶಿ
ಯಾವ ದೇವರ ಪೂಜೆ ಮಾಡಿದರೂ ವ್ಯರ್ಥ
ಜನಸೇವೆಯೇ ಪೂಜೆ, ಇದುವೇ ಪುರುಷಾರ್ಥ.
೨
ಸಹ್ಯಾದ್ರಿಯಾಗಿರಲಿ ಜೀವನದ ಕನಸು
ಕಾವೇರಿಯಂತಿರಲಿ ಮಾನವನ ಮನಸು
ಜೋಗ ಜಲಪಾತವಾಗಲಿ ಗೈವ ಕಾರ್ಯ
ಯಶಗಳಿಸುತಿರಬೇಕು ಕಡಲ ಔದಾರ್ಯ.
೩
ಮೀನ ಪಳದಿಯ ಜೊತೆಗೆ ಕೊರಸಕ್ಕಿ ಅನ್ನ
ಕನ್ನಡ ಕರಾವಳಿಯ ನಿತ್ಯ ಪಕ್ವಾನ್ನ
ಇದರ ರುಚಿ ನೋಡಿದರೆ ದೇವರೂ ಕೊನೆಗೆ
ಸ್ವರ್ಗವನ್ನಿಳಿದು ಬರುವನು ನಮ್ಮ ಮನೆಗೆ.
೪
ಇವರ ಮನೆಯೊಳಗಿಲ್ಲ ಸಾಕಷ್ಟು ಅಕ್ಕಿ
ಆದರೂ ಈತನಿಗೆ ಹೆಸರು ಹಾಲಕ್ಕಿ !
ಹಾಲು ಅಕ್ಕಿಗಳೆರಡೂ ಹೆಸರೊಳಗೆ ಮಾತ್ರ
ಹಸಿವೆಯೆಂಬುದು ಇವನ ಹಣೆಯ ಕುಲಗೋತ್ರ.
೫
ನಾನು ಸಾಯಲು ನನ್ನ ಕವನಗಳ ಮರೆತುಬಿಡಿ
ಸತ್ತಮೇಲವು ಮತ್ತೆ ಯಾಕೆ ಬೇಕು ?
ಈ ಕವನ, ಆ ಕವನ, ಹೇಗಿತ್ತು ಕವಿಯ ಮನ
ಎಂಬ ಚರ್ಚೆಯ ಮಾತು ಮುಗಿಯಬೇಕು.
(ಸಂಗ್ರಹ)
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್